ಕೊರೋನಾ ಅವ - ಲಕ್ಷಣ

ಕೊರೋನಾ ಅವ - ಲಕ್ಷಣ

    ಆಕಾಶ ತಲೆಯ ಮೇಲೆ  ಬಿದ್ದಂತೆ ಕುಳಿತಿದ್ದ ಗುಂಡಾಚಾರಿಯನ್ನು  ನೋಡಿ, ಒಳಬಂದ ಅವನ ಸ್ನೇಹಿತ, ಕಾಶಿಗೆ ಆಶ್ಚರ್ಯವಾಯಿತು.
    `ಏನು ಗುಂಡಣ್ಣ, ಹೀಗೆ ಕೂತಿದ್ದೀಯಾ?’ ಕಾಶಿ ಪ್ರಶ್ನಿಸಿದ. ನಿಟ್ಟುಸಿರುಬಿಟ್ಟ ಗುಂಡನೆಂದ - `ಕರೋನಾ ವಕ್ಕರಿಸಿದೆ ಕಣೋ.' ಆರಡಿ ದೂರ ಹಾರಿ ಬಿದ್ದ ಕಾಶಿ - `ಟೆಸ್ಟ್ ಮಾಡಿಸಿದ್ಯಾ?'
    `ಟೆಸ್ಟ್ ಮಾಡ್ಲಿಲ್ಲ, ಟೇಸ್ಟ್ ಮಾಡಿದೆ, ಗೊತ್ತಾಯ್ತು'
    `ಅಂದ್ರೆ. . . ?'
    `ನಂ ವೇದೂ ಅಡುಗೆ ಗೊತ್ತಲ್ಲಾ ನಿನಗೆ. ರುಚಿ ಇಲ್ದಿದ್ರೂ  ತಿಂತಿದ್ದೆ. ಇವತ್ತು  ಪೇಪರ್ ನೋಡ್ತೀನಿ! ಕರೋನಾದ ಮುಖ್ಯ ಲಕ್ಷಣಗಳಲ್ಲಿ ರುಚಿ-ವಾಸನೆ ಗೊತ್ತಾಗದಿರೋದೂ ಒಂದು ಅಂತ! ಒಂದಿನಾ ಸರಿ, ಎರಡು ದಿನಾ ಸರಿ, ಪ್ರತೀದಿನ  ರುಚಿ ಇಲ್ಲಾ ಅಂದ್ರೆ ನನ್ನ ನಾಲಿಗೇದೇ ಪ್ರಾಬ್ಲಮ್ಮಾ ಅಂತ ಡೌಟಾಯ್ತು.  ಹಾಗಾಗಿ  ಕೊರೋನಾ ಇರೋದು ಖಾತ್ರಿಯಾಯ್ತು'.
ಕಾಶಿ ಅಂದ - `ಓಹ್  ಹಾಗಾ? ಬಾ ಯಾವುದಕ್ಕೂ ಅಪೋಲೋ  ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿಯೇ ಬಿಡೋಣ' .
ಗುಂಡಣ್ಣ ಒಪ್ಪಿದ.  ಇಬ್ಬರೂ ಬೈಕಿನಲ್ಲಿ ಆಸ್ಪತ್ರೆಯ  ಕಡೆ ಹೊರಟರು.  ದಾರಿಯಲ್ಲಿಯೇ `ದೋಸೆ ಕ್ಯಾಂಪ್'  ಹತ್ತಿರ ಕಾಶಿ ನಿಲ್ಲಿಸಿದ.
‘ಗುಂಡಣ್ಣಾ. ನಂದಿನ್ನೂ ತಿಂಡಿ ಆಗಿಲ್ಲ, ಒಂದೊಂದು ದೋಸೆ ತಿಂದೇ ಆಸ್ಪತ್ರೆ ಕಡೆ ಹೋಗೋಣ ಏನಂತೀ?'
ಇಂಥಾ ಆಹ್ವಾನಕ್ಕೆ ಎಂದೂ ನಕಾರಾತ್ಮಕವಾಗಿ ನುಡಿದವನಲ್ಲ ಗುಂಡ.
ಕಾಶಿಗಿಂತ ವೇಗವಾಗಿ ದೋಸೆ ಮೆದ್ದ ಗುಂಡ - `ಕಾಶಿ, ಇಲ್ಲಿ ದೋಸೆ ಇಷ್ಟೊಂದು ರುಚಿಕರ ಅಂತ್ಲೇ  ಗೊತ್ತಿತ್ತಿಲ್ವಲ್ಲೋ' ಎಂದ.
ಹೌಹಾರಿದ ಕಾಶಿ ನುಡಿದ - `ಮತ್ತೆ ನಿನಗೆ ದೋಸೆ ರುಚಿ ಗೊತ್ತಾಯ್ತಾ?'.
ಒಂದು ಕ್ಷಣ ಸ್ತಂಭೀಭೂತನಾದ ಗುಂಡನೆಂದ - `ಹೌದಲ್ಲ, ಇದ್ಹೇಗೇ?'
ಕಾಫೀ ಹೀರುತ್ತ ಕಾಶಿಯೆಂದ - `ಅಯ್ಯೋ ಮಂಕೇ, ಸುಖಾ ಸುಮ್ಮನೆ ಹೆದರಿಸಿಬಿಟ್ಯಲ್ಲೋ.  ಕರೋನಾ ಬಂದಿದ್ದಕ್ಕೆ ನಿನಗೆ ನಿನ್ನ ಹೆಂಡ್ತಿ ಮಾಡಿದ ಅಡುಗೆ  ರುಚಿಸುತ್ತಿಲ್ಲಾ ಅಂತಲ್ಲ – ಅದರಲ್ಲಿ ರುಚಿ ಇಲ್ಲ ಅನ್ನೋದಷ್ಟೇ ಸತ್ಯ!  ಜಗತ್ತಿನಲ್ಲಿ ಯಾವ ಹೆಂಡ್ತಿ ತನ್ನ ಗಂಡನಿಗೆ ರುಚಿಯಾಗಿ ಮಾಡಿ ಹಾಕುತ್ತಾಳೆ ಹೇಳು ನೋಡೋಣ. ಹಾಗಿದ್ದಿದ್ರೆ ನಾನ್ಯಾಕೆ `ದೋಸೆ ಕ್ಯಾಂಪಿ'ಗೆ ಬರ್ತಿದ್ದೇ!?’
    ದೋಸೆ ಜೀರ್ಣವಾದಷ್ಟು  ಸುಲಭವಾಗಿ ಕಾಶಿಯ `ಸಾರ್ವಕಾಲಿಕ ಸತ್ಯ' ಜೀರ್ಣವಾಗಲಿಲ್ಲ ಗುಂಡನಿಗೆ.