ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ
ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ
ಸೆರಗ ತುದಿಯ ಎಳೆದು ನಿಂದೆ ಚೆಲುವರಾಯನೇ
ಗೋವ ಮಂದೆಯಲ್ಲಿ ನಲಿದೆ ನಂದ ಕಂದನೇ
ಗೋಪಸ್ತ್ರೀಯರಿಗೆ ಒಲಿದ ಮನೋಹರ ರೂಪನೇ
ಗೋವರ್ಧನ ಗಿರಿಯೆತ್ತಿ ಪುರ ಜನರ ಕಾಯ್ದನೇ
ವಿಷಸರ್ಪ ಕಾಳಿಂಗನ ಹೆಡೆಯ ತುಳಿದನೇ
ಪೂತನಿಯ ಮೊಲೆಯ ಕಚ್ಚಿ ಹರಣ ಗೈದನೇ
ಚಾಣೂರ ಮುಷ್ಠಿಕರ ಬಡಿದು ಕೊಂದನೇ
ಬಲಭದ್ರನ ಜೊತೆಗೂಡಿ ಬೆಣ್ಣೆ ಮೆದ್ದನೇ
ರಾಧೆಯ ಮನವ ಕದ್ದ ಗೋವಿಂದನೇ
ದ್ರೌಪದಿಯ ಮಾನವನ್ನು ಪೊರೆದ ದೇವನೇ
ಪಾಂಡವರ ಹಿತ ಕಾಯ್ದ ದೇವಕಿಪುತ್ರನೇ
ಸತ್ಯಭಾಮ ದೇವಿಗೊಲಿದ ವೃಂದಾವನವಾಸನೇ
ನವಿಲುಗರಿಯ ಶಿರದಲಿಟ್ಟ ತುಂಟ ಬಾಲಕೃಷ್ಣನೇ
ಕೌರವನ ಅಹಮಿಕೆಯ ಮುರಿದಂಥ ಧೀರನೇ
ದುಷ್ಟ ಖಳರ ಕುಟ್ಟಿ ಮೆರೆದ ದ್ವಾರಕಾಧೀಶನೇ
ಯಶೋದೆಗೆ ಬ್ರಹ್ಮಾಂಡ ತೋರಿದಂಥ ಪೋರನೇ
ರಾಧೆಯ ಹೃದಯ ಗುಡಿಯ ನವನೀತಚೋರನೇ
ಭಕುತರ ಮಾತರಿತ ಮನಸಿಜಪಿತನೇ
ಬಾರೋ ಸಖನೆ ವಿಹರಿಸುವ ಮುರಲಿಲೋಲನೇ
-ರತ್ನಾ ಕೆ.ಭಟ್,ತಲಂಜೇರಿ
***
ಕೂಗಿ ಕರೆದಿಹೆನು
ಕರೆದು ಕೂಗಿದೆ ಮದನ
ಕೃಷ್ಣ ನಾ ಎಂದಿಗೂ
ಮರೆಯಲಾಗದೆಯೆಂದೂ
ಮುರಳಿ ಮೋಹನನಾ
ನಿನ್ನೊಲವ ಸವಿಗಿಂದು
ಕಾತರಿಸಿ ಕಾದಿಹೆನು
ದಯವ ತೋರುತ ಬಾರೋ
ಯದುಕುಲದ ನಂದನನೆ
ದಿನರಾತ್ರಿ ಕನಸಿನೊಳು
ನಿನ್ನ ನೆನಪಲೆ ಬಳಲಿ
ಮೌನವಾಗಿದೆ ಹೃದಯ
ಮಂಕಾಗುತಲೆ ಸೊರಗಿ
ತಾಳಲಾರೆನು ವಿರಹ
ನಿನ್ನ ಸನಿಹಕೇ ಬರುವೆ
ಬಳಿಕರೆದು ನಿನ್ನೊಡಲ
ಪ್ರೇಮದೊಳು ತೇಲಿಸು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
