ಕೊರೋನಾ: ಎಚ್ಚರ ತಪ್ಪುವುದು ಬೇಡ

ಕೊರೋನಾ: ಎಚ್ಚರ ತಪ್ಪುವುದು ಬೇಡ

ಚೀನಾದಲ್ಲಿ ಮತ್ತೆ ಮಹಾಮಾರಿ ಕೋವಿಡ್ ಆರ್ಭಟಿಸಿದೆ. ಮೂರು ವರ್ಷಗಳ ಹಿಂದೆ ಇದೇ ಸಮಯದಲ್ಲಿ ವುಹಾನ್ ನಿಂದ ಹೊರಟ ವೈರಾಣುವಿನಿಂದ ಇಡೀ ಪ್ರಪಂಚ ತತ್ತರಿಸಿತು. ಇದರ ಹೊಡೆತಕ್ಕೆ ಪ್ರಪಂಚದ ಬಹುತೇಕ ದೇಶಗಳು ಈಗಲೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಆಗಿಲ್ಲ. ಈಗ ಮತ್ತೆ ಚೀನಾದಲ್ಲಿ ಕೋರೋನಾ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ ಎಂಬುದು ಆತಂಕಕಾರಿ.

ದೇಶದಲ್ಲಿ ಚಳಿಗಾಲ ಆರಂಭವಾಗಿದೆ. ಇದು ಸಾಂಕ್ರಾಮಿಕ ವ್ಯಾಧಿಗಳು ಒಬ್ಬರಿಂದ ಮತ್ತೊಬ್ಬರಿಗೆ ಬಹಳ ವೇಗವಾಗಿ ಹರಡುವ ಕಾಲ. ಚೀನಾದಲ್ಲಿ ಕೋರೋನಾ ಉಲ್ಬಣವಾಗುತ್ತಿರುವ ವಿಷಯವನ್ನು ಭಾರತವು ಯಾವುದೇ ಕಾರಣಕ್ಕೂ ಉಪೇಕ್ಷಿಸುವಂತಿಲ್ಲ. ಏಕೆಂದರೆ ಒಂದು ಸಾರಿ ಭಾರತಕ್ಕೆ ಈ ದಿಸೆಯಲ್ಲಿ ಸಂಭವಿಸಿರುವ ಹಾನಿಯ ಪ್ರಮಾಣ ಅಧಿಕ. ದೇಶದಲ್ಲಿ ಬಹುತೇಕ ಪ್ರಜೆಗಳಿಗೆ ಎರಡು ಸುತ್ತಿನ ಲಸಿಕೆ ಆಗಿದ್ದರೂ ಅಪಾಯಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹೇಳಬೇಕೆಂದರೆ ಭಾರತದಲ್ಲಿ ಕೋವಿಡ್ ಆತಂಕ ಕಳೆದ ಎರಡು ವರ್ಷಗಳ ಹಿಂದೆ ಕಂಡುಬಂದಷ್ಟು ಈಗಿಲ್ಲ. ಜನತೆಯಲ್ಲಿ ಕೋವಿಡ್ ವಿರುದ್ಧ ಸಮರ ನಡೆಸುವ ಶಕ್ತಿ ಮತ್ತು ಆತ್ಮವಿಶ್ವಾಸ ಬಂದಿದೆ. ಇದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ನೀಡಿದ ಆತ್ಮನಿರ್ಭರ ಪೋಷಣೆಯ ಫಲಶ್ರುತಿ. ವೈದ್ಯಲೋಕದಲ್ಲಿ ಅತಿ ದೊಡ್ಡ ಹೆಸರು ಮಾಡಿರುವ ಚೀನಾದಲ್ಲಿ ಕೋರೋನಾ ನಿಯಂತ್ರಣವಾಗಲಿಲ್ಲ ಎಂದಾಗ ಇದು ಭಾರತಕ್ಕೆ ಅಲ್ಲ, ಪ್ರಪಂಚದ ಇತರ ದೇಶಗಳಿಗೂ ಅಚ್ಚರಿ ತರುವಂತಹ ವಿಷಯ. ವುಹಾನ್ ಮಾರುಕಟ್ಟೆಯಲ್ಲಿ ಈ ಹಿಂದೆ ನಡೆದದ್ದೇನು? ಅಲ್ಲಿಂದ ಹೊರಟ ವೈರಾಣು ಮೊದಲು ಎಲ್ಲೆಲ್ಲಿ ಹರಡಿತು? ಎಂಬುದರ ಮುಕ್ತ ತನಿಖೆಗೆ ಚೀನಾ ಈಗಲೂ ಒಪ್ಪಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಎಲ್ಲಾ ಆದೇಶಗಳನ್ನು ತನ್ನ ವೀಟೋ ಅಧಿಕಾರದ ಮೂಲಕ ಬದಿಗಿರಿಸಿದ ಚೀನಾ ದೇಶದ ಸರ್ವಾಧಿಕಾರದ ಧೋರಣೆ ಖಂಡನೀಯ. ಅದೇನೇ ಇರಲಿ, ಚಳಿಗಾಲದಲ್ಲಿ ಗಾಳಿಯಲ್ಲಿ ವೈರಾಣು ಪ್ರಸಾರ ಬಲು ತೀಕ್ಷ್ಣ. ಒಟ್ಟಿನಲ್ಲಿ ಭಾರತದಲ್ಲಿ ಮತ್ತೆ ಗಂಭೀರ ಪ್ರಮಾಣದಲ್ಲಿ ಪರಿಣಾಮ ಬೀರದಂತೆ ಎಚ್ಚರಿಸುವುದು ಸರ್ವರೀತಿಯಲ್ಲಿಯೂ ಸೂಕ್ತ. ದೇಶದ ಮಕ್ಕಳಿಗೆ ಅಧಿಕೃತವಾಗಿ ಲಸಿಕೆ ನೀಡಲಾಗುತ್ತಿಲ್ಲ.

ಹಿರಿಯ ನಾಗರಿಕರಿಗೆ ಮೂರನೇ ಸುತ್ತಿನ ಲಸಿಕೆ ಬೂಸ್ಟರ್ ಡೋಸ್ ಕೂಡ ಲಭ್ಯ. ಆದರೆ ಮಕ್ಕಳಿಗೆ ಇನ್ನೂ ಲಸಿಕೆ ನೀಡದಿರುವುದು ಒಂದು ಗಂಭೀರ ಪ್ರಶ್ನೆ. ಲಸಿಕೆ ಪಡೆದ ಬಹುತೇಕ ಭಾರತೀಯರಿಗೆ ಕೋವಿಡ್ ನಿಗ್ರಹ ಶಕ್ತಿ ಬಂದಿದ್ದರೂ ಕೋಟ್ಯಾಂತರ ಮಕ್ಕಳಿಗೆ ಇದು ವ್ಯಾಪಿಸದಂತೆ ಎಚ್ಚರವಹಿಸುವ ದಿನಗಳಿವು. ಆರಂಭದಲ್ಲಿ ಚೀನಾದಲ್ಲಿ ಕೋರೋನಾ ವಿಜ್ರಂಭಿಸಿದಾಗ ಪ್ರಪಂಚದ ಬಹುತೇಕ ದೇಶಗಳು ಇದನ್ನು ಲಘುವಾಗಿ ಪರಿಗಣಿಸಿದ್ದು ಕಟುವಾಸ್ತವ. ಆದರೆ ಸಾವು, ನೋವುಗಳ ಸಂಖ್ಯೆ ಜಾಸ್ತಿಯಾದಾಗ ವಿಶ್ವ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚೆತ್ತುಕೊಳ್ಳುವಂತೆ ಆಯಿತು. ಒಟ್ಟಿನಲ್ಲಿ ಕೋವಿಡ್ ಕಲಿಸಿದ ಮತ್ತು ಕಲಿಸುತ್ತಿರುವ ಪಾಠಗಳು ಒಂದು ಎರಡಲ್ಲ, ದೇಶದಲ್ಲಿ ಈಗಲೂ ಕೋವಿಡ್ ಮುನ್ನೆಚ್ಚರಿಕೆಗಳನ್ನು  ಪರಿಪಾಲಿಸುವ ಅಗತ್ಯವಿದೆ.

ಕೃಪೆ:  ಹೊಸದಿಗಂತ, ಸಂಪಾದಕೀಯ, ದಿ: ೩೦-೧೧-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ