ಕೊನೆಗೊಳ್ಳುವುದೇ ರಷ್ಯಾ-ಉಕ್ರೇನ್ ಸಮರ?
![](https://saaranga-aws.s3.ap-south-1.amazonaws.com/s3fs-public/styles/article-landing/public/ukrian.jpeg?itok=KqN3ynQa)
ಉಕ್ರೇನ್ ಮೇಲಿನ ರಷ್ಯಾ ಮಿಲಿಟರಿ ದಾಳಿ ಕಾರ್ಯಾಚರಣೆಗೆ ಈಗ ಒಂದು ವರ್ಷ. ರಷ್ಯಾ ಇದನ್ನು ಯುದ್ಧ ಎಂದು ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ ಎರಡೂ ದೇಶಗಳಲ್ಲಿ ಇದುವರೆಗೆ ಸಂಭವಿಸಿರುವ ಹಾನಿ ಅಪಾರ.
ಉಕ್ರೇನ್ ಪರವಾಗಿ ಮಿಲಿಟರಿ ಕಾರ್ಯಾಚರಣೆಗೆ ಈ ದೇಶವು ಮನವಿ ಮಾಡಿದರೂ ನ್ಯಾಟೋ ಒಕ್ಕೂಟ ಅಧಿಕೃತವಾಗಿ ಸ್ಪಂದಿಸಲಿಲ್ಲ. ಮಿಗಿಲಾಗಿ ಅಮೇರಿಕ ಸೇರಿದಂತೆ ವಿಶ್ವದ ಅಗ್ರದೇಶಗಳು ಉಕ್ರೇನ್ ಬೆನ್ನಿಗೆ ನಿಲ್ಲಲಿಲ್ಲ. ಒಟ್ಟಿನಲ್ಲಿ ಕಳೆದ ಒಂದು ವರ್ಷದಿಂದಲೂ ಉಕ್ರೇನ್ ಮೇಲೆ ನಡೆದಿರುವ ಮಿಲಿಟರಿ ದಾಳಿ ಭದ್ರತಾ ಮಂಡಳಿಯಲ್ಲಿ ಪ್ರಸ್ತಾವವಾದರೂ ರಷ್ಯಾವನ್ನು ಎದುರು ಹಾಕಿಕೊಳ್ಳುವ ಧೈರ್ಯ ಅಥವಾ ಮನಸ್ಸು ಯಾವ ದೇಶಕ್ಕೂ ಇಲ್ಲ. ಒಂದು ವೇಳೆ ಉಕ್ರೇನ್ ಪರವಾಗಿ ಅಮೇರಿಕ ಸೇರಿದಂತೆ ಯುರೋಪ್ ಒಕ್ಕೂಟ ಬಲವಾಗಿ ನಿಂತು ಕಾದಾಟಕ್ಕೆ ಸಿದ್ಧವಾಗಿದಿದ್ದರೆ ಇದು ಮೂರನೇ ಪ್ರಪಂಚ ಸಮರಕ್ಕೆ ನಾಂದಿಯೂ ಆಗುತ್ತಿತ್ತು.
ಇಬ್ಬರ ನಡುವಣ ಸಮರದಲ್ಲಿ ವಿಶ್ವಸಂಸ್ಥೆಯ ಪಾತ್ರ ಪ್ರಮುಖ. ಕೋವಿಡ್ ಮಾರಿಯ ಪರಿಣಾಮದಿಂದ ಇಡೀ ಪ್ರಪಂಚವಿಂದು ಎಲ್ಲ ವಲಯಗಳಲ್ಲಿ ತತ್ತರಿಸಿರುವಾಗ ರಷ್ಯಾ ಮತ್ತು ಉಕ್ರೇನ್ ಅಪಾರ ಮಾನವಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟಕ್ಕೆ ಮುಂದಾಗಿದ್ದು ಸರಿಯೇ ಎಂಬುದು ವಿಶ್ವ ಸಂಸ್ಥೆಯಲ್ಲಿ ಗಂಭೀರ ಚರ್ಚೆ ಆಗಬೇಕಿತ್ತು. ಆದರೆ ಉಕ್ರೇನ್ ಪರವಾಗಿ ವಿಶ್ವಸಂಸ್ಥೆಯಲ್ಲಿ ಪ್ರಬಲವಾಗಿ ವಾದವನ್ನು ಮಂಡಿಸಲು ಈ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ದೊರೆಯುತ್ತಿಲ್ಲ. ಒಟ್ಟಿನಲ್ಲಿ ಪ್ರಪಂಚದ ಯಾವುದೇ ಎರಡು ದೇಶಗಳು ಒಬ್ಬರಿಗೊಬ್ಬರು ಬಡಿದಾಡಿಕೊಂಡು ಸರ್ವನಾಶವಾಗುವ ಕಲಹ ಮತ್ತು ಸಮರವನ್ನು ಯಾವ ಪ್ರಜಾತಾಂತ್ರಿಕ ದೇಶವೂ ಸ್ವಾಗತಿಸುವುದಿಲ್ಲ.
ಅಮೇರಿಕ ರಾಷ್ಟ್ರಾಧ್ಯಕ್ಷ ಜೋ ಬೈಡನ್ ಮೊನ್ನೆ ಉಕ್ರೇನ್ ನಲ್ಲಿ ವ್ಯಾಪಕ ಪ್ರವಾಸ ಮಾಡಿದ್ದಾರೆ. ಇದು ರಷ್ಯಾ ಅನ್ನು ವಿಚಲಿತಗೊಳಿಸಿದೆ. ಅಲ್ಲದೆ ಬೈಡನ್ ಉಕ್ರೇನ್ ಭೇಟಿಯಿಂದ ಉಂಟಾದ ವಿದ್ಯಮಾನಗಳಿಂದ ಅಮೇರಿಕ ಮತ್ತು ರಷ್ಯಾ ನಡುವಣ ಅಂತಾರಾಷ್ಟ್ರೀಯ ಮಟ್ಟದ ಸಂಬಂಧಗಳಿಗೂ ಪರೋಕ್ಷವಾಗಿ ಧಕ್ಕೆಯಾಗಲಿದೆ. ರಷ್ಯಾ ಈಗಾಗಲೇ ಆಯೋಜಿಸಿರುವ ಶೃಂಗಸಭೆಗಳನ್ನು ಅಮೇರಿಕ ಬಹಿಷ್ಕರಿಸಲು ತೀರ್ಮಾನಿಸಿದ್ದು ಇದು ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಲಿದೆ. ಇದೇ ವೇಳೆ ಕೋವಿಡ್ ನಂತರ ಅಮೇರಿಕ ಸೇರಿದಂತೆ ಪ್ರಪಂಚದ ಪ್ರಮುಖ ದೇಶಗಳ ಜೊತೆ ತನ್ನ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳನ್ನು ಹದಗೆಡಿಸಿಕೊಂಡಿರುವ ಚೀನಾ ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಆಲೋಚಿಸಿದೆ.
ಒಟ್ಟಿನಲ್ಲಿ ಒಣ್ದು ವರ್ಷದ ನಂತರವೂ ರಷ್ಯಾ, ಉಕ್ರೇನ್ ನಡುವೆ ವಿನಾಶಕಾರಿ ಸಮರ ಮುಂದುವರೆಯಬೇಕೇ? ಇದಕ್ಕೆ ತೆರೆಬೀಳಬೇಕಲ್ಲವೇ? ಈ ದಿಶೆಯಲ್ಲಿ ಭಾರತವು ಮನಸು ಮಾಡಿದರೆ ಸಂಧಾನ ಸಾಧ್ಯ ಎಂಬುದು ರಾಜತಾಂತ್ರಿಕರ ಅಭಿಮತ. ಇದು ನಿಜ ಕೂಡಾ. ಆದರೆ ಭಾರತವು ಈ ವಿಚಾರದಲ್ಲಿ ತಾಳ್ಮೆಯ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಅಮೇರಿಕ ಮತ್ತು ರಷ್ಯಾ ನಡುವೆ ಸಮಾನ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವ ಭಾರತ ಉಕ್ರೇನ್ ವಿಷಯದಲ್ಲಿ ಇದುವರೆಗೆ ಸಂಯಮ ನೀತಿಯನ್ನು ಅನುಸರಿಸಿರುವುದು ಗಮನಾರ್ಹ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೪-೦೨-೨೦೨೩