ಕೊನೆಗೂ ಸಿಕ್ಕಿತು ಕೃತಜ್ಞತೆಯ ಅವಕಾಶ
ನಾನು ಕಾಲೇಜಿಗೆ ಸೇರುವುದಕ್ಕೆ ಅಡ್ಡಿಯಾದ ಅಂಶಗಳು ಯಾವುವು ಎಂಬುದರಲ್ಲಿ ಮೇಲ್ನೋಟಕ್ಕೆ ಕಾಣುವಂತಹುದು ನನ್ನ ಅಪ್ಪನ ಸಂಪಾದನೆ. ಶಾಲಾ ಮಾಸ್ತರಿಕೆಯ ಅಂದಿನ ಸಂಬಳದಲ್ಲಿ ಕಾಲೇಜು ಕಲಿಯುವ ಸಾಧ್ಯತೆಗೆ ಅಪ್ಪನಿಗೆ ನೆರವಾಗಲು ಸಾಧ್ಯವಿಲ್ಲ. ಯಾಕೆಂದರೆ ಹೈಸ್ಕೂಲಿನಲ್ಲಿಯೂ ನನ್ನ ಓದಿಗೆ ಫೀಸು ಕಟ್ಟಬೇಕಿತ್ತು. ಅದನ್ನು ನಾನು ಯಾವತ್ತೂ ಸರಿಯಾದ ಸಮಯಕ್ಕೆ ಕಟ್ಟುತ್ತಿರಲಿಲ್ಲ. ವಿಳಂಬದ ರಿಯಾಯಿತಿಯ ದಿನಗಳೂ ದಾಟಿ `ತಡವಾಗುತ್ತದೆ' ಎಂಬ ಮಾತನ್ನು ಕ್ಲಾರ್ಕ್ ಭಾಸ್ಕರ ರಾಯರಲ್ಲಿ ಅನೇಕ ಬಾರಿ ವಿನಂತಿಸಿಕೊಂಡ ನೆನಪು ನನ್ನದು. ಈ ಹಿನ್ನೆಲೆಯಲ್ಲಿ ನನಗೂ ಅಪ್ಪನ ಪರಿಸ್ಥಿತಿಯ ಅರಿವು ಇತ್ತು. ಅಮ್ಮ ಅಸಹಾಯಕಿ. ಎರಡನೆಯದು ಆಗ ಹುಡುಗಿಯರು ಕಾಲೇಜು ಸೇರುವುದಕ್ಕಿದ್ದ ಕಾಲೇಜು ಎರಡೇ. ಒಂದು ಸಂತ ಆ್ಯಗ್ನೆಸ್. ಇನ್ನೊಂದು ಸರಕಾರಿ ಕಾಲೇಜು. ಸಂತ ಆ್ಯಗ್ನೆಸ್‍ಗೆ ಸೇರಲು ತೊಡಕು ಮತ್ತೆ ಅದೇ ಹಣ. ಅಲ್ಲಿಯ ವೆಚ್ಚ ದುಬಾರಿ ಎನ್ನುವುದಾದರೆ ಸರಕಾರಿ ಕಾಲೇಜು ಅಲ್ಲಿನ ವಿದ್ಯಾರ್ಥಿಗಳ ಅಶಿಸ್ತಿನ ಕಾರಣದಿಂದ ಹೆಣ್ಣುಮಕ್ಕಳನ್ನು ಕಳುಹಿಸುವುದಕ್ಕೆ ಹೆತ್ತವರಿಗಿದ್ದ ಆತಂಕ. ಆದರೆ ಆ ಆತಂಕವನ್ನು ನಿವಾರಿಸಿ ಕೊಳ್ಳುವಲ್ಲಿಯೂ ನಮ್ಮ ಮನೆಯಲ್ಲೇ ಒಳ್ಳೆಯ ಸಮರ್ಥನೆಯ ಭರವಸೆಯಿತ್ತು. ಅದೇನೆಂದರೆ, ಅ.ಬಾ. ಶೆಟ್ಟಿ ಪೊಳಲಿ ಎಂದು ಖ್ಯಾತಿ ಪಡೆದ ಬಾಲಕೃಷ್ಣ ಶೆಟ್ಟಿ ಅಂದರೆ ನನ್ನ ಪ್ರೀತಿಯ ಬಾಲಣ್ಣ ಪಿ.ಯು.ಸಿ. ತರಗತಿಯಿಂದ ಪದವಿವರೆಗಿನ ಕಲಿಕೆಯ ದಿನಗಳಲ್ಲಿ ನಮ್ಮ ಮನೆಯಲ್ಲಿದ್ದೇ ಓದಿದವರು. ಜೊತೆಗೆ ಅವರು ತನ್ನ ಪದವಿಯ ಕೊನೆಯ ವರ್ಷದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿದ್ದರು. ಆ ಕಾಲದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ಎಂದರೆ ದುಬಾರಿ ವೆಚ್ಚದ ಆಡಂಬರದ ಸ್ಪರ್ಧೆಯೂ ಆಗಿತ್ತು. ಅದಕ್ಕೆ ಸವಾಲು ಎಂಬಂತೆ ಬಹಳ ಸರಳವಾದ ವಿಧಾನದಿಂದ ತನ್ನ ಪ್ರತಿಭೆ ಹಾಗೂ ಉತ್ತಮಿಕೆಯ ಗುಣದಿಂದ ಗೆದ್ದು ಬಂದವರು ನನ್ನಣ್ಣ. ಅವರನ್ನು ಕರೆಸಿ ಅಪ್ಪನಿಗೆ ಹೇಳಿಸಿದ್ದಾಯಿತು. ಅಪ್ಪ ಒಪ್ಪಿದರು. ನನ್ನ ಕಾಪಿಕಾಡಿನಲ್ಲಿದ್ದ ಹೈಸ್ಕೂಲಿನ ಸಹಪಾಠಿಗಳು ಜೊತೆ ಸೇರಿ ಸರಕಾರಿ ಕಾಲೇಜಿನ ಪ್ರವೇಶ ಪತ್ರ ತಂದು ತುಂಬಿ ನೀಡಿದ್ದಾಯಿತು. ಸಂದರ್ಶನಕ್ಕೆ ಬರಲು ಕಾರ್ಡು ಬಂದಾಯ್ತು.
ಆದರೆ ಕಟ್ಟಬೇಕಾದ ಫೀಸಿಗೇನು ಮಾಡುವುದು? ಈ ಮೇಲಿನ ಎಲ್ಲ ವಿಚಾರಗಳು ಹಬಿನಮ್ಮನಿಗೆ ನನ್ನಿಂದ, ಅಮ್ಮನಿಂದ ತಿಳಿದಿತ್ತು. ಕಾರ್ಡು ಬಂದದ್ದನ್ನು ತಿಳಿಸಿ, ಹಣದ ಬಗೆಗಿನ ಸಮಸ್ಯೆಯ ಮಾತನಾಡಿದಾಗ ಕೂಡಲೇ ``ಚಿಂತಿಸಬೇಡ, ಗ್ರೆಟ್ಟಾ ಬಾಯಿಯಲ್ಲಿ ನೀನೇ ಬಂದು ಕೇಳು. ನಾನೂ ಹೇಳುತ್ತೇನೆ' ಎಂದವರೇ ತನ್ನ ಸಂಚಿಯಿಂದ ಒಂದಿಷ್ಟು ಮೊತ್ತ ತೆಗೆದು ಕೈಗಿಟ್ಟೇ ಬಿಟ್ಟರು. ಗ್ರೆಟ್ಟಾ ಬಾಯಿಗೂ ವಿಷಯ ತಿಳಿಸಿ ಅದಕ್ಕೆ ಬೇಕಾದ ಉಳಿದ ಮೊತ್ತವನ್ನು ಒದಗಿಸಿಕೊಟ್ಟರು. ಇವತ್ತು ಆ ಮೊತ್ತ ಅತ್ಯಂತ ಚಿಕ್ಕದಾಗಿ ಕಾಣಬಹುದು. ಆದರೆ, ಅಂದು ಆ ಸಂದರ್ಭದಲ್ಲಿ ನನ್ನ ಪಾಲಿಗೆ ದೊಡ್ಡ ನಿಧಿಯೇ ಸಿಕ್ಕಿದಂತಾಯ್ತು. ಆ ಮೊತ್ತ ರೂಪಾಯಿ ಐವತ್ತಮೂರು, ಎಪ್ಪತ್ತೈದು ಪೈಸೆ. ಈ ಮೊತ್ತವನ್ನು ನಾನು ಮುಂದೆ ಅಪ್ಪ ಕೊಟ್ಟಾಗ ಹಿಂದಿರುಗಿಸಿರಬಹುದು. ಆದರೆ ಸಕಾಲದ ಆ ನೆರವು ನನ್ನ ಜೀವನದಲ್ಲಿ ಎಷ್ಟೊಂದು ಮಹತ್ವದ್ದು ಎನ್ನುವ ಅರಿವು ನನಗಿದೆ. ಆ ಕೃತಜ್ಞತೆಯ ಭಾರಕ್ಕೆ ನನ್ನ ತಲೆ ಬಾಗಿದೆ. ಅದು ಶ್ರೀಮಂತಿಕೆಯ ಅಹಂಕಾರದಿಂದ ಕೊಟ್ಟುದಲ್ಲ. ಪ್ರೀತಿವಿಶ್ವಾಸಗಳ ಅಭಿವ್ಯಕ್ತಿ. ಇದರ ಜೊತೆಯಲ್ಲಿ ಬದುಕಿ ನಲ್ಲಿ ಯಾವ ಅಗತ್ಯಕ್ಕೆ ಸಾಲ ಮಾಡಬೇಕು. ಹೇಗೆ ತೀರಿಸಬೇಕು ಎಂಬ ಮೊದಲ ಪಾಠ ನನಗಾಯ್ತು. ಆಗ ನನಗೆ ಸ್ತ್ರೀವಾದ, ಸಬಲೀಕರಣ ಎನ್ನುವ ಯಾವ ಪರಿಕಲ್ಪನೆಗಳ ಪರಿಚಯವೂ ಇರಲಿಲ್ಲ. ಅಂತಹುದರಲ್ಲಿ ಹಬಿನಮ್ಮ ಆರ್ಥಿಕ ಸಬಲೀಕರಣದ, ಸಹೋದರಿತ್ವದ ಮೊದಲ ಉದಾಹರಣೆಯಾಗಿ ನನ್ನ ಮನಸ್ಸಿನಲ್ಲಿ ಹಸಿರಾಗಿ ಉಳಿದಿದ್ದಾರೆ. ಇಷ್ಟೇ ಅಲ್ಲ ನಾನು ಕಾಲೇಜಿಗೆ ನಡೆದುಕೊಂಡೇ ಹೋಗಿ ಬರುತ್ತಿದ್ದೆ. ಒಮ್ಮೊಮ್ಮೆ ಅನಿವಾರ್ಯ ಕಾರಣಗಳಿಂದ ನಡೆದು ಹೋಗಲು ಸಾಧ್ಯವಿಲ್ಲ ಎಂದು ತಿಳಿದರೆ ಮತ್ತೆ ಅದೇ ಸಂಚಿಯಿಂದ ನನಗೆ ಏಳು ಏಳು ಪೈಸೆ ಒಟ್ಟು 14 ಪೈಸೆಯನ್ನು ಕೊಟ್ಟು ಹೋಗು ಕಾಲೇಜು ತಪ್ಪಿಸಬೇಡ ಎನ್ನುತ್ತಿದ್ದ ಹಬಿನಮ್ಮ ನನ್ನ ಯಾವ ಜನ್ಮದ ಬಂಧು ಎಂಬ ಪ್ರಶ್ನೆ ಅಸಹಜ. ಅವರು ನನ್ನ ಈ ಜನ್ಮದ ಬಂಧುವೇ ಅಲ್ಲವೇ !
ಹಬಿನಮ್ಮನವರ ಮನೆಯಲ್ಲಿ ನಡೆದ ಮೂವರು ಗಂಡುಮಕ್ಕಳ ಮುಂಜಿ ಮದುವೆ, ತಮ್ಮ ಉಮರಣ್ಣನ ಮದುವೆ, ಮುಂದೆ ನಾವು ಬಿಜೈಯಲ್ಲಿ ಇಲ್ಲದಾಗಲೂ ನಡೆದ ಅವರ ಹೆಣ್ಣುಮಕ್ಕಳ ಮದುವೆ ಅವರ ಮನೆಯಲ್ಲೇ ನಡೆದಾಗ ನಾನು ನನ್ನ ಅಪ್ಪ, ಅಮ್ಮನ ಸಹಿತ ಭಾಗವಹಿಸಿದವಳು. ಈ ಸಂದರ್ಭದಲ್ಲಿ ನನಗೆ ನೆನಪಿರುವ ಅಂಶ ಎಂದರೆ ಅವರೇ ನಿಂತು ಮಾಡಿದ ಮಾಡಿಸಿದ ವೆಜ್ ಬಿರಿಯಾನಿ, ತುಪ್ಪದನ್ನ ಹಾಗೆಯೇ ಟೊಮೆಟೋ ಸಾರು. ಇವುಗಳ ರುಚಿಯನ್ನು ಇವತ್ತಿಗೂ ಮರೆಯಲಾರೆ. ನಾವು ಸಸ್ಯಾಹಾರಿಗಳಾಗಿದ್ದರಿಂದ ಅವರ ಮಾಂಸದಡುಗೆಯ ರುಚಿ ತಿಳಿದಿಲ್ಲವಾದರೂ ನಮ್ಮ ನೆರೆಯ ಕ್ರಿಶ್ಚಿಯನ್ ಮಂದಿ ಹೊಗಳುತ್ತಿದ್ದುದನ್ನು ಕೇಳಿದ್ದೇನೆ. ಇಂತಹ ಹಬಿನಮ್ಮನನ್ನು ಮುಂದೆಯೂ ಆಗಾಗ ಕಾಣಲು ಹೋಗುತ್ತಿದ್ದುದುಂಟು. ಆದರೆ ನಾನು ಮದುವೆಯಾಗಿ ಬೇರೆ ಬೇರೆ ಊರುಗಳಲ್ಲಿದ್ದುದು, ಹಾಗೆಯೇ ನನ್ನ ಅಪ್ಪ ಅಮ್ಮನೂ ಬಿಜೈಯಲ್ಲಿ ಇಲ್ಲದೆ ಇದ್ದುದು ಮತ್ತು ನಾನು ಪ್ರಾಂಶುಪಾಲೆಯಾದ ಹಿನ್ನೆಲೆಯಲ್ಲಿ ಕಳೆದ ಹನ್ನೆರಡು ವರ್ಷಗಳಲ್ಲಿ ಅವರನ್ನು ಭೇಟಿಯಾಗಲಿಲ್ಲ. ನಿವೃತ್ತಳಾದ ಬಳಿಕ ಅವರ ಮನೆಯ ಕಡೆ ಹೋದರೆ ಗ್ರೆಟ್ಟಾಬಾಯಿಯ ಮನೆ ಹಿತ್ತಿಲು ಯಾರಿಗೋ ಮಾರಾಟವಾಗಿ ಆ ಹಿತ್ತಿಲು ಹಾಳುಕೊಂಪೆಯಂತೆ ಆಗಿತ್ತು. ನಮ್ಮ ಇನ್ನೊಬ್ಬ ಆತ್ಮೀಯರಾದ ಲೂಸಿಬಾಯಿಯವರಿಗೂ ಅವರೆಲ್ಲಿಗೆ ಹೋಗಿದ್ದಾರೆ ಎನ್ನುವುದು ಖಚಿತವಾಗಿ ತಿಳಿದಿರಲಿಲ್ಲ. ಎಲ್ಲೋ ಮಂಗಳೂರಲ್ಲಿ ಫ್ಲಾಟಲ್ಲಿ ಇದ್ದಾರೆ. ಉರ್ವದಲ್ಲಿರಬೇಕು ಎಂದು ತಿಳಿಸಿದರು. ಸಾಹೇಬರು ತೀರಿ ಹೋದುದು, ಹುಡುಗರು ಗಲ್ಫ್ ದೇಶಗಳಲ್ಲಿ ಉದ್ಯೋಗದಲ್ಲಿರುವುದು, ಹೆಣ್ಣುಮಕ್ಕಳೆಲ್ಲರಿಗೆ ಮದುವೆಯಾಗಿರುವುದು ನನಗೂ ತಿಳಿದದ್ದೇ ಆಗಿತ್ತು. ಈಗ ಅವರನ್ನು ಹುಡುಕುವುದು ಹೇಗೆ? ಯಾಕೆಂದರೆ ನನಗೆ ಅವರ ಹೆಸರು ಖುಲ್ಸುಮ್ ಎಂದು ಅದುವರೆಗೂ ಗೊತ್ತಿರಲಿಲ್ಲ. ನಾವು ಕರೆಯುತ್ತಿದ್ದುದು ಹಬಿನಮ್ಮನೆಂದೇ ಅಲ್ಲವೇ? ಹಬಿನಮ್ಮ ಎನ್ನುವುದು ನಮ್ಮ ಸಂಬೋಧನೆಯೇ ಹೊರತು ಈ ಹೆಸರಿನಿಂದ ಹೇಗೆ ಹುಡುಕಲಿ? ಅವರನ್ನು ಕಾಣಲೇಬೇಕೆಂಬ ಒತ್ತಡ, ಕಾಣದೇ ವಿಧಿಯಿಲ್ಲ ಎಂಬಂತಹ ಮನಸ್ಥಿತಿ. ಯಾರ್ಯಾರನ್ನೋ ಅವರ ಮಕ್ಕಳ ಹೆಸರ ಮೂಲಕ ವಿಚಾರಿಸಿದೆ. ಕಾಪಿಕಾಡು ರಸ್ತೆ ತುಂಬಾ ಬದಲಾಗಿದೆ. ಅವರ ಗುರುತು ಪರಿಚಯವಿದ್ದ ಹಿರಿಯರು ಇದ್ದಾರೆ. ಆದರೆ ಅವರೆಲ್ಲಿ ಎನ್ನುವುದು ತಿಳಿದಿಲ್ಲ. ಜೊತೆಗೆ ಯಾರೂ ಮುಸ್ಲಿಂ ಬಾಂಧವರು ಈ ಊರಲ್ಲಿ ಇರಲಿಲ್ಲವಲ್ಲಾ? ಕೆಲವರ ಸೂಚನೆಯಂತೆ ಹಲವಾರು ಫ್ಲ್ಯಾಟ್ ಹತ್ತಿ ಇಳಿದೆ. ಇತ್ತೀಚಿನ ದಿನಗಳ ಬೆಳವಣಿಗೆಯಲ್ಲಿ ಒಂದು ಧರ್ಮದ, ಒಂದು ಕೋಮಿನ ಜನಗಳು ಒಂದೇ ಫ್ಲಾಟ್‍ನಲ್ಲಿರುವ ಅನಿವಾರ್ಯತೆ ಮಂಗಳೂರಲ್ಲಿ ಸೃಷ್ಟಿಯಾಗಿದೆಯಲ್ಲಾ? ಈ ಹಿನ್ನೆಲೆಯಲ್ಲಿ ಮುಸ್ಲಿಮರು ಇರುವಂತಹ ಫ್ಲಾಟ್‍ಗಳನ್ನು ಹುಡುಕಿ ಅಲ್ಲಿ ವಿಚಾರಿಸಿದೆ. ನನ್ನ ಪ್ರಯತ್ನಗಳೆಲ್ಲ ವಿಫಲವಾಗಿ ಬಹಳ ಬೇಸರಪಟ್ಟೆ.
ಆದರೆ ಅವರನ್ನು ಕಾಣುವ ಅವಕಾಶ ಕೊನೆಗೂ ಸಿಕ್ಕಿದ್ದು ಒಂದು ಅಪೂರ್ವ ಸಂದರ್ಭದಲ್ಲಿ. ಅದು ಕೋಮುಸೌಹಾರ್ದ ವೇದಿಕೆಯ ಕಾರ್ಯಕ್ರಮವೊಂದರಲ್ಲಿ. ನಾನು ವೇದಿಕೆಯ ಮೇಲಿದ್ದೆ. ಕೆಳಗೆ ಸೇರಿದ್ದ ಗುಂಪಿನಲ್ಲಿ ಪುರುಷರ ಕಡೆಯಲ್ಲಿ ಒಬ್ಬ ಯುವಕ ಇದ್ದುದನ್ನು ವೇದಿಕೆಯಿಂದಲೇ ಗಮನಿಸಿದೆ. ಕಾರ್ಯಕ್ರಮ ಮುಗಿದು ವೇದಿಕೆ ಯಿಂದ ಇಳಿದು ಆ ಕಡೆಗೆ ಹೋಗಿ ಅವನನ್ನು ಗುರುತಿಸಿ ಮಾತನಾಡಿಸಿದೆ. ಅವನು ಹಬಿನಮ್ಮನ ಕೊನೆಯ ಮಗ ಲಿಯಾಕತ್. ಅದುವರೆಗೆ ನನ್ನ ಗುರುತು ಸಿಕ್ಕಿರಲಿಲ್ಲ. ನನ್ನ ಹೆಸರಿನಿಂದಲೂ ಪರಿಚಯವಾಗಿರಲಿಲ್ಲ. ಆದರೆ ನಾನು ಅವನನ್ನು ಹೆಸರು ಹಿಡಿದು ಕರೆದ ತಕ್ಷಣ `ಕಲಕ್ಕ' ಅಲ್ವಾ? ಎಂದು ಕೇಳಿದ. ಹೌದು ನಾನು ಲೇಖಕಿ, ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಅವನ ಪಾಲಿಗೆ ಖಂಡಿತಾ ಅಲ್ಲ. ನಾನು ಅವನಿಗೆ ಕಲಕ್ಕನೇ ತಾನೇ? ಅವನಿಗಾದ ಸಂತೋಷ ಮತ್ತು ನನಗಾದ ಸಂತೋಷವನ್ನು ವಿವರಿಸಲು ಸಾಧ್ಯವಿಲ್ಲ. ಅಮ್ಮನ ಬಗ್ಗೆ ವಿಚಾರಿಸಿದಾಗ ಅವರು ಇರುವ ಬಗ್ಗೆ ತಿಳಿದು ಅದೇ ದಿನ ಸಂಜೆ ಅವರ ಮನೆಗೆ ಅವನ ಜೊತೆಗೆ ಹೋದೆ. ಹಬಿನಮ್ಮ ಒಂಟಿಯಾಗಿ ಇರುವುದು ಸಾಧ್ಯವೇ? ಅಥವಾ ಅವರು ಒಂಟಿಯಾಗಿ ಇರುವ ಮನಸ್ಥಿತಿ ಯಾಕುಂಟಾಯಿತು? ಎನ್ನುವುದರ ಬಗ್ಗೆ ಲಿಯಾಕತ್ ಹೋಗುವ ದಾರಿಯಲ್ಲಿ ಅಲ್ಪ ಸ್ವಲ್ಪ ತಿಳಿಸಿದ್ದ. ನನ್ನನ್ನು ಕಂಡ ಹಬಿನಮ್ಮ ಸಂಭ್ರಮ ಪಡಲಿಲ್ಲ. ಬದಲಿಗೆ ತನಗಾದ ಅನ್ಯಾಯವನ್ನು ನನ್ನಲ್ಲಿ ಹೇಳುತ್ತಲೇ ಸಿಟ್ಟಿನಿಂದ ``ನೀವು ಆ ಊರು ಬಿಟ್ಟು ಹೋದ ಮೇಲೆ ಆ ಊರು ಊರಾಗಿಯೇ ಇರಲಿಲ್ಲ'' ಎನ್ನುತ್ತಾ ತನ್ನ ಸಿಟ್ಟಿಗೆ ಕಾರಣವಾದ ವಿಷಯವನ್ನು ತಿಳಿಸಿದರು. ಗ್ರೆಟ್ಟಾ ಬಾಯಿ ನಿಧನರಾದ ಬಳಿಕ ಅವರ ಮಕ್ಕಳು ಆ ಮನೆ ಹಿತ್ತಿಲು ಮಾರಾಟ ಮಾಡಲು ನಿರ್ಧರಿಸಿದಾಗ ಹಬಿನಮ್ಮ ತಾನು ಇದ್ದ ಮನೆಯನ್ನು ತಾನು ಕೊಳ್ಳುವುದಕ್ಕೆ ಅಪೇಕ್ಷೆಪಟ್ಟರು. ಸುಮಾರು ಐವತ್ತು ವರ್ಷಗಳ ಕಾಲ ಇದ್ದ ಹಾಗೂ ತಾನೇ ಕೈಯಾರೆ ಆ ಮನೆಯನ್ನು ನಿರ್ಮಿಸುವುದಕ್ಕೆ ಹೆಣಗಾಡಿದ ಆ ಮನೆ ಯನ್ನು ಕೊಳ್ಳುವುದಕ್ಕೆ ಅವಕಾಶ ಕೊಡಿ ಎಂದು ಕೇಳಿದಾಗ ಕೊಡದೆ ಇದ್ದ ಆ ಮಕ್ಕಳ ಬಗ್ಗೆ ಸಿಟ್ಟು ಹೇಗಿತ್ತು ಎಂದರೆ ಸಾಕಿದ ತಾಯಿಯ ಮಾತನ್ನು ನಿರಾಕರಿಸಿದ ಮಕ್ಕಳ ಬಗ್ಗೆ ತಾಯಿಗೆ ಬರುವ ಸಿಟ್ಟೆಂದೇ ಹೇಳಬೇಕು. ಯಾಕೆಂದರೆ ಆ ಮಕ್ಕಳು ಚಿಕ್ಕವರಿರುವಾಗ ಅವರನ್ನು ಎತ್ತಿ ಆಡಿಸಿದ, ತುತ್ತು ಕೊಟ್ಟು ರಮಿಸಿದವರು ಈ ಹಬಿನಮ್ಮ. ತನ್ನ ಮಕ್ಕಳಂತೆಯೇ ಮುದ್ದು ಮಾಡಿದವರು. ಈ ಸಿಟ್ಟು, ನೋವು ಎಂತಹದಾಯ್ತು ಎಂದರೆ ತನ್ನ ಸ್ವಂತ ಮಕ್ಕಳ ಜೊತೆಯಲ್ಲೂ ಇರುವುದಕ್ಕೆ ಸಾಧ್ಯವಾಗದೆ ಹೋಯ್ತು. ಮಕ್ಕಳೆಲ್ಲರೂ ಉತ್ತಮವಾದ ಸ್ಥಿತಿಯಲ್ಲಿದ್ದು ತಾಯಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುವ ಸಾಧ್ಯತೆಯನ್ನೂ ಅವರ ಬದುಕಿನ ಕುರಿತಾದ ಆ ಅಸಹನೆ ನಾಶಮಾಡಿ ಬಿಟ್ಟಿತ್ತು. ಸ್ವಂತ ಮಕ್ಕಳ ಜೊತೆಗೆ ಸಂತೋಷವಾಗಿ ಇರುವ ಅವಕಾಶದಿಂದ ಅವರನ್ನು ವಂಚಿಸಿತ್ತು. ಜೊತೆಗೆ ತನ್ನ ಮಕ್ಕಳು ನನ್ನ ವಿಚಾರವನ್ನು ಸರಿಯಲ್ಲ ಎನ್ನುತ್ತಾರೆ. `ಯಾಕೆ ಸರಿಯಲ್ಲ ಕಲಾ ನೀನು ಹೇಳು. ನಿನಗೆ ಗೊತ್ತಿದೆಯಲ್ಲ. ನೀನು ನೋಡಿರುವೆಯಲ್ಲಾ? ಇವರಿಗೇನು ಗೊತ್ತು?' ಅದೇ ವಿಷಯವನ್ನು ಮತ್ತೆ ಮತ್ತೆ ಮಾತನಾಡುತ್ತಿದ್ದರು. ಆದರೆ ಜೊತೆಗೆ ಚಹಾ ಮಾಡಿಯೂ ತಂದುಕೊಟ್ಟರು. ಆ ಹಿರಿಯ ಜೀವ.
ಅವರ ಮನಸ್ಸಿನ ನೋವು ನನಗೆ ಅರ್ಥವಾಗಿತ್ತು. ಅವರು ಹೇಳಿದಂತೆ ಅದಕ್ಕಿರುವ ಕಾರಣಗಳೂ ಗೊತ್ತಿತ್ತು. ಹಾಗೆಯೇ ಮಕ್ಕಳೂ ಹೇಳುವ ವಾದವೂ ಸರಿಯಾಗಿತ್ತು. ಯಾರ್ಯಾರ ಆಸ್ತಿಗೆ ನಾವು ಆಸೆ ಪಡುವುದ್ಯಾಕೆ? ದೇವರ ದಯದಿಂದ ನಮಗೇನೂ ಕೊರತೆಯಿಲ್ಲವಲ್ಲಾ? ಇವರು ನೆಮ್ಮದಿಯಿಂದಿರಬಾರದೇ? ಎಂಬುದು ಮಕ್ಕಳ ಪ್ರಶ್ನೆ. ಹೌದು ಇಂತಹ ಸಂದರ್ಭದಲ್ಲಿ ಯಾರನ್ನು ಸಮಾಧಾನಗೊಳಿಸುವುದು. ನಾನು ಅವರನ್ನು ಕಾಣಲು ಬರಿಗೈಯಲ್ಲಿ ಹೋಗದೇ ಅವರಿಗೇ ಎಂದುಕೊಂಡು ಹೋದುದನ್ನು ಕೊಟ್ಟು ಮನಸ್ಸಿನಲ್ಲೇ ನನ್ನ ಕೃತಜ್ಞತೆ ಸಮರ್ಪಿಸಿದೆ. ``ಇದೆಲ್ಲ ಯಾಕೆ ನನಗೆ? ನನಗೆ ನನ್ನದೇ ಒಂದು ಮನೆ ಬೇಕಿತ್ತು. ಎಷ್ಟೆಲ್ಲಾ ಕಷ್ಟಪಟ್ಟೆ. ಈಗ ಗತಿಯಿಲ್ಲದವಳಾದೆ. ನನ್ನ ಮನೆ ಕಳಕೊಂಡೆ' ಎಂದು ಹೇಳುತ್ತಾ ಬದುಕಿನಲ್ಲಿ ಅಸಹಾಯಕಳಾಗಿ ಎಂದೂ ಅಳದೆ ಇದ್ದ ಅಥವಾ ಅಳುವುದನ್ನು ತಿಳಿಯದೆ ಇದ್ದ ಹೆಣ್ಣೊಬ್ಬಳು ಸಿಟ್ಟಿನಿಂದ ಮಾತನಾಡದೆ ಇನ್ನು ಹೇಗೆ ಮಾತಾಡಿಯಾಳು ಎನ್ನುವಂತೆ ಅನ್ನಿಸಿದ್ದು ಸತ್ಯವೇ! ಹಳೆಯ ಯಾವ ಒಳ್ಳೆಯ ನೆನಪುಗಳೂ ಅವರಿಗೆ ಬೇಕಿರಲಿಲ್ಲ. ತನ್ನ ಗಂಡು ಮಕ್ಕಳ ಸಂಸಾರ ಚೆನ್ನಾಗಿತ್ತು. ಮೊಮ್ಮಕ್ಕಳು ಡಾಕ್ಟರರೂ ಆಗಿದ್ದು. ಅವರ ಸಂಸಾರವನ್ನು ತಿಳಿದ ನನಗೆ ಹಬಿನಮ್ಮನ ಅಂದಿನ ಕಷ್ಟ ಇಂದು ಸಾರ್ಥಕವಾಗಿದೆ ಅನ್ನಿಸಿತು. ಆದರೆ ಆ ತಾಯಿಯ ಮನಸ್ಸು ತನ್ನ ಸಾರ್ಥಕ್ಯವನ್ನು ತಾನು ಬದುಕಿದ ಮನೆಯ ವಾಸ್ತವ್ಯದಲ್ಲೇ ಕಲ್ಪಿಸಿಕೊಂಡಿತ್ತು. ಹಾಗೆಯೇ ಒದಗಿದ ಸಂತೋಷ ಸಂಭ್ರಮಗಳನ್ನು ನಿರಾಕರಿಸಿತ್ತು. ಹೆಣ್ಣೆಂದರೆ ಹಾಗೆಯೇ. ಆತ್ಮಕ್ಕಾದ ನೋವು, ಆಘಾತಗಳು ಆಕೆಯನ್ನು ಘಾಸಿ ಮಾಡುತ್ತವೆ. ಆತ್ಮಗೌರವ ಇಲ್ಲ ಎಂದಾದಾಗ ಆಕೆ ಸತ್ತಂತೆಯೇ ಅಲ್ಲವೇ. ಪರೋಪಕಾರಿಯಾಗಿದ್ದ ಹಬಿನಮ್ಮನನ್ನು ಆ ಸ್ಥಿತಿಯಲ್ಲಿ ಕಂಡಾಗ ಪ್ರೀತಿ ವಿಶ್ವಾಸಗಳ ಜಾಗದಲ್ಲಿ ಹಣದಾಸೆ ನೆಲೆಯೂರಿ ಅವರ ನಿರೀಕ್ಷೆಗೆ ಬೆಲೆಯಿಲ್ಲದಾಯ್ತು ಎಂದನ್ನಸಿತು. ಇದನ್ನೇ ಕಾಲ ಮಹಿಮೆ ಎನ್ನುವುದು ಎಂಬ ಹಿರಿಯರ ಮಾತು ನೆನಪಾಯಿತು. ಆದರೆ ಕಾಲ ಚೆನ್ನಾಗಿದ್ದುದು ಹಾಳಾಗುತ್ತಿದೆಯಲ್ಲಾ? `ಮತ್ತೆ ಬಾ' ಎಂದೂ ಕರೆಯದೆ ಇದ್ದ ಹಬಿನಮ್ಮನನ್ನು ಬೀಳ್ಕೊಂಡು ಬಂದೆ. ತಿಂಗಳೊಳಗೆ ಅವರು ತೀರಿಕೊಂಡಾಗ ಅಂತಿಮದರ್ಶನ ಮಾಡುವ ಅವಕಾಶ, ಕೊನೆಗೂ ಅವರನ್ನು ಭೇಟಿ ಯಾಗುವ ಸಂದರ್ಭ ದೊರೆತುದಕ್ಕೆ ಮನಸ್ಸು ಕೃತಜ್ಞವಾಗಿತ್ತು. ಒಳ್ಳೆಯತನ, ಕೆಟ್ಟತನಗಳು ಯಾವುದೇ ಜಾತಿ, ಧರ್ಮದ ಜನರಿಗೆ ಮೀಸಲಾದುದು ಅಲ್ಲ. ಪ್ರತಿಯೊಂದು ಜಾತಿ, ಧರ್ಮಗಳಲ್ಲೂ ಕೆಟ್ಟವರೂ ಇದ್ದೇ ಇರುತ್ತಾರೆ. ಅದು ವೈಯಕ್ತಿಕ ಸ್ವಭಾವಗಳೇ ಹೊರತು ಅದನ್ನು ಪೂರ್ತಿಯಾಗಿ ಒಂದು ಜಾತಿ, ಒಂದು ಧರ್ಮಕ್ಕೆ ಅಂಟಿಸಿ ವ್ಯವಹರಿಸುವುದು, ಮಾತನಾಡುವುದು ಅವಿವೇಕಿಗಳ ಸ್ವಭಾವವೇ ಹೊರತು ವಿವೇಕಿಗಳಿಗಾದವರು ಖಂಡಿತಾ ಹಾಗೆ ಮಾಡಲಾರರು. ವಿವೇಕಿಯಾಗುವುದಾದರೂ ಹೇಗೆ? ತನ್ನ ಬದುಕಿನ ಅನುಭವಗಳ ಸತ್ಯದಿಂದಲೇ ಸಮಾಜವನ್ನು ಗ್ರಹಿಸುವ ಗುಣ ಬೆಳೆಸಿಕೊಂಡಾಗ ಮತ್ತು ಪೂರ್ವಾಗ್ರಹ ವಿಚಾರಗಳನ್ನು ವರ್ತಮಾನದ ಸಂದರ್ಭಗಳಲ್ಲಿಯೂ ವಿಮರ್ಶಿಸುವ ಮತ್ತು ಎಲ್ಲರಿಗೂ ಒಳ್ಳೆಯದಾಗಬಹುದನ್ನು ಸ್ವೀಕರಿಸಿದಾಗ ಮನುಷ್ಯತ್ವ ಉಳಿಯುತ್ತದೆ ಎಂದು ನಂಬಿದವಳು ನಾನು.