ಕೊಂಕಣಿ ಸಂಶೋಧಕ, ಲೇಖಕ ಪೌಲ್ ಮೊರಾಸ್ ನೆನಪಿನಲ್ಲಿ…

ಕೊಂಕಣಿ ಸಂಶೋಧಕ, ಲೇಖಕ ಪೌಲ್ ಮೊರಾಸ್ ನೆನಪಿನಲ್ಲಿ…

ಗೆಳೆಯ ಮನೋಜ್ ಮೊನ್ನೆ ಭಾನುವಾರ (ಆಗಸ್ಟ್ ೩೦, ೨೦೨೦)  ಫೋನ್ ಮಾಡಿ ಪೌಲ್ ಮೊರಾಸ್ ನಿಧನ ಹೊಂದಿದ್ದಾರೆ ಎಂದು ತಿಳಿಸಿದಾಗ ತುಂಬಾನೇ ದುಃಖವಾಯಿತು. ೬೮ ತೀರಾ ಸಾಯುವ ವಯಸ್ಸೇನಲ್ಲ. ಅವರು ಕೊಂಕಣಿ ಸಾಹಿತ್ಯ ಲೋಕಕ್ಕೆ ನೀಡ ಬೇಕಾದ ಕೊಡುಗೆಗಳು ಇನ್ನೂ ಅನೇಕ ಬಾಕಿಯಿದ್ದುವು. ಅವರ ಜೊತೆ ಕಳೆದ ಕೆಲವು ಸಮಯವನ್ನು ನಿಮ್ಮೆಲ್ಲರ ಜೊತೆ ನೆನಪಿಸಿಕೊಳ್ಳಲು ಬಯಸುತ್ತೇನೆ. 

ನನ್ನ-ಪೌಲ್ ಮೊರಸ್ ಭಾಂಧವ್ಯ ಸುಮಾರು ಹತ್ತು ವರ್ಷಗಳಷ್ಟು ಹಳೆಯದ್ದು. ಯಾವಾಗ ಸಿಕ್ಕರೂ ತಮಾಷೆಯಾಗಿ ಮಾತನಾಡಿ, ಅದರಲ್ಲೂ ನಾವು ಅವರನ್ನು ತಮಾಷೆ ಮಾಡಿದರೂ ಅದಕ್ಕೂ ನವಿರಾಗಿ ನಕ್ಕು ಬಿಡುವ ವ್ಯಕ್ತಿತ್ವ ಅವರದ್ದು. ಎಲ್ಲಾ ಕೊಂಕಣಿ ಸಾಹಿತ್ಯಕಾರರದ್ದು ಒಂದು ದಾರಿಯಾದರೆ, ಪೌಲ್ ಮೊರಸ್ ಅವರದ್ದು ಮತ್ತೊಂದು ಎಂದು ನನಗೆ ಸದಾ ಅನಿಸಿದ್ದಿದೆ. ಏಕೆಂದರೆ ಪೌಲ್ ಮೊರಸ್ ಬರೆದ ಪುಸ್ತಕಗಳು ಸಂಖ್ಯೆಯ ಆಧಾರದಲ್ಲಿ ನೋಡಿದರೆ ಕಮ್ಮಿ. ಆದರೆ ಅದರಲ್ಲಿ ಹುದುಗಿರುವ ಜ್ಞಾನದ ಲೆಕ್ಕದಲ್ಲಿ ಅಗಾಧ. ವಜ್ರಕ್ಕೆ ಸಾಣೆ ಹಿಡಿದಷ್ಟು ಅದು ಚೆನ್ನಾಗಿ ಹೊಳೆಯುತ್ತದೆ, ಅದೇ ರೀತಿ ಪ್ರತಿಯೊಂದು ಪುಸ್ತಕ ಪ್ರಕಟಿಸುವ ಮೊದಲು ಸಂಬಂಧ ಪಟ್ಟ ವಿಷಯದ ಬಗ್ಗೆ ಬಹಳ ಸಂಶೋಧನೆ ಮಾಡುತ್ತಿದ್ದರು. ಕೊಂಕಣಿ ಚಳುವಳಿಗಳು ಸಾಗಿ ಬಂದ ಪುಸ್ತಕಗಳನ್ನು ಹಲವಾರು ಭಾಗಗಳಲ್ಲಿ ಹೊರ ತಂದಿದ್ದಾರೆ. ಕೊಂಕಣಿ, ಗೋವನ್ ಕೊಂಕಣಿ (ದೇವನಾಗರಿ ಲಿಪಿ) ಭಾಷೆಗಳಲ್ಲಿ ಹೊರಬಂದಿರುವ ಪುಸ್ತಕಗಳು, ನಿಜಕ್ಕೂ ಯಾವುದೇ ಗ್ರಂಥಕ್ಕೂ ಕಮ್ಮಿ ಇಲ್ಲ.

ದಶಕಗಳ ಹಿಂದೆ ನಮ್ಮ ಪತ್ರಿಕೆಯ ಪುಟ ವಿನ್ಯಾಸದ ಕೆಲಸವನ್ನು ಸ್ಟೆಲ್ಲಾ ಮನೋಜ್ ಅವರ ಪ್ರಿಂಟ್ ಡಿಸೈನ್ಸ್ ಎಂಬ ಸಂಸ್ಥೆಯಲ್ಲಿ ಮಾಡಿಸುತ್ತಿದ್ದೆವು. ನನಗೆ ಮೊದಲ ಬಾರಿ ಪೌಲ್ ಮೊರಸ್ ಪರಿಚಯವಾದದ್ದು. ಅವರ ಪುಸ್ತಕಗಳ ಪುಟ ವಿನ್ಯಾಸದ ಕೆಲಸವೂ ಅಲ್ಲೇ ಆಗುತ್ತಿತ್ತು. ಹೀಗೆ ಆದ ಪರಿಚಯ ಮುಂದಿನ ದಿನಗಳಲ್ಲಿ ಆತ್ಮೀಯತೆಯತ್ತ ತಿರುಗಿತು. ಪೌಲ್ ಮೊರಸ್ ತಮ್ಮ ಪುಸ್ತಕಗಳ ಬಿಡುಗಡೆಯನ್ನು ಯಾವಾಗಲೂ ವಿಭಿನ್ನವಾಗಿ ಮಾಡಲು ಬಯಸುತ್ತಿದ್ದರು. ಅವರು ಯಾವಾಗಲೂ ಹೇಳುತ್ತಿದ್ದರು. ನನ್ನ ಪುಸ್ತಕಗಳು ಇತರೆ ಕಥೆ, ಕಾದಂಬರಿ ಪುಸ್ತಕಗಳಂತೆ ಅಲ್ಲ. ಅದೊಂದು ಸಂಶೋಧನಾತ್ಮಕ ಗ್ರಂಥ. ನನ್ನ ಪುಸ್ತಕದ ಬೆಲೆಯು ಎಲ್ಲರಿಗೂ ಭರಿಸಲು ಆಗಲಿಕ್ಕಿಲ್ಲ. ಅದಕೋಸ್ಕರ ಅವರ ಪುಸ್ತಕಗಳನ್ನು ಪ್ರಕಟಣಾ ಪೂರ್ವದ ರಿಯಾಯತಿ ಬೆಲೆಯಲ್ಲಿ ನೀಡಿ, ಅದನ್ನು ಖರೀದಿಸಿದವರಿಗೆ ಮಾತ್ರ ಪುಸ್ತಕ ಬಿಡುಗಡೆಗೆ ಆಹ್ವಾನಿಸುತ್ತಿದ್ದರು. ಒಳ್ಳೆಯ ಊಟೋಪಚಾರವನ್ನು ನೀಡುತ್ತಿದ್ದರು. ಅವರ ಪುಸ್ತಕ ಬಿಡುಗಡೆಯ ಸಮಯದಲ್ಲಿ ನನ್ನನ್ನು ಮತ್ತು ಕೆಲವು ಸಮಾನ ಆಸಕ್ತರನ್ನು ಸ್ವಯಂಸೇವಕರಾಗಲು ಕರೆಯುತ್ತಿದ್ದರು. ಹೀಗೆ ಬಿಡುಗಡೆಯಾದ ಪುಸ್ತಕಗಳು ಜನ ಸಾಮಾನ್ಯರಿಗೆ ಅಷ್ಟಾಗಿ ತಲುಪದೇ ಹೋದರೂ, ಕೊಂಕಣಿ ಚಳುವಳಿಯ ಬಗ್ಗೆ ಇರುವ ಸಂಶೋಧನಾತ್ಮಕ ಗ್ರಂಥಗಳು ಎಂದು ಹೇಳಬಹುದು. ಪೌಲ್ ಮೊರಸ್ ತಾವು ರಚಿಸುವ ಪುಸ್ತಕದ ಕುರಿತು ಅನೇಕ ಸಂಶೋಧನೆಗಳನ್ನು, ಮಾಹಿತಿ ಸಂಗ್ರಹವನ್ನು ಮಾಡುತ್ತಿದ್ದರು. ಯಾವತ್ತೂ ಗಡಿಬಿಡಿಯಲ್ಲಿ ಪುಸ್ತಕ ಮುದ್ರಿಸಲು ಹೋಗುತ್ತಿರಲಿಲ್ಲ. ಅವರ ಪ್ರಕಾರ ತಾವು ಹೊರ ತರುವ ಪುಸ್ತಕಗಳಲ್ಲಿ ತಪ್ಪು ಇದ್ದರೆ ಅದು ಓದುಗರಿಗೆ ಕೊಂಕಣಿ ಭಾಷೆ, ಸಮಾಜದ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಅದಕ್ಕಾಗಿ ತಾವು ಕೂಲಂಕುಷವಾಗಿ ಪರಿಶೀಲಿಸಿ, ಒಂದೆರಡು ಮಾಹಿತಿ ತಿಳಿದಿರುವ ವ್ಯಕ್ತಿಗಳಿಗೆ ತೋರಿಸಿದ ನಂತರವಷ್ಟೇ ಮುದ್ರಣಕ್ಕೆ ಕಳುಹಿಸುತ್ತಿದ್ದರು.

ನಿಮಗೊಂದು ಘಟನೆ ನೆನಪಿಸುವೆ. ೨೦೧೨ರ ಸಮಯದಲ್ಲಿ ಅವರು ‘ಖೆಳ್-ರಾಜಾಂವ್' ಎಂಬ ಪುಸ್ತಕದ ತಯಾರಿಯಲ್ಲಿದ್ದ ಸಮಯದಲ್ಲಿ ಅವರಿಗೆ ಅಪಘಾತವಾಗುತ್ತದೆ. ಅವರ ಕಾಲಿಗೆ ತೀವ್ರವಾದ ಗಾಯವಾಗಿ ನಡೆಯಲು ಅಸಮರ್ಥರಾಗುತ್ತಾರೆ. ಅವರ ಮನೆ ನನ್ನ ಕಚೇರಿಯ ಸಮೀಪವೇ ಇತ್ತು. ಅವರು ಒಂದು ದಿನ ನನಗೆ ಕರೆ ಮಾಡಿ ‘ನನಗೊಂದು ಸಹಾಯ ಮಾಡಬಹುದೇ? ‘ ಎಂದು ಕೇಳುತ್ತಾರೆ. ಏನೆಂದು ಕೇಳಿದಾಗ ನನಗೆ ಕಾಲಿಗೆ ಏಟಾದುದರಿಂದ ನನಗೆ ಮನೆಯಿಂದ ಹೊರಹೋಗಿ ಲೇಖನಗಳ ಕರಡು ಪ್ರತಿಯನ್ನು ತರಲು ಆಗುತ್ತಿಲ್ಲ. ನೀವು ತಂದುಕೊಟ್ಟರೆ ನಾನು ಅದನ್ನು ತಿದ್ದುಪಡಿ ಮಾಡಿ ಕೊಡುವೆ ಅದನ್ನು ನೀವು ಮರಳಿ ಡಿಸೈನ್ ಮಾಡುವವರಿಗೆ ಕೊಡಬಹುದೇ ಎಂದರು. ನಾನು ಈ ಕೆಲಸವನ್ನು ಸಂತೋಷದಿಂದಲೇ ಒಪ್ಪಿಕೊಂಡೆ. ಈ ಕೆಲಸ ಸ್ವಲ್ಪ ಸಮಯ ಅಂದರೆ ಪುಸ್ತಕ ಬಿಡುಗಡೆಯವರೆಗೆ ಮಾಡುತ್ತಾ ಬಂದೆ. ಇದರಿಂದ ನಮ್ಮ ನಡುವೆ ಆತ್ಮೀಯತೆಯೂ ಬೆಳೆಯಿತು. ಮನೆಗೆ ಹೋದ ಸಂದರ್ಭದಲ್ಲಿ ನನಗೆ ತಿಳಿಯದ ಹಲವಾರು ವಿಷಯಗಳನ್ನು ಅವರಿಂದ ತಿಳಿದುಕೊಂಡೆ. ನಾನು ಮಾಡಿದ ಈ ಅಳಿಲು ಸೇವೆಯ ಕಾರ್ಯವನ್ನು ತಮ್ಮ ಪುಸ್ತಕದ ಪುಟಗಳಲ್ಲಿ ಅವರೇ ಬರೆದುಕೊಂಡಿದ್ದಾರೆ ಮತ್ತು ೨೦೧೩ರಲ್ಲಿ ನನ್ನನ್ನು ಪುಸ್ತಕ ಬಿಡುಗಡೆಯ ದಿನ ವೇದಿಕೆಗೆ ಕರೆದು ಅಭಿನಂದಿಸಿದ್ದಾರೆ. ಇದು ಅವರ ದೊಡ್ಡ ಮನಸ್ಸು. ನಾನು ಮಾಡಿದ್ದು ಯಾರೂ ಮಾಡಬಹುದಾದ ಸಣ್ಣ ಕೆಲಸ. ಆದರೆ ಅದಕ್ಕೆ ಸೂಕ್ತ ಗೌರವ ಕೊಡುವುದನ್ನು ಅವರು ಮರೆಯಲಿಲ್ಲ. ಇದರಿಂದ ನನಗೆ ಅವರ ಮೇಲಿನ ಅಭಿಮಾನ ಇನ್ನಷ್ಟು ಹೆಚ್ಚಾಯಿತು. ಮುಂದಿನ ದಿನಗಳಲ್ಲಿ ಅವರು ‘ಬೆನ್-ಶೆಣಾಯ್' ಎಂಬ ಮತ್ತೊಂದು ಪುಸ್ತಕವನ್ನು ಬಿಡುಗಡೆ ಮಾಡಿದರು. ಇವರ ಪುಸ್ತಕಗಳ ಪುಟ ವಿನ್ಯಾಸದ ಸಮಯದಲ್ಲಿ ಆಯಾಸವಾದರೆ ಅಲ್ಲೇ ಕೆಳಗಡೆ ನೆಲಕ್ಕೆ ಪೇಪರ್ ಹಾಸಿ ಸಣ್ಣ ನಿದ್ರೆ ಮಾಡುತ್ತಿದ್ದರು. ಅವರಿಗೆ ಯಾವುದೇ ಹಮ್ಮು-ಬಿಮ್ಮು ಇರಲಿಲ್ಲ. ನಮ್ಮ ಭೇಟಿಯು ಆಗಾಗ ಆಗುತ್ತಲೇ ಇತ್ತು. ಹೊಸ ಪುಸ್ತಕವೊಂದರ ಕನವರಿಕೆಯಲ್ಲಿ ಇರುವ ಸಮಯದಲ್ಲೇ ಅವರ ಸಾವಿನ ವಾರ್ತೆ ಮಾತ್ರ ನನಗೆ ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ.

ಪೌಲ್ ಮೊರಸ್ ಬರಹ-ಬದುಕು: ಕಳೆದ ಮೂರು ದಶಕಗಳಿಂದ ಪೌಲ್ ಮೊರಸ್ ಕೊಂಕಣಿ ಸಾಹಿತ್ಯ, ಚಳುವಳಿ, ಸಂಘಟನೆ ಮತ್ತು ಸಮಾಜಸೇವೆಗೆ ಸಲ್ಲಿಸಿದ ಕೊಡುಗೆ ಅಪಾರ. ೧೯೫೨ರ ಎಪ್ರಿಲ್ ೨೮ರಂದು ಜನಿಸಿದ ಪೌಲ್ ಮೊರಸ್ ಬಿ.ಎ.ಪದವಿ ಹಾಗೂ ಕೊಂಕಣಿ ಪದವಿಕಾದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. ಕಂದಾಯ ಇಲಾಖೆಯಲ್ಲಿ ಉದ್ಯೋಗಿಯಾಗಿ ಸ್ವಯಂ ನಿವೃತ್ತಿಯಾಗಿದ್ದರು. ಕೊಂಕಣಿ ಚಳುವಳಿ ಬಗ್ಗೆ ಹಲವಾರು ಭಾಗಗಳಲ್ಲಿ ಪುಸ್ತಕಗಳನ್ನು ಹೊರತಂದಿದ್ದಾರೆ. ಕೊಂಕಣಿ ಚಳ್ವಳ್ (೨೦೦೨), ಕೊಂಕಣಿ ಪತ್ರಿಕೋದ್ಯಮ ಕುರಿತು ‘ಜಾಗರಣ್’ (೨೦೦೫), ಕೊಂಕಣಿ ಜಾನಪದ ನೃತ್ಯಗಳ ಕುರಿತು ‘ಮೊಗ್ರೆಂ ಕರಣ್'(೨೦೦೮), ಕೊಂಕಣಿ ನಾಟಕಗಳ ಕುರಿತು ‘ಖೆಳ್-ರಾಜಾಂವ್’ (೨೦೧೩), ಹಾಗೂ ಇತ್ತೀಚೆಗೆ ಬೆನ್-ಶೆಣಾಯ್ ಪುಸ್ತಕವನ್ನು ವಿವಿಧ ವಿಭಾಗಗಳಲ್ಲಿ ಹೊರತಂದಿದ್ದರು. 

ಪೌಲ್ ಮೊರಸ್ ಅವರು ಕೊಂಕಣಿ ಲೇಖಕರ ಒಕ್ಕೂಟ, ಅಖಿಲ ಭಾರತ ಕೊಂಕಣಿ ಪರಿಷದ್, ಕೊಂಕಣಿ ಭಾಷಾ ಮಂಡಳ್ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೊಂಕಣಿ ಸಾಹಿತ್ಯ ಅಕಾಡೆಮಿ, ಸಂದೇಶ ಪ್ರತಿಷ್ಟಾನ, ಕೊಂಕಣಿ ಲೇಖಕರ ಒಕ್ಕೂಟ, ವಿಶ್ವ ಕೊಂಕಣಿ ಕೇಂದ್ರ ಸಂಘಟನಾ ಸಮಿತಿಯ ಸದಸ್ಯರಾಗಿ ಸಕ್ರಿಯರಾಗಿದ್ದು ಕೊಂಡು, ಹಲವಾರು ದಶಕಗಳಿಂದ ಕೊಂಕಣಿ ಭಾಷೆ, ಸಂಶೋಧನೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 

ಪೌಲ್ ಮೊರಸ್ ಅವರ ‘ಕೊಂಕಣಿ ಚಳ್ವಳ್’ ಪುಸ್ತಕಕ್ಕೆ ಡಾ.ಟಿ.ಎಂ.ಎ.ಪೈ ಉತ್ತಮ ಪುಸ್ತಕ ಪ್ರಶಸ್ತಿ ಲಭಿಸಿದೆ. ಮೊಗ್ರೆಂ ಕರಣ್ ಪುಸ್ತಕಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಉತ್ತಮ ಪುಸ್ತಕ ಪ್ರಶಸ್ತಿ ದೊರೆತಿದೆ. ಇವರ ಸಂಶೋಧನಾ ಗ್ರಂಥಗಳು ಗೋವಾ ಕೊಂಕಣಿ ಭಾಷಾ ಕಲಿಕೆಯ ವಿದ್ಯಾರ್ಥಿಗಳಿಗೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಕಲಿಕಾ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಪೌಲ್ ಮೊರಸ್ ಅವರಿಗೆ ಹತ್ತು ಹಲವಾರು ಪ್ರಶಸ್ತಿಗಳು ದೊರೆತಿವೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರತಿಷ್ಟಾನ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಮುಂತಾದ ಸನ್ಮಾನಗಳು ಲಭಿಸಿವೆ. ೨೦೦೧ರಲ್ಲಿ ಕರ್ನಾಟಕ ಕೊಂಕಣಿ ಲೇಖಕರ ಒಕ್ಕೂಟ ನಡೆಸಿದ ರಾಜ್ಯಮಟ್ಟದ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. 

ಪೌಲ್ ಮೊರಸ್ ನಿಧನ ಕೊಂಕಣಿ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಹಾಗೂ ವೈಯಕ್ತಿಕವಾಗಿ ನನಗೂ ಅಪಾರ ನೋವು ತಂದಿದೆ.ಅವರ ಸಾಹಿತ್ಯ ಚಟುವಟಿಕೆಗಳ ವಿಮರ್ಶೆ ಮಾಡುವ ಉದ್ದೇಶ ನನ್ನದಲ್ಲ. ಇಲ್ಲಿ ನಾನು ಬರೆದಿರುವುದು ಕೇವಲ ನಮ್ಮ ಆತ್ಮೀಯ ಒಡನಾಟದ ಒಂದು ಮೆಲುಕು ಅಷ್ಟೇ.

ಸಹಕಾರ: ಸ್ಟೆಲಾ ಮನು (ಪ್ರಿಂಟ್ ಡಿಸೈನ್ಸ್)

ಚಿತ್ರದಲ್ಲಿ ನನ್ನನ್ನು ಅಭಿನಂದಿಸುತ್ತಿರುವ ಪೌಲ್ ಮೊರಸ್