ಕೊಲಂಬಿಯ ಪಟ್ಟಣದ ಸಂತೆ !
ನನಗೆ ಅಮೆರಿಕದ ರೈತರನ್ನು ಕಂಡು ಮಾತಾಡಿಸುವ ಆಸೆ. ಸಿಯಾಟಲ್ ನಗರಕ್ಕೆ ಹೋದಾಗಲೂ ಅಲ್ಲಿನ ರೈತರಮಾರುಕಟ್ಟೆಗೆ ಹೋಗಿದ್ದೆವು. ಆದರೆ ನಾವು ಹೋದಾಗ ಸಂಜೆಯಾಗಿತ್ತು. ಮಳಿಗೆಗಳು ಮುಚ್ಚಿದ್ದವು. ನನ್ನ ತಮ್ಮ, ನಾದಿನಿ ಕೊಲಂಬಿಯದಲ್ಲಿ ಪ್ರತಿ ಶನಿವಾರ ರೈತರ ಮಾರುಕಟ್ಟೆಯಲ್ಲೇ ತಮಗೆ ಬೇಕಾದ ತರಕಾರಿಹಾಗೂ ಉಪಯುಕ್ತವಸ್ತುಗಳನ್ನು ಖರೀದಿಸುತ್ತಾರೆ. ನಮ್ಮನ್ನೂ ಜೊತೆಯಲ್ಲಿ ಕರೆದುಕೊಂಡುಹೋದರು. ಅಲ್ಲಿಯ ಬಿಳಿಯ ಟೆಂಟ್ ಗಳಲ್ಲಿ ತಮ್ಮ ಉತ್ಪಾದನೆಗಳನ್ನು ಮಾರುತ್ತಿದ್ದ ದೃಷ್ಯವನ್ನು ನಾವು ನೋಡಿದಾಗ, ನಮ್ಮ ಸಂತೆಗೂ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹಾಯಾಗಿಜೀವನವನ್ನು ನಡೆಸುತ್ತಿರುವ ಅಮೆರಿಕನ್ ರೈತರಿಗೂಹೋಲಿಕೆಮಾಡಿದೆ. ಅಮೆರಿಕದ ರೈತರಮಕ್ಕಳು, ತಮ್ಮದೇ ಆದ ವ್ಯಾನ್ ಗಳಲ್ಲಿ ಜೀನುಡುಪುಧರಿಸಿ ಮಂದಹಾಸ, ಹಾಗೂ ತೃಪ್ತಿಯ ಮುಖಭಾವದಿಂದ ತಮ್ಮ ಪದಾರ್ಥಗಳನ್ನು ಮಾರುವುದನ್ನು ನೋಡುವುದೇ ಒಂದು ಸೊಗಸು ! ಇಲ್ಲಿನ ರೈತರನ್ನು ನಾನೆ ಮಾತಾಡಿಸಿ ಖಚಿತಪಡಿಸಿಕೊಂಡು ಬರೆಯುತ್ತಿದ್ದೇನೆ. ಮಿಸ್ಸೂರಿಪ್ರಾಂತ್ಯದ ಬೇಸಾಯಗಾರರು, ಜರ್ಮನ್ ಮೂಲದವರು. ಕೆಲವು ಇಟ್ಯಾಲಿಯನ್, ಸ್ಪಾನಿಷ್ ಹಾಗು ಪೋರ್ಚುಗೀಸ್ ಇದ್ದಾರೆ. ಪೋರ್ಚುಗೀಸ್ ಮೂಲದವರು ಬಹಳ ಕಡಿಮೆ. ಜರ್ಮನ್ ರೈತರು ಬಂದು ಸುಮಾರು ೧೦೦ ವರ್ಷಗಳಾದವಂತೆ. ಅವರ ಜಮೀನುಗಳು ಸುಮರು ೧೦೦ ಎಕರೆಯಷ್ಟು. ಮೆಕ್ಕೆಜೋಳ, ಸೊಯಾಬೀನ್, ತರಕಾರಿಗಳು, ಹಾಗೂ ಹೂಗಳನ್ನು ಹೇರಳವಾಗಿ ಬೆಳೆಯುತ್ತಾರೆ. ಕ್ಯಾಲಿಫೋರ್ನಿಯದಲ್ಲಿ ಭಾರತೀಯ-ಸಿಖ್ ಜನಾಂಗದ ಹಲವು ರೈತರ ಸಂಘಟನೆಗಳಿವೆ. ಕಾರ್ಮಿಕರಾಗಿ ವಲಸೆಬಂದು, ತಮ್ಮ ಪರಿವಾರದ ಸದಸ್ಯರನ್ನು ಹಲವಾರು ವರ್ಷಗಳು ಬಿಟ್ಟಿದ್ದರಿಂದ ಕೆಲವು ಸಿಖ್ ಜನರು ಇಲ್ಲಿನ ಮೆಕ್ಸಿಕನ್ ಮೂಲದ ರೈತರ ಹೆಣ್ಣುಮಕ್ಕಳನ್ನು ಮದುವೆಯಾಗಿರುವ ಅನೇಕ ದಾಖಲೆಗಳಿವೆ. ಇದರಿಂದ ಮೆಕ್ಸಿಕೋ ಪದ್ಧತಿಯ ಹಲವಾರು ಮುಖ್ಯಾಂಶಗಳನ್ನು ಅವರು ಅರಿತು ಸಾಗುವಳಿಯಲ್ಲಿ ಪ್ರಾವೀಣ್ಯತೆಯನ್ನು ಪಡೆಯಲು ಸಹಕಾರಿಯಾಯಿತು. ಅಮೆರಿಕದ ಬೆಳೆಗೆ ಅಡಚಣೆಯೆಂದರೆ ವಿಂಟರ್ ನಲ್ಲಿ ಆಗುವ ಹಿಮಪಾತ. ಯಾವ ಬೆಳೆಯನ್ನೂ ಆಗ ಬೆಳೆಯಲು ಸಾಧ್ಯವಿಲ್ಲ. ಕ್ಯಾಲಿಫೋರ್ನಿಯ, ಇದಕ್ಕೆ ಅಪವಾದ. ಅಲ್ಲಿನ ಹವಾಮಾನ ಹೆಚ್ಚುಕಡಿಮೆ ನಮ್ಮ ಭಾರತದಂತೆ !
ಬೂನ್ ಕೌಂಟಿಯಲ್ಲಿರುವ, ದ ಕೊಲಂಬಿಯ ರೈತರ ಮಾರುಕಟ್ಟೆ (The Columbia Farmers Market), Activity & Recreation Center (ARC), ಹತ್ತಿರವಿದೆ. ( Clinkscales & Ash streets) ಇದಕ್ಕೆ ಹತ್ತಿರ. ಬೇಟೆಗಾರ, ಸೈನ್ಯಾಧಿಕಾರಿ, ಡೇನಿಯಲ್ ಬೂನ್, ಮೂಲತಃ ಪೆನ್ಸಿಲ್ವೇನಿಯ ರಾಜ್ಯದವರು. ಅವರು ನಿಧಾನವಾಗಿ ಅಮೆರಿಕದ ಪಶ್ಚಿಮಕ್ಕೆ, ಅಂದರೆ ಮಿಸ್ಸೂರಿಪ್ರಾಂತ್ಯಕ್ಕೆ ವಲಸೆಬಂದು, ತಮ್ಮ ಕೊನೆಗಾಲವನ್ನು ಅಲ್ಲೇಕಳೆದರು. ಈಸ್ಥಳಕ್ಕೆ ಬಂದು ನೆಲಸಿದ ಅತಿ ಪ್ರಥಮರು. ೬೫೦ ಎಕರೆ ಜಮೀನಿನಲ್ಲಿ ಅಲ್ಲಿನಜನರನ್ನು ಸಂಘಟಿಸಿ ವ್ಯವಸಾಯ ಪ್ರಾರಂಭಿಸಿದರು. ಕುದುರೆಗಳನ್ನೂ ಸಾಕುತ್ತಿದ್ದರು. ಈಗಲೂ 'ಅಪಲ್ಯಾಚನ್ ವಿಶ್ವವಿದ್ಯಾಲಯ', ದ ಕ್ಯಾಂಪಸ್ ನಲ್ಲಿ ಅವರ ಶಿಲ್ಪವಿದೆ. ಸುಮಾರು ೨೫ ವರ್ಷಗಳಿಂದಲೂ ಕೊಲಂಬಿಯದ ಜನರಿಗೆ, ತಾಜಾ ಮೊಟ್ಟೆಗಳು, ತರಕಾರಿ, ಕಾಯಿಪಲ್ಯಗಳು, ಹೂ-ಹಣ್ಣುಗಳನ್ನು ಪ್ರತಿಶನಿವಾರದಂದು ದೊರಕಿಸುತ್ತಿದೆ. ವ್ಯವಸಾಯೋತ್ಪಾದಕರಾಗಿ, ಪ್ರತಿಯೊಂದು ಪದಾರ್ಥಗಳೂ ರೈತಾಪಿ-ಜನರಿಂದ ಕುಶಲಕೆಲಸಗಾರರಿಂದಮಾಡಿದ್ದು. ಇವರು ಇಲ್ಲಿನ, ಕಲೆ, ಸಂಸ್ಕೃತಿ, ಪರಿಸರ, ಹಾಗೂ ವಾಣಿಜ್ಯವನ್ನು ಉಳಿಸಿ-ಬೆಳಸುವಲ್ಲಿ ಸಕ್ರಿಯರಾಗಿದ್ದಾರೆ. ಒಟ್ಟು ೭೦ ಮಳಿಗೆಗಳಿವೆ.
ರೈತರ ಸಂತೆಯಲ್ಲಿ, ಹುರುಳಿಕಾಯಿ, ಕೋಸುಗೆಡ್ಡೆ, ಕ್ಯಾರೆಟ್, ಬದನೆಕಾಯಿ, ಹೀರೆಕಾಯಿ, ಕುಂಬಳಕಾಯಿ, ಟೊಮ್ಯಾಟೋ, ಈರುಳ್ಳಿ, ಸೊಪ್ಪು, ಗೆಣಸು, ಕಸಿಮಾಡಿದ ಗುಲಾಬಿ ಹಾಗೂ ಬೇರೆ-ಬೇರೆ ಹೂಗಳಸಸಿಗಳು, ದಾಸವಾಳದ ಹೂ ಫಾಲ್ ಮಮ್ಸ್, ಮಾಂಸ, ಮೀನು, ಪರಂಗಿಕಾಯಿ, ಸೇಬು, ಜಾಮ್ ಗಳು, ಜೆಲ್ಲೀಸ್, ಜೇನುತುಪ್ಪ, ಜೇನುತುಪ್ಪದ ಪ ರಿಮಳವನ್ನು ಹೊಂದಿದ ಐಸ್ ಕ್ರೀಮ್ಗಳು, ಉಪ್ಪಿನಕಾಯಿ, ಬೇಕರಿ ಪದಾರ್ಥಗಳು, ಬ್ರೆಡ್, ಬನ್, ಕೇಕ್, ರಸ್ಕ್, ಇತ್ಯಾದಿಗಳು, ಸಿಗುತ್ತವೆ.
ಸಮಯ :
ಶನಿವಾರ ೮-೧೨ (ಏಪ್ರಿಲ್-ನವೆಂಬರ್)
ಸೋಮವಾರ. ಮತ್ತು ಬುಧವಾರ. ೪-೬ (ಮೇ-ಅಕ್ಟೋಬರ್)
"ಮಳೆ, ಅಥವ ಮೋಡವಿದ್ದರೂ ನಾವು ನಮ್ಮ ಅಂಗಡಿ ಬಾಗಿಲು ತೆಗೆದಿರುತ್ತೇವೆ", ಎಂಬ ಫಲಕಗಳನ್ನು ನೋಡಲು ಸಂತೋಷವಾಗುತ್ತದೆ.
- ಚಿತ್ರ, ನನ್ನ ಸಂಗ್ರಹದಿಂದ.