ಕೊಪ್ಪಳ ಕೋಟೆ

ಕೊಪ್ಪಳ ಕೋಟೆ

ನಮ್ಮ ಸುತ್ತ-ಮುತ್ತಲಿರುವ ಪ್ರತಿಯೊಂದು ಐತಿಹಾಸಿ ಕೋಟೆ-ಕೊತ್ತಲುಗಳು, ಬುರುಜುಗಳು , ಮಿನಾರುಗಳಿಗೆ ಐತಿಹಾಸಿಕ ಹಿನ್ನೆಲೆ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಪ್ರಸಿದ್ಧ ಕೋಟೆ ಇದೆ. ಅದಕ್ಕೆ ತನ್ನದೇ ಆದ ಐತಿಹಾಸಿಕ "ಟ್ಯಾಗ" ಇಲ್ಲ. ಇದರ ತಂದೆ -ತಾಯಿ ಯಾರು? ಯಾರು ಕಟ್ಟಿಸಿದ್ದು? ಯಾವಾಗ ಕಟ್ಟಿಸಿದ್ದು? ಅಲ್ಲಿ ಆಳಿದ ರಾಜಮನೆತನಗಳಾವುವು ಮುಂತಾದ ಯಾವೊಂದರ ಬಗ್ಗೆಯೂ ಮಾಹಿತಿ ಇಲ್ಲದಿರುವ ನತದೃಷ್ಟ ಕೋಟೆಯೊಂದಿದೆ-ಅದು ಕೊಪ್ಪಳದಲ್ಲಿದೆ!

ಬಹುತೇಕ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ (ಅದರಾಚೆಯೂ ಕೂಡ) ಶಾತವಾಹನರು, ಚಾಲುಕ್ಯರು ಆಡಳಿತ ನಡೆಸಿದ್ದಾರೆ. ಹೀಗಿದ್ದೂ ಆ ರಾಜಮನೆತನದ ಇತಿಹಾಸದಲ್ಲಿ ಎಲ್ಲಿಯೂ ಈ ಕೋಟೆಯ, ಸಂಸ್ಥಾನದ ಉಲ್ಲೇಖವಿಲ್ಲ. ಆದರೂ ಎದೆ ಸೆಟೆದು ಕೊಪ್ಪಳ ನಗರಕ್ಕೆ ಭೂಷಣಪ್ರಾಯವಾಗಿ ನಿಂತಿದೆ ಈ ಕೋಟೆ.

ಎಲ್ಲ ಕೋಟೆಗಳಂತೆ ಇದು ಕೂಡ ತುಂಬ ಗಟ್ಟಿಮುಟ್ಟಾಗಿದ್ದು ಆಯಕಟ್ಟಿನ ಜಾಗದಲ್ಲಿದೆ. ಕೋಟೆಯ ಪ್ರವೇಶದಿಂದ ಒಮ್ಮಲೇ ಕಡಿದಾಗುವ ದಾರಿ. ಆ ದಾರಿಯುದ್ದಕ್ಕೂ ಸಾಗಿದರೆ ೪೦೦ ಅಡಿ ಎತ್ತರಕ್ಕೆ ಕರೆದೊಯ್ದು ಕೋಟೆಯ ನೆತ್ತಿಗೆ ತಲುಪಿಸುತ್ತದೆ. ಕೋಟೆಯ ನೆತ್ತಿಯಿಂದ ಕಾಣುವ ವಿಹಂಗಮ ದೃಶ್ಯಗಳು-ಶ್ರೀ ರೇವಣಶಿದ್ಧೇಶ್ವರ ಮಠ, ಪಾಲಕಿ ಗುಂಡು ಇರುವ ಮಳೆಮಲ್ಲೇಶ್ವರ ದೇವಸ್ಥಾನ ಬೆಟ್ಟ, ಅನತಿ ದೂರದಲ್ಲಿ ಕಾಣುವ ಬಹದ್ದೂರ ಬಂಡಿ ಕೋಟೆ ಮುಂತಾದವುಗಳು.

ಕೋಟೆ ಸುಮಾರಾಗಿ ಸುಸ್ಥಿತಿಯಲ್ಲೇ ಇದೆ, ಅಲ್ಲಲ್ಲಿ ಕಳ್ಳಗಿಂಡಿಗಳು, ಬಂದೂಕನ್ನಿಟ್ಟು ವೈರಿಗಳನ್ನೆದುರಿಸಲು ಇರುವ ಕೋಟೆ ಗೋಡೆಯ ಕಿಂಡಿಗಳು ಹಲವು ಚಿಕ್ಕ-ಪುಟ್ಟ ಗುಡಿಗಳು. ಆದರೆ ಯಾವ ಗುಡಿಯಲ್ಲೂ ಮೂರ್ತಿಗಳಿಲ್ಲ. ಕಲೆಯ ದೃಷ್ಟಿಯಿಂದಲೂ ಹೇಳಿಕೊಳ್ಳುವಂಥದ್ದು ಅಷ್ಟೇನಿಲ್ಲ. ಆದರೆ ಕೋಟೆಯ ಮೇಲ್ಭಾಗದಲ್ಲಿ ಇರುವ ಒಂದು ಪುಟ್ಟ ಗುಡಿಯಲ್ಲಿ ಎಲ್ಲಮ್ಮ ದೇವಿಯ 'ಅಮೂರ್ತ' ಮೂರ್ತಿಯೊಂದು ಇದೆ. ಅದಕ್ಕೆ ಸೀರೆ-ಕಂಕುಮಗಳಿಂದ ಸಿಂಗರಿಸಲಾಗಿದೆ. ಅದರ ಪಕ್ಕದಲ್ಲೇ ಇರುವ ಕೊಳದ ಹತ್ತಿರ ಅರ್ಧ ಮುರಿದು ಬಿದ್ದ ಅರಮನೆಯಂ ಕಟ್ಟಡವೊಂದಿದೆ. ಇನ್ನೂ ಮುಂದುವರಿದರೆ ಬೆಟ್ಟದ ನೆತ್ತಿ ಮೇಲೆರೆಡು ಕೊಳಗಳು (ಈಗಿನ ಮಳೆ ಕೊಯ್ಲು ಜ್ಞಾಪಿಸುವಂಥ ಮೇದು ಮಳೆ ನೀರು ಹಿಡಿದಿಡುವ ಕೊಳ, ಅದು ತುಂಬಿ ಹರಿದ ನೀರನ್ನು ಹಿಡಿದಿಡುವ ಮತ್ತೊಂದು ಕೊಳ ಹೀಗೆ ... ) ಇವೆ. ಅಲ್ಲಿಂದಲೇ ಶತೃಗಳ ಬರವನ್ನು ನೋಡಬಹುದಾದ ಸುತ್ತಲಿನ ನೋಟ ಸಿಗುತ್ತದೆ.

ಇಷ್ಟು ಹೇಳೀದಾಕ್ಷಣ ಯಾರೂ ಕೋಟೆಯ ಬಗ್ಗೆ ನಿರಾಸಕ್ತಿ ಬೆಳೆಸಿಕೊಳ್ಳಬೇಕಾಗಿಲ್ಲ. ಹೆಚ್ಚಾಗಿ ಜನರ ಓಟವನ್ನು ಕಾಣದ ಕೋಟೆಯೊಂದು ತನ್ನ ಹಳೆಯ ಸೊಗಡನ್ನು ಉಳಿಸಿಕೊಂಡು ಹೇಗಿರಬೇಕೋ, ಅದಕ್ಕೆ ಈ ಕೊಪ್ಪಳದ ಕೋಟೆಯೊಂದು ಜೀವಂತ ಉದಾಹರಣೆ. ಇಲ್ಲಿ ಅಷ್ಟಾಗಿ ಬಂಡೆಯ ಮೇಲೆ ಕೆತ್ತಿರುವುದನ್ನು ಕಾಣುವುದಿಲ್ಲ, ಲೈಟ್ ಕಂಬಗಳಿಲ್ಲ, ತಿಂಡಿ ತಿನಿಸು ತಿಂದು ಬಿಸಾಡಿದ ಪ್ಲಾಸ್ಟಿಕ್ ಕವರ್ ಮುಂತಾದ ಆಧುನಿಕ ಸಂಸ್ಕೃತಿಗಳು ಕಾಣಸಿಗುವುದಿಲ್ಲ. ಕೋಟೆಯೊಂದರ ಗುಣಲಕ್ಷಣಕ್ಕೆ ಹೇಳಿ ಮಾಡಿಸಿದಂಥ ಎಲ್ಲ ಅಂಶಗಳನ್ನು ಒಳಗೊಂಡಿದ್ದು ಅತ್ಯಂತ ಆಯಕಟ್ಟಿನ ಸ್ಥಳದಲ್ಲಿ ತಲೆಯೆತ್ತಿ ನಿಂತು ಬಹುಶ: ಹಲವಾರು ಯುಧ್ಧಗಳನ್ನು ಎದುರಿಸಿರಬಹುದಾದ ಈ ಕೋಟೆ ಎಲ್ಲೂ ಮುಪ್ಪಾಗಿಲ್ಲ.

ಇತಿಹಾಸದಲ್ಲಿ /ಪುರಾಣಗಳಲ್ಲಿ ಕೋಟೆ

ಪಾಲಕಿ ಗುಂಡು ಇರುವ ಪರ್ವತವು ಪುರಾಣದಲ್ಲಿ ಇಂದ್ರಕೀಲ ಪರ್ವತವಾಗಿದ್ದಿರಬೇಕೆಂಬ ನಂಬಿಕೆ ಇದೆ. ಸಾಮ್ರಾಟ ಅಶೋಕ ಬೌದ್ಧ ಮತಕ್ಕೆ ಮತಾಂತರಗೊಂಡ ನಂತರ ಈ ಪ್ರದೇಶದ ಸುತ್ತ-ಮುತ್ತ ಅನೇಕ ಶಾಸನಗಳನ್ನು ಕೆತ್ತಿಸಿದ್ದು ಕಂಡು ಬರುತ್ತದೆ. ಆ ನಂತರ ಇಲ್ಲೆಲ್ಲ ಜೈನ ಧರ್ಮ ಉಛ್ರಾಯ ಸ್ಥಿತಿಗೆ ಬಂದುದು ಕಂಡುಬರುತ್ತದೆ. ಆಗ ಇದನ್ನು 'ಜೈನ ಕಾಶಿ' ಎಂದು ಕರೆಯುತ್ತಿದ್ದರೆಂಬುದು ತಿಳಿದು ಬರುತ್ತದೆ. ನೃಪತುಂಗನ ಕವಿರಾಜ ಮಾರ್ಗದಲ್ಲಿ 'ವಿದಿತ ಮಹಾ ಕೊಪಣ ನಗರ' ಎಂದು ಉಲ್ಲೇಖಿತಗೊಂಡು ತನ್ನ ಐತಿಹಾಸಿಕ ಹಿನ್ನಲೆಯ ಹರಿವನ್ನು ಹೆಚ್ಚಿಸಿಕೊಂಡಿದೆ. ಇಷ್ಟೇ ಅಲ್ಲದೇ ಚಂದ್ರವಳ್ಳಿ ಶಾಸನದಲ್ಲಿ ಕೂಡ ಇದರ ಉಲ್ಲೇಖ ಬರುತ್ತದೆ.
ಇತ್ತೀಚಿನ ಇತಿಹಾಸದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಳ್ಳುವುದು ೧೭೮೬ರಲ್ಲಿ. ಈ ಕೋಟೆಯನ್ನು ಮರಾಠರಿಂದ ಟಿಪ್ಪುಸುಲ್ತಾನನು ವಶಪಡಿಸಿಕೊಳ್ಳುತ್ತಾನೆ. ನಂತರ ಫ್ರೆಂಚ ಇಂಜಿನಯರುಗಳ ಸಹಾಯದಿಂದ ಕೋಟೆಯನ್ನು ದುರಸ್ತಿಗೊಳಿಸುತ್ತಾನೆ. ಆದರೆ ಅಷ್ಟೇ ಬೇಗ ಅಂದರೆ ೧೭೯೦ಲ್ಲಿ ಇಂಗ್ಲೀಷರ 'ಹಿಕ್ ಮತ್'ನಿಂದ ಹೈದ್ರಾಬಾದ್ ನಿಜಾಮನಿಗೆ ಸೋಲುತ್ತಾನೆ. ಆನಂತರವಂತೂ ಉಪೇಕ್ಷಿತ ಹಾಗೂ ನಿರ್ಜೀವ ನಗರವಾಗಿ ಇಹಾಸದುದ್ದಕ್ಕೂ ಉಳಿದುಕೊಂಡು ಬಂದಿದೆ.
ಸ್ವಾತಂತ್ರದ ನಂತರದಿಂದ ಈಗಿನವರೆಗೆ ಆಗಿರುವ ಅಭಿವೃದ್ಧಿಯೇನೂ ತೃಪ್ತಿಕರವಾಗಿಲ್ಲ. ನಾಮಕಾವಾಸ್ತೆ ಒಂದಷ್ಟು ಶಾಲಾ-ಕಾಲೇಜುಗಳು ಆಗಿದ್ದು ಬಿಟ್ಟರೆ (ಇದರಲ್ಲೂ ಶ್ರೀಮಠದ ಕೊಡುಗೆ ಗಣನೀಯವಾಗಿದೆ) ಇತ್ತೀಚೆಗೆ ಉದ್ಘಾಟನೆಯಾದ ಸಿಂಗಟಾಲೂರು ನೀರಾವರಿ ಯೋಜನೆ ಮಾತ್ರ ಹೇಳಿಕೊಳ್ಳುವಂಥಾದ್ದು.

ಕೋಟೆಯ ದುಸ್ಥಿತಿ:
ಆಶ್ಚರ್ಯವೆಂದರೆ ಕೊಪ್ಪಳದ ನಿವಾಸಿಗಳನೇಕರಿಗೆ ಕೋಟೆಯ ಪ್ರವೇಶ ದ್ವಾರ ಎಲ್ಲಿದೆ ಎಂಬುದು ತಿಳಿದಿಲ್ಲ. ಅನೇಕ ರನ್ನು ಕೇಳಿಕೊಂಡು ಪ್ರವೇಶ ದ್ವಾರವನ್ನು ಹುಡುಕಿದ್ದಾಯ್ತು. ಕೋಟೆಯ ಪ್ರವೇಶದ್ವಾರದ ಆಸು-ಪಾಸಿನ ಪರಿಸರವಂತೂ ಮನುಷ್ಯರಾರೂ ಇರಬಾರದಂಥ ಸ್ಥಿತಿಯಲ್ಲಿದೆ. ಹಂದಿಗಳೂ ಹೋಗಲು ಹೇಸಿಕೊಳ್ಳುವಷ್ಟು ಕೊಳಕು ತುಂಬಿದೆ. ಅಷ್ಟೇ ಅಲ್ಲದೆ ಕೋಟೆಯ ಪ್ರವೇಶದ್ವಾರಕ್ಕೆ ಕರೆದೊಯ್ಯಲು 'ರಸ್ತೆ' ಅನ್ನುವಂಥದ್ದೊಂದು ಇಲ್ಲವೇ ಇಲ್ಲ. ಯಾವುದೋ ಕಾಲದಲ್ಲಿ ಸರ್ಕಾರಿ ಹಣದಲ್ಲಿ ಕಾಂಕ್ರೀಟ ರಸ್ತೆ ಮಾಡಿದ್ದಾರೆ. ಆದರೆ ಅದನ್ನು ಆ ಕೊಳಕಿನಲ್ಲಿ ಹುಡುಕಬೇಕು.
ಇನ್ನು ವ್ಯವಸ್ಥಿತ ಪ್ರಚಾರವಿಲ್ಲದೇ ಪ್ರವಾಸಿಗರು ಬರುವುದು ತುಂಬ ವಿರಳ. ಬಂದವರೂ ಮೂಗು ಮುಚ್ಚಿಕೊಂಡು ನಡೆಯಬೇಕು. ಸರಾಸರಿ ತಿಂಗಳಿಗೆ ೫-೬ ಜನ (ತಂಡಗಳು) ಕೋಟೆ ನೋಡಲು ಬರುತ್ತಾರೆ ಎಂದು ಅಲ್ಲಿನ ಅನೇಕರಿಂದ ತಿಳಿದು ಬಂತು. ಬಹುಶ: ಸಾವಿರಾರು ವರ್ಷಗಳ ಇತಿಹಾಸವಿರಬಹುದಾದ ಕೋಟೆಗೆ ಈ ದುರವಸ್ಥೆ ಬರಬಾರದಿತ್ತು.
ಮುಂಡರಗಿ ಭೀಮರಾಯರು
೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮಗಳು ಕರ್ನಾಟಕದಲ್ಲೂ ಉಂಟಾದವು. ಕೊಪ್ಪಳದ ಇತಿಹಾಸಕ್ಕೆ ಸಂಬಂಧ ಪಟ್ಟಂತೆ ಮುಂಡರಗಿ ಭೀಮರಾಯರ ಬಂಡಾಯವನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಭೀಮರಾಯರು ಗದುಗಿನ ನಂದಗೌಡರ ಮಗ. ಇವರು ಬಳ್ಳಾರಿಯಲ್ಲಿ ತಹಸೀಲುದಾರರಾಗಿದ್ದರು. ಲೆಕ್ಕ-ಪತ್ರದಲ್ಲಿ 'ಅಪರಾ-ತಪರಾ' ಮಾಡಿದ್ದಾರೆಂದು
ಆಗಿನ ನಿಜಾಮ ಸರ್ಕಾರ ಬ್ರಿಟಿಶರ ಮಾತು ಕೇಳಿ ಭೀಮರಾಯರನ್ನು ಕೆಲಸದಿಂದ ತೆಗೆದು ಹಾಕಿತು. ಇದರಂದ ಸಿಟ್ಟಿಗೆದ್ದ ಭೀಮರಾಯರು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದರು. ಆಗ ಅವರು ನರಗುಂದ, ಸೊರಟೂರು, ಡಂಬಳ ಮುಂತಾದ ದೇಸಾಯರು, ಜಾಗೀರುದಾರರನ್ನು ಹೊತೆಗೆ ಸೇರಿಸಿಕೊಂಡು ಕಂಪಣಿ ಸರ್ಕಾರದ ವಿರುದ್ಧ ಮಸಲತ್ತು ಮಾಡತೊಡಗಿದರು. ಇದರ ಸುಳುವು ಸಿಕ್ಕ ಸರ್ಕಾರ ಇವರ ಬೆನ್ನು ಬಿತ್ತು. ಸರ್ಕಾರದ ಕಣ್ಣಿಂದ ತಪ್ಪಿಸಿಕೊಳ್ಳಲು ಒಂದೆಡೆ ನಿಲ್ಲದೇ ಸ್ಥಳೀಯರನ್ನು ಸಂಘಟಿಸುತ್ತ ಹೆಚ್ಚು ಕಡಿಮೆ ಭೂಗತರಾಗಿ ತಿರುಗಹತ್ತಿದರು. ಇವರ ಹಂಡತಿ ಜೀಜಾಬಾಯವರ ತವರು ಮನೆ ಕೊಪ್ಪಳ. ಹಾಗಾಗಿ ಅಲ್ಲಿಗೆ ಬಂದ ಭೀಮರಾಯರು ಕೆಂಚನಗೌಡನೆಂಬ ಸ್ಥಳೀಯನೊಂದಿಗೆ ಸೇರಿಕೊಂಡು ಆಡಳಿತಕ್ಕೆ ಸೆಡ್ಡು ಹೊಡೆದು ಕೊಪ್ಪಳ ಕೋಟೆಯ ಕೇಂದ್ರವನ್ನಾಗಿ ಮಾಡಿಕೊಂಡು ಕಂಪಣಿ ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸಹತ್ತಿರು. ಆದರೆ ಇದು ಹಚ್ಚುದಿನ ನಡೆಯಲಿಲ್ಲ. ಒಂದೆಡೆ ಬಳ್ಳಾರಿಯಿಂದ ಮತ್ತೊಂದೆಡೆ ಧಾರವಾಡದಿಂದ ಕಂಪಣಿ ಸರ್ಕಾರದ ಕಲೆಕ್ಟರರುಗಳು ದಂಡೆತ್ತಿ ಬಂದರು. ಆಗ ಸಾಕಷ್ಟು ಪ್ರತಿರೋಧ ಒಡ್ಡಿದರೂ ಕಂಪಣಿ ಸರ್ಕಾರದ ಬಂದೂಕು-ತೋಪುಗಳ ಮುಂದೆ ಭೀಮರಾಯರು ಮತ್ತು ಕೆಂಚನಗೌಡರು ಕೊಪ್ಪಳ ಕೋಟೆಯ ಮೆಟ್ಟಿಲುಗಳ ಮೇಲೆ ಪ್ರಾಣ ಬಿಟ್ಟರು.ಬಹುಶ: ಭೀಮರಾಯರ ಹತ್ತಿರ ಕಂಪಣಿ ಸರ್ಕಾರದವರ ತರಹ ತೋಫು-ಗುಂಡುಗಳು ದ್ದಿದ್ದರೆ ಫಲಿತಾಂಶ ಬೇರೆಯದೇ ಆಗಿರುತ್ತಿತ್ತೇನೊ?
ಏನು ಮಾಡಬಹುದು:

  • ಮೊದಲಿಗೆ ಜಿಲ್ಲಾಡಳಿತ ಹಾಗು ಸರ್ಕಾರಿ ಯಂತ್ರಗಳು ಎಚ್ಚತ್ತುಕೊಳ್ಳಬೇಕು. ಕೋಟೆ ತಳದ ಸುತ್ತಲಿನ ಪ್ರದೇಶದಿಂದ ಒತ್ತುವರಿಯನ್ನು ತೆಗೆಸಿ ನೈರ್ಮಲ್ಯಕ್ಕೆ ಆದ್ಯತೆ ಕೊಡಬೇಕು.
  • ಇತಿಹಾಸ ಪ್ರೇಮಿಗಳು, ನಗರದ ಯುವಕ ಸಂಘ-ಸಂಸ್ಥೆಗಳು ಕೋಟೆ ಮತ್ತು ಊರಲ್ಲಿರುವ ಐತಿಹಾಸಿಕ ಸ್ಮಾರಕಗಳ ಪಟ್ಟಿ ತಯಾರಿಸಿ ಅವುಗಳ ಬಗ್ಗೆ ವಿವರಗಳನ್ನು ಕಲೆಹಾಕಿ ಪ್ರಚುರ ಪಡಿಸಬೇಕು.
  • ಕೊಪ್ಪಳವೇ ಅಲ್ಲದೆ ಅದರ ಸುತ್ತ-ಮುತ್ತಲು ಇರುವ ಐತಿಹಾಸಿಕ ಸ್ಥಳಗಳನ್ನೆಲ್ಲ ಜೋಡಿಸುವ 'ಪ್ರವಾಸಿ ವರ್ತುಲ' ರಚಿಸಿ ಪ್ರವಾಸಿಗಳಿಗೆ ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು.
  • ಇವೆಲ್ಲವುಗಳ ಜೊತೆಗೆ ಕೇಂದ್ರ-ರಾಜ್ಯ ಪ್ರಾಚ್ಯವಸ್ತು ಇಲಾಖೆಗಳಿಗೆ ಕೊಪ್ಪಳದ ಇತಿಹಾಸದ ಮೇಲೆ ಬೆಳಕು ಚೆಲ್ಲಬಹುದಾದ ಸಂಶೋಧನೆ ಕೈಗೊಳ್ಳಲು ಒತ್ತಡ ಹೇರಬೇಕು.

ಚಿತ್ರದ ಕೊಂಡಿಗಳು:

೧. ಕೊಪ್ಪಳ ನಗರದಿಂದ ಕೋಟೆ ನೋಟ

೨. ಕೋಟೆ ಒಳಗಿನ ಪ್ರವೇಶ ದ್ವಾರ

೩. ಕೋಟೆ ಮೇಲೇರುವ ದಾರಿಯಲ್ಲಿ

----

Comments

Submitted by venkatb83 Wed, 10/10/2012 - 18:52

ಕೊಪ್ಪಳ ಕೋಟೆ ಬಗ್ಗೆ ಒಳ್ಳೆ ಮಾಹಿತಿ.... ಈ ರೀತಿ ಕೋಟೆ ಕೊತ್ತಲುಗಳ ಸರಿಯಾದ ನಿರ್ವಹಣೆ - ಜವಾಬ್ಧಾರಿ ಸರಕಾರದ್ದು ಮಾತ್ರ ಅಲ್ಲ ನಮ್ದೂ ಹೌದು.. ನಮ್ ರಾಯಚೂರಿನ ಕೋಟೆಗೆ ಒದಗಿದ ದುಸ್ತಿತಿ ಬೇರೆಲ್ಲೂ ಆಗದಿರಲಿ..!! (ಹಿಂದೊಮ್ಮೆ ನಮ ಜಿಲ್ಲಾಧಿಕಾರಿಗಲಾಗಿದ್ದ ಅಶೋಕ ದಳವಾಯಿಅವರು ಮುತುವರ್ಜಿ ವಹಿಸಿ ರಿಪೇರಿ ಮಾಡಿಸಿ ಅಂದ ಗೊಳಿಸಿದ್ದರು ಆದ್ರೆ ಈಗ ಮತ್ತೆ ಜನ ಆಗಳನ್ನು ಕೆಡವಿ ಕಾಂಪ್ಲೆಕ್ಸ್ ಕತ್ತಿಸುತ್ತಿರುವರು.. ಅತಿಕ್ರಮಣ ಕಣ್ಣೆದುರೇ ಆಗುತ್ತಿದ್ದರು ಸೋಲ್ಲೆತುವವರು ಒಬ್ಬರಿಲ್ಲ...:((( ಶುಭವಾಗಲಿ.. \|