ಕೊರೋನಾ ಸಮಯದಲ್ಲಿ ಕೆಲವು ಸಲಹೆಗಳು

ಕೊರೋನಾ ಸಮಯದಲ್ಲಿ ಕೆಲವು ಸಲಹೆಗಳು

ಸತತ ಒಂದು ವರ್ಷಕ್ಕಿಂತಲೂ ಜಾಸ್ತಿ ನಮ್ಮ ಮನಸ್ಸಿನಲ್ಲಿ ಕೊರೋನಾ..ಲಾಕ್ ಡೌನ್ ಇಂತಹ ಹತಾಶೆ ಆತಂಕ ಕಿರಿಕಿರಿ ತುಂಬುವ ಶಬ್ದಗಳೇ  ತುಂಬಿವೆ. ಪ್ರತಿನಿತ್ಯ ವಾಟ್ಸ್ ಆ್ಯಪ್ ಗಳಲ್ಲೂ ಫೇಸ್ ಬುಕ್ ಗಳಲ್ಲೂ ಸಾವು ನೋವುಗಳ ಸುದ್ದಿಗಳೇ ಕಾಣಸಿಕ್ಕಿ ಮನಸ್ಸು ಇನ್ನಷ್ಟು ನೆಮ್ಮದಿಯನ್ನು ಕಳೆದುಕೊಳ್ಳುವಂತೆ ಮಾಡುತ್ತಿವೆ. ಪಾಸಿಟಿವ್ ಬಂದು ಕೂಡ  ಆರೋಗ್ಯವಂತರಾದವರ ಸಂಖ್ಯೆ ಬಹಳಷ್ಟು ಇದ್ದರೂ  ಯಾರೂ ಆ ಬಗ್ಗೆ ಪೋಸ್ಟ್ ಹಾಕುವುದರಲ್ಲಿ ಯಾವ ಆಸಕ್ತಿಯನ್ನೂ ತೋರಿಸುತ್ತಿಲ್ಲ  .  

ನಾವು ಈಗ ಏನು ಮಾಡಬೇಕು?

ಮೊತ್ತ ಮೊದಲಾಗಿ ನಮ್ಮ ಮನಸ್ಸಿನಿಂದ  ಹೆದರಿಕೆ ..ಆತಂಕ.. ದಿಗಿಲು ಇಂಥದ್ದನ್ನೆಲ್ಲ ತೆಗೆದುಬಿಡಬೇಕು. ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಜಾಗ್ರತೆಯಲ್ಲಿ ನಾವಿರಬೇಕು. ಒಂದು ವೇಳೆ ಪಾಸಿಟಿವ್ ಬಂತೇ ಎಂದು ತಿಳಿದುಕೊಳ್ಳಿ.. ಅಯ್ಯೋ.. ದೇವರೇ!! ಪಾಸಿಟಿವ್ ಬಂತು ನಾನು ಸತ್ತೇ ಹೋಗುತ್ತೇನೆ. ಎನ್ನುವ ಹೆದರಿಕೆಯನ್ನು ಬಿಟ್ಟು ಬಿಡಬೇಕು. ಬರಲಿ ..ಮನೆಯಲ್ಲಿ ಎಲ್ಲರಿಗೂ ಬರಲಿ ಏನಾಯಿತು ಎಲ್ಲರೂ ಸೇರಿ ಎದುರಿಸೋಣ. ಹಾಗೆಂದು ಭಂಡ ಧೈರ್ಯದಿಂದ ಯಾವುದೇ ಒಂದು ಜಾಗ್ರತೆ ವಹಿಸದೆ ನಮ್ಮ ಖುಷಿ ಬಂದ ಹಾಗೆ ಬದುಕುವುದೂ ಅಲ್ಲ .

ನಮ್ಮ ಎಲ್ಲ ಕರ್ತವ್ಯಗಳನ್ನು ಮಾಡಿಯೂ ಅಪ್ಪಿತಪ್ಪಿ ಪಾಸಿಟಿವ್ ಬಂತೆಂದಾದರೆ ಧೈರ್ಯಗೆಡುವುದೂ ಅಲ್ಲ  ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಯಾರಿಗೆ ಬರುವುದಿಲ್ಲ ಹೇಳಿ? ಕೊರೊನಾ ಅಲ್ಲದೆ ಬೇರೆ ಎಂತೆಂಥ ಅನಾರೋಗ್ಯಗಳು ಬಂದು ಸರಿಯಾದವರು ನಮ್ಮಲ್ಲೇ ಇಲ್ಲವೇ .

ಹಾರ್ಟ್ ಅಟ್ಯಾಕ್ ..ಕ್ಯಾನ್ಸರ್ ..ಇತ್ಯಾದಿ ಬೇರೆ ಬೇರೆ  ಯಾವು ಯಾವುದೋ ಅತ್ಯಂತ ಅಪಾಯಕಾರಿ ಕಾಯಿಲೆಗಳು ಬಂದು ಈಗಲೂ ಬದುಕುತ್ತಿಲ್ಲವೇ? ಅವರನ್ನೆಲ್ಲ ನೆನಪಿಸಿಕೊಂಡು ನಾನು   ಸರಿ ಇದ್ದೇನೆ ಸರಿಯಾಗುತ್ತೇನೆ ಎನ್ನುವ ಒಂದೇ ಒಂದು  ದೃಢ ವಿಶ್ವಾಸದಿಂದ ಇರಬೇಕು. 

ಅನವಶ್ಯಕವಾಗಿ ಸುದ್ದಿಗಳನ್ನು ಹಬ್ಬುವ ಕೆಲಸವನ್ನು ನಿಲ್ಲಿಸಬೇಕು. ಬೇರೆ ವಿಚಾರದಲ್ಲಿ ಗಾಸಿಪ್ ಮಾಡದೆ ಇದ್ದರೆ ಒಳ್ಳೆಯದು .ಒಳ್ಳೆಯ ಚಿಂತನೆಗಳು ಆರೋಗ್ಯಕರ ಮಾತುಕತೆ ನಮ್ಮದಾಗಿರಬೇಕು. ಒಂದು ವೇಳೆ ಯಾರಿಗಾದರೂ ಈ ದಿನಗಳಲ್ಲಿ ತುಂಬಾ ಕಷ್ಟ ಎಂದೆನಿಸಿದರೆ..ಅವರು ಅದನ್ನು ನಮ್ಮ ಬಳಿ ಹಂಚಿಕೊಳ್ಳಲು ಬಯಸುತ್ತಿದ್ದರೆ .. ನಮ್ಮಿಂದ  ಏನು ಮಾಡಲಾಗದಿದ್ದರೂ ಕನಿಷ್ಠ ಪಕ್ಷ ಅವರ ಮಾತುಗಳಿಗೆ ಕಿವಿಯಾಗಿ ಒಂದಿಷ್ಟು ಸಮಾಧಾನದ ಮಾತುಗಳನ್ನಾದರೂ ಆಡುವ ಶಕ್ತಿ ನಮಗಿದೆ.ಅವರು ಅತ್ಯಂತ ಪ್ರೀತಿಯಿಂದ ವಿಶ್ವಾಸದಿಂದ ನಮ್ಮ ಬಳಿ ಹೇಳಿದ ಅವರ ಕಷ್ಟಗಳನ್ನು ನಾಲ್ಕು ಜನರಲ್ಲಿ ಹಂಚುವುದು ನಮ್ಮ ದೊಡ್ಡಸ್ತಿಕೆಯಲ್ಲ. ಅವರು ಅತ್ಯಂತ ವಿಶ್ವಾಸದಿಂದ  ನಮ್ಮ ಬಳಿ ತಮ್ಮ ಮನಸ್ಸಿನ ಮಾತುಗಳನ್ನು ಹೇಳಿರುತ್ತಾರೆ ಎನ್ನುವುದನ್ನ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು .  

ಪ್ರತಿನಿತ್ಯವೂ ಒಳ್ಳೆಯ ಆಹಾರ ಒಳ್ಳೆಯ ನಿದ್ರೆ ಬೇಕೇ ಬೇಕು. ಒಳ್ಳೆಯ ಆಹಾರ ಎಂದರೆ ಯೂಟ್ಯೂಬಿನಲ್ಲಿ  ನೋಡಿ ಮಾಡುವ ಹೊಸ ಹೊಸ ವೈವಿಧ್ಯಮಯ ಪ್ರಯೋಗಗಳಲ್ಲ. ನಮ್ಮ ದೇಹಕ್ಕೆ  ಜೀರ್ಣಕ್ಕೆ ಸುಲಭವಾಗಿರುವ ಹಾಗೂ ಈ ಬೇಸಿಗೆಯಲ್ಲಿ ಉಪಶಮನ ನೀಡುವ ಆಹಾರದ ಅಗತ್ಯವಿದೆಯೋ ಅದನ್ನು ಸರಿಯಾಗಿ ತೆಗೆದುಕೊಳ್ಳೋಣ . ಸರಿಯಾಗಿ ನೀರನ್ನು ಕುಡಿಯೋಣ. ಆಗೊಮ್ಮೆ ಈಗೊಮ್ಮೆ ನಮ್ಮ ಬಾಯಿರುಚಿಗೆ ಒಂದಿಷ್ಟು ಚಟ್ ಪಟಾ ಆಹಾರ ತಿಂದರೆ ಏನೇನೋ ತೊಂದರೆಯಿಲ್ಲ ಆದರೆ ಅದೇ ಚಟವಾಗಬಾರದು ಅಲ್ಲವೇ .

ಒಳ್ಳೆಯ ಸಂಗೀತವನ್ನು ಕೇಳೋಣ. ನಮಗೆ ಆಸಕ್ತಿ ಇರುವ ವಿಚಾರಗಳನ್ನು ಕೇಳೋಣ. ಟೀವಿಯಲ್ಲೂ ಯೂಟ್ಯೂಬ್ ನಲ್ಲೂ ಬೇಕಾದಷ್ಟು ನಕ್ಕು ನಗಿಸುವ ಪ್ರಸಂಗಗಳು ಸಿಗುತ್ತವೆ ಅವನ್ನು ಒಂದಿಷ್ಟು ಆಸ್ವಾದಿಸಿ ನಮ್ಮ ದೇಹಕ್ಕೂ ಮನಸ್ಸಿಗೂ ನಗುವಿನ ವ್ಯಾಯಾಮ ಮಾಡಿಸೋಣ.

ಮುಖ್ಯವಾಗಿ ನಮ್ಮೊಳಗಿರುವ ಮತ್ಸರ.. ಕೋಪ ..ದುರಂಕಾರ.. ಇವೆಲ್ಲವೂ ಕೇವಲ ನಮ್ಮ ಅನಗತ್ಯ ರೋಗಗಳು  ಎನ್ನುವುದನ್ನು ಎಣಿಸಿ ಬಿಟ್ಟುಬಿಡೋಣ. ನಮ್ಮಿಂದಲೇ ಈ ಪ್ರಪಂಚವೇನು ನಡೆಯುತ್ತಿಲ್ಲ ಅಥವಾ ನಮ್ಮನ್ನು ನಂಬಿ ಯಾರೂ ಇಲ್ಲ.. ಹಾಗಾಗಿ ನಾನು ಎನ್ನುವುದು ಬೇಡವೇ ಬೇಡ . ದಿನಕ್ಕೊಮ್ಮೆ ಯಾದರೂ ನಮ್ಮ ಆತ್ಮೀಯರೆನಿಸಿಕೊಂಡ  ಕನಿಷ್ಠ ಒಬ್ಬರ  ಜೊತೆಯಾದರು ಒಂದಿಷ್ಟು ಹೊತ್ತು ಚೆಂದದ ಮಾತುಗಳನ್ನು ಆಡೋಣ. ಮನಸ್ವಿ ನಗೋಣ. ಮಾತುಗಳಲ್ಲಿ ಪ್ರಾಮಾಣಿಕತೆ ಇರಲಿ .

ಅನೇಕರು ತಮ್ಮ ತಮ್ಮ ಮನೆಗಳಲ್ಲಿ ಒಬ್ಬಂಟಿಯಾಗಿದ್ದಾರೆ ಅವರವರ ಆತ್ಮಸ್ಥೈರ್ಯ ದಲ್ಲಿಯೇ  ಸ್ವಾವಲಂಬಿಯಾಗಿಯೇ ಅವರು ಬದುಕುತ್ತಿದ್ದಾರೆ. ಅಂಥದ್ದರಲ್ಲಿ   ನಾವು ನಿಮ್ಮವರು.. ನೀವು ಹೇಗಿದ್ದೀರಿ ?ಎನ್ನುವ ಕಾಳಜಿಪೂರ್ಣ ಪ್ರೀತಿಪೂರ್ವಕ ಒಂದೆರಡು ಮಾತುಗಳು ಮನುಷ್ಯನ ಜೀವ ಸಂಜೀವಿನಿ .

ನಮ್ಮಲ್ಲಿ ಹೆಚ್ಚಿನ ಮನೆಗಳಲ್ಲಿ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಮಾಡುತ್ತಿದ್ದೇವೆ. ಯಾಕೆ ನಾವು ಬದುಕುತ್ತೇವೆ ತಮಗೇನು ಆಗಿಲ್ಲ ಎಲ್ಲವೂ ಎಂದಿನಂತೆ  ನಡೆಯುತ್ತದೆ  ಎನ್ನುವ ಭರವಸೆ ಖಂಡಿತವಾಗಿಯೂ ನಮ್ಮಲ್ಲಿ ಇರುವುದರಿಂದ ಅಲ್ಲವೇ?  ಹಾಗಾಗಿ ದೇವರು ಕೊಟ್ಟ ಈ ಸುಂದರ ದಿನಗಳನ್ನು ವ್ಯರ್ಥವಾಗಿ ಹಾಳು ಮಾಡದೆ    ಅತ್ಯಂತ ಚೆನ್ನಾಗಿ ವಿನಿಯೋಗಿಸಿದರೆ ..ಇಂತಹ ಕೊರೋನಾದ ಎಷ್ಟು ಅಲೆಗಳು ಬಂದರೂ ನಮಗೆ ಏನೇನೂ  ಕೆಡುಕನ್ನು  ಮಾಡಲು ಸಾಧ್ಯವಿಲ್ಲ . ಯಾರಿಗೂ ಯಾರಿಂದಲೂ ಏನೂ ಬೇಕಾಗಿಲ್ಲ ಎಲ್ಲರಿಗೂ ಬೇಕಿರುವುದು ಒಂದಿಷ್ಟು ಪ್ರೀತಿ ಮಾತ್ರ. ಅದನ್ನು ಖಂಡಿತವಾಗಿಯೂ ಒಬ್ಬರಿಗೊಬ್ಬರು ಕೊಡಲು ಎಲ್ಲರಿಗೂ ಸಾಧ್ಯವಿದೆ.

ಹಾಗಾಗಿ ಸಂತೋಷದಲ್ಲಿರೋಣ ಪ್ರಾಮಾಣಿಕವಾಗಿ ಪ್ರೀತಿಯಿಂದ ಇರೋಣ. ನಮ್ಮ ನಮ್ಮ ಆಸಕ್ತಿಯ ಕೆಲಸಗಳನ್ನು ಪ್ರೀತಿಯಿಂದ ಮಾಡೋಣ. ನಾವು ಅತ್ಯಂತ ಪ್ರೀತಿಸುವ ನಮ್ಮ ನಮ್ಮ ಮಕ್ಕಳೇ ಅವರವರ ಸಂಸಾರಗಳೊಂದಿಗೆ ನಮ್ಮಿಂದ ಇಷ್ಟೊಂದು ದೂರದಲ್ಲಿರುವ ಸಂದರ್ಭದಲ್ಲಿ ಕೂಡ.. ಅವರನ್ನು ತಿಂಗಳಾನುಗಟ್ಟಲೆ ನೋಡಲಾಗದಿದ್ದರೂ ಕೂಡ ..ಅವರು ನಮ್ಮ ಜತೆಯೇ ಇರುವ ರೀತಿಯಲ್ಲಿ ನಾವು ಅವರನ್ನು ಪ್ರೀತಿಸುವುದಿಲ್ಲವೇ ?ಹಾಗೆಯೇ ...

ನಾವು ಪರಸ್ಪರ ದೈಹಿಕವಾಗಿ ಬೇರೆಯವರಿಂದ ದೂರವಿದ್ದರೇನಾಯಿತಂತೆ ಮಾನಸಿಕವಾಗಿ ನಾವು ಒಬ್ಬರಿಗೊಬ್ಬರು ಹತ್ತಿರವೇ  ಇದ್ದೇವೆ.ನಮ್ಮನ್ನು ಪ್ರೀತಿಸುವವರು, ಆತ್ಮೀಯರು, ನನ್ನವರು  ಅನೇಕರು ಇದ್ದಾರೆ  ಎನ್ನುವುದೇ ಒಂದು ಜೀವ ಚೈತನ್ಯ..ಜೀವನ .

- ಶ್ರೀಮತಿ ಸಂಧ್ಯಾ ಶೆಣೈ ಉಡುಪಿ