ಕೊಕ್ಕರೆ ಬೆಳ್ಳೂರಿನಲ್ಲಿ ಕಂಡ ಮನುಷ್ಯಮುಖಗಳು
ಅಪಾಯದ ಅಂಚಿನಲ್ಲಿರುವ ಹೆಜ್ಜಾರ್ಲೆ (ನೇರೆ ಹಕ್ಕಿ, ಪೆಲಿಕನ್) ಸಂತತಿಯು ಮೊಟ್ಟೆ ಇಟ್ಟು ಮರಿ ಮಾಡುವ ಕ್ರಿಯೆಯನ್ನು ಜನಜಂಗುಳಿಯ ಗದ್ದಲವಿಲ್ಲದೆ ಗಮನಿಸಲು ಈಚೆಗೆ ಕೊಕ್ಕರೆ ಬೆಳ್ಳೂರಿಗೆ ಹೋಗಿದ್ದೆ. ಮರಗಳ ಮೇಲೆ ಗೂಡು ಕಟ್ಟಿಕೊಂಡು, ಹುಲ್ಲುಕಡ್ಡಿಗಳಿಂದ ಗೂಡನ್ನು ಭದ್ರಗೊಳಿಸುತ್ತ, ಮೊಟ್ಟೆಗಳಿಗೆ ಕಾವು ಕೊಡುತ್ತ, ಮರಿ ಮಾಡುವ ಕಾರ್ಯದಲ್ಲಿ ನಿರತವಾಗಿದ್ದ ಹೆಜ್ಜಾರ್ಲೆಗಳನ್ನು ಬಲು ಹತ್ತಿರದಿಂದ ಗಮನಿಸಲು ನನಗೆ ಸಾಧ್ಯವಾಯಿತು. ಇದೇ ಸಂದರ್ಭದಲ್ಲಿ ಅಲ್ಲಿ ನಾನು ಗಮನಿಸಿದ ಕೆಲವು ’ಮನುಷ್ಯಮುಖ’ಗಳೂ ನನ್ನ ಚಿತ್ತಪಟಲದಲ್ಲಿ ದಾಖಲಾಗಿವೆ.
ಕೊಕ್ಕರೆ ಬೆಳ್ಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹದೇವಸ್ವಾಮಿ ನನಗೆ ಟೀ ಕೊಟ್ಟು ಉಪಚರಿಸಿದರು. ಅವರ ವಿದ್ಯಾವಂತ ಯುವಪುತ್ರ ಮಾದೇವಸ್ವಾಮಿ ತಮ್ಮ ಹೆಜ್ಜಾರ್ಲೆ ಬಳಗದ ವತಿಯಿಂದ ಗ್ರಾಮದಲ್ಲಿ ಹೆಜ್ಜಾರ್ಲೆ ಬಾಲವಾಡಿಯೊಂದು ನಡೆಯುತ್ತಿರುವುದನ್ನು ತಿಳಿಸಿ, ಗೂಡಿನಿಂದ ಕೆಳಕ್ಕೆ ಬಿದ್ದ ಹೆಜ್ಜಾರ್ಲೆ ಮರಿಗಳನ್ನು ಹೆಜ್ಜಾರ್ಲೆ ಬಳಗದವರು ಕಾಪಾಡುವ ಬಗೆಯನ್ನು ವಿವರಿಸಿದರು. ಹೆಜ್ಜಾರ್ಲೆಗಳು ಮೀನನ್ನು ಮತ್ತು ನೆಲಜಲಚರಿಗಳನ್ನಷ್ಟೇ ತಿನ್ನುತ್ತವೆ ಎಂಬುದನ್ನೇ ಅರಿಯದ ಉಪ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ’ಇವುಗಳಿಗೆ ಕಾಳು ಹೇಗೆ ತಿನ್ನಿಸುತ್ತೀರಿ’ ಎಂಬ ಮೂರ್ಖ ಪ್ರಶ್ನೆ ಕೇಳಿದ್ದನ್ನು ಮಾದೇವಸ್ವಾಮಿ ಮಾತಿನ ಮಧ್ಯೆ ನೆನೆಸಿಕೊಂಡರು.
ಅದೇ ವೇಳೆ ಕಾರಿನಲ್ಲಿ ಬಂದಿಳಿದ ಕುಟುಂಬವೊಂದು ಹಕ್ಕಿ ಎಲ್ಲಿದೆಯೆಂದು ಗ್ರಾಮಸ್ಥರನ್ನು ಕೇಳಿ ಹೆಜ್ಜಾರ್ಲೆಯ ಒಂದಷ್ಟು ಫೋಟೊ ಕ್ಲಿಕ್ಕಿಸಿ ಕಣ್ಣಾರೆ ಅವುಗಳನ್ನು ಒಂದಿಷ್ಟೂ ಗಮನಿಸದೆಯೇ ಹೊರಟುಹೋಯಿತು.
ಕಾರಿನಲ್ಲಿ ಸಕುಟುಂಬ ಚಿತ್ತೈಸಿದ ಇನ್ನೋರ್ವ ’ದೊಡ್ಡಮನುಷ್ಯ’ ತನ್ನ ಕಣ್ಣಿಗೆ ಕಂಡ ರಸ್ತೆಬದಿಯ ಮರವೊಂದರ ಮೇಲೆ ನಾಲ್ಕಾರು ಹೆಜ್ಜಾರ್ಲೆಗಳಷ್ಟೇ ಇದ್ದದ್ದನ್ನು ಕಂಡು ನಿರಾಶನಾಗಿ ಅಲ್ಲಿದ್ದ ಸ್ಥಳೀಯ ಮಹಿಳೆಯೋರ್ವಳನ್ನು, ’ಏನು, ಇಷ್ಟೇನಾ ನೀವು ಹಕ್ಕಿ ಇಟ್ಟಿರೋದು’, ಎಂದು ಗತ್ತಿನಿಂದ ಪ್ರಶ್ನಿಸಿದ. ’ಜನವರಿಗೆ ಬನ್ನಿ ಸೋಮಿ, ಬೋ ಹಕ್ಕಿಗಳಿರ್ತವೆ’, ಎಂದು ಆಕೆ ಉತ್ತರಿಸಿದಳು. ಅದಕ್ಕಾತ, ’ಕರೆಕ್ಟಾಗಿ ಎಷ್ಟನೇ ತಾರೀಖು ಬಂದ್ರೆ ತುಂಬ ಹಕ್ಕಿಗಳಿರ್ತವೆ ಡೇಟ್ ಹೇಳು’, ಎಂದು ಅತಿಮೂರ್ಖ ಪ್ರಶ್ನೆ ಎಸೆದ.
ಬೆಂಗಳೂರಿನಿಂದ ವ್ಯಾನ್‌ನಲ್ಲಿ ಒಂದಷ್ಟು ಜನ ಬಂದಿದ್ದರು. ನನ್ನೆದುರು ವ್ಯಾನ್ ನಿಲ್ಲಿಸಿ ಅದರೊಳಗಿನಿಂದ ಒಬ್ಬಾತ, ’ಇಲ್ಲಿ ಕೊಕ್ರೆಗಳು ಇರೋ ಕೆರೆ ಎಲ್ಲಿದೆ’, ಎಂದು ವಿಚಾರಿಸಿದ. ಗ್ರಾಮದಲ್ಲಿ ಕೆರೆಯಿಲ್ಲದ ಬಗ್ಗೆ, ಕೊಕ್ಕರೆ ಬೆಳ್ಳೂರು ಅಂದರೆ ಅಲ್ಲೊಂದು ಕೆರೆ ಮತ್ತು ಆ ಕೆರೆಮೇಲೆ ಸದಾಕಾಲ ಕೊಕ್ಕರೆ ಹಿಂಡು ಇರುತ್ತದೆಂಬುದು ಆತನ ತಪ್ಪು ತಿಳಿವಳಿಕೆ ಎಂಬ ಬಗ್ಗೆ ಮತ್ತು ಹೆಜ್ಜಾರ್ಲೆಗಳ ಬಗ್ಗೆ ನಾನು ಆತನಿಗೆ ತಿಳಿಹೇಳಿದೆ. ಪರಿಣಾಮ, ಯಾರೊಬ್ಬರೂ ವ್ಯಾನ್‌ನಿಂದ ಇಳಿಯಲಿಲ್ಲ! ವ್ಯಾನ್ ಭರ್ರೆಂದು ಮದ್ದೂರಿನ ಕಡೆಗೆ ಧಾವಿಸಿತು!
ಹೀಗೆ, ಹೆಜ್ಜಾರ್ಲೆಗಳ ಜೊತೆಗೆ ಕೊಕ್ಕರೆ ಬೆಳ್ಳೂರಿನಲ್ಲಿ ನಾನು ಕಂಡ ಈ ಮನುಷ್ಯಮುಖಗಳೂ ನನ್ನ ಚಿತ್ತಪಟಲದಲ್ಲಿ ದಾಖಲಾಗಿವೆ.