ಕೊರೋನಾ - ಈ ಜಗ ತಲ್ಲಣ..!
ಇತಿಹಾಸ, ವಿಜ್ಞಾನದ ಮಾಹಿತಿಗಳನ್ನು ಸೊಗಸಾಗಿ ಬರೆಯುವ ಲೇಖಕರಾದ ಕೆ ನಟರಾಜ್ ಅವರ ನೂತನ ಕೃತಿ ‘ಕೊರೋನಾ - ಈ ಜಗ ತಲ್ಲಣ'. ಪುಸ್ತಕದ ಬೆನ್ನುಡಿ ಹೇಳುವಂತೆ “ಕೊರೋನಾ ನಮ್ಮ ಕಾಲದ ಒಂದು ದೊಡ್ಡ ದುಃಸ್ವಪ್ನ. ಅದೆಷ್ಟು ಜನ ಆತ್ಮೀಯರನ್ನು ನಾವು ಕಳೆದುಕೊಂಡಿದ್ದೇವೆ... ಇದಕ್ಕೆ ಬಲಿ ತೆತ್ತ ಮಹನೀಯರೆಷ್ಟು? ಇಡೀ ಪ್ರಪಂಚವೇ ಕಳೆದುಕೊಂಡದ್ದೆಷ್ಟು? ಇದರ ವಿರುದ್ಧದ ಹೋರಾಟದ ಬಲಿದಾನಗಳನ್ನು ನೆನಪಿಸಿಕೊಳ್ಳದಷ್ಟು ಬಲಹೀನರಾಗಿಬಿಟ್ಟಿದ್ದೇವೆ ! ಆಗಿನ ನಮ್ಮ ಮನಸ್ಥಿತಿಯನ್ನು ನೆನಪಿಸಿಕೊಂಡರೆ ನಾವು ಸಂಪೂರ್ಣ ವಿವಶರಾಗಿಬಿಡುತ್ತೇವೆ.
ಆದರೂ ಬಹುತೇಕ ಜನರನ್ನು ಕರೋನಾ ವಾಸ್ತವದ ನೆಲಗಟ್ಟಿಗೆ ತಂದದ್ದು ಸುಳ್ಳೇನಲ್ಲ; ಬಹಳಷ್ಟು ಜನಕ್ಕೆ ಜೀವನವನ್ನು ಅರ್ಥಮಾಡಿಸಿದ್ದೇ ಈ ಕೊರೋನಾ. ಮನೆಯ ವ್ಯವಸ್ಥೆಯನ್ನೇ ಉಡಾಫೆಯಿಂದ ನೋಡುತ್ತಿದ್ದ ಯುವಜನಾಂಗಕ್ಕೆ ಪಾಠ ಕಲಿಸಿದ್ದೇ ಈ ಕೊರೋನಾ; ಅವರು ಈ ವ್ಯವಸ್ಥೆಗೇ ಸಂಪೂರ್ಣ ಶರಣಾಗಿದ್ದು ಈಗ ಬೇರೇ ಮಾತು ! ಬಹಳಷ್ಟು ಬಾಂಧವ್ಯಗಳ ಮಹತ್ವ ಅರಿವಾದದ್ದೇ ಆಗ. ಸಾವಿನ ಪರಿಕಲ್ಪನೆಯನ್ನು ಬದಲಾಯಿಸಿದ್ದೇ ಈ ಕೊರೋನಾ ! ಬಂಧುಗಳು, ಆತ್ಮೀಯರು ಸತ್ತಾಗ ನಾವು ಅನುಭವಿಸಿದ ಮಾನಸಿಕ ತೊಳಲಾಟ ವರ್ಣನೆಗೆ ಸಿಲುಕದ್ದು…
‘ಕೊರೋನಾ ಈ ಜಗ ತಲ್ಲಣ' ಕೊರೋನಾ ಕಾಲದಲ್ಲಿಯೇ ಬರೆದ ಪುಸ್ತಕ. ಅನಿವಾರ್ಯ ಕಾರಣಗಳಿಂದ ತಡವಾಗಿ ಪ್ರಕಟವಾಗುತ್ತಿದೆ. ಇದೊಂದು ಆಗಿನ ಪ್ರಪಂಚದ ‘ಕೊರೋನಾ ಡೈರಿ' ಎನ್ನಬಹುದು. ಹಿಂದೆ ಜಗತ್ತು ಅನುಭವಿಸಿದ ಭಾವಗಳಿಗೆ ಇದೊಂದು ಪ್ರತಿಬಿಂಬವಾಗಬಹುದು. ಶ್ರೀ ಕೆ ನಟರಾಜ್ ರವರು ಈ ಪುಸ್ತಕದಲ್ಲಿ ಅಂದಿನ ಪ್ರಪಂಚದ ಕೊರೋನಾದ ವಾಸ್ತವ ಸ್ಥಿತಿ-ಗತಿಗಳನ್ನು ಸೆರೆ ಹಿಡಿದಿದ್ದಾರೆ.” ಎಂದು ಬರೆದಿದ್ದಾರೆ.