ಕೈತೋಟ ಮಾಡುವ ವಿಧಾನಗಳು ಮತ್ತು ಉಪಯುಕ್ತತೆ
ನಾವು ವಾಸಿಸುವ ಮನೆಯ ಸುತ್ತಲಿನ ಪರಿಸರದಲ್ಲಿ ವಿವಿಧೋದ್ದೇಶಗಳಿಗಾಗಿ ಬೆಳೆಸುವ ತೋಟವೇ ಕೈತೋಟ. ಈ ಕೈತೋಟ ಮಾಡಲು ಉಪಯೋಗಿಸುವ ಕಾಲ ಮತ್ತು ಶ್ರಮದಾನ ನಮಗೆ ಉತ್ತಮ ಆರೋಗ್ಯಕ್ಕೆ ನೆರವು ನೀಡುವುದಲ್ಲದೆ. ಅಲ್ಪ ಸ್ವಲ್ಪ ಆದಾಯವನ್ನು ನೀಡಬಲ್ಲದು. ಅದಲ್ಲದೆ ಪೌಷ್ಟಿಕಾಂಶಗಳುಳ್ಳ ತರಕಾರಿ ಮತ್ತು ಹಣ್ಣು ಹಂಪಲಗಳನ್ನು ಸ್ವತಃ ಬೆಳೆಸಿ ಉಪಯೋಗಿಸುವ ಸಂತೋಷದ ಜೊತೆಗೆ ವಿಶ್ರಾಂತಿ ಸಮಯವನ್ನು ಸದುಪಯೋಗಪಡಿಸಿಕೊಂಡು ಸಾರ್ಥಕತೆಯ ಜೀವನ ನಡೆಸಲು ಸಹಾಯಕವಾಗುತ್ತದೆ.
ಆಹಾರ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಅದು ಒಳ್ಳೆಯ ಗುಣಮಟ್ಟದ್ದಾಗಿರಬೇಕು ಮತ್ತು ಎಲ್ಲರಿಗೂ ಸಮತೋಲನ ಆಹಾರ ಸಿಗುವುದು ಮುಖ್ಯ. ನಮ್ಮ ದೇಶದ ಹೆಚ್ಚಿನ ಜನರು ಸಸ್ಯಹಾರಿಗಳಾಗಿದ್ದು, ಪ್ರತಿ ದಿನ ಆಹಾರದಲ್ಲಿ ಕಾಯಿಪಲ್ಯೆಗಳು, ನಾರಿನಾಂಶ, ಖನಿಜಾಂಶ ಮತ್ತು ಲವಣಗಳು ಇರುವುದರಿಂದ ಇವು ನಮ್ಮ ದೇಹವನ್ನು ರೋಗರುಜಿನಗಳಿಂದ ಕಾಪಾಡುತ್ತವೆ. ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಮತ್ತು ಯಾಂತ್ರಿಕ ಕ್ರಿಯೆಗಳಿಗೆ ಅವಶ್ಯಕವಾದ ಪೋಷಕಾಂಶಗಳ ಪಚನಕ್ರಿಯೆಗೆ ಹಣ್ಣು ಮತ್ತು ತರಕಾರಿಗಳು ಕಿಣ್ವಗಳನ್ನು ಒದಗಿಸುತ್ತವೆ. ದಿನ ನಿತ್ಯದ ಆಹಾರದಲ್ಲಿ ಈ ಪೋಷಕಾಂಶಗಳ ಸುಲಭ ಪೂರೈಕೆಗಾಗಿ ಪ್ರತಿಯೊಂದು ಮನೆಯು ತನ್ನದೇ ಆದ ಕೈ ತೋಟವನ್ನು ಹೊಂದಿರುವುದು ಅವಶ್ಯಕವಾಗಿದೆ.
ಕೈತೋಟದ ಪ್ರಯೋಜನಗಳುಃ
೧. ಕೈ ತೋಟವು ಮನೆಯ ಪರಿಸರವನ್ನು ಸುಂದರಗೊಳಿಸುವುದಲ್ಲದೆ, ಸುತ್ತಲಿನ ವಾತಾವರಣವನ್ನು ತಿಳಿಯಾಗಿಸಿ, ಪ್ರಸನ್ನತೆಯನ್ನು ಕಾಪಾಡುತ್ತದೆ.
೨. ಬಿಡುವಿನ ವೇಳೆಯಲ್ಲಿ ಕೈತೋಟದ ಕೆಲಸಗಳಲ್ಲಿ ತೊಡಗುವುದರಿಂದ ದೇಹಕ್ಕೆ ಲಘು ವ್ಯಾಯಾಮ ಸಿಗುವುದಲ್ಲದೆ, ಒಳ್ಳೆಯ ಗುಣಮಟ್ಟದ ಕಾಯಿಪಲ್ಯ ಹಾಗೂ ಹಣ್ಣುಗಳನ್ನು ವರ್ಷಪೂರ್ತಿ ಸೇವಿಸಬಹುದು ಮತ್ತು ಇದರಿಂದ ಸ್ವಲ್ಪಮಟ್ಟಿನ ಹಣ ಉಳಿತಾಯವನ್ನು ಮಾಡಬಹುದು.
೩. ಮನೆಯ ಸಾವಯವ ತ್ಯಾಜ್ಯ ವಸ್ತುಗಳು ಮತ್ತು ನೀರನ್ನು ಸಮರ್ಪಕವಾಗಿ ಮರು ಬಳಿಸಿಕೊಳ್ಳಬಹುದು.
೪. ಔಷಧಿ ಸಸ್ಯಗಳನ್ನು ಬೆಳೆದು ಉಪಯೋಗಿಸಬಹುದು ಮತ್ತು ಅಪರೂಪದ ಹಾಗೂ ವಿಶಿಷ್ಟ ಸಸ್ಯಗಳನ್ನು
ಸಂಗ್ರಹಿಸಿ ಹೆಚ್ಚಿನ ಮತ್ತು ಮತುವರ್ಜಿಯಿಂದ ಬೆಳೆಸಬಹುದು.
೫. ಕಿರಿಯರಿಗೆ ವಿವಿಧ ಸಸ್ಯಗಳ ಪರಿಚಯ, ಸಸ್ಯ ಬೆಳವಣಿಗೆ ಹಾಗೂ ಕೃಷಿ ವಿಧಾನಗಳ
ಪ್ರಾತ್ಯಕ್ಷಿಕೆಯೊಂದಿಗೆ ಭೋಧನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.
೬. ಕೈತೋಟ ಮಾಡುವುದರಿಂದ ಮಕ್ಕಳು ಮತ್ತು ಗೃಹಣಿಯರಿಗೆ ಬಿಡುವಿನ ವೇಳೆಯಲ್ಲಿ ಕೆಲಸಕ್ಕೆ ಅನುವು ಸಿಗುವುದಲ್ಲದೆ ಅವರು ಯಾವಾಗಲೂ ಲವಲವಿಕೆಯಿಂದಿರಲೂ ಸಾಧ್ಯ. ಅದರಲ್ಲೂ ಮಕ್ಕಳು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸಧೃಢವಾಗಿ ಬೆಳೆಯಲು ಕೈತೋಟ ನೆರವಾಗುತ್ತದೆ.
ಈ ರೀತಿಯಾಗಿ ಮನಸ್ಸಿಗೆ ಮುದ ನೀಡಿ, ಪರಿಸರ ಸಂರಕ್ಷಿಸಿ, ಮನೆಯ ಸೊಬಗನ್ನು ಹೆಚ್ಚಿಸುವುದರ ಜೊತೆಗೆ ಆದಾಯವನ್ನು ನೀಡುವ ಕೈತೋಟವನ್ನು ಬಹುಪಯೋಗಿ ವೈವಿದ್ಯಮಯ ಕಸುಬು ಎನ್ನಬಹುದು. ಅಲ್ಲದೆ ಮನೆಯ ಎಲ್ಲಾ ವಯೋಮಾನದವರು ಒಟ್ಟಾಗಿ ಬೆಳೆಸಿ ಪ್ರೀತಿಸುವ ಕೈತೋಟ ಮನೆಗೆ ಒಂದು ಶೋಭೆ. ದಿನ ನಿತ್ಯದ ಆಹಾರದಲ್ಲಿ ಅಕ್ಕಿ, ಗೋಧಿ, ಜೋಳ, ಬೆಳೆ ಹಾಗೂ ಇನ್ನಿತರ ಕಾಳುಗಳ ಬಳಕೆ ಹೇಗೆ ಅವಶ್ಯವೋ ಅದೇ ರೀತಿ ಹಣ್ಣು, ತರಕಾರಿ ಮತ್ತು ಸಾಂಬಾರ ಪದಾರ್ಥಗಳು ಅಷ್ಟೆ ಮುಖ್ಯ ಸಮತೋಲನ ಆಹಾರದಲ್ಲಿ ಇವು ಪ್ರಮುಖ ಪಾತ್ರ ವಹಿಸುವುದಲ್ಲದೆ ಜೀವಸತ್ವ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ಕೈತೋಟವನ್ನು ಮುಖ್ಯವಾಗಿ ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು.
೧. ಉಪಯುಕ್ತವಿಭಾಗ : ಈ ವಿಭಾಗದಲ್ಲಿ ಹಣ್ಣು, ತರಕಾರಿ ಮತ್ತು ಔಷಧಿ ಸಸ್ಯಗಳನ್ನು ಬೆಳೆಯಬಹುದು.
೨. ಅಲಂಕಾರಿಕ ವಿಭಾಗ : ಇದರಲ್ಲಿ ಹೂವು, ಹುಲ್ಲುಹಾಸು ಹಾಗೂ ಇತರೆ ಅಲಂಕಾರಿಕ ಸಸ್ಯಗಳನ್ನು ಕಾಣಬಹುದು.
ಕೈತೋಟ ಪ್ರಾರಂಭಿಸಲು ಗಮನದಲ್ಲಿಡಬೇಕಾದ ಕೆಲವು ಪ್ರಮುಖ ಅಂಶಗಳು
೧. ಚೆನ್ನಾಗಿ ಸೂರ್ಯನ ಬೆಳಕು ಬೀಳುವ ಮತ್ತು ಮರಗಳಿಂದ ದೂರವಾಗಿರುವ ಸ್ಥಳವಾಗಿರಬೇಕು.
೨. ತೋಟಕ್ಕೆ ಹತ್ತಿರದಲ್ಲಿ ನೀರಿನ ವ್ಯವಸ್ಥೆ ಇರಬೇಕು.
ಮಳೆಗಾಲಕ್ಕೆ ಸೂಕ್ತವಾದ ತರಕಾರಿಗಳು : ಟೊಮ್ಯಾಟೋ, ಬೆಂಡೆ, ಬದನೆ, ಹುರುಳಿಕಾಯಿ ಮುಂತಾದವುಗಳು.
ಚಳಿಗಾಲಕ್ಕೆ ಸೂಕ್ತವಾದ ತರಕಾರಿಗಳು : ಗಜ್ಜರಿ, ಬಟಾಣಿ, ಎಲೆಕೋಸು (ಕ್ಯಾಬೇಜ್), ನವಿಲುಕೋಸು, ಈರುಳ್ಳಿ, ಮೂಲಂಗಿ, ಸೊಪ್ಪು ತರಕಾರಿಗಳು.
ಬೇಸಿಗೆ ಕಾಲಕ್ಕೆ ಸೂಕ್ತವಾದ ತರಕಾರಿಗಳು : ಸೌತೆಕಾಯಿ, ಕಲ್ಲಂಗಡಿ, ಕುಂಬಳಕಾಯಿ, ಮುಂತಾದವುಗಳು. ಹೂವಿನ ಬೆಳೆಗಳಾದ ಮಲ್ಲಿಗೆ, ಗುಲಾಬಿ, ಸೇವಂತಿಗೆ, ಕನಕಾಂಬರ ಮತ್ತು ಕೆಲವು ಅಲಂಕಾರಿ ಸಸ್ಯಗಳನ್ನು ಸಣ್ಣ ಪ್ರಮಾಣದಲ್ಲಿ ಬೆಳೆಯಬಹುದು.
ಕೈತೋಟದ ನಿರ್ವಹಣೆ: ಸಸ್ಯಗಳು ಸಮೃಧ್ದಿಯಾಗಿ ಬೆಳೆಯಲು ಗೊಬ್ಬರಗಳ ನಿರ್ವಹಣೆ ಅತಿ ಮುಖ್ಯವಾದುದು. ನಿಗದಿತ ಸಮಯದಲ್ಲಿ ನಿರ್ದಿಷ್ಟ ಪೋಷಕಾಂಶಗಳನ್ನು ಪೂರೈಕೆ ಮಾಡುವುದು ಒಂದು ವೈಜ್ಞಾನಿಕ ಕ್ರಮವಾಗಿದೆ. ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುವುದಲ್ಲದೆ ಇವುಗಳ ಬಳಕೆಯಿಂದ ಮಣ್ಣಿನ ಮೇಲೆ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ ಮತ್ತು ಅವು ಭೂಮಿಯ ಫಲವತ್ತತೆಯನ್ನು ಉತ್ಪಾದಕತೆಯನ್ನು ಕಾಯ್ದುಕೊಂಡು ಹೋಗುತ್ತವೆ. ಕೈತೋಟದಲ್ಲ ನೀರಾವರಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ನಿರ್ದಿಷ್ಟ ಪ್ರಮಾಣದಲ್ಲಿ ಸಸ್ಯಗಳಿಗೆ ನೀರು ದೊರೆಯದೇ ಇದ್ದರೆ ಬೆಳವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಗಮನಾರ್ಹ ವ್ಯತ್ಯಾಸಗಳು ಕಂಡುಬರುತ್ತದೆ.
ಬಹುವಾರ್ಷಿಕ ಬೆಳೆಗಳಿಗೆ ಆರಂಭದ ಕೆಲವು ವರ್ಷಗಳಲ್ಲಿ ಸೂಕ್ತ ಪ್ರಮಾಣದಲ್ಲಿ ನೀರು ಪೂರೈಕೆಯಾಗುವಂತೆ ನೋಡಿಕೊಂಡರೆ ನಂತರ ಮೊದಲಿನಂತೆ ನೀರು ಪೂರೈಕೆಯಾಗುವಂತೆ ನೊಡಿಕೊಂಡರೆ ನಂತರ ಮೊದಲಿನಂತೆ ನೀರು ಪೂರೈಸುವ ಅಗತ್ಯವಿರುವುದಿಲ್ಲಾ. ಅವುಗಳು ಮಳೆಯನ್ನು ಅವಲಂಭಿಸಿ ಬದುಕುಳಿದು ಫಲ ನೀಡಲಾರಂಭಿಸುತ್ತವೆ. ಆದಷ್ಟು ಮಟ್ಟಿಗೆ ಅಲ್ಪಾವಧಿಯಲ್ಲೇ ಫಲವನ್ನು ಕೊಡುವ ತರಕಾರಿ ಗಿಡಗಳನ್ನು ಆಯ್ಕೆ ಮಾಡಬೇಕು. ತರಕಾರಿ ಬೆಳೆಗಳನ್ನು ಬಿಸಿಲು ಮತ್ತು ಗಾಳಿಯಿಂದ ಕಾಪಾಡಲು ತೋಟದ ಸುತ್ತಲೂ ತಡೆಯಾಗಬಹುದಾದ ಬೇಲಿ ಗಿಡಗಳನ್ನು ಬೆಳೆಸಿ ಆಗಾಗ ಸವರುತ್ತಿರಬೇಕು. ಮನೆ ತೋಟದ ಎಷ್ಟು ಭಾಗವನ್ನು ತರಕಾರಿಗಳಾಗಿ ವಿನಿಯೋಗಿಸಬೇಕು ಎಂಬುದು ಆ ತೋಟದ ವಿಸ್ತೀರ್ಣ, ಅನುಕೂಲ ಪ್ರತಿಕೂಲಗಳು, ಮನೆ ಜನಸಂಖ್ಯೆ, ಮನೆಯ ಅಕ್ಕಪಕ್ಕ ಮತ್ತು ಹಿತ್ತಲಿನಲ್ಲಿ ಸಿಗುವ ಜಾಗ ಮುಂತಾದವುಕ್ಕೆ ಅನುಗುಣವಾಗಿರಬೇಕಾಗುತ್ತದೆ.
ಕೈತೋಟದ ನಕ್ಷೆ ಮತ್ತು ಬೆಳೆಗಳ ಆಯ್ಕೆ: ಕೈತೋಟದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಆಯ್ಕೆ ಮಾಡುವಾಗ ಬೇಗ ಫಸಲುಕೊಡುವ ಮತ್ತು ಗಿಡ್ಡ ತಳಿಗಳಿಗೆ ಆಧ್ಯತೆ ನೀಡಬೇಕು. ತೋಟದ ವಿಸ್ತಿರ್ಣ, ಲಭ್ಯವಿರುವ ಜಾಗ ಹಾಗೂ ಅದರ ಉಸ್ತುವಾರಿಸಿಗುವ ಕಾಲಾವಕಾಶ, ದಿನನಿತ್ಯ ಕುಟುಂಬಕ್ಕೆ ಹಣ್ಣು ತರಕಾರಿಗಳನ್ನು ಒದಗಿಸಲು ೨೦೦ ಚ.ಮೀ ಜಾಗಸಾಕಾಗುತ್ತದೆ. ಸಾಮಾನ್ಯವಾಗಿ ಚೌಕಾಕಾರದ ತಾಕುಗಳಿಗಿಂತ ಆಯತಾಕಾರದ ತಾಕುಗಳನ್ನು ಆಯ್ಕೆ ಮಾಡುವುದು ಉತ್ತಮ. ಅಂತಹ ತಾಕುಗಳಲ್ಲಿ ಬೇಸಾಯ ಕ್ರಮಗಳು ಸುಲಭವಿರುತ್ತವೆ. ತೋಟದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ತರಕಾರಿಗಳನ್ನು ಬೆಳೆಸಬೇಕು. ಇದರಿಂದಾಗಿ ಬಿಸಿಲು ಯಥೇಚ್ಛವಾಗಿ ದೊರೆತು ಹೆಚ್ಚಿನ ಬೆಳವಣಿಗೆಯಾಗುತ್ತದೆ. ಬೇರು ಮತ್ತು ಗಡ್ಡೆ ತರಕಾರಿಗಳಾದ ಸೋರೆಕಾಯಿ, ಕುಂಬಳಕಾಯಿ, ಪಡವಲಕಾಯಿ ಮುಂತಾದವುಗಳನ್ನು ನೆಲದ ಮೇಲೆ ಹರಡಿ ಬೆಳೆಯಲು ಬಿಡದೆ ಕಡಿಮೆ ಖರ್ಚಿನ ಚಪ್ಪರದ ಮೇಲೆ ಹಬ್ಬಿಸುವುದು ಒಳ್ಳೆಯದು. ಬಹುವಾರ್ಷಿಕ ಹಣ್ಣಿನ ಬೆಳೆಗಳ ನಡುವೆ ಬೇಗ ಕೊಯ್ಲಿಗೆ ಬರುವ ಹಾಗೂ ಆಳವಾಗಿ ಬೇರು ಬಿಡುವಂತಹ ಬೆಳ್ಳುಳ್ಳಿ, ಈರುಳ್ಳಿ, ಕೊತ್ತಂಬರಿ ಮುಂತಾದವುಗಳನ್ನು ಬೆಳೆಯಬಹುದು. ಕೈತೋಟದಲ್ಲಿ ಇರುವ ಸ್ಥಳಾವಕಾಶ ನೋಡಿಕೊಂಡು ಮತ್ತು ಆಯಾ ಪ್ರದೇಶಕ್ಕನುಗುಣವಾಗಿ ಹೊಂದಿಕೊಳ್ಳುವ ಹಣ್ಣಿನ ಬೆಳೆಗಳಾದ ಮಾವು, ಬಾಳೆ, ಸಪೋಟಾ, ಪಪ್ಪಾಯ, ಹಲಸು ಮುಂತಾದವುಗಳನ್ನು ಬೆಳೆಯಬಹುದು. ಕೈತೋಟದಲ್ಲಿ ತರಕಾರಿಗಳು ಬಹುಪಾಲು ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ. ಕಾಲಕ್ಕನುಸಾರವಾಗಿ ತರಕಾರಿ ಬೆಳೆಗಳನ್ನು ವರ್ಷವಿಡೀ ಬೆಳೆಯಬಹುದು.
ಮಾಹಿತಿ ಸಹಕಾರ: ಡಾ. ಈರಮ್ಮ ವಿ. ಗೌಡರ, ಧಾರವಾಡ
ಚಿತ್ರ ಕೃಪೆ: ಅಂತರ್ಜಾಲ ತಾಣ