ಕೊನೆಯ ನಿಲ್ದಾಣ

ಕೊನೆಯ ನಿಲ್ದಾಣ

ಪುಸ್ತಕದ ಲೇಖಕ/ಕವಿಯ ಹೆಸರು
ಹಾ ಮ ಸತೀಶ
ಪ್ರಕಾಶಕರು
ಕಥಾಬಿಂದು, ಕುಂಜತ್ತ್ ಬೈಲ್, ಮಂಗಳೂರು-೫೭೫೦೧೫, ಮೊ: ೯೩೪೧೪೧೦೧೫೩
ಪುಸ್ತಕದ ಬೆಲೆ
ರೂ. ೫೦,೦೦, ಮುದ್ರಣ : ೨೦೨೪

ವೃತ್ತಿಯಲ್ಲಿ ದೈಹಿಕ ಶಿಕ್ಷಕರೂ, ಪ್ರವೃತ್ತಿಯಲ್ಲಿ ಸಾಹಿತಿಯೂ ಆಗಿರುವ ಹಾ ಮ ಸತೀಶರು ಬರೆದ ‘ಕೊನೆಯ ನಿಲ್ದಾಣ' ಎನ್ನುವ ಕವನ ಸಂಕಲನವು ಕಥಾಬಿಂದು ಪ್ರಕಾಶನದ ಮೂಲಕ ಬಿಡುಗಡೆಯಾಗಿದೆ. ಹರಿನರಸಿಂಹ ಉಪಾಧ್ಯಾಯ (ವಿಹಾರಿ) ಇವರು ಈ ಕೃತಿಗೆ ಬಹಳ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ಸತೀಶರ ಪರಿಚಯ ಮಾಡಿಕೊಡುತ್ತಾ ಅವರ ಕವನಗಳ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಅವರು ವ್ಯಕ್ತ ಪಡಿಸಿದ ಕೆಲವು ಭಾವಗಳ ಆಯ್ದ ಸಾಲುಗಳು ಇಲ್ಲಿವೆ…

“ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಕೊನೆಯ ನಿಲ್ದಾಣ ಎಂಬ ಕವನ ಸಂಕಲನವನ್ನು ಹೊರತರುವ ಶ್ರೀಯುತರ ಕಾರ್ಯ ಉಳಿದ ಸಾಹಿತ್ಯ ರಚನಾಕಾರರಿಗೆ ಸ್ಪೂರ್ತಿಯಾಗುವುದರಲ್ಲಿ ಸಂದೇಹವಿಲ್ಲ. ‘ಕೊನೆಯ ನಿಲ್ದಾಣ’ ಎಂಬ ಕವನ ಸಂಕಲನದ ಹೆಸರು ಕೇಳಿದಾಕ್ಷಣ ಒಮ್ಮೆ ಅಚ್ಚರಿಯಾಗಬಹುದು. ಸಾಮಾನ್ಯವಾಗಿ ಜೀವನದಲ್ಲಿ ‘ಕೊನೆಯ ನಿಲ್ದಾಣ’ ಎಂದು ಹೇಳುವ ವೇಳೆ ನಮ್ಮ ಯೋಚನೆ ಎಲ್ಲಿ ಹೋಗಿ ಮುಟ್ಟುವುದು ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ ಕವಿಯಾದವನು ಅದಕ್ಕಿಂತಲೂ ಭಿನ್ನವಾಗಿ ಯೋಚಿಸಬಲ್ಲ ಎಂಬುದನ್ನು ಇಲ್ಲಿ ಕಾಣಬಹುದು.

ಇಲ್ಲಿರುವ ಕವನಗಳನ್ನು ಓದುತ್ತಿದ್ದಂತೆ ನನ್ನ ಮನದಲ್ಲಿ ಹಲವಾರು ವಿಭಿನ್ನ ಭಾವಗಳು ತೇಲಿ ಬಂತು ಎಂದು ಹೇಳಿದರೆ ಉತ್ಪ್ರೇಕ್ಷೆಯಲ್ಲ. ಯುಗಕೆ-ನವ-ಯುಗಾದಿ ಕವನದಲ್ಲಿ ಯುಗಾದಿಯ ಸೊಬಗನ್ನು ಬಣ್ಣಿಸುತ್ತ ಜನಮನದಲ್ಲಿ ಸವಿ ಜೇನನ್ನು ತುಂಬಿ ನವಗೀತೆ ಹಾಡಲು ಬರುತ್ತಿದೆ. ನವ ಜಾಗೃತಿ ತುಂಬುತ್ತದೆ ಎಂದು ಹೇಳುತ್ತಾರೆ…

ಭಾರತೀಯ ಮನದೊಳಗೆ

ಕುಸುಮ ಸುಧೆಯ ಚೆಲ್ಲಲು

ಗಂಧಯುಕ್ತ ಭಾವನೆಯೊಲು

ಯುಗಾದಿಯು ಬಂದಿದೆ

ಯುಗಧರ್ಮವ ಸಾರಿದೆ…

ವರುಷಗಳು ಎಷ್ಟು ಉರುಳಿ ಹೋದರೇನಂತೆ, ಕಾಲ ತನ್ನ ಪ್ರಕ್ರಿಯೆಯಲ್ಲಿ ಕಿಂಚಿತ್ತೂ ಎಡವದು. ಚೈತ್ರ ಬಂತೆಂದರೆ ಪ್ರಕೃತಿ ಮತ್ತೆ ಚಿಗಿತು ಸುಗಂಧ ಸೂಸುವುದು, ಭಾರತೀಯರಲ್ಲಿ ಹರುಷ ಮತ್ತೆ ನೆಲೆಸುವುದು ಎಂದು ಬಹಳ ಸೊಗಸಾಗಿ ಬಣ್ಣಿಸಿದ್ದಾರೆ. ಹುಟ್ಟಿದ ಕಾಲಘಟ್ಟದಲ್ಲಿ ಜೀವನ ಹೇಗಿತ್ತು ಎಂಬುದನ್ನು ಯಾರು ಇರದ ನಾಡಿನಿಂದ ಕವನದಲ್ಲಿ ಬಹಳ ಸೊಗಸಾಗಿ ಹಾಗೆಯೇ ಸರಳವಾಗಿ ತಿಳಿಸಿದ ರೀತಿ ಎಂಥವರಿಗೂ ಅರ್ಥವಾಗುವಂತಿದೆ…

ಹರಕು ದಿಂಬು ಹರಿದ ಚಾಪೆ

ನನಗೆ ರಾತ್ರಿ ಗೆಳೆಯರು ।

ಬೆಳಗು ಆಗೆ ತೋಟದೊಳಗೆ

ಕುಣಿವ ನವಿಲೆ ಮಿತ್ರರು ॥

ಹಗಲಿರುಳು ಜೊತೆಗಾರು ನನಗೆ ಮಿತ್ರರಂತಿದ್ದರು ಎಂಬುದನ್ನು ನೋಡಿದಾಗ ಬದುಕಿನ ಚಿತ್ರಣ ಹಾಗೆಯೇ ಒಂದು ಕ್ಷಣ ಕಣ್ಣ ಮುಂದೆ ಹಾದುಹೋಗುತ್ತದೆ. ಹಾರಿ ಹೋಗಲೆ ಎಂದು ಬಯಸುವ ಜೀವ ತನ್ನ ಗೆಳೆಯನೊಂದಿಗೆ ತನಗೆರಡು ರೆಕ್ಕೆ ಬರೆದುಬಿಡು, ಹಕ್ಕಿಯಂತೆ ಹಾರಬೇಕು, ಚಿಂತೆ ಬಿಟ್ಟು ಚಿಂತನೆಯೊಂದಿಗೆ ಪ್ರೀತಿಯ ಉಸಿರನ್ನು ಸೇರಬೇಕು ಎಂಬ ಹಂಬಲವು ‘ಹಾರಿ ಹೋಗಲೆ’ ಕವನದಲ್ಲಿ ವ್ಯಕ್ತವಾಗಿದೆ. ಆದಿಪ್ರಾಸದಿಂದ ಅರಳಿದ ಕವನ ಎಷ್ಟು ಮುದ ನೀಡುತ್ತದೆ ಎಂದು ಚಿಗುರು ಹಾಡಲು ಕವನದಲ್ಲಿ ನೋಡಬೇಕು…

ಮನದಿ ಸವಿಯಿರೆ

ತನುವು ಚಿಗುರಲು

ಜನರ ಹೃದಯವು ಹಾಡಿತು ।

ಕನಸು ತುಂಬುತ 

ನನಸು ಕಾಣಲು ‘

ದಿನವು ಒಳಮನ ಕುಣಿಯಿತು ॥

ಮನಸ್ಸು ಕಹಿಯಿರದೆ ಇದ್ದರೆ ಈ ದೇಹ ಉಲ್ಲಸಿತಗೊಂಡು ಕನಸು ನನಸು ಮಾಡುವಲ್ಲಿ ಯಶಸ್ಸು ಕಾಣುವುದು, ಅದರಿಂದ ಒಳಮನವು ಹರುಷ ಹೊಂದುವುದು. ಆದ್ದರಿಂದ ಸಮರ ಸಾರದೆ ಜೊತೆ ಸಾಗುವ ಎಂಬ ಸುಂದರ ಭಾವವಿಲ್ಲಿ ಕಾಣಬಹುದು.”

ಕವಿ ಹಾ ಮ ಸತೀಶ ಇವರು ತಮ್ಮ ಮನದ ಮಾತಿನಲ್ಲಿ ಈ ಕೃತಿಯನ್ನು ಹೊರತರಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಪುಸ್ತಕಕ್ಕೆ ಚೊಕ್ಕದಾದ ಸುಂದರ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ ಕವಿ ಸಾಹಿತಿ ಜ್ಯೋತಿಷಿಯೂ ಆಗಿರುವ ಚಂದನ ಸಾಹಿತ್ಯ ವೇದಿಕೆಯ ಮುಖ್ಯಸ್ಥರಾದ ಭೀಮ ರಾವ್ ವಾಷ್ಪರ್ ಇವರು. ಸುಮಾರು ೬೦ ಪುಟಗಳ ಈ ಕೃತಿಯನ್ನು ಕವನಗಳ ಬಗ್ಗೆ ಆಸಕ್ತಿ ಹೊಂದಿದವರು ಹಾಗೂ ಕವನಗಳ ಬಗ್ಗೆ ಇನ್ನಷ್ಟು ತಿಳಿಯ ಬಯಸುವ ಉದಯೋನ್ಮುಖ ಕವಿಗಳು ಖಂಡಿತವಾಗಿಯೂ ಓದಲೇ ಬೇಕು.