ಕೊರೊನಾ ವೈರಸ್: ಕೆಟ್ಟ ಚಟ ತೊಲಗಿಸಿತೇ?

ಕೊರೊನಾ ವೈರಸ್: ಕೆಟ್ಟ ಚಟ ತೊಲಗಿಸಿತೇ?

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿದ ಕೊರೊನಾ ವೈರಸ್ (ಕೊವಿಡ್ ೧೯) ೨೦೨೦ರ ವರುಷದುದ್ದಕ್ಕೂ ಜಗತ್ತಿನಲ್ಲೆಲ್ಲ ಧಾಳಿ ಮಾಡಿದೆ. ಅಮೇರಿಕಾ, ಇಟಲಿ, ಇರಾನ್, ಸ್ಪೇಯ್ನ್ ದೇಶಗಳು ಇದರ ಧಾಳಿಗೆ ತತ್ತರಿಸಿವೆ. ಈ ರಕ್ತಬೀಜಾಸುರ ವೈರಸಿನಿಂದ ಸೋಂಕಿತರ ಸಂಖ್ಯೆ ಭಾರತದಲ್ಲಿ ಒಂದು ಕೋಟಿ ದಾಟಿದೆ (೧೯-೧೨-೨೦೨೦ರಂದು). ಇದಕ್ಕೆ ಬಲಿಯಾದವರ ಸಂಖ್ಯೆ ಇವತ್ತು ೧,೪೮,೦೦೦ ಮೀರಿದೆ.

ಕೊರೊನಾ ವೈರಸ್ ಹುಟ್ಟಿಸಿದ ಭಯ, ಇದರಿಂದಾಗಿರುವ ಅನಾಹುತ, ವಿವಿಧ ದೇಶಗಳ ಆರ್ಥಿಕತೆಗೆ ಬಿದ್ದಿರುವ ಹೊಡೆತ ಇವೆಲ್ಲ ರಂಪಗಳ ನಡುವೆ ಇದರಿಂದಾಗಿ ಕೆಲವು ಕೆಟ್ಟ ಚಟಗಳನ್ನು ಹಲವರು ಬಿಟ್ಟಿರುವುದನ್ನೂ ೨೦೨೦ನೇ ವರುಷಕ್ಕೆ ವಿದಾಯ ಹೇಳುವ ಈ ಸಮಯದಲ್ಲಿ ಗಮನಿಸೋಣ.

ಕೆಲವರಿಗೆ ಹಣದ ನೋಟುಗಳನ್ನು ಎಣಿಸುವಾಗ, ನಾಲಗೆಯ ಎಂಜಲು ತಗಲಿಸುವ ಚಟ. ಎಷ್ಟು ಹೇಳಿದರೂ ಅವರು ಆ ಚಟ ಬಿಡಲೊಲ್ಲರು. ಅವರ ಎಂಜಲು ತಗಲಿದ ನೋಟುಗಳನ್ನು ಬೇರೆಯವರು ಮುಟ್ಟ ಬೇಕೆನ್ನುವುದು ಎಷ್ಟು ಹೇಸಿಗೆ ಎಂಬುದನ್ನು ಒಪ್ಪಲಿಕ್ಕೇ ಅವರು ತಯಾರಿಲ್ಲ. ಈಗ, ಬೇರೆಯವರ ಎಂಜಲಿನಿಂದಾಗಿ ತನಗೆ ಕೊರೊನಾ ವೈರಸ್ ಹರಡಬಹುದೆಂಬ ಸತ್ಯ ಅವರ ಗರ್ಭದಲ್ಲಿ ಭಯ ಹುಟ್ಟಿಸಿದೆ. ಅಂತೂ ಆ ಕೆಟ್ಟ  ಚಟ ತೊರೆಯಬೇಕಾದರೆ ಕೊರೊನಾ ವೈರಸ್ ಬರಬೇಕಾಯಿತು.

ಇನ್ನು ಕೆಲವರಿಗೆ ಸಿಕ್ಕಸಿಕ್ಕಲ್ಲಿ ಎಂಜಲು ಅಥವಾ ಕಫ ಉಗಿಯುವ ಚಟ. ಸಮಾಜದಲ್ಲಿ ಹೇಗಿರಬೇಕು, ಶುಚಿತ್ವ ಹೇಗೆ ಕಾಪಾಡಬೇಕು ಎಂಬುದಕ್ಕೆ ಕಿಂಚಿತ್ ಬೆಲೆ ಕೊಡದಿರುವ ಇಂಥವರಿಂದಾಗಿ ಸಂಕಟ ಪಡುವುದು ಇತರರ ಪಾಡು. ಯಾವ ತಂತ್ರಗಳಿಗೂ ಜಗ್ಗದೆ “ಸಿಕ್ಕಸಿಕ್ಕಲ್ಲಿ ಉಗುಳುವುದು ತಮ್ಮ ಜನ್ಮಸಿದ್ಧ ಹಕ್ಕು” ಎಂಬಂತೆ ಇವರು ವರ್ತಿಸುತ್ತಿದ್ದರು. ಇವರು ಉಗುಳದಂತೆ ಯಾವುದೇ ನೋಟೀಸ್ ಅಥವಾ ಫಲಕ ಅಥವಾ ದೇವರ ಫೋಟೋ ಹಾಕಿದರೂ ಈ ಚಟ ಇದ್ದವರು ಕ್ಯಾರೇ ಅನ್ನಲಿಲ್ಲ. ಈಗ ಹಲವು ರಾಜ್ಯಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವವರಿಗೆ ರೂ.೧,೦೦೦ ದಂಡ ವಿಧಿಸಲಾಗುತ್ತಿದೆ. ಜೊತೆಗೆ, ಇತರರ ಎಂಜಲು ಅಥವಾ ಕಫದಿಂದಾಗಿ ತನಗೂ ಕೊರೊನಾ ರೋಗ ತಗಲುವ ಅಂಜಿಗೆ ಇವರಿಗೆ ಬುದ್ಧಿ ಕಲಿಸಿದೆ.   ಅಂತೂ ಕೊರೊನಾ ವೈರಸಿಗೆ ಶರಣಾಗಿ ತಮ್ಮ ಉಗಿಯುವ ಚಟಕ್ಕೆ ಕೆಲವರಾದರೂ ತಿಲಾಂಜಲಿ ನೀಡಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುವ ಕೆಲವರಿಗೆ ಮತ್ತೊಂದು ಚಟ. ಅದು ರೈಲಿನಲ್ಲಿರುವ ಬಟ್ಟೆಯ ಪರದೆಗಳಲ್ಲಿ ತಮ್ಮ ಒದ್ದೆ ಕೈಕಾಲು ಒರಸುವ ಹಾಗೂ ಷೂಗಳನ್ನು ಪಾಲಿಷ್ ಮಾಡುವ ಚಟ! ಇವರೆಲ್ಲರೂ ವಿದ್ಯಾವಂತರೇ. ಆದರೆ ಈ ದರಿದ್ರ ಚಟದ ಬಗ್ಗೆ ಅವರಿಗೆ ಯಾರ ಮುಲಾಜೂ ಇಲ್ಲ. ಈಗ ರೈಲಿನಲ್ಲಿ ಎಲ್ಲ ಪರದೆಗಳನ್ನೂ ಕಿತ್ತು ಹಾಕಿದ್ದಾರೆ. ಇನ್ನು ಈ ಚಟದ ಅನುಯಾಯಿಗಳು ತಮ್ಮತಮ್ಮ ಟವೆಲಿನಲ್ಲೇ ತಮ್ಮ ಕೈಕಾಲು ಒರಸಿಕೊಳ್ಳಬೇಕು ಮತ್ತು ತಮ್ಮ ಷೂಗಳ ಪಾಲಿಷ್ ಮಾಡಿಕೊಳ್ಳಬೇಕು.

ರೈಲಿನ ಅಥವಾ ಸಾರ್ವಜನಿಕ ಶೌಚಾಲಯಗಳನ್ನು ಬಳಸುವ ಕೆಲವರದು ಮಗದೊಂದು ಚಟ. ಬಳಸಿದ ನಂತರ ನೀರು ಹಾಕಿ ಸ್ವಚ್ಛ ಮಾಡದಿರುವ ಚಟ. ಇವರು ಪೌರಶಿಸ್ತು ಇಲ್ಲದ ಹೊಲಸು ಜನಗಳು. ಇವರನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎನಿಸುತ್ತಿತ್ತು. ಆದರೆ ಕೊರೊನಾ ವೈರಸ್ ಅದನ್ನೆಲ್ಲ ಬದಲಾಯಿಸಿದೆ. ತಮಗೇ ಕೊರೊನಾ ವೈರಸ್ ತಗಲಿದರೆ ಎಂಬ ಹೆದರಿಕೆಯಿಂದ ಇಂಥವರೂ ಈಗ ಪೌರಶಿಸ್ತು ಕಲಿಯುತ್ತಿದ್ದಾರೆ.

ನಮಸ್ತೆಯ ಬಗ್ಗೆ ಬರೆಯಲೇ ಬೇಕಾಗುತ್ತದೆ. “ನಮಸ್ತೆ" ಭಾರತೀಯ ಸಂಸ್ಕೃತಿಯ ಪ್ರತೀಕ. ಇದು ವಿನಯದ ಸಂಕೇತ. ಆದರೆ ಹಲವು ಭಾರತೀಯರೇ "ತಾವು ಆಧುನಿಕರು” ಎಂಬ ಭ್ರಾಂತಿಯಲ್ಲಿ ನಮ್ಮ ಸಂಸ್ಕೃತಿಯನ್ನೇ ಕಡೆಗಣಿಸಿ, ಹಸ್ತಲಾಘವದ ಅಭ್ಯಾಸ ಶುರು ಮಾಡಿದರು. ಆದರೆ ಕೊರೊನಾ ವೈರಸಿನ ಹರಡುವಿಕೆಗೆ ದೈಹಿಕ ಸಂಪರ್ಕವೂ ಕಾರಣ ಎಂಬುದು ತಿಳಿಯುತ್ತಲೇ, ಹಸ್ತಲಾಘವದ ದೊಡ್ಡಸ್ತಿಕೆಗೆ ಅಂಟಿಕೊಂಡವರೆಲ್ಲ ಅದನ್ನು ಕಿತ್ತೊಗೆದರು. ಅಮೇರಿಕದ ಅಧ್ಯಕ್ಷರೂ ಭಾರತ ಕೊರೊನಾ ವೈರಸಿನ ಧಾಳಿ ನಿಯಂತ್ರಣದಲ್ಲಿ ಮುಂದಿರಲು ಕಾರಣ "ನಮಸ್ತೆ" ಮೂಲಕ ಶುಭ ಹಾರೈಸುವ ನಮ್ಮ ಪದ್ಧತಿ ಎಂದು ಒಪ್ಪಬೇಕಾಯಿತು.
ಮನೆಗೆ ಬಂದೊಡನೆ ಕೈಗಳು ಮತ್ತು ಕಾಲುಗಳನ್ನು ಸರಿಯಾಗಿ ತೊಳೆಯುವುದು ಭಾರತೀಯ ಸಂಸ್ಕೃತಿಯ ಇನ್ನೊಂದು ಒಳ್ಳೆಯ ಪದ್ಧತಿ.  ಷೂಗಳನ್ನು ಹಾಕಿಕೊಳ್ಳುವ ಕೆಲವರು "ತಮ್ಮ ಕಾಲುಗಳಿಗೇನೂ ಕೊಳೆಯಾಗಿಲ್ಲ" ಎಂಬ ಭ್ರಾಂತಿಯಲ್ಲಿದ್ದರು, ಈಗ ಕೊರೊನಾ ವೈರಸಿನ ಧಾಳಿಯಿಂದಾಗಿ ಇಂಥವರೂ ಭಾರತೀಯ ಪದ್ಧತಿಯನ್ನು ಗೌರವಿಸಬೇಕಾಗಿದೆ.

ಅದ್ದೂರಿ ಮದುವೆಗಳಂತೂ “ದೊಡ್ಡ ಸಾಧನೆ” ಎಂದು ಹಲವು ತಂದೆತಾಯಂದಿರು ಭಾವಿಸಿದ್ದರು. ತಮ್ಮ ಜೀವಮಾನದ ಗಳಿಕೆಯ ದೊಡ್ಡ ಭಾಗವನ್ನು ಆಡಂಬರದ ಮದುವೆಗಾಗಿ ಖರ್ಚು ಮಾಡುತ್ತಿದ್ದರು. ಮದುವೆ ಮಂಟಪದ ಅಲಂಕಾರಕ್ಕಾಗಿ ಇಪ್ಪತ್ತು ಲಕ್ಷ ರೂಪಾಯಿ ವೆಚ್ಚ ಮಾಡಿದ್ದೂ ಇದೆ! ಸಾಲ ಮಾಡಿಯಾದರೂ ಸಾವಿರಾರು ಜನರಿಗೆ ಭರ್ಜರಿ ಮಾಂಸದೂಟ ಬಡಿಸುವ ಚಪಲ! ಈಗ ಕೊರೊನಾ ವೈರಸಿನ ಲಾಕ್-ಡೌನಿನಿಂದಾಗಿ ಮದುವೆಗಳೆಲ್ಲ ಮುಂದೂಡಲ್ಪಟ್ಟಿವೆ. ಕೆಲವು ಮದುವೆಗಳು ತೀರಾ ಸರಳವಾಗಿ ನಡೆದಿವೆ. ಅಂದರೆ ಕೇವಲ ಇಪ್ಪತ್ತು ಅತಿಥಿಗಳ ಸಮ್ಮುಖದಲ್ಲಿ ಮದುವೆಗಳು ಆಗಿವೆ. ಹೀಗೆ ಸರಳವಾಗಿ ಮದುವೆ ಮಾಡಲಿಕ್ಕೂ ಜನರೀಗ ಕಲಿತಿದ್ದಾರೆ! ಇತರ ಢಂಬಾಚಾರದ ಸಮಾರಂಭಗಳಿಗೂ ಇದೇ ಗತಿ ಆಗಿದೆ!

ಕೊರೊನಾ ವೈರಸ್ ಮಾನವ ಕುಲದ ವೈರಿಯಾಗಿ ವಕ್ಕರಿಸಿದೆ, ಹೌದು. ಆದರೆ ಯಾವುದಕ್ಕೂ ಜಗ್ಗದೆ ಮುಂದುವರಿಸಿದ್ದ ಕೆಟ್ಟ ಚಟಗಳನ್ನು ಈ ವೈರಸಿನ ಸೋಂಕಿನ ಭಯದಿಂದಾಗಿ ಬಿಡುವಂತಾದುದು ಒಳ್ಳೆಯ ಬೆಳವಣಿಗೆ ಅಲ್ಲವೇ?