ಕೊಕ್ಕೋ ಬೀಜ ಒಣಗಿಸಿಡುವ ವಿಧಾನ
ಕೊಕ್ಕೋ –ಅಡಿಕೆ- ರಬ್ಬರ್ ಖರೀದಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವ ಸಮಯದಲ್ಲಿ ಬೆಳೆಗಾರರು ಚಿಂತೆಗೀಡಾಗಬಾರದು. ಅದರ ಬದಲಿಗೆ ಕೋಕ್ಕೋ ಬೀಜಗಳನ್ನು ಒಣಗಿಸಿ ನಿಧಾನವಾಗಿ ಮಾರಬಹುದು. ಅಡಿಕೆ – ರಬ್ಬರ್ ಒಂದಷ್ಟು ಸಮಯ ದಾಸ್ತಾನು ಇಟ್ಟು ನಂತರ ಮಾರಾಟ ಮಾಡಬಹುದು. ಆದರೆ ಕೊಕ್ಕೊ ಹಸಿ ಬೀಜವನ್ನು ಕೋಡು ಒಡೆದ ದಿನವೇ ಮಾರಾಟ ಮಾಡಬೇಕು. ಖರೀದಿದಾರರೇ ಇಲ್ಲದ ಮೇಲೆ ಮಾರುವುದು ಯಾರಿಗೆ? ಚಿಂತೆ ಬೇಡ ಅದನ್ನು ಒಣಗಿಸಿ. ಮತ್ತೆ ಮಾರಾಟ ಮಾಡಬಹುದು.
ನಮ್ಮಿಂದ ಖರೀದಿ ಮಾಡಿದ ಕೊಕ್ಕೋ ಹಸಿ ಬೀಜಗಳನ್ನು ಖರೀದಿದಾರರು ವೈಜ್ಞಾನಿಕ ಹುಳಿ ಬರಿಸುವಿಕೆಯ ವಿಧಾನದಲ್ಲಿ ಒಣಗಿಸಿ ನಂತರ ಅದರ ಉತ್ಪನ್ನಗಳನ್ನು ತಯಾರಿ ಮಾಡುತ್ತಾರೆ. ಸರಿಯಾಗಿ ಒಣಗಿಸಿ ನಾವು ಮಾರಾಟ ಮಾಡಿದರೂ ಸಹ ಅವರು ಖರೀದಿ ಮಾಡುತ್ತಾರೆ. ಒಣಗಿಸುವಿಕೆ ಮಾತ್ರ ನೇರವಾಗಿ ಬಿಸಿಲಿಗೆ ಹಾಕಿ ಒಣಗಿಸಿದಂತೆ ಅಲ್ಲ. ಅದಕ್ಕೆ ಬೇರೆ ವಿಧಾನ ಇದೆ. ಅದು ತುಂಬಾ ಸರಳವಾಗಿದ್ದು, ಎಲ್ಲಾ ರೈತರೂ ಮಾಡಬಹುದು.
ಒಣಗಿಸುವ ವಿಧಾನ: ಕೊಕ್ಕೋ ಕೋಡುಗಳನ್ನು ಒಡೆದು ಆ ಬೀಜಗಳನ್ನು ಒಂದು ಬೆತ್ತದ ಬುಟ್ಟಿಯಲ್ಲಿ ಹಾಕಿ ಅದನ್ನು ನೆಲದಲ್ಲಿ ಕಲ್ಲು ಇಟ್ಟು ಅದರ ಮೇಲೆ ಇಡಿ. ಆಗ ಅದರ ರಸ ಇಳಿದು ಹೋಗುವುತ್ತದೆ. ಬುಟ್ಟಿಯ ತಳಭಾಗದಲ್ಲಿ ಬೀಜ ಬೀಳುವ ಸ್ಥಿತಿ ಇದ್ದರೆ ಬಾಳೆ ಎಲೆ ಇಡಿ. ಇಲ್ಲವಾದರೆ ಬೇಡ. ಮೇಲ್ಭಾಗಕ್ಕೆ ಬಾಳೆ ಎಲೆಯನ್ನು ಮುಚ್ಚಿ. ಒಂದು ಬುಟ್ಟಿಯಲ್ಲಿ ೨೫ ಕಿಲೋ ತನಕ ಬೀಜವನ್ನು ಹಾಕಬಹುದು. ಹೆಚ್ಚು ಬೀಜಗಳಿದ್ದರೆ ಹೆಚ್ಚು ಬುಟ್ಟಿ ಬೇಕು. ಮರುದಿನ ಆ ಬುಟ್ಟಿಯ ಬೀಜಗಳನ್ನು ಸೆಣಬಿನ ಚೀಲದಿಂದ ಮುಚ್ಚಿ. ಹೀಗೆ ಬುಟ್ಟಿಯ ಒಳಗೆ ಇಟ್ಟಾಗ ಅದರ ಒಳಗೆ ೪೦-೪೫ ಡಿಗ್ರಿ (ಕೈ ಹಾಕಿದಾಗ ಬಿಸಿ ಗೊತ್ತಾಗಬೇಕು) ಇರಬೇಕು.
೩ ನೇ ದಿನ ಬುಟ್ಟಿಯಲ್ಲಿನ ಬೀಜಗಳನ್ನು ಮಿಶ್ರಮಾಡಿ ಮತ್ತೊಂದು ಬುಟ್ಟಿಗೆ ಹಾಕಿ.(ಅದರಲ್ಲೇ ಇಡಬಹುದು) ೫ ನೇ ದಿನ ಮತ್ತೆ ಅದನ್ನು ಮಿಶ್ರಣ ಮಾಡಿ. ( ಕೈಯಲ್ಲೇ ಮಿಶ್ರಣ ಮಾಡುವುದು) ಇದನ್ನು ಹುಳಿ ಬರಿಸುವಿಕೆ ಎನ್ನುತ್ತಾರೆ. ಹುಳಿ ಬಂದಾಗ ಅದರ ಹೊರ ಭಾಗದ ಲೋಳೆ ಹೋಗುತ್ತದೆ. ಬೀಜದ ಕಹಿ ಕಡಿಮೆಯಾಗುತ್ತದೆ. ಬೀಜಾಂಕುರವಾಗುವುದು ನಿಲ್ಲುತ್ತದೆ. ಕೊಕ್ಕೋ ಬೀಜಕ್ಕೆ ಒಂದು ರೀತಿಯ ಬಣ್ಣ ಮತ್ತು ಸುವಾಸನೆ ಬರುವುದು ಈ ಹುಳಿ ಬರಿಸುವಿಕೆಯಿಂದ. ೬ ದಿನಗಳ ಕಾಲ ಒಣಗಿಸಿದ ಬೀಜವನ್ನು ನಂತರ ಬಿಸಿಲಿನಲ್ಲಿ ಒಣಗಿಸಬೇಕು. ಹಣ್ಣು ಹಂಪಲು ಪ್ಯಾಕ್ ಮಾಡುವ ಮರದ ಬಾಕ್ಸ್ ಗಳಲ್ಲೂ ಈ ಹುಳಿ ಬರಿಸುವಿಕೆ ಮಾಡಬಹುದು.
ಬಿಸಿಲಿನಲ್ಲಿ ಒಣಗಿಸುವಿಕೆ: ನೆಲಕ್ಕೆ ಕಾಂಕ್ರೀಟ್ ಹಾಕಿದ್ದರೆ ಒಳ್ಳೆಯದು. ಕಾಂಕ್ರೀಟ್ ಹಾಕಿದ್ದರೂ ಸಹ ಶುದ್ಧವಾದ ಪ್ಲಾಸ್ಟಿಕ್ ಹಾಕಿ ಅದರ ಮೇಲೆ ಬೀಜ ಹರಡಬೇಕು. ನೆಲವು ಧೂಳು ಇತ್ಯಾದಿ ಬಾರದ ತರಹ ಇರಬೇಕು. ಇದು ಆಹಾರ ವಸ್ತುವಾದ ಕಾರಣ ಈ ಬಗ್ಗೆ ಜಾಗರೂಕತೆ ವಹಿಸಬೇಕು. ತೆಳುವಾಗಿ ಬೀಜಗಳನ್ನು ಹರಡಿ ಒಣಗಿಸಿದರೆ ಸುಮಾರು ೪-೫ ದಿನದಲ್ಲಿ ಒಣಗುತ್ತದೆ. ದಿನದಲ್ಲಿ ಒಂದು ಅಥವಾ ಎರಡು ಬಾರಿ ತಿರುವಿ ಹಾಕಬೇಕು. ಒಣಗಿದ ಬೀಜಗಳ ತೇವಾಂಶ ಪ್ರಮಾಣ ೬-೭ % ಇರಬೇಕು. ಇದನ್ನು ಡ್ರೈಯರ್ ಮೂಲಕವೂ ಒಣಗಿಸಬಹುದು. ಈ ಬೇಸಿಗೆ ಕಾಲದಲ್ಲಿ ಇದರ ಅವಶ್ಯಕತೆ ಇರುವುದಿಲ್ಲ.
ಎಷ್ಟು ಸಮಯ ಇಡಬಹುದು?: ಒಣಗಿಸಿದ ಕೊಕ್ಕೋ ಬೀಜಗಳನ್ನು ಹಾಗೆಯೇ ದಾಸ್ತಾನು ಇಡುವುದಲ್ಲ. ಸುಕ್ಕು ಗಟ್ಟಿದ ಅಥವಾ ಒಳಗೆ ಬೀಜ ಇಲ್ಲದ ಬೀಜಗಳನ್ನು ಪ್ರತ್ಯೇಕಿಸಿ ಪಾಲಿಥೀನ್ ಚೀಲ ಹಾಕಿ ಗೋಣಿಯಲ್ಲಿ ತುಂಬಿಸಿ ಕಟ್ಟಿ ಇಡಬೇಕು. ನೆಲದಿಂದ ಎತ್ತರದಲ್ಲಿ ಇಡಬೇಕು. ಇಡುವ ಜಾಗದಲ್ಲಿ ಕೀಟನಾಶಕ, ರಸಗೊಬ್ಬರ ಅಥವಾ ಕಾಳುಮೆಣಸು,ಲವಂಗ, ಏಲಕ್ಕಿ, ಜಾಯಿಕಾಯಿ ಮುಂತಾದ ಸಾಂಬಾರ ಪದಾರ್ಥಗಳನ್ನು ಇಡಬಾರದು. ಮುಖ್ಯವಾಗಿ ಒಂದು ದಿನ ಬೇಕಾದರೆ ಹೆಚ್ಚು ಒಣಗಿಸಿ. ಯಾವುದೇ ತೇವಾಂಶ ಇರದಿರಲಿ. ಹಾಳಾದುದನ್ನು ಪ್ರತ್ಯೇಕಿಸದೆ ಇದ್ದರೆ ಅದಕ್ಕೆ ದಾಸ್ತಾನು ಕೀಟ ಬರಬಹುದು.
ಇದನ್ನು ಸುಮಾರು ೩-೪ ತಿಂಗಳ ತನಕ ದಾಸ್ತಾನು ಇಡಬಹುದು. ಆದರೂ ಸಾಧ್ಯವಾದಷ್ಟು ಬೇಗ ಮಾರಾಟ ಮಾಡುವುದು ಉತ್ತಮ ಇದಕ್ಕೆ ದಾಸ್ತಾನು ಕೀಟ ಬೇಗ ಬರುತ್ತದೆ. ಒಣಗಿಸಿದ ಬೀಜಗಳಿಗೆ ಸುಮಾರು ೨೦೦-೨೨೫ ರೂ.ತನಕ ಗುಣಮಟ್ಟ ಹೊಂದಿ ಬೆಲೆ ಇರುತ್ತದೆ. ಮಾರಾಟ ಸ್ಥಗಿತವಾಗಿರುವ ಪರಿಸ್ಥಿತಿಯಲ್ಲಿ ಹೀಗೆ ಒಣಗಿಸಿ ನಂತರ ಮಾರಾಟ ಮಾಡುವುದು ಉಚಿತ.
ಚಿತ್ರಗಳ ವಿವರ: ೧. ಒಣಗಿದ ಬೀಜಗಳು ೨, ಹಸಿ ಕೊಕ್ಕೋ ಬೀಜ ೩. ಸೆಣಬಿನ ಚೀಲ ಮುಚ್ಚಿ ಒಣಗಿಸಿರುವುದು ೪ ಬೀಜಗಳನ್ನು ಒಣಗಿಸಿರುವುದು
ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ