ಕೈ ಬಳೆ ಆಡುತಾ ಘಲ್ ಘಲ್ ಎನ್ನಲು

ಕೈ ಬಳೆ ಆಡುತಾ ಘಲ್ ಘಲ್ ಎನ್ನಲು

ಬರಹ

"ಅಮ್ಮಾ ನಂಗೆ ಆ ರೆಡ್  ಬಳೆ ಬೇಕು . ಇನ್ನೂ ಒಂದು ಮೂರು ಒಂಬತ್ತು ಬೇಕು "ಎಂದು ಬಳೆ  ಹಾಕಿಸಿಕೊಳ್ಲುತ್ತಿದ್ದಳು ನನ್ನ ಮಗಳು ಯಶಿತಾ ಮೊದಲೆಲ್ಲಾ .ಈಗ" ಬಳೆ ಹಾಕ್ಕೊಂಡು ಹೋದರೆ ಮೇಡಮ್ ಬೈತಾರೆ ಎಂದು ಬಿಚ್ಚಿಟ್ಟು ಹೋಗುತ್ತಾಳೆ ಸ್ಕೂಲಿಗೆ.


ಹೌದಲ್ವಾ ನಮ್ಮ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳಿಗೆ ಬಳೆಗಳೇ ಭೂಷಣ. ಅವುಗಳಿಗೆ ಬಹು  ಮುಖ್ಯವಾದ ಸ್ಥಾನವಿದೆ. ಪ್ರತಿ ಹಬ್ಬ ಹರಿದಿನಕ್ಕೆ . ಶುಭ  ಸಮಾರಂಭಕ್ಕೆ ಕಳೆಗಟ್ಟುವುದೇ ಬಳೆಗಳ ನಿನಾದದಿಂದ


ಹೆಣ್ಣಿನ ಕೈನ ಬಳೆಗಳ ನಾದಕ್ಕೆ ಸೋತು ಹಳ್ಳಕ್ಕೆ ಬಿದ್ದ ಗಂಡಸರುಗಳು ಎಷ್ಟೋ  ಜನ.


ಆಗೆಲ್ಲಾ ಅಂದರೆ ಅಮ್ಮನ ಕಾಲಕ್ಕೆ ಅಥವ ಅವರಮ್ಮನ ಕಾಲಕ್ಕೋ ಕೈ ತುಂಬಾ ಬಳೆ ಮುಡಿ ತುಂಬಾ ಹೂವು, ಕಾಲಲ್ಲಿ ಗೆಜ್ಜೆ ಹಣೆಯ ತುಂಬಾ ಕುಂಕುಮವಿಟ್ಟು ಹೆಣ್ಣು ಬಂದರೆ  ಲಕ್ಷಣ ಜೊತೆಗೆ ಸಂಭ್ರಮ. ಅಮ್ಮ ಹೇಳುತ್ತ್ತಾರೆ . ಕೈನಲ್ಲಿ ಬಳೆ ಹಣೆಯಲ್ಲಿ ಕುಂಕುಮ ಹಾಗು ಮುಡಿಯಲ್ಲಿ ಹೂವು ಇವಿಷ್ಟು ಇರದ ಹೆಣ್ಣು ಮನೆಗೆ ಅವಲಕ್ಷಣ ಎಂದು ಬೈಯ್ಯುತ್ತಿದ್ದರಂತೆ.


ನಾನು ಬಳೆಗಳ ವ್ಯಾಮೋಹಿ. ಚಿಕ್ಕಂದಿನಿಂದಲೂ ಎರೆಡೂ ಕೈಗೂ ಒಂದೊಂದು ಡಜನ್ ಬಳೆ ಹಾಕಿಕೊಳ್ಳುತ್ತಿದ್ದೆ


ಒಮ್ಮೆ  ಎಂಟನೇ ತರಗತಿಯಲ್ಲಿ ಸ್ಕೂಲಿನಲ್ಲಿ ನಮ್ಮ ಹಿಂದಿ ಮೇಡಮ್  ನನ್ನ ಕೈ ತುಂಬಾ ಬಳೆ ನೋಡಿ ಬೈದಿದ್ದರು.


ಆಗಿನಿಂದ ಬಳೆಗಳನ್ನ ಸ್ವಲ್ಪ ಕಡಿಮೆ ಧರಿಲಾರಂಭಿಸಿದೆ


ಕಾಲೇಜಿಗೆ ಬಂದ ಮೇಲೆ ಗೆಳತಿಯರ ಕೈನಲ್ಲಿದ್ದ ಬಳೆಗಳ ಬದಲಿಗೆ ಅದೇನೋ ಕಡಗ ಕಾಣುತ್ತಿತ್ತು ಜೊತೆಗೆ ಕುತ್ತಿಗೆಯಲ್ಲಿ ನಾಯಿ ಬೆಲ್ಟ್. ಹಾಗೆ ಅದೇ ಫ್ಯಾಷನ್ ಆಗಿ ನಾನೇ ಔಟ್ ಡೇಟೆಡ್ ಅನ್ನಿಸಿಕೊಳ್ಳುವ ಭಯದಿಂದ  ಬರೀ  ಎರೆಡೆರೆಡು ಗಾಜಿನ ಬಳೆಗಳನ್ನು ಧರಿಸತೊಡಗಿದೆ.


ನಂತರ ಕಂಪೆನಿಯಲ್ಲಿ ಕೆಲಸ ಮಾಡುವಾಗ(ಕೀ ಬೋರ್ಡ್ ಕುಟ್ಟುವಾಗ) ಆ ಗಾಜಿನ ಬಳೆಗಳು ಸದ್ದು ಮಾಡುತ್ತಿದ್ದಾಗ ಇತರರು ನನ್ನನ್ನೇ ವಿಚಿತ್ರವಾಗಿ ನೋಡುತ್ತಿದ್ದರು. ಕೊನೆಗೆ ಬಳೆಗಳ ಸಂಖ್ಯೆ ಒಂದೊಂದೇ ಆಯ್ತು


ಆಮೇಲೊಮ್ಮೆ ಎಡಗೈಗೆ ವಾಚ್ ಬಂದು  ಆ ಕೈಗೆ ಬಳೆ ಭಾಗ್ಯ ಸಿಗಲಿಲ್ಲ.


ನಂತರ ಇನ್ನು ಗಾಜಿನ ಬಳೆಗಳೇಕೆ ಎಂದು ಬಳೆಗಳ ಸ್ಥಾನವನ್ನು ಚಿನ್ನದ ಬಳೆಗಳೆರೆಡು ಆಕ್ರಮಿಸಿದವು.


ಈಗ ಗಾಜಿನ ಬಳೆಗಳು ಕೇವಲ ಹಬ್ಬ ಅಥವ ಸಮಾರಂಭಕ್ಕೆ ಮೀಸಲಾಗಿ ಹೋಗಿವೆ. ಹೂವಿನ ಕಥೆಯೂ ಅಷ್ಟೇ ಆಗಿದೆ


 ಬಹುಷ ಇದು ನನ್ನೊಬ್ಬಳ  ಕಥೆಯಷ್ಟೇ ಆಗಿರಲಿಕ್ಕಿಲ್ಲ .   ಎಲ್ಲರೂ ಈ ಟ್ರಾನ್ಸಿಷನ್ಗೆ ಸಿಲುಕಿರುವವರೇ ಎಂದು ಅನ್ನಿಸುತ್ತದೆ


ಈಗಂತೂ ಕಾಲೇಜಿನ ಕನ್ನಿಕೆಯರ ಕೈನಲ್ಲಿ ಬಳೆಗಳೇ ನಾಪತ್ತೆಯಾಗಿವೆ. ಇನ್ನು   ಕೆಲಸಮಾಡುವ ಹುಡುಗಿಯರು, ಹೆಂಗಸರ ಕೈನಲ್ಲಿ ಬಳೆಗಳು ಕಂಡರೂ ಅವು ಒಂದೋ ಅಥವ ಎರೆಡೋ ಆಗಿರುತ್ತವೆ. ಹೋಗಲಿ ಮನೆಯಲ್ಲೇ ಇರುವ ಹೆಂಗಸರ ಕೈನಲ್ಲಿ ಕಾಣುವುದೂ ಅಪರೂಪವಾಗಿವೆ.


ಆಗೆಲ್ಲಾ ಬಳೇಗಾರರು ಜೋಳಿಗೆಯಲ್ಲಿ ಬಳೆಗಳನ್ನು ಹಾಕಿಕೊಂಡು ಮಾರಲು ಬರುತ್ತಿದ್ದರು ನಾನೂ ನೋಡುತಿದ್ದೆ. ನಮ್ಮ ಮನೆಯ ಸುತ್ತ ಮುತ್ತಾ ಇದ್ದ ಹೆಂಗಸರೆಲ್ಲಾ ಬಳೇಗಾರರ ಬಳಿ ಕೈಯೂಡ್ಡಿ ಬಳೆ ಹಾಕಿಸಿಕೊಳ್ಳುತ್ತಿದ್ದರು. ನಾನು ಚಿಕ್ಕವಳಾದ್ದರಿಂದ ಆ  ಬಳೆಗಾರ  ನನಗೆ ಫ್ರೀಯಾಗಿ ಬಳೆ ಹಾಕಿ ಕಳಿಸುತ್ತಿದ್ದ


 ಈಗ ಅಂತಹ ಬಳೆಗಾರರೂ ಕಾಣುತ್ತಿಲ್ಲ.


ಆದರೂ ಬಳೆಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಪ್ರತಿ ಹಬ್ಬಕ್ಕೂ ಮನೆ ಮನೆಯಲ್ಲೂ ಹೆಂಗಸರು ಬಳೆಗಳನ್ನು ಕೊಳ್ಳುತ್ತಾರೆ. ಆದರೆ ಧರಿಸುವುದು  ಮಾತ್ರ ಹಬ್ಬಕ್ಕೆ ಸೀಮಿತವಾಗಿವೆ


ಹಾಗಾಗಿಯೇ ಬಳೆಗಳ ಮೇಲಿನ   ಹಾಡುಗಳೂ ಈಗೀಗ ಹುಟ್ಟುತ್ತಿಲ್ಲ. ಸಿನಿಮಾದಲ್ಲೂ ಅಪರೂಪವಾಗುತ್ತಿವೆ.


 ಬಳೆಗಳು ಆಡುತ್ತಿವೆ ಘಲ್ ಘಲ್ ಎನ್ನುತಿವೆ .


ಗಿಲ್ ಗಿಲ್ ಗಿಲಕ್ ಕಾಲುಗೆಜ್ಜೆ ಜಳಕ್ ಕೈ ಬಳೆ ಪುಳಕ್


  ಹಸಿರು ಗಾಜಿನ ಬಳೆಗಳೇ.


ಬಳುಕಲು ನಡುವು ಆಡಿರಲು ಕೈ ಬಳೆ ಘಲ ಘಲ ಎಂದಿರಲು 


ಎಂಬ ಹಾಡುಗಳಲ್ಲಿ ಬಳೆಗಳು ತೃಪ್ತಿ ಹೊಂದಬೇಕಾಗಿವೆ ಅಷ್ಟೇ