ಕೊನೆಯ ಪುಟ...!

ಕೊನೆಯ ಪುಟ...!

ಬರಹ

ಮಳೆ ಒಂದೇ ಸಮನೆ ಧಾರಕಾರವಾಗಿ ಸುರಿಯುತ್ತಿತ್ತು.ಮನೆ ಪೂರ್ತಿಯಾಗಿ ನಿಶ್ಯಬ್ಧವಾಗಿತ್ತು.
ನಾನಿದ್ದರೂ ಇರದಂತೆ ಅದೆಲ್ಲೋ ಕಳೆದು ಹೋಗಿದ್ದೆ.ಹರಿಯುತ್ತಿದ್ದ ಮಳೆಯ ನೀರನ್ನೇ ದಿಟ್ಟಿಸುತ್ತಿದ್ದೆ.ಅದೆಂಥ ಮಿಲನವೆಂದು ಯೋಚಿಸುತ್ತಿದ್ದೆ.
ಬಾನಿಂದ ಧರೆಗಿಳಿದ ಪ್ರತಿಯೊಂದು ಪುಟ್ಟಹನಿಗೂ ಅದೆಷ್ಟು ಆಸೆ ಗಳಿವೆಯೋ ! ಅದೆಷ್ಟು ಕನಸುಗಳಿವೆಯೋ !
ಆದರೆ ಒಂಟಿಯಾಗಿ ನಿಲ್ಲಲಾರದು. ಸಡಗರದಿಂದ ಬುವಿಯೆಡೆಗೆ ಧಾವಿಸುವ ಮುತ್ತಹನಿ ಕೊನೆಗೆ ಸಂಭ್ರಮದಲಿ ಕಳೆದುಹೋಗಿ ಬೆರೆತು ಸಾಗುತ್ತಿರುತ್ತದೆ. ಹೌದು ಈ ಎಲ್ಲಾ ಮಳೆ ಹನಿಗೂ ಒಂದೇ ಕನಸೇ? ಛೇ ಇರಲಿಕ್ಕಿಲ್ಲಾ. ಮತ್ತೇಕೆ ತೆರೆಯಾಗಿ ಓಡುತ್ತಿದೆ ? ಪ್ರವಾಹದಂತೆ ಉಕ್ಕುತ್ತಿದೆ ? ನನ್ನ ಮನದಲ್ಲಿ ಅದೆಷ್ಟೊ ಯೋಚನೆಗಳು ಬೀಳುತ್ತಿರುವ ಮಳೆಯಂತೆ ಧಾರಾಕಾರವಾಗಿ ಸುರಿಯುತ್ತಿತ್ತು.ಎಲ್ಲವೂ ಒಂದಾಗಿ ಏನೂ ಅರ್ಥವಾಗದಂತೆ ತೆರೆಯಾಗಿ ತೇಲುತ್ತಿತ್ತು. ನಮ್ಮ ಬದುಕೇ ಹೀಗೆ ಮಳೆಹನಿಯಂತೆ,ಭುವಿಯೊಡಲಲಿಳಿವ ವಿಶ್ವಾಸವಿಲ್ಲ ಸಾಗರಗುಂಟ ಸಾಗುವ ಭಲವಿಲ್ಲ.

ನನ್ನೆದೆಯ ನೋವುಗಳೆಲ್ಲನನ್ನಂತರಂಗದಲ್ಲಿ ಹುದುಗಿದ್ದರೂ ಅದನ್ನೇಹೊತ್ತು ನನ್ನೆಡೆಗೆ ಬರುವ ನೆನಪುಗಳಾದರೂ ಈ ಪ್ರವಾಹದಲಿ ಕೊಚ್ಚಿಹೋಗಬಹುದೆಂದು ನೋಡುತ್ತಿದ್ದೆ.ಕೈಯ್ಯಲ್ಲಿ ಅದೆಷ್ಟೋ ಕಾಲದಿಂದ ನನ್ನೊಡನಿದ್ದ ಪುಟ್ಟ ಡೈರಿಯನ್ನು ಹೀಡಿದು ಕುಳಿತಿದ್ದೆ. ಅದರ ಹಾಳೆಗಳನು ತಿರುವಿ ಮತ್ತೆ ನೆನಪುಗಳನ್ನು ಮೆಲಕು ಹಾಕುವ ಸಾಹಸವನ್ನು ಮಾಡಲಿಲ್ಲಾ. ನನ್ನೆದೆಯ ಭಾರವು ಹರಿವ ನೀರಿಗೂ ಹೋರಲಾಗದೆ,ನಾ ಕುಸಿದು ಹೋದೇನೆಂಬ ಬಯದಿಂದಲೇ ಒಂದೊಂದೇ ಪುಟ ಹರಿದು ತೇಲಿಬಿಡುತ್ತಿದ್ದೆ.ಪ್ರವಾಹದಂತೆ ಮುನ್ನುಗ್ಗುತ್ತಿದ್ದ ನೀರು ಅದನ್ನು ಕೊಚ್ಚಿಕೊಂಡು ಸಾಗುತ್ತಿತ್ತು. ನನ್ನ ಮನದ ಈ ನೆನಪುಗಳು ನೀರಲ್ಲಿ ಕರಗುತ್ತಿತ್ತು. ಎಷ್ಟೋ ಪುಟಗಳನು ಹರಿದಿದ್ದೇನೆ,ಅದೆಷ್ಟು ಅಂತರಂಗದ ಮಾತುಗಳು ಕೊಚ್ಚಿ ಹೋಗಿದ್ದವೋ ನನ್ನ ದುಖಃ ಉಕ್ಕಿ ಹರಿಯದಂತೆ ನನ್ನೆದೆ ಕಲ್ಲಾಗಿತ್ತು. ಅದೆಷ್ಟೋ ಹೊತ್ತಿನ ನಂತರ ಒಂದು ಹನಿ ಕಂಗಳಿಂದಜಾರಿ ನೆನಪುಗಳೊಡನೆ ತೇಲಿಹೋಯಿತು.

ಡೈರಿಯಲ್ಲಿ ಕೊನೆಯದಾಗಿ ಒಂದೇಒಂದು ಹಾಳೆ ಉಳಿದಿತ್ತು. ಅದನ್ನು ಹರಿಯಲಿಲ್ಲ.ಒಮ್ಮೆ ಅದನ್ನೇ ದಿಟ್ಟಿಸಿದೆ. ಮಂದವಾದ ನಗುವೊಂದು ನನ್ನಲ್ಲಿ ಮೂಡಿತು. ನಾನು ಎದ್ದು ಒಳಹೊರಟೆ.ಆ ಕೊನೆಯ ಪುಟದಲ್ಲೇನಿದೆಯೆಂಬುದು ಹರಿವ ನೀರಿಗೆ ತಿಳಿಯಲೇ ಇಲ್ಲ.