ಕೊರೋನಾ: ಮನೆಯಲ್ಲೇ ಇರೋಣಾ

ಕೊರೋನಾ: ಮನೆಯಲ್ಲೇ ಇರೋಣಾ

ಬಹುಷಃ ಸುಮಾರು ಒಂದುವರೆ ತಿಂಗಳಿಂದ ಎಲ್ಲಾ ಕಡೆ ಕೊರೋನಾ ಮಹಾ ಮಾರಿಯದ್ದೇ ಸುದ್ದಿ. ಯಾವ ಪತ್ರಿಕೆಯೇ ಆಗಿರಲಿ, ಸುದ್ದಿ ಚಾನೆಲ್‌ಗಳೇ ಆಗಿರಲಿ ಇದರದ್ದೇ ಸುದ್ದಿ. ಉಳಿದ ಯವುದೇ ಕಾರ್ಯಕ್ರಮಗಳು ಇಲ್ಲವೇ ಇಲ್ಲ ಅವರಾದರೂ ಏನು ಮಾಡುವುದು? ಈ ಸುದ್ದಿಗಳನ್ನು ಕೇಳಿ ಕೇಳಿ ನಿಮಗೂ ಬೋರಾಗಿರಬಹುದಲ್ವಾ? ಅದಕ್ಕೇ ನಾನು ಕೊರೋನಾ ರೋಗ ಮತ್ತು ಅದರ ಪರಿಣಾಮ ಮತ್ತು ನಿಯಂತ್ರಣಗಳ ಬಗ್ಗೆ ಕೊರೆಯಲು ಹೋಗಲ್ಲ. ನೀವು ಈಗಾಗಲೇ ಅದರ ಬಗ್ಗೆ ತಿಳಿದುಕೊಂಡು ಮುಂಜಾಗ್ರತೆಯನ್ನು ವಹಿಸಿಕೊಂಡು ಮನೆಯಲ್ಲೇ ಆರೋಗ್ಯವಂತರಾಗಿರುವಿರಿ ಎಂದು ನನ್ನ ನಂಬಿಕೆ. 
    ನಾನು ಹೇಳಬಯಸಿರುವುದು ಕೊರೋನಾ ಅಥವಾ ಯಾವುದೇ ಹೆಮ್ಮಾರಿ ನಮ್ಮ ನಡುವೆ ಹೇಗೆ ಬಂದು ಬಿಡುತ್ತೆ? ನಾವು ಮಾನವರು ಅತ್ಯಂತ ಬುದ್ದಿವಂತರು. ಏನೇನೋ ಕಂಡು ಹಿಡಿದಿದ್ದೇವೆ. ಚಂದ್ರಲೋಕ, ಮಂಗಳ ಗ್ರಹಕ್ಕೆಲ್ಲಾ ನಮ್ಮ ಉಪಗ್ರಹಗಳನ್ನು ಕಳುಹಿಸುತ್ತೇವೆ. ಪ್ರಪಂಚದ ಯಾವುದೇ ಮೂಲೆಗಾದರೂ ಕ್ಷಣ ಮಾತ್ರದಲ್ಲಿ ಸಂದೇಶಗಳನ್ನು ಕಳುಹಿಸಿ ಬಿಡುತ್ತೇವೆ. ಪ್ರೀತಿ ಪಾತ್ರರೊಡನೆ ವಿಡಿಯೋ ಕಾಲ್ ಮುಖಾಂತರ ಮಾತನಾಡುತ್ತೇವೆ. ಆದರೆ ಕೊರೋನಾ ಎಂಬ ಸಣ್ಣ ಕಣ್ಣಿಗೆ ಕಾಣದ ವೈರಸ್ ನಮ್ಮನ್ನು ಹೈರಾಣಾಗಿಸುತ್ತವೆ ಎಂದರೆ ನಾವೆಷ್ಟು ಪೇಚಿಗೆ ಸಿಲುಕಿದ್ದೇವೆ ಎಂದು ಅರ್ಥವಾಗುತ್ತದೆ. ಸಾವು ಯಾರಿಗೂ ಜಯಿಸಲಾಗದ್ದು ಆದರೂ ಅದು ಬರುತ್ತದೆ ಎಂದರೆ ನಾವು ದೂರ ಓಡುತ್ತೇವೆ. ಸಾವನ್ನು ಜಯಿಸಿದವರು ಭೂಲೋಕದಲ್ಲಿ ಯಾರೂ ಇರಲಾರರು. ಇದು ಪ್ರಕೃತಿಯ ನಿಯಮ. ಕೆಲವರಿಗೆ ಬೇಗ ಸಾವು ಬಂದರೆ ಕೆಲವರಿಗೆ ತಡವಾಗಿಯಾದರೂ ಇದು ಬಂದೇ ಬರುತ್ತದೆ. ಆದರೂ ನಾವಿಂದು ಕೊರೋನಾ ಬಂತು ಎಂದ ಕೂಡಲೇ ಅದಕ್ಕೆ ಬೇಕಾದ ಪ್ರತಿಬಂಧವನ್ನು ಹುಡುಕುತ್ತೇವೆ. ಮಾಸ್ಕ್ ಹಾಕುತ್ತೇವೆ. ಬಿಸಿ ನೀರು ಕುಡಿಯುತ್ತೇವೆ. ಕೈಗಳನ್ನು ಆಗಾಗ ಸಾಬೂನ್‌ನಿಂದ ತೊಳೆದುಕೊಳ್ಳುತ್ತೇವೆ. ಹೀಗೆ ಸಾವನ್ನು ಮುಂದಕ್ಕೆ ಹಾಕುತ್ತೇವೆ.
ಆದರೆ ನಾವು ನಮ್ಮ ಬದುಕಿಗಾಗಿ ನಮ್ಮ ಪರಿಸರವನ್ನು ಎಷ್ಟು ಸ್ವಚ್ಛವಾಗಿರಿಸಿಕೊಂಡಿದ್ದೇವೆ? ನಾವು ಒಂದುವರೆ ತಿಂಗಳು ಮನೆಯಿಂದ ಹೊರಗೆ ಬಾರದೇ ಇದ್ದುದರಿಂದ ಹಲವಾರು ಜೀವಿಗಳು ಸ್ವಚ್ಛಂದ ಬದುಕನ್ನು ಕಂಡುಕೊಂಡಿವೆ. ನದಿಗಳು ಕನ್ನಡಿಯಂತೆ ತಿಳಿಯಾಗಿವೆ. ವಾತಾವರಣವಂತೂ ಅತ್ಯಂತ ನಿರ್ಮಲವಾಗಿದೆ. ಆದರೆ ಸ್ವಚ್ಛ ಗಾಳಿಯನ್ನು ನಾವು ಆಸ್ವಾದಿಸದೇ ಮಾಸ್ಕ್ ಹಾಕಿ ತಿರುಗಾಳುತ್ತಿದ್ದೇವೆ. ಇದೇ ಬದುಕಿನ ವಿಪರ್ಯಾಸ ಅಲ್ಲವೇ.
ಪ್ರಕೃತಿ ತನ್ನದೇ ದಾರಿಯಲ್ಲಿ ಸಾಗುತ್ತದೆ. ಅದು ನಮ್ಮ ನಮ್ಮ ಹಿಡಿತದಲ್ಲಿ ಇಲ್ಲ. ಇಂದು ಸಾಯಂಕಾಲ ಮಳೆ ಅಥವಾ ಬಿರುಗಾಳಿ ಬರಬೇಕು ಎಂದು ಪ್ರಕೃತಿಯು ನಿಶ್ಚಯಿಸಿಕೊಂಡರೆ ಯಾವುದೇ ಹುಲು ಮಾನವನಿಗೆ ಅದನ್ನು ತಡೆಯುವ ಶಕ್ತಿ ಇಲ್ಲ. ಅದೇ ರೀತಿ ಪ್ರಪಂಚದಲ್ಲಿ ಮಾನವನು ಮಾಡಿಕೊಂಡ ಅನಾಚಾರ, ದುರಾಚಾರಗಳು ಹೆಚ್ಚಾದಾಗ ಪ್ರಕೃತಿಯು ತನ್ನದೇ ರೀತಿಯಲ್ಲಿ ಅದನ್ನು ನಿಗ್ರಹಿಸುತ್ತದೆ ಎನ್ನುವುದೇ ನನ್ನ ಬಲವಾದ ನಂಬಿಕೆ. ಪ್ರಪಂಚದಾದ್ಯಂತ ಸುಮಾರು ೨ ಲಕ್ಷಕ್ಕೂ ಅಧಿಕ ಮಂದಿ ಈ ಕೊರೋನಾ ರೋಗಕ್ಕೆ ಬಲಿಯಾಗಿದ್ದಾರೆ ಮತ್ತು ಈ ಸಾವಿನ ಗ್ರಾಫ್ ಏರುತ್ತಲೇ ಇದೆ. ಅತ್ಯಂತ ಮುಂದುವರೆದ ದೇಶಗಳೂ ಇದಕ್ಕೆ ಹೊರತಾಗಿಲ್ಲ. ನಾವು ಕಾಡನ್ನು ಅನಾವಷ್ಯಕವಾಗಿ ಕಡಿದೆವು, ನಾವು ನೀರನ್ನು ಅನಾವಶ್ಯಕವಾಗಿ ಪೋಲು ಮಾಡಿದೆವು ಪರಿಣಾಮ ಬರಗಾಲ ಬಂತು. ನೀರಿನ ಕೊರತೆಯೇ ಇಲ್ಲದ ಊರುಗಳಲ್ಲಿ ಕೊರತೆ ಕಂಡು ಬಂತು. ಮಾನವ ಭಾರೀ ಬಲಶಾಲಿ ಏನನ್ನಾದರೂ ಸೃಷ್ಟಿಸಲು ಸಮರ್ಥ ಎಂಬುದು ಒಂದು ಭ್ರಮೆ ಅಷ್ಟೇ. 
ಕೊನೆಗೆ ಒಂದು ಮಾತು. ಇದು ನನ್ನ ಮನಸ್ಸಿನ ಜಿಜ್ಞಾಸೆ ಅಷ್ಟೇ. ಮಾನವ ಬದುಕು ದೊಡ್ಡದು. ನಮ್ಮ ಮುಂದಿನ ಪೀಳಿಗೆಗೂ ಉತ್ತಮ ಪರಿಸರವನ್ನು ನಾವು ಉಳಿಸಿಕೊಡಬೇಕು ಎಂಬುದೇ ನನ್ನ ಕಳ ಕಳಿ. ಸಾಮಾಜಿಕ ಜಾಲತಾಣದಲ್ಲಿ ಒಂದು ಕಾರ್ಟೂನ್ ನೋಡಿದೆ ಅದರಲ್ಲಿ ಓರ್ವ ಸಣ್ಣ ಬಾಲಕ ಹೇಳುತ್ತಾನೆ ಕೇವಲ ಸಾಬೂನ್‌ನಿಂದ ಸಾಯುವ ಈ ವೈರಸ್‌ಗೆ ಇನ್ನೂ ವ್ಯಾಕ್ಸಿನ್ ಬಂದಿಲ್ಲವಲ್ಲಾ? ಆಶ್ಚರ್ಯ!!
ನಾವು ಈ ಕೊರೋನಾ ವೈರಸ್‌ನಿಂದ ಕಲಿತದ್ದು ಬೇಕಾದಷ್ಟಾಗಿದೆ. ಇದರಿಂದ ಹೊರಗೆ ಬರುವ. ಬದುಕನ್ನು ಇನ್ನಷ್ಟು ಸುಂದರವಾಗಿ ಕಟ್ಟಿಕೊಳ್ಳುವ. ಸದ್ಯಕ್ಕೆ ಮನೆಯಲ್ಲೇ ಇರೋಣ.
ಚಿತ್ರ ಕೃಪೆ: ಅಂತರ್ಜಾಲ