ಕೊರೆವ ಚಳಿ ಉರಿವ ಬಿಸಿಲಿನ ಮಾಗಿಕಾಲ

ಕೊರೆವ ಚಳಿ ಉರಿವ ಬಿಸಿಲಿನ ಮಾಗಿಕಾಲ

ಬರಹ

ಮಾಗಿಕಾಲದಲ್ಲಿ ಹಗಲು ಕಡಿಮೆ, ರಾತ್ರಿ ಸುಧೀರ್ಘ. ಸಂಜೆ ಐದುಮುಕ್ಕಾಲಿಗೆಲ್ಲಾ ಹೊತ್ತು ಮುಣುಗಿ ಮಕ್ಕತ್ತಲಾದರೆ ಬೆಳಿಗ್ಗೆ ಆರು ಗಂಟೆ ದಾಟಿದರೂ ಸಹ ಬೆಳಕರಿಯುವುದಿಲ್ಲ. ಮಾಗಿ ಕಾಲದ ಮತ್ತೊಂದು ಲಕ್ಷಣವೆಂದರೆ ಚಳಿ ಮತ್ತು ತೀಕ್ಷ್ಣ ಬಿಸಿಲು. ಸಂಜೆ, ರಾತ್ರಿ ಮತ್ತು ಬೆಳಗಿನ ೯ ಗಂಟೆಯವರೆಗೂ ಮೈಕೊರೆಯುವ ಚಳಿ ಇದ್ದರೆ ನಡು ಹಗಲಲ್ಲಿ ಚುರು-ಚುರು ಬಿಸಿಲು. ನೆತ್ತಿ ಮೇಲಿನ ಸೂರ್ಯ ಹೆಚ್ಚು ಪ್ರಖರವಾಗಿರುತ್ತಾನೆ. ಬೆಳಿಗ್ಗೆ ಆಫೀಸಿಗೆ ಅಥವಾ ಹೊರಗೆ ಹೋಗುವಾಗ ಸ್ವೆಟರ್ ಹಾಕಿಕೊಳ್ಳಬೇಕೆನಿಸಿದರೆ ಹನ್ನೊಂದು ಗಂಟೆಗೆಲ್ಲಾ ತೆಗೆದು ಹಾಕಬೇಕೆನಿಸುತ್ತದೆ.

ಬಿಡುವು ಮಾಡಿಕೊಂಡು ವ್ಯವಧಾನದಿಂದ ಸುತ್ತಲಿನ ನಿಸರ್ಗವನ್ನು ಗಮನಿಸುವವರಿಗೆ ಈ ಕಾಲದಲ್ಲಾಗುವ ಬದಲಾವಣೆಗಳು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತವೆ. ಹಳ್ಳಿಗರು, ಒಕ್ಕಲು ಮಕ್ಕಳು ಈ ಪಲ್ಲಟವನ್ನು ಗುರುತಿಸುತ್ತಾರೆ ಮತ್ತು ಅನುಭವಿಸುತ್ತಾರೆ.ಮಾಗಿ ಹೊತ್ತು ಕಣ್ಣಗ್ ಬೆಳಕಿದ್ದಂಗೆ ಕೆಲ್ಸ ಮುಗ್ಸಿ ಮನೆ ಸೇರ್ಕಳಿ ಎಂದು ಎಚ್ಚರಿಸುವ ಮಾತುಗಳನ್ನು ಪದೇ-ಪದೇ ಹೇಳುತ್ತಿರುತ್ತಾರೆ. ಆದರೆ ನಗರವಾಸಿಗಳಿಗೆ, ಒತ್ತಡದಲ್ಲಿ ಕೆಲಸ ಮಾಡುವವರಿಗೆ, ಶಿಫ್ಟ್ ಗಳಲ್ಲಿ ದುಡಿಯುವವರಿಗೆ ಮಾಗಿ ಋತುವಿನಲ್ಲಾಗುವ ಸೂಕ್ಷ್ಮ ಏರು-ಪೇರುಗಳು ಅರಿವಾಗುವುದಿಲ್ಲ, ಈ ಸುಂದರ ಅನುಭೂತಿಯಿಂದ ಅವರು ವಂಚಿತರಾಗುತ್ತಾರೆ.

ಮಾಗಿ ಕಾಲದ ಹಗಲು ಹೊತ್ತಿನಲ್ಲಿ ತಲೆ ಎತ್ತಿ ಮೇಲೆ ನೋಡಿದರೆ ಆಕಾಶದ ತುಂಬಾ ಮೋಡಗಳ ಸಂತೆ. ಅಚ್ಚಬಿಳಿ, ಕಂದು ಬಿಳಿ, ಕಪ್ಪು ಬಿಳಿ ಬಣ್ಣದ ಮೋಡಗಳು, ಒತ್ತೊತ್ತಾಗಿ, ಬಿಡಿ-ಬಿಡಿಯಾಗಿ, ಚದುರಿದಂತೆ ತಮಗಿಷ್ಟ ಬಂದಂತೆ ಇರುತ್ತವೆ. ಸುಮ್ಮನೆ ನಿಶ್ಚಲವಾಗಿರುವ ಇವು ಸುಮ್ಮನಿದ್ದು ಬೇಜಾರಾದರೆ ಅತ್ತಿಂದಿತ್ತ-ಇತ್ತಿಂದತ್ತ ಅಡ್ಡಾಡುವುದೂ ಉಂಟು. ಕೆಲವಂತೂ ತುರ್ತು ಕೆಲಸವಿರುವಂತೆ ಬೀಸುಗಾಲಲ್ಲಿ ಓಡುತ್ತಿರುತ್ತವೆ. ಆಗಾಗ ಒಂದು ಇನ್ನೊಂದನ್ನು ಅಟ್ಟಿಸಿಕೊಂಡು ಹೋಗುತ್ತಿರುತ್ತವೆ. ಹೀಗೆ ಓಡುವಾಗ ಇವು ತಮ್ಮ ಆಕಾರ ಬದಲಾಯಿಸಿಕೊಳ್ಳುವುದನ್ನು ಮತ್ತು ಕೆಲವು ಹಾಗೇ ಹಿಂಜಿಕೊಂಡು ಕರಗಿ ಹೋಗುವುದನ್ನು ನೋಡುವುದು ಸೊಗಸು. ಆನೆ, ಮೊಲ, ಒಂಟೆ, ಬೆಟ್ಟ ಇತ್ಯಾದಿಯಲ್ಲದೆ ಗತಿಸಿ ಹೋಗಿರುವ ಡೈನೋಸಾರ್ಗಳ ರೂಪವನ್ನೂ ಸಹ ಮೋಡಗಳು ಧರಿಸುತ್ತವೆ. ಆಕಾಶದ ನೀಲಿ ಬಣ್ಣದ ಹಿನ್ನೆಲೆಯಲ್ಲಿ ಎದ್ದು ಕಾಣುವ ಇವುಗಳನ್ನು ಎತ್ತರದ ಬಂಡೆ, ಗುಡ್ಡ ಅಥವಾ ಮಹಡಿಯ ಮೇಲೆ ಮಲಗಿ ಗಮನಿಸುವ ಅನುಭವ ವಿಶಿಷ್ಟವಾದದ್ದು.

ಈ ಕಾಲದಲ್ಲಿ ಸೂರ್ಯ ಪ್ರಖರವಾಗಿರುತ್ತಾನೆಂದು ಆರಂಭದಲ್ಲಿ ಹೇಳಿದೆ. ಮಾಗಿ ಬಿಸಿಲು ಎಂಬ ವಿಶೇಷಣವೇ ಇದಕ್ಕಿದೆ. ಮಾಗಿ ಬಿಸಿಲಿಗೆ ಕಾವು ಜಾಸ್ತಿ ಎಂದು ರೈತರು ಹೇಳುತ್ತಾರೆ. ಅವರ ಪ್ರಕಾರ ಈ ಬಿಸಿಲಿನಲ್ಲಿ ಮೈಕಾಯಿಸುವುದು ಇಲ್ಲವೇ ಹೆಚ್ಚು ಹೊತ್ತು ಅಡ್ಡಾಡುವುದು ಒಳ್ಳೆಯದಲ್ಲ. ಆದರೂ ಮಾಗಿ ಬಿಸಿಲಿಗೆ ಮೈಯೊಡ್ಡಿದರೆ ಬಲುಹಿತವಾಗಿರುತ್ತದೆ. ಆದರೆ ಹೆಚ್ಚು ಹೊತ್ತು ನಿಂತರೆ ನೆತ್ತಿ, ಚರ್ಮ ಚುರುಗುಡಲಾರಂಭಿಸುತ್ತದೆ. ಬಿಸಿಲಿನ ಝಳಕ್ಕೆ ಕಣ್ಣುಗಳು ತಂತಾನೇ ಮುಚ್ಚಿಕೊಳ್ಳುತ್ತವೆ. ನೆಲಕ್ಕೆ ಬಿದ್ದ ತೀಕ್ಷ್ಣ ಬಿಸಿಲು ಪ್ರತಿಫಲಿಸುವುದರಿಂದ ಹೀಗಾಗುತ್ತದೆ. ಗಿಡ-ಮರದ ಎಲೆಗಳು, ಗರಿಗಳು, ವಿಶೇಷವಾಗಿ ಜೋಳದ ಗರಿಗಳು, ಹುಲ್ಲಿನೆಸಳುಗಳು ಬಿಸಿಲಿಗೆ ಹೊಳೆಯುತ್ತಿರುವುದನ್ನು ನೋಡಬಹುದು.

ಮೋಡಗಳಿಗೂ ಸೂರ್ಯನಿಗೂ ಜಟಾಪಟಿ ನಡೆಯುವುದು ಈ ಕಾಲದ ಮತ್ತೊಂದು ವಿಶೇಷ. ಮೋಡಗಳು ಸೂರ್ಯನನ್ನು ಮರೆಮಾಡಿ ಓವರ್ಟೇಕ್ ಮಾಡಲು ಹೆಣಗುತ್ತಿದ್ದರೆ, ಸೂರ್ಯ ಮೋಡಗಳ ಹಿಂಡನ್ನು ಓಡಿಸಿ ಗ್ರೌಂಡ್ ಕ್ಲಿಯರ್ ಮಾಡಲು ಅಥವಾ ಕರಗಿಸಿ ವೈರಿ ಪಡೆಯನ್ನು ಸಂಪೂರ್ಣ ಇಲ್ಲವಾಗಿಸಲು ಹವಣಿಸುತ್ತಿರುತ್ತಾನೆ. ಸ್ವಲ್ಪ ಎತ್ತರದಲ್ಲಿ ನಿಂತು ಗಮನಿಸಿದರೆ ಇವರಿಬ್ಬರ ಕಾಳಗದ ಅನುಭವವಾಗುತ್ತದೆ. ಸ್ವಲ್ಪ ಹೊತ್ತು ನೆರಳು ಕವಿದರೆ ಸ್ವಲ್ಪ ಹೊತ್ತು ಬಿಸಿಲು ಬರುತ್ತಾ ಖೋ ಖೋ ಆಡುತ್ತಿರುತ್ತವೆ. ವಿಶಾಲವಾದ ನೆರಳಿನ ಬಯಲೊಂದು ದೂರದಲ್ಲಿ ಹೊಲ, ಬೆಟ್ಟ, ಮನೆ ಇತ್ಯಾದಿಗಳನ್ನು ಆಕ್ರಮಿಸುತ್ತಾ ನಮ್ಮತ್ತ ಬರುವುದು ಮತ್ತು ನಮ್ಮಿಂದ ಸರಿದು ದೂರವಾಗುವುದನ್ನು ಕಾಣಬಹುದು. ಪದೇ-ಪದೇ ಇದು ಪುನರಾವರ್ತನೆಯಾಗುತ್ತಿರುತ್ತದೆ.

ಇನ್ನು ರೈತರಿಗೆ ಮಾಗಿಕಾಲದಲ್ಲಿ ಕೈತುಂಬ ಕೆಲಸ. ಮುಂಗಾರಿನಲ್ಲಿ ಬಿತ್ತಿದ ಬೆಳೆಗಳೆಲ್ಲಾ ತೆನೆ ಬಿಟ್ಟು ಹಣ್ಣಾಗುತ್ತಿರುತ್ತವೆ. ಗದ್ದೆ ಕುಯಿಲು, ರಾಗಿ ತೆನೆ ಎತ್ತುವುದು, ಹರಳು ಗೊನೆ ಮುರಿಯುವುದು, ಮೆಣಸಿನ ಹಣ್ಣು ಬಿಡಿಸುವುದು, ಕಡ್ಲೆ ಗಿಡ ಕೀಳುವುದು, ಜೋಳದ ಕಡ್ಡಿ ಕತ್ತರಿಸುವುದು, ಒಕ್ಕುವುದು, ಒಣಗಿಸುವುದು, ಬಡಿಯುವುದು, ಗಟ್ಟಿ-ಜೊಳ್ಳು ಬೇರ್ಪಡಿಸುವುದು... ಹೀಗೆ ದಿನವಿಡೀ ಕೆಲಸ. ಮೂರೊತ್ತೂ ಹೊಲದಲ್ಲೇ ಇರಬೆಕು. ಅವರ ಆಡು ಮಾತಿನಲ್ಲೆ ಹೇಳುವುದಾದರೆ “ತಿಕ ತುರಿಸಿಕೊಳ್ಳೋಕೂ ಪುರುಸೊತ್ತಿಲ್ಲ”. ಕೈಗೆ ಬಂದದ್ದನ್ನು ಸಕಾಲದಲ್ಲಿ ಒಪ್ಪ ಮಾಡಿಕೊಳ್ಳದಿದ್ದರೆ ಬೆಳೆಯೆಲ್ಲಾ ಮಣ್ಣು ಪಾಲಾಗುತ್ತದೆ ಎಂಬ ಸಹಜ ದಡುಗು ಅವರದು.

ದನಕರುಗಳನ್ನು ಚೆನ್ನಾಗಿ ಮೇಯಿಸಲು ಇದು ಸೂಕ್ತ ಕಾಲ. ಬಯಲು, ಹೊಲದ ಬದುಗಳು, ಹಳ್ಳದ ಬದಿ, ಗುಡ್ಡದ ಬಾರೆ, ಬೆಟ್ಟದ ಕಿಬ್ಬಿ ಹೀಗೆ ಎಲ್ಲೆಲ್ಲೂ ಹಸಿರು ಮೇವು ಬೆಳೆದಿರುತ್ತದೆ. ದನಗಳಿಗೆ ಹಸಿರು ಮೇವು ತಿನ್ನಿಸಿ ಮೈ ದುಂಡಗೆ ಮಾಡಿದರೆ ಮುಂದೆ ಮಾರುವಾಗ ಒಳ್ಳೆಯ ರೇಟು ಸಿಗುತ್ತದೆ. ಹಾಗಾಗಿ ರೈತರು ಜಾನುವಾರುಗಳ ಆರೈಕೆಗೆ ಹೆಚ್ಚು ಗಮನ ನೀಡುತ್ತಾರೆ. ವಿಶೇಷವಾಗಿ ಹೋರಿಗಳಿಗೆ ಸಾಯಂಕಾಲ ಮತ್ತು ಬೆಳಗಿನ ಜಾವ ಜೋಳದ ಸೆಪ್ಪೆ (ಕಡ್ಡಿ) ತಿನ್ನಿಸುತ್ತಾರೆ. ಈ ಉದ್ದೇಶಕ್ಕಾಗಿಯೆ ಗೋವಿನಜೋಳ ಎಂಬ ತಳಿಯನ್ನು ರೈತರು ಬೆಳೆಯುತ್ತಾರೆ. ಮನೆಯ ಜಗಲಿ ಅಥವಾ ಗಾಡಿಯ ಮೂಕಿನ ಬಳಿ ಹೋರಿಗಳನ್ನು ನಿಲ್ಲಿಸಿಕೊಂಡು, ಚಳಿ ತಡೆಯಲು ರಗ್ಗು ಹೊದ್ದುಕೊಂಡು ಸೆಪ್ಪೆ ತಿನ್ನಿಸುವ
ದೃಶ್ಯ ಮಾಗಿ ಕಾಲದಲ್ಲಿ ಸರ್ವೇ ಸಾಮಾನ್ಯ. ಆದರೆ ಇತ್ತೀಚೆಗೆ ಜಾನುವಾರುಗಳ ಸಂಖ್ಯೆಯೇ ಕಡಿಮೆಯಾಗುತ್ತಿರುವುದರಿಂದ ಈ ಪದ್ಧತಿಯೂ ಕಣ್ಮರೆಯಾಗುತ್ತಿದೆ.

ಮಾಗಿಕಾಲದ ಹಗಲುಗಳಿಗೆ ರಂಗೇರುವುದು ಸಂಜೆ ಹೊತ್ತು! (ಚಳಿ ವಿಪರೀತವಾದ್ದರಿಂದ ನರ ಮನುಷ್ಯರ ಸಂಜೆಗಳೂ ರಂಗೇರುತ್ತವೆ!!) ಸೂರ್ಯ ತಾನೂ ಹೊಂಬಣ್ಣಕ್ಕೆ ತಿರುಗಿ ತನ್ನ ಸುತ್ತಲಿನ ಮೋಡಗಳಿಗೂ ಅದೇ ಮೆರುಗು ನೀಡಿರುತ್ತಾನೆ. ಹತ್ತಿಯ ಗುಡ್ಡೆಗಳಂತೆ ಚಿತ್ರ ವಿಚಿತ್ರ ಆಕಾರದಲ್ಲಿರುವ ಮೋಡಗಳು ಬಣ್ಣದ ಸಿಂಚನದಿಂದ ಹೊಳೆಯುವ ಚಂದವೇ ಚಂದ. ಬರೆದಿಟ್ಟ ಚಿತ್ರಗಳಂತೆ ಆ ಸಂದರ್ಭದಲ್ಲಿ ಪಶ್ಚಿಮ ದಿಕ್ಕು ರಮಣೀಯವಾಗಿರುತ್ತದೆ. ಹಾಗೂ ಕ್ಷಣ-ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಕಾವು ಕಳೆದುಕೊಂಡಿರುವ ಸೂರ್ಯನ ಕಿರಣಗಳು ಮೋಡದ ಸಂದುಗಳಿಂದ ತೂರಿ ಹೋಗಿರುವ ನೋಟವಂತೂ ಅದ್ಭುತ. ಎತ್ತರದ ಗಿಡ-ಮರಗಳು ಕಪ್ಪಗೆ ನೆರಳಿನಂತೆ ಕಾಣುತ್ತಿರುತ್ತವೆ.

ಮಾಗಿಯ ಸಂಜೆಯದು ಈ ಕತೆಯಾದರೆ ಮಾಗಿಯ ಬೆಳಗಿನ ಕತೆಯೇ ಬೇರೆ. ರಾತ್ರಿ ಬಿದ್ದ ಮಂಜು ಕರಗುತ್ತಿರುತ್ತದೆ. ಸೂರ್ಯನ ಕಿರಣಗಳಿಗೆ ಎದುರಾಗಿ ನಿಂತು ನೋಡಿದರೆ ಹೊಲ -ಗದ್ದೆ, ತೋಟ-ತುಡಿಕೆಯಾದಿಯಾಗಿ ಪ್ರತಿಯೊಂದೂ ಚರಾಚರ ವಸ್ತುಗಳೂ ಸಹ ಥಳ-ಥಳ ಹೊಳೆಯುತ್ತಿರುತ್ತವೆ. ವಿಶೇಷವಾಗಿ ಗರಿಕೆ, ತಪರೆ, ಗಂಟಿಗ, ಹಂಚಿ, ಕಾಡಂಚಿ ಮುಂತಾದ ಹುಲ್ಲಿನೆಸಳುಗಳನ್ನು ನೋಡಬೇಕು. ಎಳೆಬಿಸಿಲು, ತೆಳುವಾದ ಇಬ್ಬನಿಯಿಂದಾಗಿ ಚಿನ್ನದ ಹೊಳಪು ಬಂದಿರುತ್ತದೆ ಅವಕ್ಕೆಲ್ಲಾ. ಸ್ವಲ್ಪ ಬಿಸಿಲು ಬಲಿತಂತೆಲ್ಲಾ ಆ ಚಿನ್ನದ ಲೇಪನ ಬೆಳ್ಳಿಯ ಲೇಪನವಾಗಿ ಬದಲಾಗುತ್ತದೆ. ಆ ಬೆಳಕಿನಲ್ಲಿ ಹುಲ್ಲಿನ ಗರಿ, ಎಲೆ, ಕಾಂಡಗಳ ಮೇಲಿನ ಚಿಕ್ಕ-ಚಿಕ್ಕ ರೋಮಗಳೂ, ಮುಳ್ಳುಗಳೂ ಸಹ ಅತಿ ಸ್ಪಷ್ಟವಾಗಿ ಗೋಚರಿಸುತ್ತಿರುತ್ತವೆ.

ಸ್ವತಃ ನೋಡಿಯೇ ಅದರ ರೋಮಾಂಚನವನ್ನು ಅನುಭವಿಸಬೇಕು. ನಮ್ಮ ಸುತ್ತ-ಮುತ್ತಲಲ್ಲೇ ನಡೆಯುವ ಪ್ರಕೃತಿಯ ಈ ವ್ಶೆಚಿತ್ರ್ಯದಿಂದ ವಂಚಿತರಾಗಬಾರದು.