ಕೊಡಗು ಕಂಗಾಲು: ಯಾಕೆ? ಮುಂದೇನು?

ಕೊಡಗು ಕಂಗಾಲು: ಯಾಕೆ? ಮುಂದೇನು?

ಮಳೆಯ ರೌದ್ರನರ್ತನದಿಂದಾಗಿ ಕೊಡಗು ಕಂಗಾಲು. ಗುರುವಾರ, ೧೬ ಆಗಸ್ಟ್ ೨೦೧೮ರಿಂದ ಕೇವಲ ೨೪ ಗಂಟೆ ಅವಧಿಯಲ್ಲಿ  ಅಲ್ಲಿ ಧುಮ್ಮಿಕ್ಕಿದ ಮಳೆ ೧೧೯.೪ ಮಿ.ಮೀ. ಇದರಿಂದಾಗಿ ಹಲವು ಹಳ್ಳಿಗಳ ಮುಳುಗಡೆ. ಅಲ್ಲಲ್ಲಿ ಭೂಕುಸಿತ, ಗುಡ್ಡೆ ಜರಿತದಿಂದಾಗಿ ಸಂಪರ್ಕ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ ಧ್ವಂಸವಾಗಿ ಜನಜೀವನ ತತ್ತರ.

೨೦ ಆಗಸ್ಟ್ ೨೦೧೮ರ ಭಾನುವಾರದ ತನಕ ಎಂಟು ಜನರ ಸಾವು ವರದಿಯಾಗಿದ್ದು, ೪,೩೨೦ ಜನರನ್ನು ಜಲಾವೃತವಾದ ಹಳ್ಳಿಗಳಿಂದ ರಕ್ಷಿಸಲಾಗಿದೆ. ಅವರೀಗ ೪೧ ನಿರಾಶ್ರಿತರ ಶಿಬಿರಗಳಲ್ಲಿ ದಿನಗಳೆಯುತ್ತಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿವಾರಣಾ ದಳ ಸಿಬ್ಬಂದಿ, ಭಾರತೀಯ ಸೈನ್ಯ, ನೌಕಾದಳ ಮತ್ತು ವಾಯುದಳದ ಸೈನಿಕರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಹೋಂ ಗಾರ್ಡುಗಳು ಹಗಲಿರುಳೆನ್ನದೆ ಪ್ರಾಣದ ಹಂಗು ತೊರೆದು ಶ್ರಮಿಸಿ ಇಷ್ಟು ಜನರ ಜೀವ ಉಳಿಸಿದ್ದಕ್ಕೆ ದೊಡ್ಡ ಸಲಾಂ. ಕೆಲವರನ್ನು ಹೆಲಿಕಾಪ್ಟರ್ ಮೂಲಕವೂ ರಕ್ಷಿಸಲಾಯಿತು. ರಕ್ಷಣಾ ಕಾರ್ಯದಲ್ಲಿ ನಿರತರಾದ ೧,೧೯೪ ಪರಿಣತರ ಸೇವೆ ಮರೆಯಲಾಗದು.

ಅಲ್ಲಿನ ದಾರುಣ ಸ್ಥಿತಿಯ ಅಂಕೆಸಂಖ್ಯೆಗಳು: ಸುಮಾರು ೩,೦೦೦ ವಿದ್ಯುತ್ ಕಂಬಗಳು, ಕಂಡಕ್ಟರುಗಳು ಮತ್ತು ಟ್ರಾನ್ಸ್ ಫಾರ್ಮರುಗಳು ನೆಲಕ್ಕುರುಳಿವೆ. ೧೨೩ ಕಿಮೀ ಉದ್ದದ ರಸ್ತೆಗಳಿಗೆ ವಿಪರೀತ ಹಾನಿಯಾಗಿದೆ. ೫೮ ಸೇತುವೆಗಳಿಗೆ ಧಕ್ಕೆಯಾಗಿದೆ. ೮೪೫ ಮನೆಗಳು ಕುಸಿದಿವೆ. ಇನ್ನೂ ೭೭೩ ಮನೆಗಳಿಗೆ ಮತ್ತು ೨೪೩ ಸರಕಾರಿ ಕಟ್ಟಡಗಳಿಗೆ ಹಾನಿಯಾಗಿದೆ.

"ಕೊಡಗು ಬಿಡದೆ ಸುರಿಯುತ್ತಿರುವ  ಬಿರುಮಳೆಯಲ್ಲಿ ತೊಯ್ದು ತೊಪ್ಪೆಯಾಗಿದೆ . ಹಲವು ಹಳ್ಳಿಗಳೇ ನೀರಿನಲ್ಲಿ ಮುಳುಗಿವೆ. ನೂರಾರು ಎಕರೆ ಭತ್ತದ ಗದ್ದೆಗಳ ಪೈರು ಕೊಚ್ಚಿ ಹೋಗಿದೆ. ಕಾಫಿ ಮತ್ತು ಕಾಳುಮೆಣಸಿನ ಫಸಲು ಬಿಡಿ, ಅಸಲಿಗೆ ಗಿಡಗಳೇ ಸರ್ವನಾಶವಾಗಿವೆ. ಕೂಲಿ ಕಾರ್ಮಿಕರ ಬದುಕಿನ ಬಂಡಿ ಮುಂದೆ ಸಾಗದೆ ನಿಂತಿದೆ. ಹಲವೆಡೆ ಮನೆಗಳು ಮಗುಚಿ ಬಿದ್ದಿವೆ. ಮನೆಯಂಗಳ ಕೆರೆಯಾಗಿದೆ. ರಸ್ತೆಗಳು ಬಾಯ್ದೆರೆದು ಕಂದಕಗಳಾಗಿವೆ. ಮಣ್ಣಿನ ಗುಡ್ಡೆಗಳು ಭರಭರನೆ ಕುಸಿಯುತ್ತಿವೆ. ಯಾವುದೇ ನೆಟ್-ವರ್ಕ್ ನೆಟ್ಟಗೆ ಕೆಲಸ ಮಾಡುತ್ತಿಲ್ಲ. ನೆಟ್-ವರ್ಕ್ ಮತ್ತು ಚಾರ್ಜ್ ಇಲ್ಲದೆ ಮೊಬೈಲುಗಳು ನಿಶ್ಶಬ್ದವಾಗಿವೆ” ಎಂದು ಅಲ್ಲಿನ ಭಯಾನಕ ಸ್ಥಿತಿಯನ್ನು ಕಟ್ಟಿಕೊಡುತ್ತಾರೆ ಶಿವಕುಮಾರ್. ಒಟ್ಟಿನಲ್ಲಿ ಕೊಡಗಿನ ಜನಜೀವನ ಬುಡಮೇಲಾಗಿದೆ. ಜನರು ತತ್ತರಿಸಿ ಹೋಗಿದ್ದಾರೆ.

ಯಾಕೆ ಹೀಗಾಯಿತು? “ಪಶ್ಚಿಮ ಘಟ್ಟದ ಹೃದಯ ಬಗೆದು ಹತ್ತಾರು ಡ್ಯಾಮ್ ನಿರ್ಮಾಣ ಮತ್ತು ಹೆದ್ದಾರಿ ನಿರ್ಮಾಣ ಮಾಡಲು ಹೊರಟಿರುವುದು ನಿಸರ್ಗದ ನಿಯಮಗಳಿಗಿ ವಿರುದ್ಧವಾದದ್ದು. ಎತ್ತಿನಹೊಳೆ ಯೋಜನೆಯೂ ಪರಿಸರಕ್ಕೆ ಸಾಕಷ್ಟು ಹಾನಿ ಮಾಡುವಂಥದ್ದು. ಅದರಿಂದಲೇ ಇಂತಹ ದುರಂತ ಸಂಭವಿಸುತ್ತದೆ” ಎಂಬುದು ಪಶ್ಚಿಮ ಘಟ್ಟ ಉಳಿಸಲು ಹೋರಾಡುತ್ತಿರುವ ಮಂಗಳೂರಿನ ಸಹ್ಯಾದ್ರಿ ಸಂಚಯದ ಧಿನೇಶ್ ಹೊಳ್ಳರ ವಿವರಣೆ.

ಕೊಡಗು ಮತ್ತು ಕೇರಳದಲ್ಲಿ ಯಾಕೆ ಹೀಗಾಯಿತು? ಎಂಬುದನ್ನು ಘಂಟಾಘೋಷವಾಗಿ ಸಾರಿದ್ದಾರೆ, ಬೆಂಗಳೂರಿನ ಭಾರತೀಯ ವಿಜ್ನಾನ ಸಂಸ್ಥೆಯ ಪರಿಸರ ವಿಜ್ನಾನ ಕೇಂದ್ರದ ಸ್ಥಾಪಕ ಪ್ರೊ. ಮಾಧವ ಗಾಡ್ಗೀಳ್. ಹಿಂದುಸ್ಥಾನ ಟೈಮ್ಸ್ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಪ್ರವಾಸೋದ್ಯಮದ ನೆಪದಲ್ಲಿ ಭೂಕಬಳಿಕೆ, ಅರಣ್ಯ ನಾಶ, ಕಲ್ಲು ಕ್ವಾರಿ, ಪರಿಣಾಮಕಾರಿಯಲ್ಲದ ಪರಿಸರ ನಿಯಮಗಳು - ಇವೆಲ್ಲ ಅಲ್ಲಿನ ಪ್ರವಾಹ ಪ್ರಕೋಪಕ್ಕೆ ಕಾರಣ ಎಂದು ಸ್ಪಷ್ಟ ಪಡಿಸಿದ್ದಾರೆ.

ಪ್ರೊ.ಗಾಡ್ಗೀಳರು ಮುಖ್ಯಸ್ಥರಾಗಿದ್ದ, ಕೇಂದ್ರ ಸರಕಾರ ನಿಯೋಜಿಸಿದ್ದ ಸಮಿತಿ ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ನೀಡಿದ್ದ ಶಿಫಾರಸುಗಳು ೨೦೧೧ರಿಂದ ಜ್ಯಾರಿ ಆಗಬೇಕಿತ್ತು. ಆದರೆ, ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಆ ಶಿಫಾರಸುಗಳನ್ನು ತೀವ್ರವಾಗಿ ವಿರೋಧಿಸಲಾಯಿತು. ಅನಂತರ, ೧೭ ಆಗಸ್ಟ್ ೨೦೧೨ರಂದು ಕೇಂದ್ರ ಸರಕಾರವು ಬಾಹ್ಯಾಕಾಶ ವಿಜ್ನಾನಿ ಡಾ.ಕೆ. ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಇನ್ನೊಂದು ಸಮಿತಿ ರಚಿಸಿ, ಪಶ್ಚಿಮ ಘಟ್ಟ ಸಂರಕ್ಷಣೆ ಬಗ್ಗೆ ವರದಿ ನೀಡುವಂತೆ ಆದೇಶಿಸಿತು. ಈ ಸಮಿತಿಯ  ವರದಿಯಲ್ಲಿರುವ ಕೆಲವು ಪ್ರಮುಖ ಶಿಫಾರಸುಗಳು ಹೀಗಿವೆ: ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ನಿಷೇಧ, ಪರಿಸರಕ್ಕೆ ಹಾನಿ ಮಾಡುವ ಕೈಗಾರಿಕೆಗಳ ನಿಷೇಧ, ನಗರೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ನಿಯಂತ್ರಣ, ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆ ನಿಷೇಧ. ಆದರೆ ಈ ಶಿಫಾರಸುಗಳಿಗೂ ತೀವ್ರ ವಿರೊಧ ವ್ಯಕ್ತವಾಯಿತು. ಕೊನೆಗೆ, ಎರಡೂ ಸಮಿತಿಗಳ ಯಾವುದೇ ಶಿಫಾರಸನ್ನು ಜ್ಯಾರಿ ಮಾಡಲೇ ಇಲ್ಲ!

ಡಾ. ಕಸ್ತೂರಿ ರಂಗನ್ ಸಮಿತಿ ಪಶ್ಚಿಮ ಘಟ್ಟದಲ್ಲಿ ಹಲವು ಪ್ರದೇಶಗಳನ್ನು ಸೂಕ್ಷ್ಮವಲಯ ಎಂದು ಗುರುತಿಸಿದೆ. ಕರ್ನಾಟಕದಲ್ಲಿ ಕೊಡಗು ಸಹಿತ ಹತ್ತು ಜಿಲ್ಲೆಗಳು ಈ ವಲಯದಲ್ಲಿವೆ. ಈ ವಲಯದ ಒಟ್ಟು ೧,೫೫೦ ಗ್ರಾಮಗಳಲ್ಲಿ ೫೩ ಗ್ರಾಮಗಳು ಕೊಡಗು ಜಿಲ್ಲೆಯಲ್ಲಿವೆ. ಅದೇ ಸೂಕ್ಷ್ಮವಲಯದ ಪ್ರದೇಶಗಳಲ್ಲಿ ನಿರಂತರ ಪ್ರಕೃತಿ ನಾಶ ಮಾಡಿದ್ದರ ಪರಿಣಾಮಗಳನ್ನು ಇಂದು ಅನುಭವಿಸಬೇಕಾಗಿದೆ ಎಂದು ವಿಜ್ನಾನಿಗಳು ಖಚಿತವಾಗಿ ಹೇಳುತ್ತಾರೆ.

ಕೊಡಗಿನಲ್ಲಿರುವ ಹೋಮ್-ಸ್ಟೇಗಳ ಸಂಖ್ಯೆ ಸುಮಾರು ೩,೦೦೦. ಅಲ್ಲಿರುವ ಕಂಪೆನಿ ರೆಸಾರ್ಟುಗಳು ಹಲವಾರು. ಇವುಗಳ ನಿರ್ಮಾಣಕ್ಕಾಗಿ , ಅಲ್ಲಿಗೆ ವರುಷವಿಡೀ ಬರುವ ಪ್ರವಾಸಿಗರಿಗೆ ಐಷಾರಾಮಿ ಸೌಲಭ್ಯ ಕಲ್ಪಿಸಲಿಕ್ಕಾಗಿ ಮಾಡಲಾಗಿರುವ ಪ್ರಾಕೃತಿಕ ಅನಾಹುತಗಳು ಒಂದೇ ಎರಡೇ? ಕಾಫಿ, ರಬ್ಬರ್ ಮತ್ತು ಏಲಕ್ಕಿ ತೋಟಗಳನ್ನು ವಿಸ್ತರಿಸಲಿಕ್ಕಾಗಿ ಶತಮಾನಗಳಿಂದ ಉಳಿದಿದ್ದ ಕಾಡುಗಳನ್ನು ನಾಶ ಮಾಡಿದ್ದಕ್ಕೆ ಲೆಕ್ಕವಿದೆಯೇ? ಮನೆಸೈಟುಗಳನ್ನು ಮಾಡಲಿಕ್ಕಾಗಿ ಗುಡ್ಡಗುಡ್ಡಗಳನ್ನೇ ಮಟ್ಟಸ ಮಾಡಿದ್ದಕ್ಕೆ ಮಿತಿಯಿದೆಯೇ? ಗಣಿಗಾರಿಕೆ ಮಾಡುತ್ತ ಪ್ರಕೃತಿಯನ್ನು ಲೂಟಿ ಮಾಡಿದ್ದಕ್ಕೆ ಇತಿಮಿತಿಯೆದೆಯೇ?

ಆದರೆ, ಇಂತಹ ಪ್ರಶ್ನೆಗಳನ್ನು ಕೇಳುವವರನ್ನೆಲ್ಲ ಪರಿಸರವಾದಿಗಳೆಂದು ಹಣೆಪಟ್ಟಿ ಕಟ್ಟಿ, “ಅಭಿವೃದ್ಧಿಯ ವಿರೋಧಿಗಳು” ಎಂದು ದೂಷಿಸಲಾಗುತ್ತದೆ! ಭಾರತದ ಸಂವಿಧಾನದ ಪ್ರಕಾರ ನದಿ-ಸರೊವರ, ಕಾಡು-ಬೆಟ್ಟಗಳನ್ನೆಲ್ಲ ರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂಬ ಸತ್ಯವನ್ನು ಮರೆಮಾಚಲಾಗುತ್ತದೆ!

ಮುಂದೇನು? ಎಂಬ ಪ್ರಶ್ನೆ ಧುತ್ತೆಂದು ಎದುರಾಗಿದೆ. ಕೊಡಗಿನ ಹಾಳಾದ ರಸ್ತೆಗಳನ್ನು ರಿಪೇರಿ ಮಾಡಲು ಮತ್ತು ವಿದ್ಯುತ್ ಸರಬರಾಜು ಹಾಗೂ ಸಂಪರ್ಕ ವ್ಯವಸ್ಥೆ ಸರಿಪಡಿಸಲು ಒಂದು ತಿಂಗಳಾದರೂ ಬೇಕಾದೀತು. ಅದಾದ ನಂತರ ಜನರೂ, ಅಧಿಕಾರಿಗಳೂ, ರಾಜಕಾರಣಿಗಳೂ, ಕಂಟ್ರಾಕ್ಟರುಗಳೂ ಪ್ರಕೃತಿಯನ್ನು ಕೊಳ್ಳೆ ಹೊಡೆಯುವುದನ್ನು ನಿಲ್ಲಿಸದಿದ್ದರೆ, ಮುಂದೆ ಕಾದಿದೆ ಇದಕ್ಕಿಂತ ಭಯಂಕರ ದುರಂತ.

ಹಾಗಾಗಬಾರದು, ನಮ್ಮ ಮಕ್ಕಳು, ಮೊಮ್ಮಕ್ಕಳು ಇಂತಹ ದುರಂತದಲ್ಲಿ ಸಿಲುಕಿ ಕಂಗೆಡಬಾರದು ಎಂದಾದರೆ, ಕನಿಷ್ಠ ಪಕ್ಷ ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕು:
-ಹೆದ್ದಾರಿ, ರೈಲುದಾರಿ, ಡ್ಯಾಮ್ ಇಂತಹ ಬೃಹತ್ ಯೋಜನೆಗಳನ್ನು ಆರಂಭಿಸುವ ಮುನ್ನ ಕೂಲಂಕಷ ಅಧ್ಯಯನ ನಡೆಸಬೇಕು. ಪ್ರೊ. ಮಾಧವ ಗಾಡ್ಗೀಳ್ ಅವರಂತಹ ವಿಜ್ನಾನಿಗಳು, ಪರಿಣತರು ಮತ್ತು ಪರಿಸರ ಹೋರಾಟಗಾರರ ಅಭಿಪ್ರಾಯಗಳಿಗೆ ಗೌರವ ನೀಡಬೇಕು. ಅವರು ನೀಡುವ ಸಲಹೆಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು.
-ಎಲ್ಲಾದರೂ ಕಾಡು ಕಡಿದರೆ, ಅದರ ಇಮ್ಮಡಿ ವಿಸ್ತಾರದ ಪ್ರದೇಶದಲ್ಲಿ (೧೦ ಕಿಮೀ ಫಾಸಲೆಯಲ್ಲಿ) ಕಾಡು ಬೆಳೆಸಬೇಕು. ಈ ನಿಯಮ ಮುರಿದರೆ, ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಶಿಕ್ಷಿಸಬೇಕು.
-ಯಾವುದೇ ರೀತಿಯ ಭೂಪರಿವರ್ತನೆಯನ್ನು ನಿಷೇಧಿಸಬೇಕು.
-ಕುಸಿತದ ಅಪಾಯವಿರುವ ಗುಡ್ಡಗಳಲ್ಲಿ ಮನೆ ಅಥವಾ ರೆಸಾರ್ಟ್ ಕಟ್ಟಲು ಅನುಮತಿ ನೀಡಬಾರದು.
-ಸುಸ್ಥಿರ ಅಭಿವೃದ್ಧಿಗೆ ಪೂರಕವಲ್ಲದ ಗಣಿಗಾರಿಕೆ ಇತ್ಯಾದಿ ಚಟುವಟಿಕೆಗಳ ಮೂಲಕ ಪ್ರಕೃತಿಯ ಲೂಟಿಯನ್ನು ಸಂಪೂರ್ಣ ನಿಷೇಧಿಸಬೇಕು.

ನಾವು ಪ್ರಕೃತಿಗೆ ಮಾಡಿದ ಅನ್ಯಾಯಗಳಿಂದ ಪಾಠ ಕಲಿಯದಿದ್ದರೆ, ಪ್ರಕೃತಿಯೇ ನಮಗೆ ಮರೆಯಲಾಗದ ಪಾಠ ಕಲಿಸುತ್ತದೆ, ಅಲ್ಲವೇ?