ಕೊರೋನಾ : ಈಗ ನಾವು ಮಾಡಬಹುದಾದದ್ದು ಏನು ?

ಕೊರೋನಾ : ಈಗ ನಾವು ಮಾಡಬಹುದಾದದ್ದು ಏನು ?

ಇಲ್ಲಿಂದ ಮುಂದೆ ಕೊರೋನಾ ಕಥೆ ಏನು ?

ಬದುಕು ಸಹಜತೆಯೆಡೆಗೆ ಸಾಗುತ್ತಿದೆ ಎಂದು ಭಾವಿಸಬೇಕೆ ?

ಇನ್ನೂ ಹೆಚ್ಚಾಗುತ್ತಿದೆ ಎಂದು ಆತಂಕ ಪಡಬೇಕೆ ?

ಲಸಿಕೆ ಬರುವವರೆಗೂ ಭಯದಲ್ಲೇ ಬದುಕಬೇಕೆ ?

ಎಚ್ಚರಿಕೆಯಿಂದ ಧೈರ್ಯವಾಗಿ ಮುನ್ನುಗ್ಗಬೇಕೆ ?

ಇದ್ದಷ್ಟೇ ಅದೃಷ್ಟ ಎಂಬ ವೈರಾಗ್ಯ ತಳೆಯಬೇಕೆ ?.........

ನಮ್ಮನ್ನೆಲ್ಲ ಈ ಪ್ರಶ್ನೆಗಳು ಕಾಡುತ್ತಿವೆ. ಒಂದೊಂದು ದಿನ ಒಂದೊಂದು ಸುದ್ದಿ ಕೇಳಿದಾಗಲೂ ನಮ್ಮ ಮನಸ್ಸು ಆ ಕಡೆ ಈ ಕಡೆ ಓಲಾಡುವಂತೆ ಮಾಡುತ್ತಿದೆ. ಹತ್ತಿರದವರು, ಗಣ್ಯರು ಸತ್ತಾಗ ಆತಂಕವು, ಇಲ್ಲದಿದ್ದರೆ ನಿರ್ಲಕ್ಷ್ಯವು ನಮಗೆ ಉಂಟಾಗುತ್ತಿದೆ. ಶಾಲಾ ಕಾಲೇಜು ಮತ್ತು ಸಿನಿಮಾ ಹೊರತುಪಡಿಸಿ ಬಹುತೇಕ ಮುಕ್ತವಾಗಿದೆ. ಮಾಸ್ಕ್, ಸ್ಯಾನಿಟೈಸೇಷನ್, ಟೆಂಪರೇಚರ್ ಚೆಕಿಂಗ್ ಗೆ ಮನಸ್ಸು ಒಗ್ಗಿಕೊಳ್ಳುತ್ತಿದೆ. ಅನಿವಾರ್ಯ ಇರುವವರಿಗೆ ಆಯ್ಕೆಗಳೇ ಇಲ್ಲ. ಮತ್ತೆ ಕೆಲವರಿಗೆ ಮನಸ್ಸು ಡೋಲಾಯಮಾನ. 

ಏಳು ತಿಂಗಳು ಕಳೆದವು. ದೇಹ, ಮನಸ್ಸು, ಸಂಬಂಧಗಳು, ಆರ್ಥಿಕ ಪರಿಸ್ಥಿತಿ ನಮಗರಿವಿಲ್ಲದೆ ಏನೋ ತಳಮಳಿಸುತ್ತಿದೆ. ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಸಂಪೂರ್ಣ ಎಂದಿನಂತೆ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಲಸಿಕೆ ಸಂಶೋಧನೆಯ ಬಗ್ಗೆ ಊಹೆಗಳಿವೆಯೇ ಹೊರತು ಯಾವುದೂ ಖಚಿತವಾಗುತ್ತಿಲ್ಲ. ಪ್ರಾರಂಭದಲ್ಲಿ ಇಡೀ ವಿಶ್ವಕ್ಕೆ ಭಾರತವೇ ಉತ್ತಮ ನಿರ್ವಹಣೆ ಮಾಡುತ್ತಿದೆ ಎಂದು ಭಾವಿಸಲಾಗಿತ್ತು. ಈಗ ನಮ್ಮ ದೇಶವೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿದೆ.

ಈಗ ನಾವು ಮಾಡಬಹುದಾದದ್ದು ಏನು ?

ಇದಕ್ಕೆ ಸಾಮಾನ್ಯ ಮತ್ತು ಸಹಜ ಉತ್ತರ ಒಂದೇ ರೀತಿಯಲ್ಲಿ ಕೊಡಲಾಗುವುದಿಲ್ಲ. ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ನಾವು ಮಾಡಬೇಕಾದ ಕೆಲಸ ವೈಯಕ್ತಿಕವಾಗಿ ನಮ್ಮ ದೇಹ, ಮನಸ್ಸು ಮತ್ತು ಆರ್ಥಿಕ ಪರಿಸ್ಥಿತಿ ಯಾವ ಹಂತದಲ್ಲಿ ಇದೆ ಮತ್ತು ಅದು ಎಷ್ಟು ದಿನ ಅಸಹಜ ಪರಿಸ್ಥಿತಿಯನ್ನು ತಡೆದುಕೊಳ್ಳಬಹುದು  ಎಂಬುದನ್ನು ಸ್ವತಃ ನಾವೇ ಅವಲೋಕನ ಮಾಡಿಕೊಳ್ಳಬೇಕು. ಲಸಿಕೆ ಬರುವವರೆಗೂ ಕಾಯುವುದು ಉತ್ತಮವೇ ಅಥವಾ ಅದರಿಂದ ನಮ್ಮ ಪರಿಸ್ಥಿತಿ ಇನ್ನೂ ಹದಗೆಡಬಹುದೇ ಅಥವಾ ಏನಾದರಾಗಲಿ ಮೊದಲಿನಂತೆ ಎಲ್ಲಕ್ಕೂ ಸಿದ್ದರಾಗಿ ಹೊರಡುವುದೇ ಎಂಬುದೆಲ್ಲವೂ ನಮ್ಮ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. 

ಬೇರೆಯವರನ್ನು ನೋಡಿ ನಾವು ಹೆದರಬೇಕಿಲ್ಲ ಅಥವಾ ಮುನ್ನುಗ್ಗಬೇಕಿಲ್ಲ. ಇದರ ಫಲಿತಾಂಶ ಹೇಗೆ ಬೇಕಾದರೂ ಆಗಬಹುದು. ಅದನ್ನು ಸ್ವೀಕರಿಸುವ ನಮ್ಮ ಮನೋಬಲದ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಒಳ್ಳೆಯದಾದರೆ ಸಂತೋಷ ಪಡಿ. ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಡಿ. ಒಮ್ಮೆ ನಿರ್ಧಾರ ತೆಗೆದುಕೊಂಡ ಮೇಲೆ ಫಲಿತಾಂಶ ನೋಡಿ ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಾಗಿತ್ತು, ಅದು ಮಾಡಬಾರದಿತ್ತು ಎಂದು ಕೊರಗಬೇಡಿ. ಈ ಕ್ಷಣದ ನಮ್ಮ ನಿರ್ಧಾರ ನಮ್ಮದೇ ಅದು ಏನೇ ಆಗಿರಲಿ ಎದುರಿಸಲೇಬೇಕು. ಅಸ್ಪಷ್ಟತೆಯಲ್ಲಿ ಸ್ಪಷ್ಟತೆ ಎಂದರೆ ಇದೇ....

ಆಡಳಿತದಲ್ಲಾಗಲಿ, ವೈದ್ಯಕೀಯ ಸೇವೆಯಲ್ಲಾಗಲಿ ಅಂತಹ ಉತ್ತಮ ಗುಣಮಟ್ಟದ ಯಾವುದೇ ಬದಲಾವಣೆಗಳಾಗಿಲ್ಲ. ಭ್ರಷ್ಟಾಚಾರ, ನಿರ್ಲಕ್ಷ್ಯ, ಹಣ ಮಾಡುವ ದಂಧೆ, ಅವಕಾಶ ನೋಡಿ ವಂಚಿಸುವ ಗುಣಗಳು ಎಂದಿನಂತೆಯೇ ಇವೆ. ಕೊರೋನಾ ಕಾರಣದಿಂದ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಅತ್ಯಾಚಾರ, ಕೊಲೆ, ದರೋಡೆ, ಕಳ್ಳತನ ಮತ್ತೆ ಸಹಜ ಸ್ಥಿತಿಗೆ ಬಂದಿದೆ.

ವಿಪರ್ಯಾಸವೆಂದರೆ, ಕೆಟ್ಟದ್ದೆಲ್ಲವೂ ನಿರಾತಂಕವಾಗಿ ಧೈರ್ಯದಿಂದ ತನ್ನ ಚಟುವಟಿಕೆಗಳನ್ನು ಆರಂಭಿಸಿದೆ. ಒಳ್ಳೆಯದು ಮಾತ್ರ ಈಗಲೂ ಆತಂಕದಿಂದ ಬಚ್ಚಿಟ್ಟುಕೊಂಡಿದೆ. ಕಿಟಕಿಯ ಸರಳುಗಳೊಳಗಿಂದ ಇಣುಕಿ ನೋಡುತ್ತಿದೆ. ಆಧುನಿಕ ಮನುಷ್ಯ ಮತ್ತು ಸಮಾಜದ ಸ್ವಭಾವವೇ ಹಾಗೆ ಇರಬೇಕು. ಕೆಟ್ಟದ್ದಕ್ಕೆ ಧೈರ್ಯ ಜಾಸ್ತಿ. ಒಳ್ಳೆಯದು ಹೆದರುತ್ತದೆ. ವಾಸ್ತವವಾಗಿ ನಾಗರಿಕ ಸಮಾಜದಲ್ಲಿ ಇದು ಅದಲು ಬದಲಾಗಿರಬೇಕಿತ್ತು.

ಕೆಲವರು ಇನ್ನು  85 ದಿನಗಳು ಕಳೆದರೆ 2020 ಮುಗಿದು 2021 ಹೊಸ ವರ್ಷ ಬರುತ್ತದೆ. ಆಗ ವಾತಾವರಣ ಬದಲಾಗಿ ಒಳ್ಳೆಯದಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಕಳೆದುಕೊಂಡಿದ್ದು ಪಡೆದುಕೊಂಡಿದ್ದರ ಲೆಕ್ಕ ಹಾಕುವ ಸಮಯ ಇದಲ್ಲ. ನಮ್ಮ ನಿಜವಾದ ವ್ಯಕ್ತಿತ್ವದ ಬೆಳವಣಿಗೆ ಹೇಗಿರಬೇಕೆಂದರೆ, ಕಷ್ಟಗಳು ಬರಬಾರದು ಎಂದು ನಿರೀಕ್ಷಿಸಬಾರದು, ಬಂದಾಗ ಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ನಾವು ಅರ್ಥಮಾಡಿಕೊಂಡಿರಬೇಕು ಮತ್ತು ಸಮಯ ಕಳೆದಂತೆ ಅದು ತನ್ನ ಪ್ರಭಾವ ಕಳೆದುಕೊಳ್ಳುತ್ತದೆ ಎಂಬ ಭರವಸೆ ಹೊಂದಿರಬೇಕು. 

ಒಟ್ಟು ಇಲ್ಲಿಯವರೆಗಿನ ಅನುಭವದಲ್ಲಿ ಹೇಳುವುದಾದರೆ ಕೊರೋನಾ ವೈರಸ್ ಹರಡುವಿಕೆಯ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದರು ತನ್ನ ತೀವ್ರತೆಯನ್ನು ಕಳೆದುಕೊಳ್ಳುತ್ತಿದೆ ಅಥವಾ ನಮ್ಮ ಮನಸ್ಸುಗಳ ಅದಕ್ಕೆ ಸ್ವಲ್ಪ ಒಗ್ಗಿಕೊಳ್ಳುತ್ತಿವೆ. ತುಂಬಾ ದಿನ ಅಡಗಿ ಕುಳಿತುಕೊಳ್ಳುವುದು ಇತರೆ ದುಷ್ಪರಿಣಾಮಗಳಿಗೆ ಕಾರಣವಾಗಬಹುದು. ಈ ಏಳು ತಿಂಗಳು ಕೊರೋನಾ ಎಂಬ ವೈರಸ್ ನಮ್ಮನ್ನು ನಿಯಂತ್ರಿಸಿದೆ. ಇನ್ನು ಮುಂದೆ ನಾವು ಅದನ್ನು ನಿಯಂತ್ರಿಸುವ ಮಾನಸಿಕ ಮತ್ತು ದೈಹಿಕ ದೃಢತೆ ಬೆಳೆಸಿಕೊಳ್ಳೋಣ. 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ.

-ವಿವೇಕಾನಂದ. ಹೆಚ್.ಕೆ.