ಕೊಲೆಗಳು ಸಹಜವಾದರೆ ಬದುಕು ಅಸಹಜವಾಗುತ್ತದೆ...

ಕೊಲೆಗಳು ಸಹಜವಾದರೆ ಬದುಕು ಅಸಹಜವಾಗುತ್ತದೆ...

ಕನಿಷ್ಠ ಕೊಲೆಯ ರೀತಿಯ ಭಯಾನಕ ಘಟನೆಗಳನ್ನಾದರೂ ಕರ್ನಾಟಕದ ಎಲ್ಲಾ ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಖಂಡಿಸಬಾರದೇ ?  ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಛೀಮಾರಿ ಹಾಕಬಾರದೇ ? ದಯೆ ಇಲ್ಲದ ಧರ್ಮಗಳಿಗೆ ಬಹಿಷ್ಕಾರ ಹಾಕಬಾರದೇ ? ಹೆತ್ತೊಡಲ ಕರುಳಿನ ಕೂಗಿಗೆ ಧ್ವನಿಯಾಗಬಾರದೆ ? ಕೊಲೆಗಡುಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಬಾರದೇ ? ಮಾನವೀಯ ಮೌಲ್ಯಗಳ ಪುನರುತ್ಥಾನ ಮಾಡಬಾರದೇ ?

ಕಾರಣ ಏನೇ ಇರಲಿ, ವ್ಯಕ್ತಿ ಯಾರೇ ಆಗಿರಲಿ ನಮ್ಮ ನಡುವಿನ ವ್ಯಕ್ತಿಗಳನ್ನು ಈ ರೀತಿ ಬಹಿರಂಗವಾಗಿ ಸೇಡಿಗೆ ಸೇಡಿನ ರೂಪದಲ್ಲಿ ಕೊಲೆ ಮಾಡುವ ಹಂತಕ್ಕೆ ತಲುಪಿರುವುದು ಇಡೀ ನಾಗರಿಕ ಸಮಾಜ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗು ಧಾರ್ಮಿಕ ನಂಬಿಕೆಗಳ ಬಹುತೇಕ ವಿಫಲ ಎಂದು ಪರಿಗಣಿಸಬಾರದೇಕೆ ?

ಕಾನೂನಿನ ಭಯವಿಲ್ಲ, ಧರ್ಮ ದೇವರುಗಳ ಭಯವಿಲ್ಲ, ಮಾನವೀಯ ಮೌಲ್ಯಗಳ ಭಯವಿಲ್ಲ ಎಂದಾದರೆ ಭವಿಷ್ಯದಲ್ಲಿ ಇಂತಹ ಕ್ರಿಮಿನಲ್ ಗಳ ಸಂಖ್ಯೆ ಇನ್ನೂ ಹೆಚ್ಚಾದರೆ ಗತಿ ಏನು ? ರಾಜಕೀಯ ಮತ್ತು ಮಾಧ್ಯಮಗಳ ಪ್ರಚೋದನೆ ಮತ್ತು ಪಕ್ಷಪಾತ, ಧಾರ್ಮಿಕ ಮುಖಂಡರ ಹಿಂಸಾ ಮನೋಭಾವ ಇಲ್ಲಿ ಹೆಚ್ಚು ಕೆಟ್ಟ ಪರಿಣಾಮ ಬೀರುತ್ತಿದೆ. ಕೊಲೆಯನ್ನು ಒಂದು ಅಪರಾಧ ಎಂದು ನೋಡದೆ ಅದಕ್ಕೆ ಧರ್ಮದ ಮತ್ತು ಪಕ್ಷದ ಹಣೆಪಟ್ಟಿ ಕಟ್ಟುವುದು, ವಿರುದ್ಧ ಶಕ್ತಿಗಳನ್ನು ಉದ್ರೇಕಿಸುವುದು ಬಹಿರಂಗವಾಗಿಯೇ ನಡೆಯುತ್ತಿದೆ. ಪ್ರವೀಣ್ - ಮಸೂದ್ - ಪೀಟರ್ ಗಳು ಮನುಷ್ಯರು ಮತ್ತು ಈ ದೇಶದ ಪ್ರಜೆಗಳು ಎಂಬ ಭಾವನೆಗಳನ್ನು ಹುಟ್ಟುಹಾಕುವ ಯಾವ ಪ್ರಯತ್ನವನ್ನು ಈ ಕ್ಷೇತ್ರಗಳು ಮಾಡುತ್ತಿಲ್ಲ. 

ಹೆಣಗಳನ್ನು ಇವ ನಮ್ಮವ ಇವ ನಮ್ಮವ ಎನ್ನುವುದು, ಕೊಂದವನನ್ನು ಇವನಾರವ ಇವನಾರವ ಎಂದೆಣಿಸುವ‌ ಆತ್ಮವಂಚಕ ಮತ್ತು ಸ್ವಾರ್ಥ ಸಾಧನೆಯ ಮನಸ್ಥಿತಿ ಬೆಳೆದಿದೆ. ಆ ಕಾರಣದಿಂದಲೇ ಈ ರೀತಿಯ ಅಪರಾಧಗಳು ಹೆಚ್ಚಾಗುತ್ತಿದೆ. ನಮ್ಮ ಬೆಂಬಲಕ್ಕೆ ಕೆಲವು ಸಮುದಾಯಗಳು ನಿಂತಿವೆ ಎಂಬ ದೈರ್ಯವೇ ಈ ಕೃತ್ಯಗಳ ಹಿಂದಿನ ಆತ್ಮವಿಶ್ವಾಸ.

ಆದ್ದರಿಂದಲೇ ಇಡೀ ಜನ ಸಮುದಾಯಗಳು ಒಕ್ಕೊರಲಿನಿಂದ ಈ ಹಿಂಸೆಗಳನ್ನು ನೇರವಾಗಿ ಖಂಡಿಸಬೇಕು. ಇಲ್ಲದಿದ್ದರೆ ಕೊಲೆಗಳು ಸಹಜವಾದಲ್ಲಿ ಬದುಕು ಅಸಹಜವಾಗುತ್ತದೆ. ಇನ್ನೂ ಆಘಾತಕಾರಿ ವಿಷಯವೆಂದರೆ ಯಾವುದೇ ಪ್ರಖ್ಯಾತ ಜನಪ್ರಿಯ ರಾಜಕಾರಣಿ, ಅಧಿಕಾರಿ, ಧಾರ್ಮಿಕ ಮುಖಂಡರು ಅಥವಾ ಅವರ ಮಕ್ಕಳಿಗೆ ಈ ರೀತಿಯ ತೊಂದರೆ ಇರುವುದಿಲ್ಲ. ಅವರು ಯಾವುದೋ ಅಧಿಕಾರದ ಹುಡುಕಾಟದಲ್ಲಿ, ವ್ಯಾಪಾರ ವ್ಯವಹಾರಗಳಲ್ಲಿ, ವಿದೇಶಗಳ ಉನ್ನತ ವ್ಯಾಸಂಗ ಪಡೆಯುವುದರಲ್ಲಿ ನಿರತರಾಗಿರುತ್ತಾರೆ. ಹಾಗೆಯೇ ಇರಲಿ. ಸಂತೋಷ. ಅದರ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಕೊಲೆಯಾಗುವವರು ಮತ್ತು ಕೊಲೆ ಮಾಡುವವರು ಮಾತ್ರ ಬಹುತೇಕ ಕೆಳ ಮಧ್ಯಮ ವರ್ಗದ ಜನರೇ ಆಗಿರುತ್ತಾರೆ. ಅಂದರೆ ಎಲ್ಲೋ - ಯಾರೋ ಈ ಸಮಸ್ಯೆಗಳನ್ನು ಹುಟ್ಟುಹಾಕುತ್ತಾ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಅದರ ಲಾಭವನ್ನು ಪಡೆಯುತ್ತಿದ್ದಾರೆ ಎಂದಾಯಿತು. ಜೊತೆಗೆ ಆರ್ಥಿಕ ಅನಿವಾರ್ಯತೆಯನ್ನು ಸಹ ಸೃಷ್ಟಿಸಿ ಅದರ ಬಲೆಯೊಳಗೆ ಕೆಳ ಮಧ್ಯಮ ವರ್ಗದವರನ್ನು ಸಿಲುಕಿಸುತ್ತಿದ್ದಾರೆ.

ಏಟು ಹೊಡೆಯುವವರು, ಏಟು ತಿನ್ನುವವರು, ಅದನ್ನು ದೈಹಿಕವಾಗಿ ನಿಯಂತ್ರಿಸುವವರು ಎಲ್ಲರೂ ಜಾಗೃತವಾಗುವ ಸಮಯ ಬಂದಿದೆ. ನಮಗೆ ಮಾರ್ಗದರ್ಶನ ಮಾಡಬೇಕಾದವರೇ, ನಮ್ಮ ಬದುಕನ್ನು ನೆಮ್ಮದಿಯ ಕಡೆಗೆ ತೆಗೆದುಕೊಂಡು ಹೋಗಬೇಕಾದವರೇ ಕುತಂತ್ರದಿಂದ ನಮ್ಮನ್ನು ನಮಗರಿವಿಲ್ಲದೇ ನಾಶ ಮಾಡುತ್ತಿದ್ದಾರೆ. ಆ ಮೂಲಕ ಇಡೀ ವ್ಯವಸ್ಥೆಯ ಹಾದಿ ತಪ್ಪಿಸುತ್ತಿದ್ದಾರೆ. 

ಆದ್ದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಬುದ್ಧ ಮಾನವೀಯ ಮನಸ್ಸುಗಳು ಮಧ್ಯಮವರ್ಗದ  ಯುವ ಸಮೂಹವನ್ನು, ಎಚ್ಚರಿಸುವ ಕೆಲಸ ನಿರಂತರವಾಗಿ ಮಾಡಬೇಕಾಗಿದೆ. ಏಕೆಂದರೆ ‌ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ, ಯಾವ ಅಧಿಕಾರ ಪ್ರಶಸ್ತಿ ಸನ್ಮಾನಗಳ ಆಸೆಯಿಲ್ಲದ ಸಾಮಾನ್ಯ ಜನ ಜಾಗೃತಿ ಮೂಡಿಸುವ ಕೆಲಸ ಮಾಡಿದರೆ ಖಂಡಿತ ಸುಧಾರಣೆ ಸಾಧ್ಯವಾಗುತ್ತದೆ ಮತ್ತು ಜನರು ಸಹ ಈ ಮನೋಭಾವವನ್ನು ಇಷ್ಟ ಪಡುತ್ತಾರೆ.

ಈಗಿನಿಂದಲೇ ನಾವು ಈಗಿರುವ ನೆಲೆಯಿಂದಲೇ ಸಾಧ್ಯವಾದಷ್ಟು ಪ್ರೀತಿಯ ಹೂಮಳೆ ಸುರಿಸಲು ಪ್ರಾರಂಭಿಸೋಣ. ಅದು ನಿಧಾನವಾಗಿ ಎಲ್ಲಾ ಕಡೆ ಪಸರಿಸಲು ಶುರುವಾಗುತ್ತದೆ. ಅದರ ಪರಿಣಾಮ ಒಳ್ಳೆಯದೇ ಆಗಿರುತ್ತದೆ. ಇದರಿಂದ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಬಹುಶಃ ಪಡೆದುಕೊಳ್ಳುವುದೇ ಹೆಚ್ಚು. ನಿಮ್ಮ ಮಾತಿನಲ್ಲಿ, ನಿಮ್ಮ ಬರಹದಲ್ಲಿ, ನಿಮ್ಮ ಭಾಷಣಗಳಲ್ಲಿ, ನಿಮ್ಮ ಭಾವನೆಗಳಲ್ಲಿ ಮಾನವೀಯತೆಗೆ ಸ್ವಲ್ಪ ಹೆಚ್ಚಿನ ಮಹತ್ವ ನೀಡಿ. ಬದಲಾವಣೆ ತಾನೇತಾನಾಗಿ ಸಂಭವಿಸುತ್ತದೆ…

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ