ಕೊಡಗಿನ ಕಾವೇರಿ: ಜೀವನದಿಯಾಗಿ ಉಳಿದೀತೇ?

ಕೊಡಗಿನ ಕಾವೇರಿ: ಜೀವನದಿಯಾಗಿ ಉಳಿದೀತೇ?

ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿ. ಮಹಾನಗರ ಬೆಂಗಳೂರು ಮತ್ತು ನೂರಾರು ಹಳ್ಳಿಪಟ್ಟಣಗಳ ಜನರ ಕುಡಿಯುವ ನೀರಿನ ಮೂಲ ಈ ನದಿ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ರೈತರಿಗೂ ಕೈಗಾರಿಕೋದ್ಯಮಿಗಳಿಗೂ ಕಾವೇರಿ ನೀರಿನಲ್ಲಿ ಪಾಲು ಬೇಕೇ ಬೇಕು – ತಮ್ಮ ಉಳಿವಿಗಾಗಿ ಹಾಗೂ ಪ್ರಗತಿಗಾಗಿ.
ಅದೆಲ್ಲ ಸರಿ. ಈ ಕಾವೇರಿ ನದಿಗೆ ನೀರು ಬರುವುದು ಎಲ್ಲಿಂದ? ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯಿಂದ. ಅಲ್ಲಿನ ತಲಕಾವೇರಿ ಎಂಬ ಪುಟ್ಟ ಊರಿನಲ್ಲಿ ಕಾವೇರಿ ನದಿಯ ಹುಟ್ಟು. ಕಾಫಿ, ಕರಿಮೆಣಸು, ಏಲಕ್ಕಿ ಮತ್ತು ಭತ್ತದ ಕೃಷಿಗೆ ಹೆಸರಾದ ಕೊಡಗು ಜಿಲ್ಲೆ, ಕಾವೇರಿ ನದಿಯಲ್ಲಿ ಹರಿಯುವ ನೀರಿನ ಅರ್ಧ ಭಾಗವನ್ನು ತುಂಬಿ ಕೊಡುತ್ತದೆ ಎಂಬುದು ವಾಸ್ತವ.
ಈ ಭೂಮಿಯ ಅತಿ ಚಂದದ ಪ್ರಾಕೃತಿಕ ಪ್ರದೇಶಗಳಲ್ಲೊಂದು ಕೊಡಗು. ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಉಳಿಸಿಕೊಂಡೇ ಅಲ್ಲಿ ಶತಮಾನಗಳಿಂದ ವ್ಯಾಪಕವಾಗಿ ಕಾಫಿ, ಸಾಂಬಾರ ಬೆಳೆಗಳು ಹಾಗೂ ಭತ್ತ ಬೆಳೆಸುತ್ತಿರುವುದು ಅಲ್ಲಿನ ಕೃಷಿಕರ ಸಾಧನೆ. ಅವರು ಹೀಗೆ ಬೇಸಾಯ ಮಾಡುತ್ತಿರುವ ಕಾರಣ ಅಲ್ಲಿನ ಮಣ್ಣಿಗೆ ಜಲಮರುಪೂರಣ ಆಗುತ್ತಿದೆ. ಅದರಿಂದಾಗಿ ಕಾವೇರಿ ನದಿ ತುಂಬಿ ಹರಿಯುತ್ತಿದೆ.
ಇದು ಹೀಗೆಯೇ ಮುಂದುವರಿದರೆ ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿಯಾಗಿ ಉಳಿದೀತು. ಆದರೆ ಈಗ ಕೊಡಗಿನಲ್ಲಿ ಅಭಿವೃದ್ಧಿಯ ಭರಾಟೆಯಲ್ಲಿ ಕಾವೇರಿ ನದಿಯ ಮೂಲಕ್ಕೇ ಕೊಡಲಿಯೇಟು ಬೀಳುತ್ತಿದೆ.
ಉದಾಹರಣೆಗೆ, ಅಲ್ಲಿ ಕಾಫಿತೋಟಗಳಲ್ಲಿ ಕಾಫಿ ಬೆಳೆಸುವ ವಿಧಾನದಲ್ಲಿ ಮೂಲಭೂತ ಬದಲಾವಣೆಗಳು ಆಗುತ್ತಿವೆ. ಶತಮಾನಗಳಿಂದ ಅಲ್ಲಿನ ಕಾಫಿ ತೋಟಗಳಲ್ಲಿ ಕಾಫಿ ಬೆಳೆಸುತ್ತಿದ್ದದ್ದು ಶೇಕಡಾ ೩೦ರಿಂದ ೫೦ ನೆರಳಿನಲ್ಲಿ. ನೆರಳು ಒದಗಿಸಲಿಕ್ಕಾಗಿ ಕಾಫಿ ಗಿಡಗಳ ನಡುವೆ ಮರಗಳನ್ನು ಬೆಳೆಸುತ್ತಿದ್ದರು. ಆ ಮರಗಳಿಗೆ ಕರಿಮೆಣಸಿನ ಬಳ್ಳಿಗಳನ್ನು ಹಬ್ಬಿಸುವುದು ಅಲ್ಲಿನ ವಿಶೇಷ. ಈಗ ಇದೆಲ್ಲ ಬದಲಾಗುತ್ತಿದೆ. ಕಾಫಿ ತೋಟಗಳ ಮರಗಳನ್ನು ಕಡಿದು, “ಸಂಪೂರ್ಣ ಬಿಸಿಲಿನಲ್ಲಿ ಕಾಫಿ ಬೆಳೆಸುವ ಪದ್ಧತಿ” ಹಬ್ಬುತ್ತಿದೆ. ಯಾಕೆಂದರೆ, ನೆರಳಿನಲ್ಲಿ ಕಾಫಿ ಬೆಳೆಸಿದಾಗ ಎಕರೆಗೆ ೦.೭೫ ಟನ್ನಿನಿಂದ ಒಂದು ಟನ್ ವರೆಗೆ ಇಳುವರಿ ಸಿಕ್ಕಿದರೆ, ಮರಗಳಿಲ್ಲದ ತೋಟದಲ್ಲಿ ಸಂಪೂರ್ಣ ಬಿಸಿಲಿನಲ್ಲಿ ಕಾಫಿ ಬೆಳೆಸಿದಾಗ ಎಕರೆಗೆ ೧.೫ ಟನ್ ಇಳುವರಿ ಸಿಗುತ್ತದೆ. ಕೊಡಗಿನಲ್ಲಿ ನೆರಳಿನಲ್ಲಿ ಸಾವಯವ ಕಾಫಿ ಬೆಳೆಯುತ್ತಿರುವ ಬೆಳೆಗಾರರಿಗೆ ಸಿಗುತ್ತಿರುವ ಇಳುವರಿ ಇನ್ನೂ ಕಡಿಮೆ – ಎಕರೆಗೆ ಅರ್ಧ ಟನ್. ಸಾವಯವ ಕಾಫಿ ಬೀಜಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ ಎಂಬುದೇನೋ ನಿಜ. ಆದರೆ ಈ ಹೆಚ್ಚುವರಿ ಬೆಲೆ, ಕಡಿಮೆ ಇಳುವರಿಯಿಂದಾಗುವ ಆದಾಯ ಖೋತಾವನ್ನು ತುಂಬಿ ಕೊಡುತ್ತಿಲ್ಲ. ಇದರಿಂದಾಗಿ, ಹೆಚ್ಚೆಚ್ಚು ಕಾಫಿ ಬೆಳೆಗಾರರು ಕಾಫಿ ತೋಟಗಳಲ್ಲಿರುವ ಮರಗಳನ್ನು ಕಡಿಯುತ್ತಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೇ ಯೋಚಿಸುವುದು ಕಾಫಿ ಬೆಳೆಗಾರರ ಸಮಸ್ಯೆಯನ್ನು ಬಿಗಡಾಯಿಸಿದೆ. ಇತ್ತೀಚೆಗೆ ಕೊಡಗಿನ ಕಾಫಿ ಬೆಳೆಗಾರರಿಗೆ ಅರಣ್ಯ ಇಲಾಖೆ ನೀಡಿರುವ ಸೂಚನೆ ಹೀಗಿದೆ: ಇನ್ನು ನಾಲ್ಕು ತಿಂಗಳು ಕಾಫಿ ತೋಟಗಳಲ್ಲಿ ಮರಗಳ ಸೊಪ್ಪು ಕಡಿಯಲು ಅಥವಾ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಪರವಾನಗಿ ನೀಡುವುದಿಲ್ಲ. ಯಾಕೆಂದರೆ ನಮ್ಮ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿದ್ದು, ಈ ಅವಧಿಯಲ್ಲಿ ನಮ್ಮ ಸಿಬ್ಬಂದಿ ಗಿಡ ನೆಡುವ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿರುತ್ತಾರೆ. ಅದೇ ಅರಣ್ಯ ಇಲಾಖೆ ನೀಡಿರುವ ಇನ್ನೊಂದು ಸೂಚನೆ: ಸಿಲ್ವರ್ ಓಕ್ ಇಂತಹ ವಿದೇಶೀ ಮರಗಳನ್ನು ಕಡಿಯಲು ಕಾಫಿ ಬೆಳೆಗಾರರಿಗೆ ಪರವಾನಗಿ ಕೊಡಲಾಗುವುದು! ಅರಣ್ಯ ಇಲಾಖೆಯ ಜನವಿರೋಧಿ “ಕೆಂಪುಪಟ್ಟಿ” ಕ್ರಮಗಳಿಗೆ ಇದು ಇನ್ನೊಂದು ಉದಾಹರಣೆ.
ಕೊಡಗಿನ ಭತ್ತದ ಬೆಳೆಗಾರರು ಮನೆಸೈಟುಗಳಿಗಾಗಿ ಮತ್ತು ಪ್ರವಾಸೋದ್ಯಮ ಯೋಜನೆಗಳಿಗಾಗಿ ತಮ್ಮ ಜಮೀನು ಮಾರಾಟ ಮಾಡುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ರಸ್ತೆಗಳ ನಿರ್ಮಾಣವೂ ಅಲ್ಲಿನ ಕೃಷಿ ಹಾಗೂ ಅರಣ್ಯ ಭೂಮಿಯ ಇಳಿಕೆಗೆ ಇನ್ನೊಂದು ಕಾರಣ. ಇವೆಲ್ಲದರ ಜೊತೆಗೆ, ಆನೆ ಹಾಗೂ ಇತರ ಕಾಡುಪ್ರಾಣಿಗಳ ದಾಳಿಯಿಂದಾಗಿ ಅರಣ್ಯದಂಚಿನ ಕೃಷಿಕರು ಹೈರಾಣಾಗಿದ್ದಾರೆ.
ಕಾವೇರಿ ನದಿ ಉಳಿಯಬೇಕಾದರೆ ಕೊಡಗಿನ ಒಟ್ಟು ಭೂಪ್ರದೇಶದ ಶೇ.೩೦ರಲ್ಲಿ ಕಾಡು, ಶೇ.೩೦ರಲ್ಲಿ ಕಾಫಿ ತೋಟಗಳು ಮತ್ತು ಶೇ.೧೫ರಲ್ಲಿ ಭತ್ತದ ಹೊಲಗಳು ಉಳಿಯಲೇ ಬೇಕು. ಇದನ್ನು ಸಾಧಿಸಬೇಕಾದರೆ ಹೊಸರೀತಿಯ ಚಿಂತನೆ ಅಗತ್ಯ. ಅಮೆರಿಕದಲ್ಲಿ ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯದೆ ಅದನ್ನು ಪಾಳು ಬಿಡುವುದಕ್ಕಾಗಿ ಕೃಷಿಕರಿಗೆ ಸರಕಾರ ಪರಿಹಾರ ಪಾವತಿಸುತ್ತದೆ. ಅದೇ ರೀತಿಯಲ್ಲಿ ಕೊಡಗಿನ ಕಾಫಿ ತೋಟಗಳ ಮರಗಳನ್ನು ಹಾಗೆಯೇ ಉಳಿಸಿಕೊಳ್ಳುವುದಕ್ಕಾಗಿ ಬೆಳೆಗಾರರಿಗೆ “ಪ್ರೋತ್ಸಾಹ ಧನ” ಪಾವತಿಸಬಹುದು. ಜೊತೆಗೆ, ಕೊಡಗಿನ ಸಮೃದ್ಧ ಹಸಿರನ್ನು ಉಳಿಸಿಕೊಂಡು, ಅಲ್ಲಿನವರಿಗೆ ಹೆಚ್ಚಿನ ಆದಾಯ ತರಬಹುದಾದ ಯೋಜನೆಗಳನ್ನೂ ಪ್ರೋತ್ಸಾಹಿಸ ಬೇಕಾಗಿದೆ. ಉದಾಹರಣೆಗೆ “ಹೋಮ್ ಸ್ಟೇ” ಆಧಾರಿತ ಪ್ರವಾಸೋದ್ಯಮ. ಈಗಾಗಲೇ ಅಲ್ಲಿ ಸುಮಾರು ೩,೦೦೦ ಹೋಂ ಸ್ಟೇಗಳಿದ್ದು, ಇನ್ನಷ್ಟು ಹೋಮ್ ಸ್ಟೇಗಳನ್ನು ಆರಂಭಿಸಲು ಅವಕಾಶವಿದೆ. ಇದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶವೂ ಸಿಗಲಿದೆ.
ನಮ್ಮ ದೇಶದ ಸಾವಿರಾರು ಜನರು ಪ್ರಾಕೃತಿಕ ಸೌಂದರ್ಯ ಸವಿಯಲಿಕ್ಕಾಗಿ ದೂರದ ಡಾರ್ಜಿಲಿಂಗ್, ಸಿಕ್ಕಿಂ, ಕಾಶ್ಮೀರಗಳಿಗೆ ಹಾಗೂ ನೇಪಾಳ, ಶ್ರೀಲಂಕಾ, ಥೈಲ್ಯಾಂಡ್, ಕೆಂಬೋಡಿಯಾ, ಮಲೇಷ್ಯಾ, ಸ್ವಿಝರ್ಲ್ಯಾಂಡ್
ದೇಶಗಳಿಗೆ ಪ್ರವಾಸ ಹೋಗುತ್ತಿದ್ದಾರೆ. ಅಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಸರಿಸಾಟಿಯಾಗಿದೆ ನಮ್ಮ ಕೊಡಗಿನ ನಿಸರ್ಗ ಮೋಹಕತೆ. ಸೂಕ್ತ ಪ್ರಚಾರ ನೀಡಿದರೆ, ಕೊಡಗಿನತ್ತ ಹೆಚ್ಚೆಚ್ಚು ಪ್ರವಾಸಿಗರು ಬಂದೇ ಬರುತ್ತಾರೆ. ಈ ರೀತಿಯಲ್ಲಿ ಕೊಡಗಿನ ಪ್ರಾಕೃತಿಕ ಸಂಪತ್ತು ಮತ್ತು ಸಮತೋಲನವನ್ನು ಉಳಿಸಿಕೊಂಡರೆ, ಕಾವೇರಿ ನದಿ ಶತಮಾನಗಳ ಕಾಲ ಜೀವನದಿಯಾಗಿ ಉಳಿಯಲು ಸಾಧ್ಯ, ಅಲ್ಲವೇ?
ಚಿತ್ರ ಕೃಪೆ: ದ ವೈರ್