ಕೊಡಿಯಾಲ ತೇರು (ಮಂಗಳೂರು ರಥೋತ್ಸವ)
ಮಂಗಳೂರಿನ ಸುಪ್ರಸಿದ್ಧ ವಾರ್ಷಿಕ ಉತ್ಸವ ಕೊಡಿಯಾಲ ತೇರು ಅಥವಾ ಮಂಗಳೂರು ರಥೋತ್ಸವ. ಇದು ಗೌಡಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು (ಕೊಂಕಣಿಗರು) ವರುಷವಿಡೀ ನಿರೀಕ್ಷಿಸುವ ಸಂಭ್ರಮದ ಆಚರಣೆ.
ಇತ್ತೀಚೆಗೆ, ೧ ಫೆಬ್ರವರಿ ೨೦೨೦ರಂದು ಜರಗಿದ ಮಂಗಳೂರು ರಥೋತ್ಸವ ಕೊಂಕಣಿಗರ ಭಾವಭಕ್ತಿ ತುಂಬಿದ ಭಾಗವಹಿಸುವಿಕೆಗೆ ಮಗದೊಮ್ಮೆ ಸಾಕ್ಷಿಯಾಯಿತು. ಶತಮಾನಗಳ ಮುಂಚೆ ತಮ್ಮ ಮೂಲನೆಲೆ ತೊರೆದು ದಕ್ಷಿಣಕ್ಕೆ ಸಾಗಿ ಬಂದ ಈ ಸಮುದಾಯದವರು ಮಂಗಳೂರು ಸಹಿತ ಪಶ್ಚಿಮ ಕರಾವಳಿಯ ಹಲವಾರು ಊರುಗಳಲ್ಲಿ ನೆಲೆಯೂರಿದ್ದಾರೆ. ವ್ಯಾಪಾರ ವಹಿವಾಟಿನಲ್ಲಿ ಎಲ್ಲ ಊರುಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ.
ತಾವು ನೆಲೆನಿಂದ ಊರುಗಳಲ್ಲೆಲ್ಲ ತಮ್ಮ ಆರಾಧ್ಯ ದೇವರು ಶ್ರೀ ವೆಂಕಟರಮಣನ ದೇವಸ್ಥಾನ ಸ್ಥಾಪಿಸಿ, ವರುಷಕ್ಕೊಮ್ಮೆ ವಿಜೃಂಭಣೆಯಿಂದ ರಥೋತ್ಸವ ಜರಗಿಸುವುದು ಅವರ ಸಂಪ್ರದಾಯ. ಈ ವಾರ್ಷಿಕ ರಥೋತ್ಸವಗಳು ಈಗ ಬೇರೆಬೇರೆ ನಗರಪಟ್ಟಣಗಳಲ್ಲಿ ನೆಲೆಸಿರುವ ಆಯಾ ಊರಿನವರಿಗೆ ವರುಷಕ್ಕೊಮ್ಮೆ ಒಟ್ಟು ಸೇರಲು, ಕುಶಲೋಪರಿ ನಡೆಸಲು, ದೇವರ ಸೇವೆ ಮಾಡಲು, ಸಹಭೋಜನ ಸ್ವೀಕರಿಸಲು ಅದ್ಭುತ ಅವಕಾಶ ಒದಗಿಸುತ್ತವೆ.
ಮಂಗಳೂರಿನ ರಥಬೀದಿ ಕೊಂಕಣಿಗರ ಧಾರ್ಮಿಕ ಮತ್ತು ಸಾಮಾಜಿಕ ರಾಜಧಾನಿ ಎನ್ನಬಹುದು. ಇಲ್ಲಿನ ಶ್ರೀ ವೀರವೆಂಕಟರಮಣ ದೇವಸ್ಥಾನದ ಎದುರಿನ ಚೌಕ “ಟೆಂಪಲ್ ಸ್ಕ್ವಾರ್” ಎಂದೇ ಜನಜನಿತ. ಇಲ್ಲಿ ಒಟ್ಟಾಗುವ ನಾಲ್ಕು ರಸ್ತೆಗಳ ಉದ್ದಕ್ಕೂ ನೆಲೆಸಿವೆ ನೂರಾರು ಗೌಡಸಾರಸ್ವತ ಕುಟುಂಬಗಳು. ಪ್ರತಿ ವರುಷ ರಥೋತ್ಸವದ ಹೆಸರಿನಲ್ಲಿ ಮಾಘ ಮಾಸದ ತದಿಗೆಯಿಂದ ಅಷ್ಟಮಿ ವರೆಗೆ ಇಲ್ಲಿ ಒಂದು ವಾರದವಧಿ ಉತ್ಸಾಹದ, ಉಲ್ಲಾಸದ ವಾತಾವರಣ. ಮಾಘ ಶುದ್ಧ ರಥಸಪ್ತಮಿಯಂದು ರಥೋತ್ಸವ. ಅಲಂಕೃತ ರಥದಲ್ಲಿ ಶ್ರೀ ವೀರವೆಂಕಟರಮಣನ ಉತ್ಸವಮೂರ್ತಿ ಕುಳ್ಳಿರಿಸಿ, ಪೂಜಿಸಿ, ರಥ ಎಳೆಯುವ ಉತ್ಸವ. ಈ ಬಾರಿ ಕಾಶಿಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರು ದೇವರ ಪೂಜೆ ಗೈದರು. ಆಗ ದೇವಸ್ಥಾನದ ಎದುರಿನ ಚೌಕದಲ್ಲಿ ಕಿಕ್ಕಿರಿದ ಜನಸಂದಣಿ.
ಈ ಸಂದರ್ಭದಲ್ಲಿ, ಸಾವಿರಾರು ಜನರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ನೋಡಿಯೇ ನಂಬಬೇಕು. ಇದು ಮತ್ತು ಇತರ ಎಲ್ಲ ಧಾರ್ಮಿಕ ಆಚರಣೆಗಳು ಸುಸೂತ್ರವಾಗಿ ನೇರವೇರಲಿಕ್ಕಾಗಿ ಸುಮಾರು ಎರಡು ಸಾವಿರ ಸ್ವಯಂಸೇವಕರು ಟೊಂಕ ಕಟ್ಟಿ ನಿಲ್ಲುತ್ತಾರೆ. ಹಣತೆ ಹಚ್ಚುವುದರಿಂದ ತೊಡಗಿ, ಭಜನೆ ಮಾಡುವುದು, ದೀವಟಿಗೆ ಹಿಡಿಯುವುದು, ಪಲ್ಲಕ್ಕಿ ಹೊರುವುದು, ರಥ ಎಳೆಯುವುದು - ಈ ಕಾಯಕಗಳಲ್ಲಿ ಎಲ್ಲಿಲ್ಲದ ಉತ್ಸಾಹದಿಂದ ಭಾಗವಹಿಸುತ್ತಾರೆ ಸ್ವಯಂಸೇವಕರು. ಹಾಗೆಯೇ ಅನ್ನಸಂತರ್ಪಣೆಯ ವ್ಯವಸ್ಥೆಗಾಗಿ ತರಕಾರಿ ಕತ್ತರಿಸುವುದರಿಂದ ಶುರು ಮಾಡಿ, ಭೋಜನ ಬಡಿಸುವ ಹಾಗೂ ಶುಚಿ ಮಾಡುವ ವರೆಗೆ ಎಲ್ಲ ಕೆಲಸಗಳಿಗೂ ತಮ್ಮ ಮನೆಯ ಕೆಲಸವೆಂಬಂತೆ ತಾದಾತ್ಮ್ಯದಿಂದ ಕೈಜೋಡಿಸುತ್ತಾರೆ.
ಗೌಡಸಾರಸ್ವತ ಸಮುದಾಯದವರ ಕೊಡುಗೈ ದಾನದಿಂದಲೇ ಈ ಎಲ್ಲ ಧಾರ್ಮಿಕ ಚಟುವಟಿಕೆಗಳೂ ಆಚರಣೆಗಳೂ ಜರಗುತ್ತವೆ ಎಂಬುದು ವಿಶೇಷ. ತರಕಾರಿಗಳು, ಸಕ್ಕರೆ, ಅಕ್ಕಿ, ಎಳೆಹಲಸಿನ ಕಾಯಿ ಇವನ್ನೆಲ್ಲ ಪ್ರತಿ ವರುಷವೂ ಮೂಟೆಗಟ್ಟಲೆ ದಾನ ನೀಡುವವರಿದ್ದಾರೆ. ಆದರೆ ಅವರಲ್ಲಿ ಯಾರೂ ಪ್ರಚಾರಕ್ಕಾಗಿ ಇದನ್ನು ಮಾಡುತ್ತಿಲ್ಲ. "ಕೆರೆಯ ನೀರನು ಕೆರೆಗೆ ಚೆಲ್ಲುವ” ಭಾವದಿಂದ ತುಂಬು ಮನದಿಂದ ರಥೋತ್ಸವಕ್ಕಾಗಿ ದಾನ ನೀಡುತ್ತಾರೆ.
ಮಂಗಳೂರು ರಥೋತ್ಸವದ ಅಂಗವಾಗಿ ಜರಗುವ ಬೆಳ್ಳಿ ಪಲ್ಲಂಕಿ ಉತ್ಸವ, ಬೆಳ್ಳಿ ಲಾಲ್ಕಿ ಉತ್ಸವ, ಸ್ವರ್ಣ ಪಲ್ಲಂಕಿ ಉತ್ಸವ ಇತ್ಯಾದಿ ಉತ್ಸವಗಳಲ್ಲಿ ಪ್ರತಿಯೊಂದರಲ್ಲಿಯೂ ಅಡಕವಾಗಿರುವ ಸಂಪ್ರದಾಯಬದ್ಧ ಆಚರಣೆಗಳು ತಲೆಮಾರಿನಿಂದ ತಲೆಮಾರಿಗೆ ಚಾಚೂ ತಪ್ಪದೆ ದಾಟಿ ಬರುತ್ತಿವೆ.
ಮೂರು ಆಯಾಮಗಳಲ್ಲಿ ಕೊಡಿಯಾಲ ತೇರು ಕೊಂಕಣಿ ಸಮಾಜಬಾಂಧವರ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟುಗಳನ್ನು ಭದ್ರ ಪಡಿಸುತ್ತದೆ ಎನ್ನಬಹುದು. ರಥೋತ್ಸವದ ಸಮಯದಲ್ಲಿ ಭೇಟಿಯಾಗುವ ದೂರದೂರದೂರುಗಳ ಬಂಧುಬಾಂಧವರ ಸಾಮಾಜಿಕಬಂಧ ವರುಷದಿಂದ ವರುಷಕ್ಕೆ ಬಲಗೊಳ್ಳುತ್ತದೆ. ರಥೋತ್ಸವದ ವಿವಿಧ ದಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುವ ಮೂಲಕ ಧಾರ್ಮಿಕ ಮೌಲ್ಯಗಳು ಹಾಗೂ ನಂಬಿಕೆಗಳು ಭದ್ರವಾಗುತ್ತವೆ. ರಥೋತ್ಸವದ ಸೇವಾಕಾರ್ಯಗಳಲ್ಲಿ ಅಪ್ಪಟ ಸೇವಾ ಮನೋಭಾವದಿಂದ ಹಾಗೂ ಭಗವಂತನಿಗೆ ಅರ್ಪಣಾ ಭಾವದಿಂದ ಪಾಲ್ಗೊಳ್ಳುವ ಮೂಲಕ ಎಲ್ಲರೂ ಉತ್ತಮ ಸಂಸ್ಕಾರ ಪಡೆಯಲು ಅನುವಾಗುತ್ತದೆ.
ರಥೋತ್ಸವದ ಮರುದಿನ ನಡೆಯುವ ಓಕುಳಿಯಲ್ಲಿ ಎಲ್ಲವನ್ನೂ ಮರೆತು ಬಣ್ಣದೆರಚಾಟದಲ್ಲಿ ಭಾಗಿಯಾಗುವ, ಮಕ್ಕಳಿಂದ ತೊಡಗಿ ವೃದ್ಧರ ವರೆಗಿನ ಕೊಂಕಣಿ ಸಮಾಜಬಾಂಧವರನ್ನು ಕಾಣುವಾಗ, ರಥದ ಚಕ್ರಗಳಂತೆ ನಿರಂತರವಾಗಿ ಮುನ್ನಡೆಯುವ ಸಮುದಾಯವೊಂದರ ಚಿತ್ರಣ ಅನಾವರಣಗೊಳ್ಳುತ್ತದೆ.
ಫೋಟೋ ಕೃಪೆ: “ಉದಯವಾಣಿ" ದಿನಪತ್ರಿಕೆ, ೦೨.೦೨.೨೦೨೦