ಕೊಡಗಿನ ಗೌರಮ್ಮ ಎಂಬ ಕಥೆಗಾರ್ತಿ

ಕೊಡಗಿನ ಗೌರಮ್ಮ ಎಂಬ ಕಥೆಗಾರ್ತಿ

ಶತಮಾನದ ಹಿಂದೆ ಮಹಿಳೆಯರಿಗೆ ಈಗಿನಂತೆ ಸಾಮಾಜಿಕ ಸ್ವಾತಂತ್ರ್ಯಗಳು ಇರಲಿಲ್ಲ. ಸಣ್ಣ ಪ್ರಾಯಕ್ಕೇ ಮದುವೆ, ಬುದ್ದಿ ಬೆಳೆಯುವ ಸಮಯದಲ್ಲಿ ಒಂದೆರಡು ಮಕ್ಕಳು, ಮನೆ ಕೆಲಸ, ಕಟ್ಟು ಪಾಡುಗಳು ಎಂಬ ನಾಲ್ಕು ಗೋಡೆಗಳ ನಡುವೆಯೇ ಸವೆಯಬೇಕಾದ ಜೀವನ. ಆದರೂ ಆ ಸಮಯದಲ್ಲಿ ಹಲವಾರು ಮಂದಿ ಸ್ತ್ರೀಯರು ತಮ್ಮ ದುಃಖ- ದುಮ್ಮಾನ, ಆನಂದದ ಕ್ಷಣಗಳು ಇವನ್ನೆಲ್ಲಾ ಕವನಗಳು ಹಾಗೂ ಕಥೆಗಳ ಮೂಲಕ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ತಮ್ಮ ಬದುಕಿನಲ್ಲಿ ಅನುಭವಿಸಿದ ಸಂಗತಿಗಳು ಕಥೆಯಾಗಿ ಅರಳಿವೆ. ತಮ್ಮ ಸ್ವಂತ ನೋವು ಬೇರೊಬ್ಬರ ಹೆಸರಿನಲ್ಲಿ ಕಥೆಯಾಗಿ ಮೂಡಿದೆ. ಆ ಸಮಯದ ಓರ್ವ ಮಹಾನ್ ಕಥೆಗಾರ್ತಿ ಕೊಡಗಿನ ಗೌರಮ್ಮ. 

ಕೊಡಗಿನ ಗೌರಮ್ಮ ಹುಟ್ಟಿದ್ದು ೧೯೧೨ರ ಮಾರ್ಚ್ ೧ರಂದು. (ಕೆಲವು ದಾಖಲೆಗಳಲ್ಲಿ ಮಾರ್ಚ್ ೫ ಎಂದೂ ಉಲ್ಲೇಖವಿದೆ) ಮಡಿಕೇರಿಯ ಪ್ರತಿಷ್ಟಿತ ಹವ್ಯಕ ಕುಟುಂಬದ ವಕೀಲರಾದ ಎನ್. ಎಸ್. ರಾಮಯ್ಯ ಹಾಗೂ ನಂಜಕ್ಕ ದಂಪತಿಗಳ ಮಗಳಾಗಿ ಮಡಿಕೇರಿಯಲ್ಲಿ ಜನಿಸುತ್ತಾರೆ. ಆದರೆ ಬಾಲ್ಯದಲ್ಲೇ ತಾಯಿಯವರ ನಿಧನದಿಂದ ಅಮ್ಮನ ಪ್ರೀತಿಯಿಂದ ವಂಚಿತರಾಗುತ್ತಾರೆ. ವಿದ್ಯಾವಂತ ಕುಟುಂಬದ ಹಿನ್ನಲೆ ಗೌರಮ್ಮನವರಿಗೆ ಇದ್ದುದರಿಂದ ಮಡಿಕೇರಿಯ ಪ್ರತಿಷ್ಟಿತ ಸೆಂಟ್ರಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಆಗಿನ ಕಾಲಕ್ಕೆ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಗಗನ ಕುಸುಮವಾಗಿತ್ತು. ಆದರೆ ಗೌರಮ್ಮನವರಿಗೆ ಕಲಿಯುವ ಆಸೆ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ಮಗು ಎಂದು ತಂದೆಯವರು ಗೌರಮ್ಮನವರ ಆಸೆ ಆಕಾಂಕ್ಷೆಗಳಿಗೆ ನೀರೆರೆದು ಪೋಷಿಸುತ್ತಾರೆ. ಆಗಿನ ಕಾಲಕ್ಕೆ ಹತ್ತನೇ ತರಗತಿಯ ಶಿಕ್ಷಣವನ್ನು ಪೂರೈಸುತ್ತಾರೆ ಗೌರಮ್ಮ. ಕಾನ್ವೆಂಟ್ ಶಿಕ್ಷಣವಾದುದರಿಂದ ಪ್ರಗತಿಪರ ಆಲೋಚನೆಗಳು ಗೌರಮ್ಮನವರಿಗೆ ಬಾಲ್ಯದಿಂದಲೂ ಇತ್ತು. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಕಥೆ ಬರೆಯುವುದರಲ್ಲಂತೂ ತುಂಬಾನೇ ಆಸಕ್ತಿಯನ್ನು ಹೊಂದಿರುತ್ತಾರೆ ಗೌರಮ್ಮ.

ಕೊಡಗಿನ ಸೋಮವಾರ ಪೇಟೆಯ ಎಸ್ಟೇಟ್ ಒಂದರ ಮೆನೇಜರ್ ಆಗಿದ್ದ ಬಿ.ಟಿ.ಗೋಪಾಲಕೃಷ್ಣ ಎಂಬವರನ್ನು ೧೯೨೫ರಲ್ಲಿ ಮದುವೆಯಾಗುತ್ತಾರೆ. ಗೌರಮ್ಮನವರ ಗಂಡ ಸಹ ಆಧುನಿಕ ಮನೋಭಾವನೆಯವರಾಗಿದ್ದುದರಿಂದ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ದಯಪಾಲಿಸುತ್ತಾರೆ. ಟೆನ್ನಿಸ್ ಹಾಗೂ ಈಜುವುದು ಗೌರಮ್ಮನವರ ಮೆಚ್ಚಿನ ಹವ್ಯಾಸವಾಗಿತ್ತು. ೧೯೩೧ರಲ್ಲಿ ಇವರಿಗೆ ವಸಂತ ಎಂಬ ಗಂಡು ಮಗು ಜನಿಸುತ್ತದೆ. ಕೊಡಗಿನಲ್ಲಿ ವಾಸಿಸುತ್ತಿದ್ದುದಕ್ಕೋ ಏನೋ ಇವರಿಗೆ ಜಾತಿ, ಮತ ಹಾಗೂ ಬ್ರಿಟೀಷರ ಕಾಟದ ಸಂಗತಿ ಅಷ್ಟಾಗಿ ತಟ್ಟಲಿಲ್ಲ. ಆದರೆ ಪತ್ರಿಕೆಗಳನ್ನು ಓದುವುದರ ಮೂಲಕ ಇವರು ಪ್ರಚಲಿತ ಸುದ್ದಿಗಳತ್ತ ಗಮನ ಹರಿಸುತ್ತಿದ್ದರು. ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯದ ಹೋರಾಟಗಳಿಂದ ಪ್ರಭಾವಿತರಾಗಿದ್ದರು. 

ಗೌರಮ್ಮನವರಿಗೆ ಸದಾ ತಮ್ಮ ಮನಸ್ಸಿನಲ್ಲಿ ತುಡಿಯುತ್ತಿದ್ದ ಕಥೆಗಳನ್ನು ಬರಹವನ್ನಾಗಿಸಬೇಕೆಂಬ ಆಸೆ. ಅದಕ್ಕಾಗಿ ಬಿಡುವಾದಾಗ ಕಥೆ ಬರೆಯುವುದನ್ನು ಹವ್ಯಾಸ ಮಾಡಿಕೊಳ್ಳುತ್ತಾರೆ. ಡಾ. ಕಾಳೇಗೌಡ ನಾಗೇವಾರ ಇವರು ಗೌರಮ್ಮ ಅವರ ೧೨ ಕಥೆಗಳನ್ನು ಸಂಗ್ರಹಿಸಿ ‘ಜೀವನ ಪ್ರೀತಿ' ಎಂಬ ಹೆಸರಿನಲ್ಲಿ ಹೊರ ತಂದಿದ್ದಾರೆ. ಈ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿದೆ. ಈ ಕಥೆಗಳಲ್ಲಿ ಸರಳ ಜೀವನವನ್ನು ಗೌರಮ್ಮನವರು ಪ್ರತಿಪಾದಿಸಿರುತ್ತಾರೆ. 'ಕಂಬನಿ ಮತ್ತು ಚಿಗುರು' ಇವರ ಮತ್ತೊಂದು ಕಥಾ ಸಂಕಲನ. ಇವರು ‘ ಒಂದು ಪುಟ್ಟ ಚಿತ್ರ', ವಾಣಿಯ ಸಮಸ್ಯೆ, ಹೋಗಿಯೇ ಬಿಟ್ಟಿದ್ದ, ಕೌಸಲ್ಯಾನಂದನ, ಸನ್ಯಾಸಿ ರತ್ನ, ನನ್ನ ಮದುವೆ, ಅದೃಷ್ಟದ ಆಟ ಮೊದಲಾದ ಕಥೆಗಳನ್ನು ಬರೆದು ಓದುಗರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. 

ಗೌರಮ್ಮನವರು ಬರೆದ ಅತ್ಯುತ್ತಮ ಕಥೆ ಎಂದು ವಿಮರ್ಶಕರ, ಓದುಗರ ಮೆಚ್ಚುಗೆಗೆ ಪಾತ್ರವಾದ ಕಥೆಯೆಂದರೆ ‘ಮನುವಿನ ರಾಣಿ'. ಈ ಕಥೆಯು ಗೌರಮ್ಮನವರಿಗೆ ಉತ್ತಮ ಕಥೆಗಾರ್ತಿ ಎಂಬ ಹೆಸರು ತಂದುಕೊಟ್ಟಿತು. ಗೌರಮ್ಮನ ಕಥೆಗಳು ನಮ್ಮ ನಡುವೇ ಇರುವ ಹಲವಾರು ಅನಿಷ್ಟಗಳ ಬಗ್ಗೆ ಹೇಳುತ್ತದೆ. ವರದಕ್ಷಿಣೆ, ವಿಧವಾ ವಿವಾಹ, ವೇಶ್ಯಾವಾಟಿಕೆ ಮುಂತಾದ ವಿಷಯಗಳ ಸುತ್ತವೇ ಕಥೆಗಳು ಇರುವುದರಿಂದ ಓದುಗರಿಗೂ ಇಷ್ಟವಾಗುತ್ತದೆ. ಮನುವಿನ ರಾಣಿಯಲ್ಲಿ ಒಬ್ಬ ವೈದ್ಯ ವೇಶ್ಯಾ ಗೃಹಕ್ಕೆ ಹೋಗಿ ಅಲ್ಲೊಬ್ಬ ವೇಶ್ಯೆಯ ಸ್ನೇಹಿತನಾಗಿರುವ ವ್ಯಕ್ತಿಗೆ ಚಿಕಿತ್ಸೆ ಮಾಡಿ ಅವಳ ಕೃತಜ್ಞತೆಗೆ ಪಾತ್ರನಾಗುವ ಚಿತ್ರಣವಿದೆ. ಆ ಸಮಯದಲ್ಲಿ ಇದು ಬಹಳ ಚರ್ಚಿತವಾದ ಸಂಗತಿಯಾಗಿತ್ತು ಈ ಕಥಾ ವಸ್ತು. ‘ಅಪರಾಧಿ ಯಾರು?’ ಎಂಬುವುದು ಗೌರಮ್ಮನವರ ಮತ್ತೊಂದು ಪ್ರಸಿದ್ಧ ಕಥೆ.

ಗೌರಮ್ಮನವರ ಕಥೆಯ ವಿಮರ್ಶೆ ಪ್ರಕಟವಾಗಿ ಜನರ ಮೆಚ್ಚುಗೆಗೆ ಪಾತ್ರವಾದರೂ, ಗೌರಮ್ಮನಿಗೆ ಹೊಗಳಿಕೆಗಳು ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಅವರಿಗೆ ಬೇಕಾಗಿದ್ದು ನಿಜ ಜೀವನದಲ್ಲಿ ಮಹಿಳೆಯರ ಜೀವನ ಸುಧಾರಣೆ. ಪೊಳ್ಳು ಮಾತುಗಳ ಆಡಂಬರ ಅವರಿಗೆ ಬೇಕಾಗಿರಲಿಲ್ಲ ಎಂಬುವುದು ಅವರ ಈ ನಡೆಯಿಂದ ನಮಗೆ ತಿಳಿದು ಬರುತ್ತದೆ. ಬಹಳ ಸಣ್ಣ ವಯಸ್ಸಿನಲ್ಲೇ ಕಥಾ ಪ್ರಿಯರನ್ನು ಅಗಲಿದ ಗೌರಮ್ಮನವರು ಬರೆದ ಕಥೆಗಳು ೨೧. ಚೆನ್ನಾಗಿ ಈಜಲು ಬರುತ್ತಿದ್ದ ಗೌರಮ್ಮ ನೀರಿನ ಸುಳಿಯಲ್ಲಿ ಸಿಲುಕಿ ನಿಧನ ಹೊಂದಿದ್ದು ಒಂದು ದುರಂತವೇ ಸರಿ. ಆಗ ಅವರ ಪ್ರಾಯ ಕೇವಲ ೨೭ (ಆಗಸ್ಟ್ ೧೩, ೧೯೩೯). ಇವರ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕ ಅಪರೂಪದ ಕಥೆಗಾರ್ತಿಯನ್ನು ಅಕಾಲದಲ್ಲಿ ಕಳೆದುಕೊಂಡಿತು. ಸಾಯುವ ಹಿಂದಿನ ದಿನವೂ ಅವರು ‘ಮುನ್ನಾ ದಿನ' ಎಂಬ ಕಥೆಯನ್ನು ಬರೆದಿದ್ದರು. ಗೌರಮ್ಮನವರಿಗೆ ವರ ಕವಿ ಬೇಂದ್ರೆ, ಮಾಸ್ತಿ, ರಾಜರತ್ನಂ, ದ.ಬಾ.ಕುಲಕರ್ಣಿಯವರ ಆತ್ಮೀಯ ಒಡನಾಟವಿತ್ತು. ಇವರು ದ ರಾ ಬೇಂದ್ರೆಯವರನ್ನು ‘ಕನ್ನಡದ ಶೇಕ್ಸ್ ಪಿಯರ್'ಎಂದು ಕರೆಯುತ್ತಿದ್ದರು. ಸಾಹಿತಿ ದ.ಬಾ.ಕುಲಕರ್ಣಿ ತಮ್ಮ ‘ಹಕ್ಕಿ ನೋಟ' ಪುಸ್ತಕದಲ್ಲಿ ಗೌರಮ್ಮನವರ ಕುರಿತಾಗಿ ಬಹಳ ಸೊಗಸಾಗಿ ಬರೆದಿದ್ದಾರೆ. ಈ ಪುಸ್ತಕದಲ್ಲಿ ಗೌರಮ್ಮ ಮಾತ್ರವಲ್ಲ ಹಲವಾರು ಗಣ್ಯರ ವ್ಯಕ್ತಿ ಚಿತ್ರಣವಿದೆ. ಇದು ಧಾರವಾಡ ಜಿಲ್ಲೆಯ ಶಾಲೆಗಳಲ್ಲಿ ಎಂಟನೇ ತರಗತಿಗೆ ಉಪ ಪಠ್ಯಪುಸ್ತಕವಾಗಿತ್ತು.

ಗೌರಮ್ಮನವರಿಗೆ ಗಾಂಧೀಜಿಯವರ ಜೊತೆಗಿನ ಒಡನಾಟದ ಬಗ್ಗೆ ಬರೆಯಲೇ ಬೇಕು. ಒಮ್ಮೆ ಗಾಂಧೀಜಿಯವರು ಕೊಡಗಿಗೆ ಭೇಟಿ ನೀಡುತ್ತಾರೆ. ಅವರು ಅಲ್ಲಿ ಗೌರಮ್ಮನವರ ಪತಿ ಗೋಪಾಲಕೃಷ್ಣನವರ ಮಾಲೀಕರಾದ ಮಂಜುನಾಥಯ್ಯವರ ಮನೆಯಲ್ಲಿ ವಾಸ್ತವ್ಯ ಹೂಡುತ್ತಾರೆ. ಈ ವಿಚಾರ ತಿಳಿದ ಗೌರಮ್ಮನವರು ಗಾಂಧೀಜಿಯವರು ತಮ್ಮ ಮನೆಗೂ ಬರಬೇಕು ಎಂದು ಹಠ ಹಿಡಿಯುತ್ತಾರೆ ಮತ್ತು ಗಾಂಧೀಜಿಯವರಿಗೆ ಸಂದೇಶ ಕಳಿಸುತ್ತಾರೆ. ಸಮಯದ ಅಭಾವವಿದ್ದುದರಿಂದ ಗಾಂಧೀಜಿಯವರು ಇವರ ಭೇಟಿಗೆ ಅಷ್ಟೊಂದು ಆಸಕ್ತಿ ತೋರಿಸುವುದಿಲ್ಲ. ಅದಕ್ಕೆ ಗೌರಮ್ಮನವರು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಪತ್ರ ಬರೆದು ಕಳುಹಿಸುತ್ತಾರೆ. ಇದನ್ನು ಓದಿದ ಗಾಂಧೀಜಿ ತಕ್ಷಣವೇ ಗೌರಮ್ಮನವರ ಮನೆಗೆ ತೆರಳಿ ಕಿತ್ತಳೆ ಹಣ್ಣುಗಳನ್ನು ನೀಡುವುದರ ಮೂಲಕ ಇವರ ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ಗಾಂಧೀಜಿಯವರ ನಡೆಯಿಂದ ಉತ್ಸಾಹಿತರಾದ ಗೌರಮ್ಮ, ತಮ್ಮ ಮೈಯಲ್ಲಿದ್ದ ಎಲ್ಲಾ ಬಂಗಾರದ ಆಭರಣಗಳನ್ನು ತೆಗೆದು ಕೊಡುತ್ತಾರೆ. ಈ ನಡೆಯಿಂದ ಗಾಂಧೀಜಿ ತುಂಬಾನೇ ಪ್ರಭಾವಿತರಾಗುತ್ತಾರೆ, ಗೌರಮ್ಮನವರ ಗಂಡನ ಕಡೆಗೆ ತಿರುಗಿ “ನಿಮ್ಮದೇನೂ ಅಭ್ಯಂತರವಿಲ್ಲ ತಾನೇ?” ಎಂದು ಕೇಳುತ್ತಾರೆ. ಗೋಪಾಲಕೃಷ್ಣರು ನಗುತ್ತ ಇಲ್ಲ ಎನ್ನುತ್ತಾರೆ.

ಉಡಲು, ತಿನ್ನಲು ಯಾವುದೇ ಕೊರತೆ ಇಲ್ಲವಾದರೂ ಗೌರಮ್ಮ ಕೊನೆಯ ತನಕ ಸರಳವಾದ ಖಾದಿ ಬಟ್ಟೆಯನ್ನೇ ತೊಡುತ್ತಿದ್ದರು. ಕರಿಮಣಿ, ಮೂಗುತಿ, ಕಿವಿಯ ಓಲೆಗಳನ್ನು ಬಿಟ್ಟರೆ ಬೇರೆ ಯಾವ ಆಭರಣವನ್ನೂ ಅವರು ಧರಿಸುತ್ತಿರಲಿಲ್ಲ. ದೇಶಾಭಿಮಾನ ಅವರಲ್ಲಿ ತುಂಬಾನೇ ಇತ್ತು. ಆದರೆ ಅವರ ಅಕಾಲ ಮರಣದಿಂದ ಸಾಹಿತ್ಯಲೋಕ ಉತ್ತಮ ಕಥೆಗಾರ್ತಿಯನ್ನೂ, ದೇಶ ಉತ್ತಮ ನಾಯಕಿಯನ್ನೂ ಕಳೆದುಕೊಂಡಿತು ಎಂದು ಹೇಳಲೇ ಬೇಕಾಗುತ್ತದೆ. 

(ಆಧಾರ)

ಚಿತ್ರ; ಅಂತರ್ಜಾಲ ತಾಣದಿಂದ