ಕೊಕ್ಕೋ - ಸಸ್ಯ ಹೇನು ಮತ್ತು ಟಿ-ಸೊಳ್ಳೆ ನಿಯಂತ್ರಣ
ಕೊಕ್ಕೋ ತೆಂಗು ಅಡಿಕೆ ಬೆಳೆಯ ಮಧ್ಯಂತರದಲ್ಲಿ ಅಧಿಕ ವರಮಾನ ತಂದುಕೊಡುವ ಬೆಳೆ. ಈ ವರ್ಷ ಕೊಕ್ಕೋ ಬೀಜಕ್ಕೆ ಉತ್ತಮ ಬೇಡಿಕೆ ಇದ್ದು, ವಿದೇಶದಿಂದ ಬರುವ ಕೊಕ್ಕೋ ಪ್ರಮಾಣ ಕಡಿಮೆಯಾದ ಕಾರಣ ಬೆಲೆ ಉತ್ತಮವಾಗಿದೆ. ಈಗ ಕೊಕ್ಕೋದ ದೊಡ್ದ ಕೊಯಿಲಿನ ಸೀಸನ್ ಅಲ್ಲದಿದ್ದರೂ ಸಹ ಕಿಲೋ ಹಸಿ ಬೀಜಕ್ಕೆ 150-160 ರೂ. ಬೆಲೆ ಇದೆ. ಈ ಹಿಂದೆ ಆದಂತೆ ಈ ವರ್ಷವೂ ಕೊಕ್ಕೋ ಸೀಸನ್ನಲ್ಲಿ ಇದು 200 ರೂ ತಲುಪಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಈಗ ಕೊಕ್ಕೋ ಸಸಿಗಳಲ್ಲಿ ಕೊಕ್ಕೋ ಮಿಡಿಗಳು ಮತ್ತು ಬಲಿಯುತ್ತಿರುವ ಕಾಯಿಗಳು ಇವೆ. ಈ ವರ್ಷ ಕೊಕ್ಕೋ ಫಸಲು ಉತ್ತಮವಾಗಿರುವಂತೆ ಕಂಡು ಬರುತ್ತದೆ. ಬೇಸಿಗೆಯ ಕಾಲದಲ್ಲಿ ಅಳಿಲು, ಕಾಡು ಬೆಕ್ಕು ಹೆಗ್ಗಣಗಳ ಹೊರತಾಗಿ ಬೇರೆ ಯಾವ ರೀತಿಯಲ್ಲೂ ಬೆಳೆ ನಷ್ಟ ಇಲ್ಲದ ಕಾರಣ ಹೆಚ್ಚು ಮಿಡಿಗಳು ಉಳಿದರೆ ಹೆಚ್ಚು ಉತ್ಪತ್ತಿ ದೊರೆಯುತ್ತದೆ. ಅದಕ್ಕಾಗಿ ಬೆಳೆಗಾರರು ತಮ್ಮ ಕೊಕ್ಕೋ ಸಸ್ಯಗಳಿಗೆ ಗೊಬ್ಬರ, ನೀರಾವರಿ ಮಾಡಿ ಹೆಚ್ಚು ಕಾಯಿಗಳು ಉಳಿಯುವಂತೆ ಮಾಡುವುದು ಉತ್ತಮ.
ಬರೇ ಗೊಬ್ಬರ ಒಂದನ್ನೇ ಕೊಡುವುದಲ್ಲ. ಬದಲಿಗೆ ಅಗತ್ಯವಾಗಿ ಫೆಬ್ರವರಿ- ಮಾರ್ಚ್ ಮತ್ತು ಎಪ್ರಿಲ್ ತಿಂಗಳುಗಳಲ್ಲಿ ಸಸ್ಯ ಸಂರಕ್ಷಣೆಯನ್ನೂ ಮಾಡಬೇಕು. ಕೊಕ್ಕೋ ಕೊಡುಗಳಿಗೆ ಈ ಸಮಯದಲ್ಲಿ ಅತಿಯಾಗಿ ಬಾಧಿಸುವುದು ಟಿ - ಸೊಳ್ಳೆ ಮತ್ತು ಎಳೆ ಚಿಗುರುಗಳಿಗೆ ತೊಂದರೆ ಮಾಡುವ ಸಸ್ಯ ಹೇನುಗಳು. ಸಸ್ಯ ಹೇನುಗಳು ಎಳೆ ಚಿಗುರುಗಳ ರಸ ಹೀರಿ ಚಿಗುರು ಒಣಗುವಂತೆ ಮಾಡುತ್ತದೆ. ಅಲ್ಲಿಗೆ ಬೆಳವಣಿಗೆ ಕುಂಠಿತವಾಗುತ್ತದೆ. ಟಿ- ಸೊಳ್ಳೆಗಳು ಮಿಡಿ ಮತ್ತು ಬಲಿಯುತ್ತಿರುವ ಕೋಡುಗಳಲ್ಲಿ ಕಚ್ಚಿ ಕಲೆಯನ್ನು ಉಂಟು ಮಾಡುತ್ತದೆ. ಇದರಿಂದ ಕಾಯಿಯು ಪುಷ್ಟಿಯಾಗಿ ಬೆಳೆಯಲು ಅನನುಕೂಲವಾಗುತ್ತದೆ. ಈ ಕೋಡುಗಳು ಮುರುಟಿಕೊಂಡು ಬೀಜಗಳು ಕಡಿಮೆ ಇರುತ್ತದೆ. ಇದನ್ನು ನಿಯಂತ್ರಿಸಿಕೊಂಡರೆ ಕೋಡುಗಳು ಪುಷ್ಟಿಯಾಗಿ ಬೆಳೆದು ಹೆಚ್ಚಿನ ಉತ್ಪತ್ತಿ ದೊರೆಯುತ್ತದೆ.
ಕೊಕ್ಕೋ ಬೀಜಗಳು ಆಹಾರ ಬಳಕೆಯ ವಸ್ತುಗಳಾದ ಕಾರಣ, ಅಲ್ಲದೇ ಬಹುತೇಕ ಕೃಷಿಕರು ಕೋಡು ಹಾಗೂ ಎಳೆ ಚಿಗುರುಗಳನ್ನು ಪಶುಗಳಿಗೆ ಮೇವಾಗಿ ಬಳಕೆ ಮಾಡುವ ಕಾರಣ ಇದಕ್ಕೆ ಪ್ರಬಲ ಕೀಟನಾಶಕಗಳನ್ನು ಬಳಕೆ ಮಾಡಿ ನಿಯಂತ್ರಣ ಮಾಡುವುದು ಸೂಕ್ತವಲ್ಲ. ಆದಾಗ್ಯೂ ವಿಷ ರಾಸಾಯನಿಕಗಳನ್ನು ಬಳಕೆ ಮಾಡುವುದು, ಸಿಂಪರಣೆ ಮಾಡುವವನಿಗೂ, ಅದನ್ನು ತಿನ್ನುವ ಪಶುಗಳಿಗೂ ತುಂಬಾ ತೊಂದರೆಯನ್ನು ಉಂಟುಮಾಡುತ್ತದೆ. ಇದಕ್ಕಾಗಿ ಸಾಧ್ಯವಾದಷ್ಟು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೀಟನಾಶಕಗಳು ಮತ್ತು ಕೀಟ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕೀಟ ನಿಯಂತ್ರಣ ಮಾಡಬೇಕು. ಟಿ- ಸೊಳ್ಳೆ ಮತ್ತು ಸಸ್ಯ ಹೇನುಗಳಿಂದ ಗಿಡಕ್ಕೆ ಯಾವುದೇ ಅಪಾಯ ಇಲ್ಲದ ಕಾರಣ ಅತಿಯಾದ ವಿಷ ರಾಸಾಯನಿಕಗಳ ಬಳಕೆ ಬೇಡ. ಹಳದಿ ಮತ್ತು ನೀಲಿ ಅಂಟು ಟ್ರಾಪುಗಳನ್ನು ಹಾಕಿ ಕೆಲವು ಕೀಟಗಳನ್ನು ನಿಯಂತ್ರಣ ಮಾಡಬಹುದು. ಟಿ- ಸೊಳ್ಳೆ (ಚಿತ್ರ ೨ ನೋಡಿ) ನಿಯಂತ್ರಣಕ್ಕೆ ಬೇವಿನ ಮೂಲದ ಕೀಟನಾಶಕಗಳನ್ನು ಬಳಕೆ ಮಾಡಿ. ಹೊಂಗೆ ಮತ್ತು ಬೇವು ಮಿಶ್ರಿತ ಸೋಪು, ಸಾಬೂನು ಹಾಗೂ ಫಿನಾಯಿಲ್ ಗಳ ಮಿಶ್ರಣದ ಸಿಂಪರಣೆಯೂ ಸ್ವಲ್ಪ ಮಟ್ಟಿಗೆ ಫಲಿತಾಂಶ ಕೊಡಬಲ್ಲುದು. ಪರಾಗಸ್ಪರ್ಶಕ್ಕೆ ಯಾವುದೇ ಅನನುಕೂಲ ಇಲ್ಲದ ಕಾರಣ ಎಳೆ ಕೋಡುಗಳಿಗೆ ಸಾಬೂನು ದ್ರಾವಣ ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ಬೇವಿನ ಎಣ್ಣೆಯನ್ನು ಸೇರಿಸಿ ಕೋಡು-ಮಿಡಿಗಳಿಗೆ ಸಿಂಪರಣೆ ಮಾಡಬಹುದು.
ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಅಂತರ್ಜಾಲ ತಾಣ