ಕೊರೋನಾ ಸಮಯದಲ್ಲಿ ಎಚ್ಚರಿಕೆ ಅಗತ್ಯ

ಕೊರೋನಾ ಸಮಯದಲ್ಲಿ ಎಚ್ಚರಿಕೆ ಅಗತ್ಯ

ಆಪತ್ತು ಬಂದಾಗಿದೆ, ದೀರ್ಘ ಸಮಯದಿಂದ ಕಾಡುತ್ತಿದೆ. ಹಿರಿಯ-ಕಿರಿಯ ತಾರತಮ್ಯವಿಲ್ಲ, ಯಾರಾದರೇನು ಎಂಬ ಭಯವೂ ಇಲ್ಲ. ಬಡವ, ಧನಿಕ ಇಲ್ಲವೇ ಇಲ್ಲ. ಹಿಡಿದು ಹಿಂಡಿ ಹಿಪ್ಪೆ ಮಾಡುತ್ತಿದೆ.(ಬಂಧುಗಳ ಮನೆಯಲ್ಲಿ ಕೇಳಿದ ಘಟನೆ, ಇಬ್ಬರನ್ನೂ ಕಳಕೊಂಡಾಗಿದೆ.)

ಯಾಕೆ ಹೀಗಾಯಿತು, ಯೋಚಿಸಿ ಪ್ರಯೋಜನವಿಲ್ಲ. ಏನು ಮಾಡಬಹುದು ಎಂದು ಚಿಂತಿಸಿದರೆ ಜೀವ ಆದರೂ ಉಳಿಯಬಹುದು. ಮೊದಲು ಜೀವ, ಮತ್ತೆಲ್ಲ ಮತ್ತೆ. ಒಂದು ಗಾದೆ ಮಾತಿದೆ * ಬದುಕಿದರೆ ಬೇಡಿ ಆದರೂ ತಿಂದೇನು*.

ಈಗ ನಾವು ಮಾಡಬೇಕಾದ್ದೇನು? ದೃಢನಿರ್ಧಾರ ತೆಗೆದುಕೊಳ್ಳುವುದು, ಅನಿವಾರ್ಯ ಹೊರತಾಗಿ ಮನೆಯಿಂದ ಹೊರಗಡೆ ಹೋಗುವುದು, ಸುಮ್ಮನೇ ತಿರುಗಾಡುವುದು, ಯಾವುದೋ ಅಂಗಡಿಗಳ ಮುಂದೆ ಹೋಗಿ ಮಾತುಕತೆ ಮಾಡುವುದು, ಜನರ ಗುಂಪು ಇದ್ದಲ್ಲಿಗೆ ಹೋಗದಿರುವುದು, ಯಾರೊಂದಿಗೆಯೂ ಬೆರೆಯದಿರುವುದು, ಇದು ಮೊದಲು ಮಾಡಬೇಕಾದ ದೃಢನಿರ್ಧಾರ. ಆಪತ್ತು ಬಂದಾಗ ಸಾಮೂಹಿಕ ಒಗ್ಗಟ್ಟಾಗಿ ಎದುರಿಸಬೇಕು. ಮನೆಮನೆಯಲ್ಲೂ ಜಾರಿಗೆ ಬರಬೇಕು. ಒಗ್ಗಟ್ಟಿಗೆ ಅಂಜದ್ದು ಯಾವುದೂ ಇಲ್ಲ.ಈ ರೋಗ ಹೇಗೆ ಹಬ್ಬುತ್ತಿದೆ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಮನೆಯಲ್ಲೇ ಇದ್ದು, ಬಿಸಿ ನೀರು, ಬಿಸಿ ಆಹಾರ, ಗಂಜಿ, ಸಾರು, ವಿವಿಧ ರೀತಿಯ ಕಷಾಯಗಳು, ರೋಗ ನಿರೋಧಕ ಹೆಚ್ಚಿಸುವ ಆಹಾರವನ್ನು ಸೇವಿಸಬೇಕು. ನೆಲ್ಲಿಕಾಯಿ, ಬ್ರಾಹ್ಮಿ(ಒಂದೆಲಗ), ಜೀರಿಗೆ, ಮೆಂತೆ, ಕಾಳುಮೆಣಸು, ಶುಂಠಿ, ಮಾವು, ಪುನರ್ಪುಳಿ ತಂಬುಳಿ ದೇಹಕ್ಕೆ ಹಿತ, ಆರೋಗ್ಯ ಸಹ.ನೆಲ್ಲಿಕಾಯಿ ಹಾಗೆಯೇ ತಿನ್ನಬಹುದು. ಲಿಂಬೆ, ಕಿತ್ತಲೆ, ಮುಸುಂಬಿ ಸೇವಿಸಬಹುದು. ಎಲ್ಲವೂ ಹಿತಮಿತವಾಗಿರಲಿ. ದೇಹ ಸ್ವಚ್ಛತೆ, ಆಗಾಗ ಕೈ ಮಖ ಸ್ವಚ್ಛತೆಯತ್ತ ಗಮನ. ಏನಾದರೂ ಆರೋಗ್ಯ ದಲ್ಲಿ ಏರುಪೇರು ಕಂಡರೆ ಕುಟುಂಬ ವೈದ್ಯರ ಸಲಹೆ ಪಡೆದು ಮುಂದಿನ ಚಿಕಿತ್ಸೆ ಬಗ್ಗೆ ಆಲೋಚನೆ.

ಚುಚ್ಚುಮದ್ದಿನ ಅಗತ್ಯತೆಯನ್ನು ಎಲ್ಲರಿಗೂ ತಿಳಿಸುವ ಕೆಲಸವಾಗಬೇಕಿದೆ. ಹೊರಗೆ ಹೋಗಿ ದುಡಿಯುವವರಿಗೆ ಅನಿವಾರ್ಯ. ಅಲ್ಲಿ ಯೂ ಆದಷ್ಟೂ ಜಾಗೃತೆ ವಹಿಸಬೇಕು.ನಮ್ಮ ಮನೆಗಳಲ್ಲಿರುವ ಸದಸ್ಯರೊಂದಿಗೆ, ನಮ್ಮ ಜೀವವೂ ಮುಖ್ಯ.

ಕಷ್ಟಗಳು ಬರುವುದೇ ಮುಂದೆ ಸುಖ ನೀಡಲು ಎಂಬುದು ಬದುಕಿನ ಗುಟ್ಟು. ಇಲ್ಲಿ ನಮ್ಮ ಗಟ್ಟಿತನ ಪ್ರಕಟವಾಗುತ್ತದೆ. ಔಷಧ ರೋಗ ವಾಸಿಗೆ, ಮನಸಿನ ಗಟ್ಟಿಗೆ ಯೋಗ, ಧ್ಯಾನ, ಉತ್ತಮ ಪುಸ್ತಕಗಳನ್ನು ಓದುವುದು, ತೋಟಗಾರಿಕೆ, ವ್ಯಾಯಾಮ, ನಡಿಗೆ ಮಾಡಬಹುದು. ಒಟ್ಟಾರೆ ಭೀತಿ ಹುಟ್ಟಿಸುವುದರಿಂದ ದೂರವಿರೋಣ. ಜೀವನದ ಮೂಲ ಕಣ್ಣಿಗೆ ಕಾಣದ ಶಕ್ತಿ. ಅವನನ್ನು ನಂಬೋಣ, ಜೊತೆಗೆ ನಮ್ಮ ಎಚ್ಚರಿಕೆ ಬೇಕೇ ಬೇಕು.ಎಲ್ಲಾ ಹೋದರೂ ಇರಬಹುದು. ಜೀವವೇ ಹೋದರೆ ಏನಿದೆ ಮತ್ತೆ? ಯಾರ ಹತ್ತಿರ ಮಾತನಾಡುವುದಿದ್ದರೂ ಮುಖಗವುಸು(ಮಾಸ್ಕ್) ಹಾಕಿಯೇ ಮಾತನಾಡೋಣ. ಎಲ್ಲರೂ ಸಾಮೂಹಿಕವಾಗಿ ಬಂದ ಸಂಕಟವನ್ನು ಎದುರಿಸಿ ಗೆಲ್ಲೋಣ.

-ರತ್ನಾ ಭಟ್ ತಲಂಜೇರಿ