ಕೊರೋನಾ ಅವ - ಲಕ್ಷಣ
ಆಕಾಶ ತಲೆಯ ಮೇಲೆ ಬಿದ್ದಂತೆ ಕುಳಿತಿದ್ದ ಗುಂಡಾಚಾರಿಯನ್ನು ನೋಡಿ, ಒಳಬಂದ ಅವನ ಸ್ನೇಹಿತ, ಕಾಶಿಗೆ ಆಶ್ಚರ್ಯವಾಯಿತು.
`ಏನು ಗುಂಡಣ್ಣ, ಹೀಗೆ ಕೂತಿದ್ದೀಯಾ?’ ಕಾಶಿ ಪ್ರಶ್ನಿಸಿದ. ನಿಟ್ಟುಸಿರುಬಿಟ್ಟ ಗುಂಡನೆಂದ - `ಕರೋನಾ ವಕ್ಕರಿಸಿದೆ ಕಣೋ.' ಆರಡಿ ದೂರ ಹಾರಿ ಬಿದ್ದ ಕಾಶಿ - `ಟೆಸ್ಟ್ ಮಾಡಿಸಿದ್ಯಾ?'
`ಟೆಸ್ಟ್ ಮಾಡ್ಲಿಲ್ಲ, ಟೇಸ್ಟ್ ಮಾಡಿದೆ, ಗೊತ್ತಾಯ್ತು'
`ಅಂದ್ರೆ. . . ?'
`ನಂ ವೇದೂ ಅಡುಗೆ ಗೊತ್ತಲ್ಲಾ ನಿನಗೆ. ರುಚಿ ಇಲ್ದಿದ್ರೂ ತಿಂತಿದ್ದೆ. ಇವತ್ತು ಪೇಪರ್ ನೋಡ್ತೀನಿ! ಕರೋನಾದ ಮುಖ್ಯ ಲಕ್ಷಣಗಳಲ್ಲಿ ರುಚಿ-ವಾಸನೆ ಗೊತ್ತಾಗದಿರೋದೂ ಒಂದು ಅಂತ! ಒಂದಿನಾ ಸರಿ, ಎರಡು ದಿನಾ ಸರಿ, ಪ್ರತೀದಿನ ರುಚಿ ಇಲ್ಲಾ ಅಂದ್ರೆ ನನ್ನ ನಾಲಿಗೇದೇ ಪ್ರಾಬ್ಲಮ್ಮಾ ಅಂತ ಡೌಟಾಯ್ತು. ಹಾಗಾಗಿ ಕೊರೋನಾ ಇರೋದು ಖಾತ್ರಿಯಾಯ್ತು'.
ಕಾಶಿ ಅಂದ - `ಓಹ್ ಹಾಗಾ? ಬಾ ಯಾವುದಕ್ಕೂ ಅಪೋಲೋ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿಯೇ ಬಿಡೋಣ' .
ಗುಂಡಣ್ಣ ಒಪ್ಪಿದ. ಇಬ್ಬರೂ ಬೈಕಿನಲ್ಲಿ ಆಸ್ಪತ್ರೆಯ ಕಡೆ ಹೊರಟರು. ದಾರಿಯಲ್ಲಿಯೇ `ದೋಸೆ ಕ್ಯಾಂಪ್' ಹತ್ತಿರ ಕಾಶಿ ನಿಲ್ಲಿಸಿದ.
‘ಗುಂಡಣ್ಣಾ. ನಂದಿನ್ನೂ ತಿಂಡಿ ಆಗಿಲ್ಲ, ಒಂದೊಂದು ದೋಸೆ ತಿಂದೇ ಆಸ್ಪತ್ರೆ ಕಡೆ ಹೋಗೋಣ ಏನಂತೀ?'
ಇಂಥಾ ಆಹ್ವಾನಕ್ಕೆ ಎಂದೂ ನಕಾರಾತ್ಮಕವಾಗಿ ನುಡಿದವನಲ್ಲ ಗುಂಡ.
ಕಾಶಿಗಿಂತ ವೇಗವಾಗಿ ದೋಸೆ ಮೆದ್ದ ಗುಂಡ - `ಕಾಶಿ, ಇಲ್ಲಿ ದೋಸೆ ಇಷ್ಟೊಂದು ರುಚಿಕರ ಅಂತ್ಲೇ ಗೊತ್ತಿತ್ತಿಲ್ವಲ್ಲೋ' ಎಂದ.
ಹೌಹಾರಿದ ಕಾಶಿ ನುಡಿದ - `ಮತ್ತೆ ನಿನಗೆ ದೋಸೆ ರುಚಿ ಗೊತ್ತಾಯ್ತಾ?'.
ಒಂದು ಕ್ಷಣ ಸ್ತಂಭೀಭೂತನಾದ ಗುಂಡನೆಂದ - `ಹೌದಲ್ಲ, ಇದ್ಹೇಗೇ?'
ಕಾಫೀ ಹೀರುತ್ತ ಕಾಶಿಯೆಂದ - `ಅಯ್ಯೋ ಮಂಕೇ, ಸುಖಾ ಸುಮ್ಮನೆ ಹೆದರಿಸಿಬಿಟ್ಯಲ್ಲೋ. ಕರೋನಾ ಬಂದಿದ್ದಕ್ಕೆ ನಿನಗೆ ನಿನ್ನ ಹೆಂಡ್ತಿ ಮಾಡಿದ ಅಡುಗೆ ರುಚಿಸುತ್ತಿಲ್ಲಾ ಅಂತಲ್ಲ – ಅದರಲ್ಲಿ ರುಚಿ ಇಲ್ಲ ಅನ್ನೋದಷ್ಟೇ ಸತ್ಯ! ಜಗತ್ತಿನಲ್ಲಿ ಯಾವ ಹೆಂಡ್ತಿ ತನ್ನ ಗಂಡನಿಗೆ ರುಚಿಯಾಗಿ ಮಾಡಿ ಹಾಕುತ್ತಾಳೆ ಹೇಳು ನೋಡೋಣ. ಹಾಗಿದ್ದಿದ್ರೆ ನಾನ್ಯಾಕೆ `ದೋಸೆ ಕ್ಯಾಂಪಿ'ಗೆ ಬರ್ತಿದ್ದೇ!?’
ದೋಸೆ ಜೀರ್ಣವಾದಷ್ಟು ಸುಲಭವಾಗಿ ಕಾಶಿಯ `ಸಾರ್ವಕಾಲಿಕ ಸತ್ಯ' ಜೀರ್ಣವಾಗಲಿಲ್ಲ ಗುಂಡನಿಗೆ.