ಕೊಡಗಿನ ಕಾವೇರಿ - ಒಡಲಿನ ದಳ್ಳುರಿ...

ಕೊಡಗಿನ ಕಾವೇರಿ - ಒಡಲಿನ ದಳ್ಳುರಿ...

" ಒಂದು ನದಿ ಹುಟ್ಟುವ ಸ್ಥಳದಿಂದ ಅದು ಹರಿಯುತ್ತಾ ನದಿ ಸೇರುವವರೆಗಿನ ಹಾದಿಯಲ್ಲಿ ಆ ನದಿಯ ಹುಟ್ಟು ಮತ್ತು ಹರಿವಿಗೆ ಹತ್ತಿರದ ಪ್ರದೇಶಗಳಿಗೆ ಆ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಹಕ್ಕು ಹೆಚ್ಚಾಗಿರುತ್ತದೆ. ಅದು ಪ್ರಥಮ ಆಧ್ಯತೆ. ನಂತರ ಹೆಚ್ಚುವರಿ ನೀರನ್ನು ಅನುಕೂಲಕ್ಕೆ ತಕ್ಕಂತೆ ಇತರ ಪ್ರದೇಶಗಳು ಉಪಯೋಗಿಸಿಕೊಳ್ಳಬಹುದು " ಇದು ವಿಶ್ವಸಂಸ್ಥೆಯು ವಿಶ್ವದ ಎಲ್ಲಾ ನದಿಗಳ ನೀರಿನ ಹಂಚಿಕೆಯ ವಿಷಯದಲ್ಲಿ ತೆಗೆದುಕೊಂಡು ಸಹಜ ಸ್ವಾಭಾವಿಕ ತೀರ್ಮಾನ.

ಕಾವೇರಿ ನದಿಗೂ ಕೂಡ ಇದು ಅನ್ವಯಿಸುತ್ತದೆ. ಇದರ ಆಧಾರದ ಮೇಲೆ ನ್ಯಾಯಾಲಯವೇ ಆಗಲಿ, ಆಡಳಿತವೇ ಆಗಲಿ, ನೀರಾವರಿ ತಜ್ಞರೇ ಆಗಲಿ ತೀರ್ಮಾನ ತೆಗೆದುಕೊಳ್ಳಬೇಕು. ಹಾಗೆ ತೆಗೆದುಕೊಂಡ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಮತ್ತು ಅದನ್ನು ಚಾಚೂ ತಪ್ಪದೆ ಅನುಸರಿಸಬೇಕು. ನೀರಿನ ಲಭ್ಯವಿರುವ ಪ್ರಮಾಣದ ಆಧಾರ ಸಹಜವಾಗಿಯೇ ಗಣನೆಗೆ ಬರುತ್ತದೆ. ಅದರ ಅಂಕಿ ಸಂಖ್ಯೆಗಳು ಸಹ ಅಧಿಕೃತವಾಗಿ ಲಭ್ಯವಿರುತ್ತದೆ.

ಅತಿವೃಷ್ಟಿಯೇ ಇರಲಿ, ಅನಾವೃಷ್ಟಿಯೇ ಇರಲಿ ಅದರ ಎರಡೂ ಪರಿಣಾಮಗಳನ್ನು ಅದಕ್ಕೆ ಸಂಬಂಧಿಸಿದವರು ಸಮನಾಗಿ ಅನುಭವಿಸಲೇ ಬೇಕು ಮತ್ತು ಒಂದಷ್ಟು ಸಾಧ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇಷ್ಟು ಸರಳ ವಿಷಯವನ್ನು ಸಂಕೀರ್ಣ ಮಾಡಿಕೊಂಡು ಅನೇಕ ವರ್ಷಗಳಿಂದ ಮತ್ತೆ ಮತ್ತೆ ಕೋರ್ಟ್ ಮೆಟ್ಟಿಲೇರುತ್ತಾ ಹೊಡೆದಾಡಿ ಬಡಿದಾಡುತ್ತಾ ಇರುವ ಸಮಾಜದ - ಸರ್ಕಾರಗಳ ಬಗ್ಗೆ ಏನನ್ನಬೇಕು. ಅಜ್ಞಾನವೇ, ಅಹಂಕಾರವೇ, ರಾಜಕೀಯವೇ ಅಥವಾ ವ್ಯವಸ್ಥೆ ಇರುವುದೇ ಹೀಗೆಯೇ..

ಪ್ರಕೃತಿ ಮನುಷ್ಯನ ನಿಯಂತ್ರಣದಲ್ಲಿ ಇಲ್ಲ. ಅದು ತನ್ನ ಪಾಡಿಗೆ ತಾನು ತನ್ನದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೆಲವೊಮ್ಮೆ ಜಾಸ್ತಿ ಮಳೆ ಕೆಲವೊಮ್ಮೆ ಕಡಿಮೆ ಮಳೆ ಸುರಿಯಬಹುದು. ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿರುವುದು ಮನುಷ್ಯನ ಕರ್ತವ್ಯ. ನದಿಗಳು, ಕೆರೆ ಕಟ್ಟೆಗಳು, ಜಲಾಶಯಗಳು ಮಳೆ ನೀರಿನ ಸಂಗ್ರಹದ ಮೂಲಗಳು. ಆದರೆ ಮನುಷ್ಯನ ಜನಸಂಖ್ಯೆ ಹೆಚ್ಚಾದಂತೆ ಆರ್ಥಿಕ ದುರಾಸೆಗೆ ಬಿದ್ದು ಕೆರೆ ಕಟ್ಟೆಗಳನ್ನು ನಾಶ ಮಾಡುತ್ತಾ 30X40 - 40X60 ಸೈಟುಗಳಾಗಿ ಪರಿವರ್ತಿಸಿ ಜಲ ಸಂಗ್ರಹ ಮತ್ತು ಜಲಮೂಲಗಳನ್ನೇ ನಾಶಪಡಿಸಿ ಈಗ ನೀರಿಗಾಗಿ ಪರಿತಪಿಸಿದರೆ ಹೇಗೆ?

ಉದಾಹರಣೆಗೆ ಬೆಂಗಳೂರು ಕಾವೇರಿ ಜಲಾನಯನ ಪ್ರದೇಶದಿಂದ ಸುಮಾರು 100 ಕಿಲೋಮೀಟರ್ ದೂರವಿದೆ. ಇಲ್ಲಿನ ಜನಸಂಖ್ಯೆ ಸುಮಾರು 1.5 ಕೋಟಿ. ಇಲ್ಲಿ ಕೆಲವು ದಶಕಗಳ ಹಿಂದೆ ದಕ್ಷಿಣ ಪಿನಾಕಿನಿ, ವೃಷಭಾವತಿ ನದಿಗಳು ಸೇರಿ 3 ಸಾವಿರಕ್ಕೂ ಹೆಚ್ಚು ಕೆರೆಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಇದ್ದವು. ತಿಪ್ಪಗೊಂಡನಹಳ್ಳಿ ಮತ್ತು ಹೆಸರುಘಟ್ಟ ಕೆರೆಗಳಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿತ್ತು. ಈಗ ಬಹುತೇಕ ಕೆರೆಗಳು ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗಿವೆ. ಇರುವ ಕೆಲವು ಕೆರೆಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಾವೇರಿ ಒಂದೇ ನದಿ ಎಲ್ಲಾ ಜನರ ಅವಶ್ಯಕತೆ ಪೂರೈಸಲು ಕೆಲವು ಸಹ ಸಾಧ್ಯವಾಗುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ನೀಡಬಹುದೇ ಹೊರತು ಮಳೆ ಸುರಿಸಲು ಆಗುವುದಿಲ್ಲ. ಮನುಷ್ಯರ ನಡುವೆ ಹೊಂದಾಣಿಕೆಯ ಹಂಚಿಕೆ ಮಾತ್ರ ಇದಕ್ಕೆ ಪರಿಹಾರ ಅಥವಾ ಹೊಡೆದಾಡುತ್ತಾ ಬದುಕುವುದು ಉಳಿದಿರುವ ದಾರಿ.

ಇದಕ್ಕೆ ಇರುವ ಕೆಲವು ಪರಿಹಾರಗಳು:

1) ಕೇಂದ್ರದ ಮಧ್ಯಸ್ಥಿಕೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಹೊಂದಾಣಿಕೆಯ ಸೂತ್ರ ರೂಪಿಸಿಕೊಳ್ಳುವುದು. ಇಂದಿನ ರಾಜಕೀಯ ವ್ಯವಸ್ಥೆ ಮತ್ತು ಜನರ ಮಾನಸಿಕತೆಯ  ಮಟ್ಟದಲ್ಲಿ ಇದು ಬಹುಶಃ ಅಸಾಧ್ಯ.

2) ಕೋರ್ಟ್ ಮತ್ತು ಕಾವೇರಿ ನಿಯಂತ್ರಣ ಪ್ರಾಧಿಕಾರದ ಆದೇಶಗಳನ್ನು ಯಾವುದೇ ಪ್ರತಿರೋಧ ಒಡ್ಡದೆ ಪಾಲಿಸುವುದು. ಇದು ಜನರ ಆಕ್ರೋಶಕ್ಕೆ ಗುರಿಯಾಗುತ್ತದೆ. ಮುಖ್ಯವಾಗಿ ಬರಗಾಲದ ಸಮಯದಲ್ಲಿ ನೀರಿಗೆ ಹಾಹಾಕಾರವಾದಾಗ ಯಾವುದೇ ತೀರ್ಪುಗಳನ್ನು ಜನ ಒಪ್ಪುವುದಿಲ್ಲ.

3) ದಶಪಥ ರಸ್ತೆ, ಮೆಟ್ರೋ, ಸುರಂಗ ಮಾರ್ಗ, ಫ್ಲೈ ಓವರ್ ಹೀಗೆ ಕೇವಲ ನಗರದ ಟ್ರಾಫಿಕ್ ನಿಯಂತ್ರಿಸಲು ಕೋಟಿಗಟ್ಟಲೆ ಹಣ ಮತ್ತು ಸಮಯ ವಿನಿಯೋಗಿಸುವುದನ್ನು ಕಡಿಮೆ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಂಗ್ರಹಕ್ಕಾಗಿ ಅತ್ಯಂತ ವೈಜ್ಞಾನಿಕ ಯೋಜನೆಗಳನ್ನು ರೂಪಿಸುವುದು. ಮಳೆಯ ಪ್ರಮಾಣ ಕಡಿಮೆಯಾದರೂ ಸಹ ಕೃಷಿ ಮತ್ತು ಕುಡಿಯುವ ನೀರಿಗೆ ವರ್ಷಪೂರ್ತಿ ತೊಂದರೆಯಾಗದಂತೆ ಸಂಗ್ರಹದ ವಿವಿಧ ವಿಧಾನಗಳನ್ನು ಕಂಡುಹಿಡಿಯುವುದು.

4) ನಗರ ಪ್ರದೇಶಗಳಲ್ಲಿ ನೀರಿನ ದುರುಪಯೋಗ ಸಾಕಷ್ಟು ಆಗುತ್ತದೆ. ಅದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

5) ಹೀಗೆ ಸಲಹೆಗಳೇನೋ ಸಾಕಷ್ಟು ಇರುತ್ತದೆ. ಆದರೆ ಅದರ ಅನುಷ್ಠಾನವೇ ದೊಡ್ಡ ಸಮಸ್ಯೆ. ನಗರಗಳನ್ನು ಅಡ್ಡಾದಿಡ್ಡಿಯಾಗಿ ಬೆಳೆಯಲು ಬಿಟ್ಟು ಈಗ ಪರಿಹಾರದ ಬಗ್ಗೆ ಯೋಚಿಸಿದರೇ ಅದು ಮಿತಿ ಮೀರಿ ಹೋಗಿರುತ್ತದೆ.

ಅಂತಿಮವಾಗಿ ಬರುವುದನ್ನು ಅನುಭವಿಸಬೇಕಷ್ಟೇ ಎಂಬ ಸಿದ್ದಾಂತಕ್ಕೆ ಅಂಟಿಕೊಳ್ಳಬೇಕಾಗುತ್ತದೆ. ಕಾರಣ ಎಲ್ಲವೂ ನಿಯಂತ್ರಣ ಮೀರುತ್ತಿದೆ, ಕಾವೇರಿ ವಿವಾದ ಸಹ.

-ವಿವೇಕಾನಂದ ಎಚ್ ಕೆ,, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ