ಕೈತೋಟ ಕೈಪಿಡಿ

ಕೈತೋಟ ಕೈಪಿಡಿ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಗ್ರಹ ಬರವಣಿಗೆ: ಹರಿಕೃಷ್ಣ ಕಾಮತ್
ಪ್ರಕಾಶಕರು
ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು. ಮೊ: ೯೪೪೮೮೩೫೬೦೬
ಪುಸ್ತಕದ ಬೆಲೆ
ರೂ. ೧೫.೦೦, ಮುದ್ರಣ : ೨೦೨೨

ಮಂಗಳೂರಿನ ಸಾವಯವ ಕೃಷಿಕರ ಬಳಗವು ‘ವಿಷಮುಕ್ತ ಅನ್ನದ ಬಟ್ಟಲಿನತ್ತ ಪುಟ್ಟ ಹೆಜ್ಜೆ' ಎಂಬ ಪರಿಕಲ್ಪನೆಯ ಮಾಲಿಕೆಯ. ಮೊದಲ ಕೃತಿಯಾಗಿ ‘ಕೈತೋಟ ಕೈಪಿಡಿ' ಎಂಬ ಪುಟ್ಟ ಆದರೆ ಮಹತ್ವಪೂರ್ಣ ಪುಸ್ತಕವನ್ನು ಹೊರತಂದಿದ್ದಾರೆ. ಸ್ವತಃ ಪ್ರಗತಿಪರ, ಸಾವಯವ ಕೃಷಿಕರಾದ ಪುತ್ತೂರಿನ ಮಂಜುನಾಥ ಫಾರ್ಮ್ಸ್ ನ ಹರಿಕೃಷ್ಣ ಕಾಮತ್ ಅವರು ಉತ್ತಮ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಹೆಕ್ಕಿ ತಂದು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.

ಪುಸ್ತಕಕ್ಕೆ ಮೊದಲ ಮಾತನ್ನು ಬರೆದಿದ್ದಾರೆ, ಸಾವಯವ ಕೃಷಿಕ ಗ್ರಾಹಕ ಬಳಗ ಇದರ ಅಧ್ಯಕ್ಷರಾದ ಜಿ ಆರ್ ಪ್ರಸಾದ್ ಇವರು. ಈ ಪುಸ್ತಕವನ್ನು ಹೊರತಂದ ಬಗ್ಗೆ ಹಾಗೂ ಇಂತಹ ಪುಸ್ತಕವೊಂದರ ಅಗತ್ಯತೆಯ ಬಗ್ಗೆ ತಮ್ಮ ಮಾತಿನಲ್ಲಿ ಪ್ರಸಾದ್ ಅವರು ಹೇಳುವುದು ಹೀಗೆ “ ಅತಿ ಆಸೆ, ರಾಸಾಯನಿಕ ಮತ್ತು ಹೈಬ್ರಿಡ್ ಬೀಜ ಬಳಕೆಯ ಅಡ್ಡ ದಾರಿಗೆ ಸೆಳೆಯುತ್ತಿದೆ. ಪಾರಂಪರಿಕ ಕೃಷಿ ಪದ್ಧತಿಯನ್ನು ರೈತ ಮರೆಯುತ್ತಿದ್ದಾನೆ. ಪೇಟೆಯಿಂದ ತಂದ ರಸಗೊಬ್ಬರದಿಂದ ಭರ್ಜರಿ ಫಸಲು ಅನುಭವಿಸಿದ ರೈತನಿಗೆ ನೈಸರ್ಗಿಕ ಗೊಬ್ಬರ, ಸಾಂಪ್ರದಾಯಿಕ ಕೃಷಿ ಪದ್ಧತಿ ಬಗೆಗಿನ ಒಲವು ದೂರವಾಗಿದೆ. ನಾವು ತಿನ್ನುವ ಆಹಾರವನ್ನು  ಕೆಲವು ದಲ್ಲಾಳಿಗಳು, ಮಾರಾಟಗಾರರು ಹೇಗೆ ನಡೆಸಿ ಕೊಳ್ಳುತ್ತಾರೆ ಎಂಬುದು ಬೆಳ್ಳಂಬೆಳಗ್ಗೆ ಮಾರುಕಟ್ಟೆಗೆ ಭೇಟಿ ನೀಡಿದಾಗ ಮಾತ್ರ ಅರ್ಥವಾಗಬಹುದು. ಬೆಳಗಾರ ಸತ್ಯದ ಮಾರ್ಗದಲ್ಲಿ ನಡೆದರೂ ಮಾರುಕಟ್ಟೆಗೆ ಬಂದಾಗ ಕಲಬೆರಕೆಗಳಾಗುತ್ತವೆ. ಹೂವುಗಳು ಬಾಡದಿರಲು, ತರಕಾರಿಗಳು ಫ್ರೆಶ್ ಆಗಿರಲು, ಮಾರಾಟಗಾರನ ಅನುಕೂಲಕ್ಕೆ ತಕ್ಕಂತೆ ರಾಸಾಯನಿಕ ಸೇರಿಸುತ್ತಾರೆ.

ನಮ್ಮ ಹಿರಿಯರು ಮಾಡುತ್ತಿದ್ದ ಸಾವಯವ ಕೃಷಿ  ಪದ್ಧತಿಯನ್ನು ಕೈಬಿಟ್ಟಿದ್ದೆ ಪ್ರಸ್ತುತ ದಿನಗಳಲ್ಲಿ ಕಾಡುತ್ತಿರುವ ಬಿಪಿ, ಶುಗರ್, ಹಾರ್ಟ್ ಪ್ರಾಬ್ಲಮ್, ಕ್ಯಾನ್ಸರ್ ರೋಗಗಳಿಗೆ ಮೂಲ ಕಾರಣ. ಪ್ರಸ್ತುತ ದಿನಗಳಲ್ಲಿ ರೋಗವಿಲ್ಲದ ಮನೆಗಳೇ ಇಲ್ಲ.. ಕೈತುಂಬಾ ಹಣವಿದ್ದರೂ ದೇಹಕ್ಕೆ ಅನಾರೋಗ್ಯ. ಮನಸ್ಸಿಗೆ ಅಶಾಂತಿ. ಹೀಗಾಗಿ ' ವಿಷಮುಕ್ತ ಅಡುಗೆಮನೆ' ಮಾಡಬೇಕೆಂಬ ಧ್ಯೇಯ ವಾಕ್ಯದಲ್ಲಿ ಮಂಗಳೂರಿನಲ್ಲಿ ಸಾವಯವ ಕೃಷಿಕ, ಗ್ರಾಹಕರ ಬಳಗ ಕಳೆದ ವರ್ಷಗಳಿಂದ ಗೋಷ್ಠಿ, ಸಾವಯವ ಸಂತೆ, ಸಾವಯವ ಹಲಸು ಮೇಳ, ತರಬೇತಿ ಕಾರ್ಯಾಗಾರಗಳ ಮೂಲಕ ಸದ್ದಿಲ್ಲದೆ ಕೆಲಸ  ಮಾಡುತ್ತಿದೆ. ಇದರ ಮುಂದುವರಿದ ಭಾಗ ಕೈತೋಟ ಕ್ರಾಂತಿ.

ಇದಕ್ಕೆ ಪೂರಕವಾಗಿ ಸಾವಯವ ಕೃಷಿಕ ಹರಿಕೃಷ್ಣ ಕಾಮತ್ ಕೈತೋಟ ಹವ್ಯಾಸಿಗಳಿಗೆ ಅನುಕೂಲವಾಗುವ ಮಾಹಿತಿಯನ್ನು ಈ ಕೈಪಿಡಿಯಲ್ಲಿ ನೀಡಿದ್ದಾರೆ. ಗೊಬ್ಬರ ತಯಾರಿ., ಬೀಜಗಳ ಆಯ್ಕೆ, ಕೀಟ ನಿಯಂತ್ರಣ, ಬೀಜಾಮೃತ ತಯಾರಿ ಮೊದಲಾದವುಗಳ ಬಗ್ಗೆ ಉಪಯುಕ್ತ ಮಾಹಿತಿಗಳು ಇವೆ. ಸಾವಯವ ಬೆಳೆ ಮಾಡಬೇಕೆಂಬ ತುಡಿತ ಉಳ್ಳವರಿಗೆ ಮಾಹಿತಿಪೂರ್ಣ ಕೈಪಿಡಿ."

ಈ ಪುಟ್ಟ ಪುಸ್ತಕದಲ್ಲಿ ಬಹಳಷ್ಟು ಮಾಹಿತಿಗಳನ್ನು ಹರಿಕೃಷ್ಣ ಕಾಮತ್ ಇವರು ಸೇರಿಸಿದ್ದಾರೆ. ಮೊದಲಿಗೆ ಕೈತೋಟದ ಪ್ರಯೋಜನಗಳು, ಬೀಜಗಳ ಆಯ್ಕೆ, ಬೀಜದ ಸಂರಕ್ಷಣಾ ವಿಧಾನ ಮೊದಲಾದ ಮಾಹಿತಿಗಳನ್ನು ನೀಡಿ ನಂತರ ಬೀಜಾಮೃತ ತಯಾರಿಕೆ ಮತ್ತು ಬೀಜೋಪಚಾರ, ಕೀಟಗಳನ್ನು ದೂರವಿಡಲು ಅನುಸರಿಸಬೇಕಾದ ಕ್ರಮಗಳು, ಕೈತೋಟದಲ್ಲಿ ಬೆಳೆಯಬಹುದಾದ ತರಕಾರಿಗಳು, ಹಣ್ಣುಗಳು, ಔಷಧೀಯ ಸಸ್ಯಗಳು, ಗೆಡ್ಡೆ ತರಕಾರಿಗಳು, ಹೂವುಗಳು, ಋತುಮಾನಕ್ಕೆ ತಕ್ಕಂತೆ ಬೆಳೆಯುವ ತರಕಾರಿಗಳು ಬಗ್ಗೆ ಉತ್ತಮ ಮಾಹಿತಿಗಳನ್ನು  ನೀಡಿದ್ದಾರೆ. ಕೈತೋಟದಲ್ಲಿ ಬಹು ಬೆಳೆ ಪದ್ಧತಿ, ಬೆಳೆ ಪರಿವರ್ತನೆ, ಸಾವಯವ ಗೊಬ್ಬರಗಳಾದ ಸಾರಜನಕ, ರಂಜಕ, ಪೊಟ್ಯಾಶ್, ಗೋ ಕ್ರಪಾಮೃತ, ಪಂಚಗವ್ಯ ಇತ್ಯಾದಿಗಳ ಬಗ್ಗೆಯೂ ಮಾಹಿತಿಗಳಿವೆ.

ಗಿಡಗಳಿಗೆ ಬರುವ ಕೀಟಬಾಧೆಗಳಿಗೆ ರಾಸಾಯನಿಕ ವಸ್ತುಗಳನ್ನು ಸಿಂಪಡಿಸದೆ ಸಾವಯವ ಕೀಟನಾಶಕಗಳನ್ನು ಬಳಸಿ ಕೀಟಗಳನ್ನು ಹತೋಟಿಯಲ್ಲಿಡುವ ಕ್ರಮಗಳ ಬಗ್ಗೆ ವಿವರವಿದೆ. ಸಾವಯವ ಕೀಟನಾಶಕಗಳಾದ ಬ್ರಹ್ಮಾಸ್ತ್ರ, ಅಗ್ನಿ ಅಸ್ತ್ರ,  ನೀಮಾಸ್ತ್ರ, ಶಿಲೀಂದ್ರ ನಾಶಕ, ಸಸ್ಯ ವರ್ಧಕಗಳು ಇವುಗಳ ಬಗ್ಗೆ ಮಾಹಿತಿಗಳಿವೆ. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಗೊಬ್ಬರ ಮಾಡುವ ಸುಲಭ ವಿಧಾನವನ್ನು ಪುಸ್ತಕದ ಕೊನೆಯಲ್ಲಿ ವಿವರಿಸಲಾಗಿದೆ. ೩೦ ಪುಟಗಳ ಈ ಪುಟ್ಟ ಪುಸ್ತಕವು ನಿಮ್ಮ ಮನೆಯಲ್ಲಿ ಕೈತೋಟ ಮಾಡುವ ಸುಲಭ ವಿಧಾನಗಳನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ.