ಕೊರೊನಾ ವೈರಸಿನ ರುದ್ರನರ್ತನದ ಪ್ರಶ್ನೆ: ಬದುಕಿನಲ್ಲಿ ಯಾವುದು ಮುಖ್ಯ?

ಕೊರೊನಾ ವೈರಸಿನ ರುದ್ರನರ್ತನದ ಪ್ರಶ್ನೆ: ಬದುಕಿನಲ್ಲಿ ಯಾವುದು ಮುಖ್ಯ?

ವಸುದೈವ ಕುಟುಂಬ ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎನ್ನುತ್ತಿದ್ದೆವು. ಈ ಮಾತಿನ ಸತ್ಯ ಏನೆಂದು ಅರ್ಥವಾಗಬೇಕಾದರೆ ಕೊರೊನಾ ವೈರಸ್ (ಕೋವಿಡ್ ೧೯) ಎಂಬ ಕಣ್ಣಿಗೆ ಕಾಣದ ಜೀವಿ ರುದ್ರನರ್ತನ ಮಾಡಬೇಕಾಯಿತು.

ಜನವರಿ ೨೦೨೦ರ ಆರಂಭದಲ್ಲೇ ಚೀನಾದ ವುಹಾನ್ ಪ್ರ್ಯಾಂತ್ಯದಲ್ಲಿ ಶುರುವಾದ ಅದರ ಆಕ್ರಮಣ ಇದೀಗ ಇಡೀ ಜಗತ್ತಿಗೆ ವ್ಯಾಪಿಸಿದೆ. ವರುಷದ ಕೊನೇ ದಿನ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ ೮.೩೩ ಕೋಟಿ, ಸಾವಿನ ಸಂಖ್ಯೆ ೧೮.೧೬ ಲಕ್ಷ ದಾಟಿದೆ!

ಈ ವೈರಸ್ ಮನುಷ್ಯ ನಿರ್ಮಿತ ಭೇದಭಾವಗಳನ್ನೆಲ್ಲ ತೊಡೆದು ಹಾಕಿದೆ: ಶ್ರೀಮಂತರು, ಬಡವರು; ಪ್ರಭಾವಿಗಳು, ಅಸಹಾಯಕರು; ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ; ಭಾರತದವರು, ಚೀನದವರು, ಇಟೆಲಿಯವರು, ಇರಾನಿನವರು; ಕಪ್ಪು, ಕಂದು, ಬಿಳಿ ಮೈಬಣ್ಣದವರು; ಏಷ್ಯಾದವರು, ಆಫ್ರಿಕದವರು, ಅಮೆರಿಕದವರು, ಯುರೋಪಿನವರು - ಇಂತಹ ವ್ಯತ್ಯಾಸಗಳನ್ನು ಕಡೆಗಣಿಸಿ, ಅದು ಎಲ್ಲರನ್ನೂ ಬಗ್ಗು ಬಡಿಯುತ್ತಿದೆ.

ಬ್ರಿಟನಿನ ಪ್ರಧಾನಿಗೂ, ಆರೋಗ್ಯ ಮಂತ್ರಿಗೂ, ರಾಜಕುಮಾರನಿಗೂ ವೈರಸ್ ಸೋಂಕು ತಗಲಿದೆ. ಸ್ಪೇಯ್ನಿನ ರಾಜಕುಮಾರಿ ವೈರಸ್ ಧಾಳಿಗೆ ಬಲಿ. “ಜಗತ್ತಿನ ಬಲಿಷ್ಠ ದೇಶ”ವೆಂದು ಬೀಗುತ್ತಿದ್ದ ಯುಎಸ್‌ಎ ದೇಶದಲ್ಲಿ ವರ್ಷಾಂತ್ಯದಲ್ಲಿ ಸೋಂಕಿತರ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ (ಎರಡು ಕೋಟಿ ದಾಟಿದೆ), ಅಲ್ಲಿ ವೈರಸಿಗೆ ಬಲಿಯಾದವರೂ ಅತ್ಯಧಿಕ (೩,೫೧,೧೨೭).

ಈ ಭೂಮಿಯನ್ನು ಅಭಿವೃದ್ಧಿ ಪಡಿಸಿದವರು ನಾವು ಎಂದು ಅಹಂಕಾರದಿಂದಿದ್ದ ಮನುಷ್ಯರಿಗೆ ತನ್ನ ತಾಕತ್ತೇನೆಂದು ಪ್ರಕೃತಿ ತೋರಿಸಿ ಕೊಟ್ಟಿದೆ - ನಿಮ್ಮೆಲ್ಲರನ್ನೂ ಕೆಲವೇ ಗಂಟೆಗಳಲ್ಲಿ ಹೊಸಕಿ ಹಾಕುವ ತಾಕತ್ತು ತನಗಿದೆ ಎಂದು ಸಾಬೀತು ಪಡಿಸಿದೆ.

ಹವಾಮಾನ ಬದಲಾವಣೆಯಿಂದ ಭೂಮಿ ತತ್ತರಿಸುತ್ತಿದೆ. “ಪರಿಸರ ಮಾಲಿನ್ಯ ಹೆಚ್ಚುತ್ತಿದೆ, ಅದು ಜೀವಕ್ಕೇ ಕುತ್ತು, ಅದನ್ನು ನಿಯಂತ್ರಿಸಿ” ಅಂದಾಗೆಲ್ಲ ಉಡಾಫೆ ಮಾಡಿದೆವು. ಅದರ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಿರಲಿಲ್ಲವೇ? ಈಗ ಕಾರ್ಖಾನೆಗಳು ಮುಚ್ಚಿ, ವಾಹನಗಳು ಚಲಿಸದೆ ನಿಂತು, ಜಗತ್ತಿನ ಮಹಾನಗರಗಳಲ್ಲಿ ವಾಯುಮಾಲಿನ್ಯ ಹೇಗೆ ಕಡಿಮೆಯಾಗಿದೆ, ಗಮನಿಸಿ. ಅಂದರೆ, ಅದು ಸಾಧ್ಯವಿತ್ತು; ಆದರೆ ಯಾರೂ ತಯಾರಿರಲಿಲ್ಲ.

ಯಾಕೆ ಹೀಗಾಯಿತು? ಯಾಕೆಂದರೆ, ಪ್ರಗತಿ ಬಗ್ಗೆ ನಮ್ಮ ಕಲ್ಪನೆಗಳೇ ಪ್ರಶ್ನಾರ್ಹ. ಈ ಜಗತ್ತನ್ನು ಆಳುತ್ತಿರೋದು, ಬೃಹತ್ ಕಂಪೆನಿಗಳು ಮತ್ತು ಪ್ರಭಾವಿ ರಾಜಕಾರಣಿಗಳು. ಬೃಹತ್ ಕಂಪೆನಿಗಳಿಗೆ ಲಾಭದ ಕೊಳ್ಳೆ ಮತ್ತು ಅವುಗಳ ಷೇರುಗಳ ಮೌಲ್ಯವೃದ್ಧಿಯೇ ಮುಖ್ಯ! ಪ್ರಭಾವಿ ರಾಜಕಾರಣಿಗಳಿಗಂತೂ ಮುಂದಿನ ಚುನಾವಣೆ ಗೆಲ್ಲುವುದೇ ಮುಖ್ಯ. ಅದರಿಂದಾಗಿ ಅವರ “ಮುಂದಾಲೋಚನೆ" ಮುಂದಿನ ನಾಲ್ಕೈದು ವರುಷಗಳ ವರೆಗೆ ಮಾತ್ರ!

ಅವರೆಲ್ಲರೂ ಈಗ ತತ್ತರಿಸಿದ್ದಾರೆ. ಯಾಕೆಂದರೆ, ವೈರಸಿನ ಧಾಳಿ ಇಲ್ಲಿ, ಈ ಕ್ಷಣದಲ್ಲಿ ನಮಗೆಲ್ಲರಿಗೂ ಮುಖಾಮುಖಿ. ಕಳೆದ ವರುಷ (೨೦೧೯) ಗ್ರೀನ್‌ಲ್ಯಾಂಡಿನಲ್ಲಿ ೬೦೦ ಬಿಲಿಯನ್ ಟನ್ ತೂಕದ ಮಂಜುಗಡ್ಡೆ ಕರಗಿದೆ. ಇದು ಹಿಂದಿನ ಹಲವು ವರುಷಗಳಿಗೆ ಹೋಲಿಸಿದಾಗ ಇಮ್ಮಡಿಗಿಂತ ಅಧಿಕ. ಇದರಿಂದಾಗಿ ಸಮುದ್ರದ ನೀರಿನ ಮಟ್ಟ ೨.೨ ಮಿಮೀ ಏರಿಕೆಯಾಗಿದೆ ಎಂದು ಪರಿಸರ ತಜ್ನರು ಎಚ್ಚರಿಸಿದರು. ಆಗ “ಅಷ್ಟೇ ತಾನೇ, ಅದೇನು ಹೆಚ್ಚಲ್ಲ ಬಿಡಿ” ಎಂದವರು ಹಲವರು! ವರುಷದಿಂದ ವರುಷಕ್ಕೆ ಬೇಸಗೆಯಲ್ಲಿ ಉಷ್ಣತೆ ಹೆಚ್ಚುತ್ತಿದೆ; ಇದರಿಂದಾಗಿ ಮಾನವ ಜನಾಂಗದವರೆಲ್ಲ ಬೆಂಕಿಬಾಣಲೆಯಲ್ಲಿನ ಕಪ್ಪೆಗಳಂತೆ ಬೆಂದು ಹೋಗಲಿದ್ದಾರೆ ಎಂದು ಪರಿಸರ ತಜ್ನರು ಎಚ್ಚರಿಸಿದರು. ಆಗಲೂ, “ಅದೇನು ಪರವಾಗಿಲ್ಲ ಬಿಡಿ. ಎಲ್ಲ ಕಡೆ ಏರ್- ಕಂಡಿಷನ್ ವ್ಯವಸ್ಥೆ ಮಾಡೋಣ” ಎಂದವರು ಅನೇಕರು. ಅಂದರೆ, ವಾತಾವರಣದಲ್ಲಿನ ವಿಪರೀತ ಬದಲಾವಣೆಗಳು ಏನೂ ಅಲ್ಲ ಎಂದು ನಾಟಕ ಮಾಡಿ, ಅನಂತರ ಆ ಬದಲಾವಣೆಗಳು ಆಗುತ್ತಲೇ ಇಲ್ಲ ಎಂದ ಯುಎಸ್‌ಎ ದೇಶದ ಅಧ್ಯಕ್ಷ ಟ್ರಂಪ್ ಏನೆಂದಿದ್ದರು? “ಯುಎಸ್‌ಎ ದೇಶದಲ್ಲಿ ಕೊರೊನಾ ವೈರಸಿನಿಂದಾಗಿ ಒಂದೂವರೆ - ಎರಡೂವರೆ ಲಕ್ಷ ಜನರು ಸಾಯಬಹುದು” ಎಂದಿದ್ದರು. ಸತ್ಯವನ್ನು ಒಪ್ಪಿಕೊಳ್ಳದಿದ್ದರೆ ಏನಾಗುತ್ತದೆ ಎಂಬುದನ್ನು ಪ್ರಕೃತಿ ತೋರಿಸಿ ಕೊಟ್ಟಿದೆ, ಅಲ್ಲವೇ?
ಶ್ರೀಮಂತರಿಗೆ ಕೊರೊನಾ ವೈರಸಿನ ಧಾಳಿಯಿಂದ ಏನೂ ಆಗಲಿಕ್ಕಿಲ್ಲ;  ಅವರ ಸಂಪತ್ತು ಸ್ವಲ್ಪ ಕಡಿಮೆಯಾದೀತು, ಅಷ್ಟೇ. ಮಧ್ಯಮ ವರ್ಗದವರ ಆದಾಯ ಸ್ಪಲ್ಪ ಕಡಿಮೆಯಾದೀತು; ಅವರಿಗೆ ತಮ್ಮ ಸಾಲಗಳ ಕಂತು ಕಟ್ಟಲು ಕಷ್ಟವಾದೀತು. ಕೂಲಿಕಾರ್ಮಿಕರಿಗೆ ಮಾತ್ರ ಬದುಕುವುದೇ ಕಷ್ಟವಾದೀತು; ಯಾಕೆಂದರೆ ಅವರಿಗೆ ದಿನದಿನದ ಮಜೂರಿ ಸಿಕ್ಕುವುದಿಲ್ಲ; ಆಹಾರ ಸಿಕ್ಕುವುದೂ ದುಸ್ತರವಾದೀತು. ಢೆಲ್ಲಿಯಿಂದ ತಮ್ಮತಮ್ಮ ಊರುಗಳಿಗೆ ಮರಳಿ ಗುಳೇ ಹೊರಟ ಆರು ಲಕ್ಷ ಕೂಲಿಕಾರ್ಮಿಕರ ಪಾಡು ನಮ್ಮೆಲ್ಲರ ಕಣ್ಣು ತೆರೆಸಬೇಕು.

ಅಂತೂ, ಲಾಕ್‌ಡೌನ್ ಸಮಯದಲ್ಲಿ ಯಾರನ್ನೂ ಸಂಪರ್ಕಿಸಲು ಸಾಧ್ಯವಿರಲಿಲ್ಲ. ಅನಂತರವೂ ಬಹುಪಾಲು ಜನರು ಭಯದಿಂದ ಯಾರನ್ನೂ ಸಂಪರ್ಕಿಸುತ್ತಿಲ್ಲ. ಆದ್ದರಿಂದ ಇದು ಎಲ್ಲರೂ ತಮ್ಮ ಬದುಕನ್ನೊಮ್ಮೆ ಅವಲೋಕಿಸಬೇಕಾದ ಸಮಯ. ಬದುಕಿನ ಪರಮಗುರಿಗಳೆಂದು ಬಹುಪಾಲು ಜನರು ನಂಬಿದ್ದೆಲ್ಲವೂ ಬುಡಮೇಲಾಗಿದೆ. ಸ್ವಂತ ಮನೆ, ಸೈಟುಗಳು, ದೊಡ್ಡ ಕಾರುಗಳು, ಬಂಗಾರದ ಒಡವೆಗಳು, ಇಲೆಕ್ಟ್ರಾನಿಕ್ ಸಾಧನಗಳು, ಐಷಾರಾಮಿ ಉಡುಪುಗಳು, ಕಂಪೆನಿ ಷೇರುಗಳು - ಇಂಥವೆಲ್ಲ ಸಂಪತ್ತೆಂಬ ಭ್ರಾಂತಿಗಳೆಲ್ಲವೂ ತಲೆಕೆಳಗಾಗಿವೆ.

ಹಾಗಾದರೆ, ಜೀವಿಸಲು ಹಣ ಬೇಡವೇ? ಎಂಬ ಪ್ರಶ್ನೆ ಹಲವರದು. ಹಣ ಬೇಕು. ಆದರೆ ಹಣ ಯಾಕೆ ಬೇಕು ಎಂದು ಈಗಲಾದರೂ ಯೋಚಿಸಬೇಕು. ಆಹಾರ, ಉಡುಪು, ವಸತಿಗಾಗಿ ಹಣ ಬೇಕು; ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚಗಳಿಗಾಗಿ ಹಣ ಬೇಕು; ವೃದ್ಧಾಪ್ಯದ ದಿನಗಳ ಖರ್ಚಿಗಾಗಿಯೂ ಹಣ ಬೇಕು. ಅಂದರೆ, ದಿನನಿತ್ಯದ ಜೀವನವೆಚ್ಚ, ಆರೋಗ್ಯ ರಕ್ಷಣೆ, ಮಕ್ಕಳ ಜವಾಬ್ದಾರಿ ನಿರ್ವಹಣೆ ಮತ್ತು ಭವಿಷ್ಯದ ಭದ್ರತೆಗಾಗಿ ಹಣ ಅಗತ್ಯ. ಇವೆಲ್ಲವನ್ನು ಪೂರೈಸುವಷ್ಟು ಹಣ (ಸಂಪತ್ತು) ಕೂಡಿ ಹಾಕಿದ ನಂತರವೂ ಹಣ ಗಳಿಕೆಯ ಜಂಜಡದಲ್ಲೇ ಮುಳುಗಿ, ಗುಡ್ಡೆ ಹಾಕಿಕೊಳ್ಳುವ ಹಣ ಏತಕ್ಕೆ? (ನಿವೃತ್ತರಾಗಿ, ಪಿಂಚಣಿ ಪಡೆಯುವ ಸಾವಿರಾರು ಜನರು ಇನ್ನೊಂದು ಉದ್ಯೋಗಕ್ಕಾಗಿ ಹಪಹಪಿಸುವುದನ್ನು ಕಂಡಿದ್ದೀರಾ?)

ನೆನಪಿರಲಿ, ಹಾಗೆ ಗುಡ್ಡೆ ಹಾಕಿಕೊಂಡ ಹಣ ಯಾವ ಉಪಯೋಗಕ್ಕೂ ಬಾರದೆ ಹೋದೀತು. ಯಾಕೆಂದರೆ, ಬದುಕಿನಲ್ಲಿ ಮೂಲಭೂತ ಅಗತ್ಯಗಳು ಮತ್ತು ಭದ್ರತೆ - ಇವನ್ನು ಸಾಧಿಸಿದ ನಂತರವಾದರೂ, ಇವೆಲ್ಲಕ್ಕಿಂತ ಮಿಗಿಲಾದದ್ದರ ಬಗ್ಗೆ ಗಮನ ಹರಿಸಬೇಕು - ಅದುವೇ ನೆಮ್ಮದಿ.

ಇದೀಗ, ನಮ್ಮನಮ್ಮ ಬದುಕಿನ ನೆಮ್ಮದಿಗಾಗಿ ಹೆಜ್ಜೆಯಿಡಬೇಕಾದ ಹೊತ್ತು ಬಂದಿದೆ. ನಮಗೆ ಅತ್ಯಂತ ಖುಷಿ ಕೊಡುವ ಚಟುವಟಿಕೆಗಳಲ್ಲಿ ಆಗಾಗ / ದಿನದಿನವೂ ತೊಡಗಿಕೊಳ್ಳುವ ಸಮಯ ಬಂದಿದೆ: ಒಳ್ಳೆಯ ಪುಸ್ತಕಗಳ ಓದು; ಮುದ ನೀಡುವ ಸಂಗೀತ ಕೇಳುವುದು; ಸಂಗೀತ ಸಾಧನಗಳ ನುಡಿಸುವಿಕೆ; ಚಿಂತನೆಗೆ ಹಚ್ಚುವ ಉಪನ್ಯಾಸ ಹಾಗೂ ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು/ ನೋಡುವುದು; ಸಮುದಾಯದ ಚಟುವಟಿಕೆಗಳಲ್ಲಿ ಭಾಗವಹಿಸುವುದು; ಕೈತೋಟ ಮತ್ತು ಚಾವಣಿ ಕೃಷಿಕೆಲಸಗಳಲ್ಲಿ ತೊಡಗುವುದು; ನಮ್ಮ ಕೌಶಲ್ಯಗಳನ್ನು (ಹೊಲಿಗೆ, ರಂಗೋಲಿ, ತಿನಿಸು ತಯಾರಿ, ಅಡುಗೆ ಇತ್ಯಾದಿ) ಅಗತ್ಯವಿದ್ದವರಿಗೆ ಕಲಿಸುವುದು; ನಾಟಕ, ಏಕಪಾತ್ರಾಭಿನಯ, ತಾಳಮದ್ದಲೆ, ಯಕ್ಷಗಾನ, ಭಜನೆ, ಚಿತ್ರಕಲೆ, ನೃತ್ಯ ಇಂತಹ ಕಲೆಗಳಲ್ಲಿ ಸಾಧನೆ; ಯೋಗ, ಪ್ರಾಣಾಯಾಮ, ಧ್ಯಾನ ಇತ್ಯಾದಿ.

ಈಗಲಾದರೂ ಒಪ್ಪಿಕೊಳ್ಳೋಣ: ನಮಗೆ ಸಿಕ್ಕಿರುವುದು ಇದೊಂದೇ ಬದುಕು. ಈ ಬದುಕಿನ ಅವಧಿ ಸೀಮಿತ. ಆದ್ದರಿಂದ, ಕೊರೊನಾ ವೈರಸಿನಂತಹ ಮಹಾಮಾರಿ ಮನೆಯ ಕದ ತಟ್ಟಿದ ವರುಷ ೨೦೨೦ರ ಮುಕ್ತಾಯದ ದಿನ, ಹೊಸ ವರುಷದ ಹೊಸ್ತಿಲಲ್ಲಿ ನಿಂತಿರುವಾಗ, ಬದುಕಿನಲ್ಲಿ ಎಲ್ಲದಕ್ಕಿಂತ ಮುಖ್ಯವಾದ ನೆಮ್ಮದಿಗಾಗಿ ದಿನದಿನವೂ ಸಮಯ ಮೀಸಲಿಡುವ ಸಂಕಲ್ಪ ಮಾಡೋಣ. ಈಗಲೂ ಆ ಸಂಕಲ್ಪ ಮಾಡದಿದ್ದರೆ ಇನ್ಯಾವಾಗ ಮಾಡುವುದು?