ಕೊನೆಯ ಎರಡು ಎಸೆತಗಳು

ಕೊನೆಯ ಎರಡು ಎಸೆತಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಸತೀಶ್ ಶೆಟ್ಟಿ ವಕ್ವಾಡಿ
ಪ್ರಕಾಶಕರು
ಬುಕ್ ಬ್ರಹ್ಮ ಪ್ರೈ. ಲಿ., ಹೊಸೂರು ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೪

ಉದಯೋನ್ಮುಖ ಕಥೆಗಾರ ಸತೀಶ್ ಶೆಟ್ಟಿ ಅವರ ನೂತನ ಕೃತಿ ‘ಕೊನೆಯ ಎರಡು ಎಸೆತಗಳು'. ಈ ಕೃತಿಗೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಹಿರಿಯ ಪತ್ರಕರ್ತರಾದ ಸತೀಶ್ ಚಪ್ಪರಿಕೆ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಸಾಲುಗಳು -” ಅಜ್ಜ ನೆಟ್ಟ ಹಲಸಿನ ಮರ' ಓದಿ, ಈಗ ‘ಕೊನೆಯ ಎರಡು ಎಸೆತಗಳು' ಕೃತಿಯನ್ನು ಓದಿದರೆ, ಕಥೆಗಾರ ಸತೀಶ್ ಶೆಟ್ಟಿ ವಕ್ವಾಡಿ ಹೊರಟ ಹಾದಿಯ ಜಾಡು ಹಿಡಿಯಬಹುದು. ಅದರಲ್ಲಂತೂ ಅವರದೇ ಊರಿನ, ಕುಂದಾಪುರ ಭಾಷೆಯ ಪೂರ್ಣ ಪರಿಚಯ ಇರುವ ನನಗೆ ಸತೀಶರ ನಡೆ ಸ್ಪಷ್ಟವಾಗಿ ಅರಿವಿಗೆ ಬಂದಿದೆ.

ಹೊಸ ಲೋಕವೊಂದನ್ನು ಸೃಷ್ಟಿಸುವ ಸವಾಲು ಅದು. ಒಬ್ಬ ಸೃಜನಶೀಲ ವ್ಯಕ್ತಿಯ ಬದುಕು-ಬರವಣಿಗೆಯ ವಿಕಸನ ಹಂತದಲ್ಲಿ ಇರುವ ಎಲ್ಲ ಅಡೆತಡೆಗಳು ಈ ಕಥೆಗಾರನಿಗೂ ಇವೆ, ‘ಕೊನೆಯ ಎರಡು ಎಸೆತಗಳು' ಕೃತಿಯಲ್ಲಿ ಕೂಡ ಅವು ಢಾಳಾಗಿ ಕಣ್ಣಿಗೆ ಬೀಳುತ್ತವೆ. ಸತೀಶರು ಅದನ್ನು ಮೀರಿ ನಿಲ್ಲುತ್ತಾರೆ ಎನ್ನುವ ಭರವಸೆ ನನಗಿದೆ. ಆಳವಾದ ಓದು ಮತ್ತು ತೀವ್ರವಾದ ಬರವಣಿಗೆಯ ಧ್ಯಾನಸ್ಥ ಸ್ಥಿತಿಯನ್ನು ಅವರು ತಲುಪಲಿ ಎನ್ನುವುದೇ ನನ್ನ ಹಾರೈಕೆ."

ಸತೀಶ್ ಶೆಟ್ಟಿ ವಕ್ವಾಡಿ ಅವರು ತಮ್ಮ ‘ಕೊನೆಯ ಎರಡು ಎಸೆತಗಳು’ ಕೃತಿಗೆ ಬರೆದಿರುವ ಲೇಖಕನ ಮಾತಿನಿಂದ ಆಯ್ದ ಭಾಗ ಇಲ್ಲಿದೆ… “ಬದುಕಿನಲ್ಲಿ ಸ್ಥಾನಮಾನಗಳು ಹೆಚ್ಚಾದಂತೆ ಮನುಷ್ಯನ ವ್ಯಕ್ತಿತ್ವದಲ್ಲಾಗುವ ವ್ಯತಿರಿಕ್ತ ಬದಲಾವಣೆಗಳು ಈ ಕಥಾಸಂಕಲನದ ಮೂಲ ಸಾರ. ಸಂಪತ್ತು ಮತ್ತು ಪದವಿಗಳು ಮನುಷ್ಯನೊಳಗೆ ಸೃಷ್ಟಿಸುವ ಅಹಂ, ಆತನ ಸುತ್ತಮುತ್ತಲಿನವರನ್ನು ನಿಭಾಯಿಸುವ ಪರಿ ನನ್ನನ್ನು ಇಲ್ಲಿನ ಕಥೆಗಳಲ್ಲಿ ಕಾಡಿಸಿಕೊಂಡು ದುಡಿಸಿಕೊಂಡಿದೆ. ನಾವೆಲ್ಲ ಚಿಕ್ಕವರಿರುವಾಗ ಟಿವಿ ಪರದೆಯಲ್ಲಿ ಬರುತ್ತಿದ್ದ ಸಿನೆಮಾಗಳಲ್ಲಿ ದ್ವೇಷಿಸುತ್ತಿದ್ದ ಖಳನಾಯಕರುಗಳು, ಬಾಲ್ಯದ ನೆರಳು ಮಾಸಿ ಯೌವನದ ಪೊರೆ ಕಳಚುವ ಹೊತ್ತಿಗೆ ನಮ್ಮ ವ್ಯಕ್ತಿತ್ವದೊಳಗೆ ಮನೆಮಾಡಿ ನಮ್ಮನ್ನು ನಿಯಂತ್ರಿಸುವ ಪರಿ ಇಲ್ಲಿ ನನ್ನನ್ನು ಜಾಸ್ತಿ ಕಾಡಿದ್ದು.

ಎಷ್ಟೋ ಸಾಲ ಯೋಚಿಸುತ್ತೇನೆ, ನಾವ್ಯಾಕೆ ಬದಲಾಗುತ್ತೇವೆ, ಹತ್ತಿಪ್ಪತ್ತು ವರ್ಷಗಳ ಹಿಂದೆ ಬದುಕಲ್ಲಿ ಒಂದಷ್ಟು ಸಿದ್ಧಾಂತಗಳನ್ನ ಅಂಟಿಸಿಕೊಂಡಿದ್ದ ನಾವು ಇಂದು ಅದೇ ಸಿದ್ಧಾಂತದ ವಿರುದ್ಧವಾಗಿ ಬದುಕುವಷ್ಟು ಬದಲಾಗುವ ಅನಿವಾರ್ಯತೆಯನ್ನು ಯಾಕೆ ಸೃಷ್ಟಿಸಿಕೊಂಡೆವು. ಅದು ಏಕೆ!?

ಕಾಲ ಕಳೆದಂತೆ ಜೀವನ ಶೈಲಿಗಳು ಬದಲಾಗುತ್ತದೆ, ಅದು ಸಹಜ. ಐದಾರು ವರ್ಷಗಳ ಹಿಂದೆ, ಮೊಬೈಲ್ ನಲ್ಲಿ ಮಾತಾಡಬೇಕಾದ್ರೆ ಮನೆಯಿಂದ ಒಂದಷ್ಟು ದೂರ ಬಂದು ಕಲ್ಲು ಬಂಡೆಯನ್ನು ಹತ್ತಿಯೋ ಅಥವಾ ಗೇರು ಮರ ಕಾಂಡದ ಮೇಲೆ ಕುಳಿತೋ ಏರು ದನಿಯಲ್ಲಿ ಮಾತಾಡಬೇಕಿತ್ತು, ಆದರೆ ಇಂದು ಬಾತ್ ರೂಮಿನಲ್ಲಿ ವಿಡಿಯೋ ಕಾಲ್ ಮಾಡುತ್ತಾ ಸ್ನಾನ ಮಾಡುವ ಅನುಕೂಲತೆ ನಮಗಿದೆ. ಹತ್ತು ವರ್ಷಗಳ ಹಿಂದೆ ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟಿ ಖರೀದಿಸಲು ಸಾಲಕ್ಕಾಗಿ ಒದ್ದಾಡುತ್ತಿದ್ದವ, ಇಂದು ಮನೆ ಕಾರು ಎಲ್ಲವನ್ನು ಕೊಂಡುಕೊಂಡಿದ್ದಾನೆ, ಮನೆ ಬಾಗಿಲಿಗೆ ಬಂದು ಸಾಲ ಕೊಟ್ಟ ಬ್ಯಾಂಕಿನವರ ಕೃಪೆಯಿಂದ. ಬದುಕು ತುಂಬಾ ಸುಲಭವಾಗಿದೆ. ಜೊತೆಗೆ ಸಂಕೀರ್ಣವಾಗಿದೆ ಸಹ. ಅದೇ ನಮ್ಮ ಇವತ್ತಿನ ಸವಾಲು.

ಇಲ್ಲಿನ ಕಥೆಗಳಲ್ಲಿ ನನ್ನನ್ನು ತೀವ್ರವಾಗಿ ಕಾಡಿದ್ದು ಅದೇ. ಉದಾರೀಕರಣ, ಜಾಗತೀಕರಣದ ಫಲವಾಗಿ ಶಿಕ್ಷಣ ಮತ್ತು ಉದ್ಯೋಗ ಅತಿ ಸುಲಭವಾಗಿ ಕೈಗೆಟುಕುತ್ತಿದೆ. ಇದು ಒಂದೆಡೆ ಖುಷಿ ಪಡುವ ವಿಷಯವಾದರೂ, ಇನ್ನೊಂದೆಡೆ ಶಿಕ್ಷಣದ ಗುಣಮಟ್ಟ ಮತ್ತು ಮೌಲ್ಯಗಳು ಮೊದಲಿನ ಹಾಗೆ ಮನುಷ್ಯತ್ವ ಮತ್ತು ಜೀವನಪ್ರೀತಿಯ ನೆಲೆಗಟ್ಟಿನಲ್ಲಿ ಎಷ್ಟರ ಮಟ್ಟಿಗೆ ವ್ಯಕ್ತಿತ್ವಗಳನ್ನು ರೂಪಿಸುತ್ತಿದೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ, ಇತ್ತೀಚಿನ ದಿನಮಾನದಲ್ಲಿ ವಿಶ್ವವಿದ್ಯಾಲಗಳಿಂದ ಪ್ರಾಡಕ್ಟ್ ಗಳು ಹೊರಬರುತ್ತಿವೆ ಹೊರತೂ, ವಿದ್ಯಾವಂತ ಪದವೀಧರರಲ್ಲ ಅನ್ನೋದೇ ನಮ್ಮ ಮುಂದಿರೋ ದೊಡ್ಡ ಸವಾಲು. ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಇದು ಅಪಾಯಕಾರಿ. ಇಂದು ರಾಜಕೀಯ ಅಜೆಂಡಾಗಳಿಗೆ ಬಲಿಪಶು ಆಗುತ್ತಿರುವುದು ಇಂತಹ ಪ್ರಾಡಕ್ಟ್ ಗಳೇ. ಜಾತಿ ಧರ್ಮದ ಹೆಸರಿನಲ್ಲಿ ಇಂದು ಅಮಾಯಕ ಯುವಕರು ಹಾದಿ ತಪ್ಪುತ್ತಿರುವುದು ಮತ್ತು ಮನುಷ್ಯ ಸಂಬಂಧಗಳ ನಡುವೆ ಗೋಡೆಗಳು ಎದ್ದಿರುವುದನ್ನು ಕಣ್ಣೆರೆದು ನೋಡಲಾಗದ ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೇವೆ.

ಆಧುನೀಕರಣದ ಸಂಕೀರ್ಣ ಬದುಕು ಮತ್ತು ಅವ್ಯವಸ್ಥಿತ ಸಾಮಾಜಿಕ ಸ್ವಾಸ್ತ್ರದ ನಡುವೆ ನಮ್ಮೊಳಗೇ ಬೌದ್ಧಿಕ ದಿವಾಳಿತ ಮನೆ ಮಾಡಿ ಕುಳಿತಿದೆ. ಯೋಚಿಸುವ, ಸರಿ ತಪ್ಪುಗಳನ್ನು ಪರಾಮರ್ಶೆ ಮಾಡುವ, ಪ್ರಶ್ನಿಸುವ ಮಾನಸಿಕ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇವೆ. ಇದರ ಪರಿಣಾವಾಗಿ, ಮೊದಲೆಲ್ಲ, ಊರ ಅಂಗಡಿ ಮುಂಗಟ್ಟುಗಳ ಎದುರು, ಹೋಟೆಲು ಬಾರುಗಳ ಟೇಬಲ್ಲುಗಳಲ್ಲಿ ಮುಗಿದು ಹೋಗುತ್ತಿದ್ದ ಅಂತೇ ಕಂತೆಗಳು ಇಂದು ಸೋಶಿಯಲ್ ಮೀಡಿಯಾಗಳ ಪ್ರಭಾವದಿಂದ ಸತ್ಯಗಳಾಗಿ ಕ್ಷಣ ಮಾತ್ರದಲ್ಲಿ ಜಗದಗಲ ಪಸರಿಸುತ್ತಿದೆ. ಇದರಿಂದ ಸುಳ್ಳು, ಸತ್ಯದ ಮೌಲ್ಯದ ಜೊತೆಗೆ ಆಟವಾಡುತ್ತಿದೆ ಮತ್ತು ಸತ್ಯ ಸುಳ್ಳುಗಳ ನಡುವೆ ಗೊಂದಲವನ್ನು ಹುಟ್ಟುಹಾಕುತ್ತಿದೆ. ಇದನ್ನೆಲ್ಲಾ ಇಲ್ಲಿ ಪ್ರಸ್ತಾಪಿಸಲು ಕಾರಣ ಈ ಸಂಕಲನದ ಕಥೆಗಳನ್ನು ಕೂತಾಗ ನನ್ನ ಕಾಡಿ ಹೋದ ಬಿಂಬಗಳಿವು ಮತ್ತು ಕತೆಗಳಲ್ಲಿ ಗೂಡು ಕಟ್ಟಿದವು. ಒಬ್ಬ ಕಥೆಗಾರನಾಗಿ ಈ ವಿಷಯಗಳಿಗೆ ನನ್ನದೇ ದೃಷ್ಟಿಕೋನದಲ್ಲಿ ಇಲ್ಲಿನ ಕತೆಗಳಲ್ಲಿ ಗೂಡು ಕಟ್ಟಿಕೊಟ್ಟಿದ್ದೇನೆ ಮತ್ತು ಅದು ನನ್ನ ಕರ್ತವ್ಯ ಕೂಡ ಹೌದು. ರಾಜಕೀಯದ ಅಪವ್ಯಯಗಳು, ಕಾರ್ಪೊರೇಟ್ ಜಗತ್ತಿನ ತಲ್ಲಣಗಳು, ಧಾರ್ಮಿಕ ನಂಬಿಕೆ ಮತ್ತು ಅಸಮತೋಲನ, ಕೌಟುಂಬಿಕ ಗೊಂದಲ, ಸಂಬಂಧಗಳ ಅಸಹಿಷ್ಣು ಮನೋಭಾವ, ಆರ್ಥಿಕ ಅಸಹಜತೆ, ಮಾನವೀಯ ಅಂತಃಕರಣದಂಥ ವಿಷಯಗಳನ್ನು ಇಲ್ಲಿ ಎಡತಾಕಿದ್ದೇನೆ. ಇಲ್ಲಿ ಎಲ್ಲವೂ ಕಂಡದ್ದು, ಕೇಳಿದ್ದ ಅನುಭವಗಳು ಅಲ್ಲದಿದ್ದರೂ ಎಲ್ಲೊ ಇನ್ಯಾರದ್ದೋ ಅನುಭವ, ಯಾತನೆ, ಅಸಹಾಯಕತೆ, ಕ್ರೌರ್ಯ, ಅಹಂಕಾರ, ಅಂತಃಕರಣ, ಸಹಾಯಹಸ್ತ, ಮತ್ಸರ, ಹಗೆತನ, ದೌರ್ಜನ್ಯ, ಶೀತಲ ಸಮರ, ಅಪನಂಬಿಕೆ, ಇವೆಲ್ಲವೂ ಈ ಕಥೆಗಳಲ್ಲಿ ಹಾದು ಹೋಗಿದೆ.

ನನ್ನ ಮೊದಲ ಕಥಾಸಂಕಲನ ಓದಿದ ಅನೇಕರು ಮುಂದಿನ ಪುಸ್ತಕ ಯಾವಾಗ ಅಂದಾಗ ಮೂರೂ ವರ್ಷದ ನಂತರ ಅಂದಿದ್ದೆ. ಹಾಗಂದ ಮೇಲೆ ನನಗೆ ಒಂದಷ್ಟು ಆತಂಕ ಕಾಡತೊಡಗಿತ್ತು. ಹೇಗಪ್ಪಾ? ಮೂರು ವರ್ಷಕ್ಕೆ ಅಲ್ಲದಿದ್ದರೂ ಕಡೆ ಪಕ್ಷ ನಾಲ್ಕು ವರ್ಷದ ಒಳಗಾದರೂ ಇನ್ನೊಂದು ಕಥಾ ಸಂಕಲನ ತರಬೇಕಲ್ಲ ಅಂತ. ನನ್ನನ್ನು ಹತ್ತಿರದಿಂದ ಬಲ್ಲವರು "ಹೇಗಪ್ಪಾ ಬರೆಯಲು ಸಮಯ ಹೊಂದಿಸಿಕೊಳ್ಳಿಯಾ ? ಅಂತ ಪ್ರಶ್ನೆ ಹಾಕುತ್ತಿರುತ್ತಾರೆ.

ಆದರೆ ಆ ಸಮಯ ನನಗೆ ನಾನು ಅಂದುಕೊಂಡಷ್ಟೇ ಸಿಕ್ಕಿದ್ದು ಅಥವಾ ಹೊಂದಿಸಿಕೊಂಡಿದ್ದ ಫಲವಾಗಿ ಹಾಕಿಕೊಂಡ ಸಮಯದ ಮೊದಲೇ ಎರಡನೇ ಪುಸ್ತಕ ಪ್ರಕಟವಾಗುತ್ತಿರುವುದು. ಕೋವಿಡ್ ಅವಾಂತರಗಳ ನಡುವೆ ಒಂದಾರು ತಿಂಗಳಲ್ಲಿ ಎರಡು ಮುದ್ರಣ ಕಂಡ ನನ್ನ ಮೊದಲ ಕೃತಿ "ಅಜ್ಜ ನೆಟ್ಟ ಹಲಸಿನ ಮರ" ಓದಿದವರು ಕತೆಗಳು ಜಾಸ್ತಿ ಗ್ರಾಮೀಣ ಬದುಕಿನ ಬಗ್ಗೆ ಇದೆ, ಪುರುಷ ಅಭಿವ್ಯಕ್ತಿಗಳಿಗೆ ಜಾಸ್ತಿ ಒತ್ತು ಇದೆ, ಮುಂದಿನ ಕೃತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ, ಇಲ್ಲದಿದ್ದರೆ ಏಕತಾನತೆ ಬರುತ್ತೆ ಅಂತ ಅಭಿಪ್ರಾಯ ಪಟ್ಟಿದ್ದರು. ಜೊತೆಗೆ ನಗರ ಕೇಂದ್ರಿತ ಮತ್ತು ಕಾರ್ಪೊರೇಟ್ ತಲ್ಲಣಗಳ ಸುತ್ತ ಕತೆ ಹಣೆಯಿರಿ ಅನ್ನೋ ಸಲಹೆಗಳು ಬಂದಿದ್ದವು. ಇವೆಲ್ಲ ಅಂಶಗಳು ಈ ಸಂಕಲನದ ಕಥೆಗಳಲ್ಲಿ ಬೆಳಕು ಕಂಡಿದೆ, ಸ್ತ್ರೀ ಸಂವೇದನೆಯ ಜೊತೆಗೆ, ಬರಿದಾಗುತ್ತಿರುವ ಗ್ರಾಮೀಣ ಬದುಕಿನ ಚಿತ್ರಣ, ಬೆಳೆಯುತ್ತಿರುವ ನಗರ ಜೀವನದ ಬವಣೆಗಳು ಮತ್ತು ಕಾರ್ಪೊರೇಟ್ ಜಗತ್ತಿನ ತಲ್ಲಣಗಳನ್ನು ಪ್ರತಿಬಿಂಬಿಸಿದ್ದೇನೆ. ಒಟ್ಟಾರೆ ಮೊದಲ ಕೃತಿಗಿಂತ ವಿಭಿನ್ನವಾಗಿ ತಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇನೆ.”