ಕೈಗಾ ವಿಸ್ತರಣೆಗೆ ಮುನ್ನ ಚಿಂತನೆ ಅಗತ್ಯ

ಕೈಗಾ ವಿಸ್ತರಣೆಗೆ ಮುನ್ನ ಚಿಂತನೆ ಅಗತ್ಯ

ಕರ್ನಾಟಕ ಕೈಗಾ ಅಣುಸ್ಥಾವರದ ೫ ಮತ್ತು ೬ನೇ ಘಟಕಗಳ ನಿರ್ಮಾಣ ಕಾಮಗಾರಿ ಮುಂದಿನ ವರ್ಷ ಆರಂಭವಾಗಲಿದೆ. ವಿದ್ಯುತ್ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಸಂಕಲ್ಪ ಮಾಡಿರುವ ಕೇಂದ್ರ ಸರಕಾರ ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ೧೦ ಕೆವಿ ವಾಟರ್ ರಿಯಾಕ್ಟರ್ (ಪಿ ಎಚ್ ಡಬ್ಲ್ಯೂ ಆರ್) ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದೆ. ಅವುಗಳ ಜೊತೆಗೆ ವಿದ್ಯುತ್ ಸ್ವಾವಲಂಬನೆಗೆ ಕೈಗಾದ ಘಟಕಗಳು ಕೈ ಜೋಡಿಸಲಿವೆ. ಈ ಎರಡು ಘಟಕಗಳಲ್ಲಿ ೭೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಇರುವ ೪ ರಿಯಾಕ್ಟರ್ ಗಳು ೮೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿವೆ. ಈ ಘಟಕಗಳು ಯುರೇನಿಯಂ ಅನ್ನು ಮೂಲ ಇಂಧನವಾಗಿ ಹಾಗೂ ಭಾರಿ ನೀರಿನ ಪ್ರವಾಹವನ್ನು ನಿಯಂತ್ರಕವಾಗಿ ಬಳಸುತ್ತವೆ.

ದೇಶದಲ್ಲಿ ಬಳಕೆಯಾಗುವ ವಿದ್ಯುತ್ ನ ಸ್ಥಾಪಿತ ಸಾಮರ್ಥ್ಯ ೩೮೬.೮೮ ಗಿಗಾವ್ಯಾಟ್. ಇದರಲ್ಲಿ ಹೆಚ್ಚು ಭಾಗ (೭೨%) ವಿದ್ಯುತ್ ಉತ್ಪಾದನೆ ಆಗುವುದು ಕಲ್ಲಿದ್ದಲು ಇಂಧನ ವಿದ್ಯುತ್ ಸ್ಥಾವರಗಳಿಂದ. ಆದರೆ ಇವು ಉಂಟು ಮಾಡುವ ಪರಿಸರ ಮಾಲಿನ್ಯ ಅಗಾಧ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯವೂ ಇತರ ವಿದ್ಯುತ್ ಮೂಲಗಳತ್ತ ಹೆಚ್ಚು ಒತ್ತು ಕೊಡುತ್ತಿದೆ. ಭಾರತ ಕೂಡ ಈ ದಿಸೆಯಲ್ಲಿ ಮುನ್ನಡೆಯುತ್ತಿದೆ. ಸಹಜವಾಗಿಯೇ ಕಡಿಮೆ ಮಾಲಿನ್ಯ ಉಂಟು ಮಾಡುವ ನ್ಯೂಕ್ಲಿಯರ್ ಪವರ್ ಗೆ ಒತ್ತು ದೊರೆತಿದೆ. ವಿದ್ಯುತ್ ಇಲ್ಲದೆ ಆಧುನಿಕ ಬದುಕಿನ ಯಾವ ಸಂಗತಿಯೂ ನಡೆಯದು. ಹೀಗಾಗಿ ದೇಶದ ಅಭಿವೃಧ್ಧಿಗೆ, ಎಲ್ಲರ ಬದುಕಿನ ಪ್ರಗತಿಗೆ ವಿದ್ಯುತ್ ಅಗತ್ಯ. ಹೀಗಾಗಿ ಹೆಚ್ಚಿನ ರಿಯಾಕ್ಟರ್ ಗಳ ಸ್ಥಾಪನೆ ಅಗತ್ಯ ಎನ್ನಬಹುದು. 

ಆದರೆ ಕೈಗಾದ ವಿಚಾರ ತೆಗೆದುಕೊಂಡಾಗ, ಇಲ್ಲಿ ಈಗಾಗಲೇ ಇರುವ ನಾಲ್ಕು ರಿಯಾಕ್ಟರ್ ಗಳು ಸ್ಥಳೀಯರ ಬದುಕಿಗೆ ಸಾಕಷ್ಟು ಸಂಕಷ್ಟ ತಂದೊಡ್ಡಿವೆ; ೫ ಮತ್ತು ೬ನೇ ಘಟಕಗಳ ಸ್ಥಾಪನೆಗೆ ವಿವೇಚನೆಯಿಲ್ಲದೆ ಮುಂದಾದರೆ ಅದರಿಂದ ಸ್ಥಳೀಯ ಪರಿಸರಕ್ಕೆ ಜನಜೀವನಕ್ಕೆ ಭಾರಿ ಧಕ್ಕೆ ಸಂಭವಿಸಲಿದೆ ಎಂದು ಪರಿಸರವಾದಿಗಳು ಆಕ್ಷೇಪಿಸುತ್ತಲೇ ಇದ್ದಾರೆ. ಹೆಚ್ಚಿನ ಎರಡು ಘಟಕಗಳ ಸ್ಥಾಪನೆಯಿಂದ ಆಗುವ ಅರಣ್ಯನಾಶದ ಬಗ್ಗೆ ಸಮೀಕ್ಷೆಯಾಗಿಲ್ಲ. ನಾಲ್ಕು ರಿಯಾಕ್ಟರ್ ಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ, ಕಾಳಿ ನದಿಯಲ್ಲಿ ಸೇರುತ್ತಿರುವ ಕಲ್ಮಷ- ಇವುಗಳ ಕೂಲಂಕುಷ ಅಧ್ಯಯನ ಆಗಬೇಕು. ಕಾಳಿ ನದಿಯ ನೀರಿನಲ್ಲಿ ಯುರೇನಿಯಂ ತ್ಯಾಜ್ಯದಿಂದ ಉಂಟಾಗಿರುವ ವಿಕಿರಣ ಸೇರಿಕೊಂಡಿದ್ದು, ಅಲ್ಲಿನ ಮೀನು-ಚಿಪ್ಪುಗಳಿಗೆ ಉತ್ತು ತಂದಿದೆ ಎಂದು ಸ್ಥಳೀಯರು ಬಹುಕಾಲದಿಂದ ಹೋರಾಟ ನಡೇಸುತ್ತಿದ್ದಾರೆ. ಸ್ಥಳೀಯರಲ್ಲಿ ವಿಕಿರಣದಿಂದಾಗಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿವೆ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಶ್ವರ ಸರಸ್ವತಿ ಸ್ವಾಮಿಗಳೂ ಸೇರಿದಂತೆ ಅನೇಕ ಪರಿಸರವಾದಿಗಳು, ತಜ್ಞರು ಆಕ್ಷೇಪ ಎತ್ತಿದ್ದರು. ಉತ್ತರ ಕನ್ನಡಜಿಲ್ಲೆಯು ಅನೇಕ ಆಧುನಿಕ ಯೋಜನೆಗಳಿಗೆ ನೆಲೆಯಾಗಿದೆ. ಇಲ್ಲಿನ ಕಾಳಿ, ಅಘನಾಶಿನಿ ಮುಂತಾದ ನದಿಗಳು ನಾಡಿಗೆ ಬೆಳಕು ನೀಡುತ್ತಿವೆ. ಆದರೆ ಸ್ಥಳೀಯರಿಗೆ ಈ ಅಭಿವೃದ್ಧಿಯ ಫಲ ಮರೀಚಿಕೆಯಾಗಿದೆ. ಭರವಸೆ ನೀಡಿದಂತೆ ಕೈಗಾದ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗಗಳು ದೊರೆತಿಲ್ಲ. ಅತ್ಯಾಧುನಿಕ ಘಟಕದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಹಳ್ಳಿಗಳಿಗೆ ವಿದ್ಯುತ್ ಬೆಳಕು ತಲುಪಿಲ್ಲ. ನಾಡಿಗೆ ಬೆಳಕು ನೀಡುವ ಊರುಗಳಿಗೆ, ಅದಕ್ಕಾಗಿ ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟು ಹಿನ್ನಲೆಗೆ ಸರಿದ ಇಲ್ಲಿನ ಜನರಿಗೆ ಅದರ ಸತ್ಫಲಗಳು ಕಿಂಚಿತ್ತಾದರೂ ಸಲ್ಲುವುದು ಬೇಡವೇ? ನೂತನ ಘಟಕಗಳ ಸ್ಥಾಪನೆಗೆ ಮುನ್ನ ಈ ಎಲ್ಲ ಅಂಶಗಳನ್ನೂ ಚಿಂತಿಸಿ, ಸರ್ವರ ಅಭಿವೃದ್ಧಿಗೆ ಮೂಲವಾಗುವಂತೆ ಹೊಸ ಘಟಕಗಳನ್ನು ಸ್ಥಾಪಿಸಬೇಕಾದದ್ದು ನ್ಯಾಯವಾಗಿದೆ. 

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೮-೦೩-೨೦೨೨ 

ಚಿತ್ರ ಕೃಪೆ: ಅಂತರ್ಜಾಲ ತಾಣ