ಕೊರೋನ ವೈರಸ್ ಪತ್ತೆ ಮಾಡಿ, ಹೆಸರಿಟ್ಟ ಜೂನ್ ಅಲ್ಮೆಡಾ

ಕೊರೋನ ವೈರಸ್ ಪತ್ತೆ ಮಾಡಿ, ಹೆಸರಿಟ್ಟ ಜೂನ್ ಅಲ್ಮೆಡಾ

55 ವರ್ಷಗಳ ಹಿಂದೆ ಮೊದಲ ಬಾರಿಗೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಬಳಸಿ ಮಾನವನ ಶ್ವಾಸಕೋಶದಲ್ಲಿ ಸೇರಿಕೊಂಡು ಜೀವಕ್ಕೆ ಹಾನಿಮಾಡುವ ವೈರಸ್ ಗಳನ್ನು ಜಗತ್ತಿಗೆ ಪರಿಚಯಿಸಿದವರು ವೈರಾಣು ತಜ್ಞೆ ಜೂನ್ ಅಲ್ಮೆಡಾ. ಸ್ಕಾಟ್ಲೆಂಡಿನಲ್ಲಿ ಜನಿಸಿದ ಅಲ್ಮೆಡಾರ ತಂದೆ ಬಸ್ ಡ್ರೈವರ್ ಆಗಿದ್ದರು ಹಾಗೂ ತಾಯಿ ಅಂಗಡಿಯೊಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಹತ್ತು ವರ್ಷದವರಿದ್ದಾಗ ಇವರ 6 ವರ್ಷದ ಸಹೋದರ ಡಿಪ್ತಿರಿಯಾ ರೋಗಕ್ಕೆ ತುತ್ತಾಗಿ ಮೃತಪಟ್ಟದ್ದು ಜೀವವಿಜ್ಞಾನದ ಬಗ್ಗೆ ಇವರಿಗೆ ಹೆಚ್ಚು ಆಸಕ್ತಿ ಮೂಡಿಸಲು ಕಾರಣವಾಯ್ತು. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಅಲ್ಮೆಡಾ ಕೇವಲ 16 ವರ್ಷಕ್ಕೆ ಶಾಲೆ ಬಿಡಬೇಕಾಗಿ ಬಂತು. ಆದರೂ ಪಟ್ಟು ಬಿಡದೆ ಲ್ಯಾಬ್ ಟೆಕ್ನಿಶಿಯನ್ ಕೋರ್ಸ್ ಮಾಡಿದರು. ಕೆಲ ವರ್ಷ ಲ್ಯಾಬ್ ನಿರ್ವಾಹಕಿಯಾಗಿ ಕಾರ್ಯ ನಿರ್ವಹಿಸಿದರು, ಪೋಷಕರೊಂದಿಗೆ ಲಂಡನ್ ಗೆ ಹೋಗಬೇಕಾಗಿ ಬಂತು, ಅಲ್ಲಿಯೇ ವಿವಾಹವಾಯಿತು, ಪತಿಯೊಂದಿಗೆ ಕೆನಡಾಗೆ ಹೋಗಬೇಕಾಗಿ ಬಂತು, ಮಗುವನ್ನು ನೋಡಿಕೊಳ್ಳಲು ದಾದಿಯರಿಗೆ ಹಣ ನೀಡಲೂ ಸಾಧ್ಯವಿಲ್ಲದ ಪರಿಸ್ಥಿತಿಯನ್ನೂ ಎದುರಿಸಿದರು. ಮಗುವಿಗೆ ಕೇವಲ 7 ವರ್ಷವಿದ್ದಾಗ ಮತ್ತೆ ಪತಿಯೊಂದಿಗೆ ಲಂಡನ್ ಗೆ ಬಂದರು. ಅದೇ ಸಂಧರ್ಭದಲ್ಲಿ St Thomas' Hospital ನಲ್ಲಿ ಪ್ರೊಫೆಸರ್ ವಾಟರ್ ಸನ್ ರವರೊಂದಿಗೆ ಎಲೆಕ್ಟ್ರಾನ್ ಮೈಕ್ರೋಸ್ಕೋಪಿಸ್ಟ್ ಆಗಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿತು. ಅದೇ ಸಮಯಕ್ಕೆ ಪತಿ ಮತ್ತೆ ಕೆನಡಾಗೆ ಹೊರಟು ನಿಂತರು ಆದರೆ ಹೋಗಲೊಪ್ಪದ ಅಲ್ಮೆಡಾರವರಿಗೆ ಬಳುವಳಿಯಾಗಿ ಪತಿಯಿಂದ ವಿಚ್ಛೇದನ ಸಿಕ್ಕಿತು. ಮಗುವನ್ನು ಅಲ್ಮೆಡಾರ ಪೋಷಕರು ನೋಡಿಕೊಂಡ ಪರಿಣಾಮ ಸಂಶೋಧನೆಗಳಲ್ಲಿ ಹೆಚ್ಚು ಕಾಲ ತೊಡಗಿಸಿಕೊಳ್ಳಲು ಸಹಾಯವಾಯ್ತು. 1963-65ರ ನಡುವೆ ಅಮೇರಿಕಾ ಮತ್ತು ಯೂರೋಪಿನಲ್ಲಿ ಸಾಂಕ್ರಾಮಿಕವಾಗಿ ಹುಟ್ಟುವ ಮಕ್ಕಳಲ್ಲಿ ಅಂಧತ್ವಕ್ಕೆ ಕಾರಣವಾಗಿದ್ದ ರುಬೆಲ್ಲಾ ವೈರಸ್ ನ ಲಕ್ಷಣಗಳನ್ನು ಗುರುತಿಸಿ ವೈದ್ಯಲೋಕಕ್ಕೆ ದೊಡ್ಡ ಕೊಡುಗೆ ನೀಡಿದರು. ಇವರ ಪಾಂಡಿತ್ಯಕ್ಕೆ ಬೆರಗಾಗಿದ್ದ ಸಾಲಿಸ್ ಬರಿಯ Health Common Cold Research Unit ನ ಮುಖ್ಯಸ್ಥರಾದ David Tyrrell ರವರು 15-17 ವಯಸ್ಸಿನ ಶಾಲಾ ಮಕ್ಕಳನ್ನು ಬಾಧಿಸುತ್ತಿದ್ದ ಗಂಟಲು ನೋವು ಮತ್ತು ನೆಗಡಿಯ ಮಾದರಿಗಳನ್ನು ಇವರಿಗೆ ನೀಡಿ B814 ಮತ್ತೊಂದು ವೈರಸ್ ಪತ್ತೆಯಾಗಲು ಕಾರಣವಾದರು. ಈ ವೈರಸ್ಸಿಗೆ ಅಂದು ಇವರ ತಂಡ "ಕೊರೋನ ವೈರಸ್" ಎಂಬ ಹೆಸರು ನೀಡಿ ಲೇಖನ ಪ್ರಕಟಿಸಿತು. ಅಂದು ಆ ಹೆಸರಿಗೆ ಅಷ್ಟು ಪ್ರಸಿದ್ದಿ ಸಿಗದಿದ್ದರೂ ಇಂದು ಇಡೀ ವಿಶ್ವಕ್ಕೆ ಕೊರೋನ ವೈರಸ್ ಹೆಸರು ಪರಿಚಿತವಾಗಿದೆ. 1982ರಲ್ಲಿ ನಡೆದ European Group for Rapid Virus Diagnosis ಕಾರ್ಯಕ್ರಮದಲ್ಲ್ಲಿ ಭೇಟಿಯಾದ ವೈರಾಣು ತಜ್ಞ Phillip Gardner ವರನ್ನು ವಿವಾಹವಾದರು. ಇವರೊಂದಿಗೆ Central Public Health Laboratory ಎಂಬ ಸಂಸ್ಥೆಯನ್ನು ಸ್ಥಾಪಿಸಿ ಶ್ವಾಸಕೋಶದಲ್ಲಿ ಸೇರುವ ವೈರಸ್ ಗಳ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುತ್ತಿದ್ದರು. ಆದರೆ 1984ರಲ್ಲ್ಲಿಪತಿ ಗಾರ್ಡನರ್ ಹೃದಯಾಘಾತಕ್ಕೆ ತುತ್ತಾಗಿ ಹಾಸಿಗೆ ಹಿಡಿದರು. ಅಲ್ಲಿಂದಾಚೆಗೆ ಅಲ್ಮೆಡಾರವರಿಗೆ ಮನೆಯಲ್ಲಿರುವುದು ಖಾಯಂ ಆಯ್ತು. ಸಂಗೀತಪ್ರೇಮಿ ಹಾಗೂ ಜೀವನೋತ್ಸಾಹಿಯಾಗಿದ್ದ ಅಲ್ಮೆಡಾರವರು ಜೀವನೋಪಾಯಕ್ಕಾಗಿ ಪಿಂಗಾಣಿ ಚಿತ್ರಕಲೆ ಹಾಗೂ ಯೋಗ ತರಬೇತಿ ತರಗತಿಗಳನ್ನು ನಡೆಸಿದರು. ಪತಿ 1994ರಲ್ಲಿ ನಿಧನರಾದರು. ಆನಂತರ ಹಲವಾರು ಕಿರಿಯ ಸಂಶೋಧನಾರ್ಥಿಗಳಿಗೆ ಸಲಹೆ-ಸಹಕಾರ ನೀಡಿದರು, ಪ್ರೀತಿಯ ಇಬ್ಬರು ಮೊಮ್ಮಕ್ಕಳೊಡನೆ ಹೆಚ್ಚು ಸಮಯ ಕಳೆದರು. 2007ರಲ್ಲಿ ಹೃದಯಾಘಾತಕ್ಕೆ ತುತ್ತಾಗಿ ನಿಧನರಾದರು.

ಬಹುಶಃ ಇವರ ಸಂಶೋಧನೆಗೆ ಅಂದು ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡಿದ್ದರೆ ಔಷಧಿಯೂ ಪತ್ತೆಯಾಗಬಹುದಾದ ಸಾಧ್ಯತೆಗಳು ಇದ್ದವೇನೋ. ಪ್ರಾಮಾಣಿಕ-ಪ್ರತಿಭಾವಂತ ಸಂಶೋಧಕರನ್ನು ಹಿಂದಿನಿಂದಲೂ ನಿರ್ಲಕ್ಷಿಸುತ್ತಾ ಬಂದಿರುವುದಕ್ಕೆ ಇಂದು ಜಗತ್ತು ಬೆಲೆ ತೆರುತ್ತಿದೆ.

(ಸಂಗ್ರಹ ಮಾಹಿತಿ)