ಕೊಳಲು ಮತ್ತು ಖಡ್ಗ (ಕತೆಗಳು)

ಕೊಳಲು ಮತ್ತು ಖಡ್ಗ (ಕತೆಗಳು)

ಪುಸ್ತಕದ ಲೇಖಕ/ಕವಿಯ ಹೆಸರು
ಬೆಸಗರಹಳ್ಳಿ ರಾಮಣ್ಣ
ಪ್ರಕಾಶಕರು
ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರು
ಪುಸ್ತಕದ ಬೆಲೆ
ರೂ. 100/-

ಮಂಡ್ಯದ ಡಾ. ಬೆಸಗರಹಳ್ಳಿ ರಾಮಣ್ಣ ಕನ್ನಡದ ಹೆಸರುವಾಸಿ ಕತೆಗಾರರು. ಇದು ಅವರ ಎರಡನೆಯ ಕಥಾಸಂಕಲನ. ಅವರು 1985ರ ನಂತರ ಬರೆದ ಕತೆಗಳು ಈ ಸಂಕಲನದಲ್ಲಿವೆ (“ಕನ್ನಂಬಾಡಿ” ಎಂಬ ಮೊದಲನೆಯ ಸಂಕಲನದಲ್ಲಿ      ಅವರಿ 1962ರಿಂದ 1985ರ ಅವಧಿಯಲ್ಲಿ ಬರೆದ ಸಣ್ಣ ಕತೆಗಳು ಪ್ರಕಟವಾಗಿದ್ದವು.) ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪ್ರಕಟವಾದ ಸಂಕಲನ ಇದು.

ಕಥಾಸಂಕಲನದ ಬೆನ್ನುಡಿಯಲ್ಲಿ ಯು. ಆರ್. ಅನಂತಮೂರ್ತಿಯವರು ಬರೆದ ಮಾತುಗಳು ಹೀಗಿವೆ: ಬೆಸಗರಹಳ್ಳಿ ರಾಮಣ್ಣನವರ ಕತೆಗಳ ವಸ್ತು: ನಿಸರ್ಗಕ್ಕೆ ಪರಕೀಯರಾಗದೆ ಉಳಿದ ಒಕ್ಕಲು ಮಕ್ಕಳ ನಿತ್ಯಜೀವನದ ಸುಖದುಃಖ, ಸಣ್ಣತನ, ಅಸೂಯೆ, ಔದಾರ್ಯ ಇತ್ಯಾದಿ. ಇವು ದಟ್ಟವಾದ ಅನುಭವದಿಂದ ಹುಟ್ಟಿದ ಕಥೆಗಳಾದ್ದರಿಂದ ಭಾವಾತಿರೇಕಕ್ಕಾಗಲಿ, ಸುಳ್ಳು ಆದರ್ಶಗಳಿಗಾಗಲಿ ಇವುಗಳಲ್ಲಿ ಎಡೆಯಿಲ್ಲ. ನಿಸರ್ಗ ಇವರ ಕತೆಗಳಲ್ಲಿ ಬರಿಯ ಪರಿಸರವಲ್ಲ; ನಿತ್ಯದ ದುಡಿಮೆಯಲ್ಲಿ ಭಾಗಿಯಾಗಿ, ವ್ಯಕ್ತಿ ಪ್ರಜ್ಞೆಯಲ್ಲಿ ಮಿಳಿತವಾಗಿರುವ ಒಂದು ಪಾತ್ರ. ಯಾವುದು ಘಟನೆ, ಯಾವುದು ಪಾತ್ರ, ಯಾವುದು ವಿವರ ಎಂದು ವಿಂಗಡಿಸಲಾಗದಂತೆ ಒಂದಕ್ಕೊಂದು ಹೊಸೆದುಕೊಂಡು ಮೂರ್ತವಾಗುವ ಕತೆಗಳನ್ನು ರಚಿಸಿದ್ದಾರೆ. ನಿಷ್ಠುರವಾಗಿ ಅನುಭವವನ್ನು ಶೋಧಿಸಬಲ್ಲ ಕನ್ನಡ ಲೇಖಕರಲ್ಲಿ ಬೆಸಗರಹಳ್ಳಿ ರಾಮಣ್ಣನವರು ಒಬ್ಬರು.

“ಬೆಟ್ಟದ ಮೇಲೊಂದು ಮನೆಯ ಮಾಡಿ” ಎಂಬ ಮೊದಲ ಕತೆ ಜಮೀನುದಾರರು ಗೇಣಿದಾರರ ಶೋಷಣೆ ಮಾಡುತ್ತಿದ್ದುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. 1957ರ ಡಿಸೆಂಬರ್ ತಿಂಗಳ ಕೊನೆಯಲ್ಲಿ ಊರುಗಯ್ಯ ತನ್ನ ಹೊಲದ ಭತ್ತದ ಕೊಯ್ಲು ಮಾಡಿದ್ದ. ಏಳು ಖಂಡುಗ ಭತ್ತ ಸಿಕ್ಕಿತ್ತು. ಸಾಹುಕಾರ ಬುಡ್ಡೇಗೌಡ ಭತ್ತದ ಹುಲ್ಲಿನ ಮೆದೆ ಹಾಕಿಸುತ್ತಿದ್ದ. ಆಗ ಅಲ್ಲಿಗೆ ಬಂದ ಗೇಣಿದಾರರ ಜಮಾ-ಬಾಕಿ ಪುಸ್ತಕ ಬರೆಯುವ ತೆಂಗಪ್ಪ ಹೇಳಿದ ಮಾತು ಬರಸಿಡಿಲಿನಂತೆ ಬಂದೆರಗಿತು: ‘ಅಲ್ಲ ಕಣಯ್ಯ… ಹೋದಸಲದ ಬಾಕಿ, ಈ ಸಲದ ಗುತ್ತಿಗೆ ಆರು ಖಂಡುಗ ಅಂದ್ರೆ … ಒಟ್ಟು ಏಳೂಕಾಲು ಖಂಡುಗನಾದ್ರೂ, ಈ ಲೌಡಿ ಮಗ ಈ ಚಿನ್ನದಂಥ ಭೂಮೀಲಿ ಬೆಳೀಲಿಲ್ಲ ಅಂದ್ರೆ, ಇವನಿಗೆ ಯಾಕೆ ಗುತ್ತಿಗೆ ಭೂಮಿ? ….” ಇದನ್ನು ಕೇಳಿ ಊರುಗಯ್ಯ ನೆಲಕ್ಕೆ ಕುಸಿದು ಹೋದ. ಈ ವರುಷದ ಫಸಲನ್ನೆಲ್ಲ ಒಯ್ದರೆ, ತನಗೆ, ಹೆಂಡತಿ ಮಕ್ಕಳಿಗೆ ಉಣ್ಣಲಿಕ್ಕೂ  ಗತಿಯಿಲ್ಲದಂತಾಗುತ್ತದೆ ಎಂದು ಪರಿಪರಿಯಾಗಿ ಅಂಗಲಾಚಿದ. ಬುಡ್ಡೇಗೌಡನ ಆಳುಗಳು ಏಳು ಖಂಡಿಗೆ ಭತ್ತವನ್ನೂ ಸಾಗಣೆ ಗಾಡಿಗೆ ತುಂಬಲು ತಯಾರಾದರು. ಆಗ ಊರುಗಯ್ಯನ ಮಗ ಊರಯ್ಯ ಪ್ರತಿಭಟಿಸಿದ. ತಕ್ಷಣವೇ ತೆಂಗಪ್ಪ ಊರುಗಯ್ಯನ ಮುಖಕ್ಕೆ ಬಲವಾಗಿ ಒದ್ದ. ಅವನ ಮೂಗು-ಬಾಯಿಯಿಂದ ರಕ್ತ ಸುರಿಯಿತು. ಇದನ್ನು ಕಂಡ ಮಗ ಊರಯ್ಯನಲ್ಲಿ ರೋಷ ಉಕ್ಕಿತು. ಆತ ಗಾಡಿಯ ತಡಕೆ ಪಟ್ಟಿ ಎಳೆದು, ಅದರಿಂದ ತೆಂಗಪ್ಪನಿಗೆ ಚೆನ್ನಾಗಿ ಏಟುಗಳನ್ನಿತ್ತ. ನಂತರ, ತೆಂಗಪ್ಪನೇ ಆ ಪಟ್ಟಿಯಿಂದ ಊರಯ್ಯನಿಗೆ ಬಾರಿಸಿದ. ಆಗ, ಊರಯ್ಯ ಸೊಂಟದಲ್ಲಿದ್ದ ಕತ್ತಿ ತೆಗೆದು, ತೆಂಗಪ್ಪನ ತಲೆ ಕಡಿದ; ಆ ತಲೆ ಹಿಡಿದುಕೊಂಡು ಪೊಲೀಸ್ ಠಾಣೆಯತ್ತ ನಡೆದ.

ಎರಡನೇ ಕತೆ “ಕ್ಷಯ”, 4ನೇ ಕತೆ “ಕರುಣಾಳು ಬಾ ಬೆಳಕೆ”, 7ನೇ ಕತೆ “ಮಾನಭಂಗ”, “ಇದು ಕತೆಯಲ್ಲ”, “ನೂರು ರೂಪಾಯಿ ನೋಟು”, ಮತ್ತು “ಹತ್ಯೆ” ಹಾಗೂ “ಮಗಳು" ಎಂಬ  ಎಂಬ ಕತೆಗಳು, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಭಷ್ಟಾಚಾರವನ್ನು ಎಳೆಎಳೆಯಾಗಿ ತೆರೆದಿಡುತ್ತವೆ. ಅಲ್ಲಿನ ಕೆಲವು ವೈದ್ಯರಲ್ಲಿ ಮಾನವೀಯತೆ ಎಂಬುದಿಲ್ಲ; ಹಣಕ್ಕಾಗಿ ಏನು ಮಾಡಲಿಕ್ಕೂ ಹೇಸುವುದಿಲ್ಲ ಎಂಬುದನ್ನು ದಾಖಲಿಸುತ್ತವೆ.

ಮೂರನೇ ಕತೆ “ತಾಯಿ” ಮತ್ತು “ಧರ್ಮ” ಎಂಬೆರಡು ಕತೆಗಳ ವಸ್ತು “ಭೂ ಸುಧಾರಣಾ ಕಾಯಿದೆ”ಗೆ ಸಂಬಂಧಿಸಿದ್ದು. “ತಾಯಿ” ಕತೆಯಲ್ಲಿ, “ಉಳುವವನೇ ಜಮೀನಿನ ಮಾಲೀಕ” ಎಂಬ ನಿಯಮದಂತೆ, ಗೇಣಿದಾರಳಾದ ಚನ್ನಮ್ಮಳಿಗೆ   ಸೇರಬೇಕಾಗಿದ್ದ ಜಮೀನು ಅವಳಿಗೆ ಸಿಗದಂತಾಗಲು ಲಂಚ ತಿಂದ ತಹಸೀಲ್ದಾರ ಪಹಣಿ ಬದಲಾಯಿಸುವ ಅನ್ಯಾಯಕ್ಕೆ ಕೈಜೋಡಿಸಿದ್ದ. ಕೊನೆಗೆ ಭೂನ್ಯಾಯ ಮಂಡಳಿಯಲ್ಲಿ ಈ ಪ್ರಕರಣ ವಿಚಾರಣೆಗೆ ಬಂದಾಗ ತಹಸೀಲ್ದಾರನ ವೃದ್ಧೆ ತಾಯಿ ಉರುಗಮ್ಮ ಅಲ್ಲಿಗೆ ಬಂದು ಸತ್ಯ ಹೇಳುತ್ತಾಳೆ. ಅವಳ ಮಗ ತಹಸೀಲ್ದಾರನೇ “ನನ್ನ ತಾಯಿಗೆ ಕ್ಯಾನ್ಸರ್ ಆಗಿದೆ; ಅವಳು ತಲೆಕೆಟ್ಟು ಏನೇನೋ ಹೇಳುತ್ತಿದ್ದಾಳೆ” ಎಂದರೂ ಆ ತಾಯಿ ಇನ್ನೊಮ್ಮೆ ಸತ್ಯ ಏನೆಂದು ಘೋಷಿಸಿ, ಅಲ್ಲೇ ಕುಸಿದು ಬಿದ್ದು ಪ್ರಾಣ ಬಿಡುತ್ತಾಳೆ.

“ಧರ್ಮ” ಕತೆಯಲ್ಲಿ, ಅರ್ಚಕರಾದ ಮರಳು ಹೊಳೆ ಶ್ರೀಕಂಠ ಭಟ್ಟರ 12 ಎಕರೆ ಜಮೀನನ್ನು ಚನ್ನೇಗೌಡ ಬೇಸಾಯ ಮಾಡುತ್ತಿದ್ದ. ಶ್ರೀಕಂಠ ಭಟ್ಟರ ಮಗನಿಗೆ ಅದೆಲ್ಲ ಜಮೀನು ಗೇಣಿದಾರ ಚನ್ನೇಗೌಡನ ಪಾಲಾಗಬಾರದು; ಸ್ವಲ್ಪ ಜಮೀನನ್ನಾದರೂ ಉಳಿಸಿಕೊಳ್ಳಬೇಕು ಎಂಬ ಆಸೆ. ತಂದೆಯದು ಈ ನೆಲದ ಕಾನೂನಿನಂತೆಯೇ ಆಗಲಿ ಎಂಬ ಧೋರಣೆ.
ಕೊನೆಗೆ ಅವರು ಭೂನ್ಯಾಯ ಮಂಡಳಿಯ ಎದುರು ಬಂದು, ಚನ್ನೇಗೌಡನನ್ನು ಗುರುತಿಸಿ, “ಅವನ ತಾತ, ಮುತ್ತಾತರ ಕಾಲದಿಂದಲೂ ಅವರೇ ಬೇಸಾಯ ಮಾಡುತ್ತಿದ್ದರು” ಎಂದು ಸಾಕ್ಷ್ಯ ಹೇಳುತ್ತಾರೆ. ಭೂನ್ಯಾಯ ಮಂಡಳಿಯ ಅಧ್ಯಕ್ಷರಾದ ಎ..ಸಿ. ಸಾಹೇಬರೇ “ನೋಡಿ, ನಿಮಗೂ ಮಕ್ಕಳಿದ್ದಾರೆ ಯೋಚಿಸಿ, ಉತ್ತರಿಸಿ” ಎಂದು ಸುಳ್ಳು ಹೇಳಲು ಸೂಚಿಸಿದರು ಅದಕ್ಕೆ ಸೊಪ್ಪು ಹಾಕದೆ ಸತ್ಯವನ್ನೇ ನುಡಿಯುತ್ತಾರೆ. ಅನಂತರ, ಚನ್ನೇಗೌಡ “ಸ್ವಾಮೀ ಭಟ್ಟರೇ, ಆರು ಎಕರೇನ ನಿಮ್ಮ ಮಕ್ಕಳಿಗೆ ಬರೀತೀನಿ” ಎಂದರೂ ಒಪ್ಪಿಕೊಳ್ಳದೆ ದೇವರ ಪೂಜೆ ಮಾಡಲು ಮರಳು ಹೊಳೆಯ ಕಡೆಗೆ ನಡೆಯುತ್ತಾರೆ.

“ಗಂಗಾ” ಕತೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ರಾಮ್ ಪ್ರಿಯ ಮತ್ತು ಶ್ರೀನಿವಾಸ್ ಅಯ್ಯಂಗಾರ್ ಎಂಬ ಇಬ್ಬರು, ತಮ್ಮೂರು ಅಮೃತಕೋಟೆಯಲ್ಲಿ ಸುಂದರ ಯುವತಿಯೊಬ್ಬಳ ಸಾವಿನ ಬಗ್ಗೆ ಮಾತನಾಡುತ್ತಿದ್ದರು. ಇವರ ಮಾತನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಮತ್ತೊಬ್ಬ ಪ್ರಯಾಣಿಕ ನರಸಿಂಹ ಅಯ್ಯಂಗಾರ್ ಎಂಬವರು “ಅವಳದು ಆತ್ಮಹತ್ಯೆಯೂ ಅಲ್ಲ, ಏನು ಅಲ್ಲಾರೀ ಅದು ಕೊಲೆ! ಕೊಲೆ! ಮಾನಭಂಗ ಮಾಡಿ ಯಾರೋ ಪಾಪಿ ಮುಂಡೆ ಮಕ್ಕಳು ಕೊಲೆ ಮಾಡಿ, ರಾತ್ರಿ ಕೊಳಕ್ಕೆ ಎಸೆದಿದ್ರು…” ಎಂದು ಘೋಷಿಸಿ, ವಿವರಗಳನ್ನು ನೀಡುತ್ತಾರೆ.

“ಕುಂಡ್ಯ”ವೆಂಬೀ ನಾಡಿನಲ್ಲಿ” ಮತ್ತು “ಹಾದರ” ಎಂಬ ಕತೆಗಳು ಶೋಷಣೆ ಹಾಗೂ ಕ್ರೂರತನದ ವಸ್ತು ಹೊಂದಿದ್ದು ಮನ ಕಲಕುತ್ತವೆ. “ಕರೀ ಹಸ” ಎಂಬ ಕತೆಯಂತೂ, ಸುಳ್ಳು ಹೇಳಿ ಹಸುಗಳನ್ನು ಮಾರುವವರ ಸಣ್ಣತನ ಮತ್ತು ದುರಾಸೆಯನ್ನು ತೆರೆದಿಡುತ್ತವೆ.

“ಆಳು ಮಗ” ಮತ್ತು “ಜಾಡಮಾಲಿ” ಕತೆಗಳು ಸಮಾಜದ ಕೆಳಸ್ತರದ ಜನರ ದೊಡ್ಡತನವನ್ನು ಮನಮುಟ್ಟುವಂತೆ ಕಟ್ಟಿ ಕೊಡುತ್ತವೆ. “ಆಳು ಮಗ” ಕತೆಯಲ್ಲಿ, ಜೀವಮಾನವಿಡೀ ಕೂಲಿಯಾಗಿ ದುಡಿದು, ಉಳಿಸಿದ್ದ ಪುಡಿಗಾಸನ್ನು ಕರೀಬೋರ ತನ್ನ ಕೊನೆಗಾಲದಲ್ಲಿ ಧನಿಯ ಮಗನಿಗೆ ಕೊಟ್ಟು, “ಇದರಿಂದ ಯಾರೋ ಬಡವನಿಗೆ ಹೊಸ ಬಟ್ಟೆ ಹೊಲಿಸಿಕೊಡಿ”, ಎನ್ನುತ್ತಾನೆ.
“ಜಾಡಮಾಲಿ” ಕತೆ ಮೊಂಡೂರಿನ ಸರಕಾರಿ ಆಸ್ಪತ್ರೆಯಿಂದ ನಿವೃತ್ತನಾಗಿದ್ದ ಕುಂಟರಾಮನ ಕಥನ. ಅವನು ತನ್ನ ಮಗಳು ಸರೋಜಳ ಆತ್ಮಹತ್ಯೆಯ ದುಃಖದಲ್ಲಿ ಬಳಲುತ್ತಿದ್ದ. ಆಗೊಮ್ಮೆ, ಯಾರಿಂದಲೋ ಬಸಿರಾದ ಹುಚ್ಚಿಯೊಬ್ಬಳು ಬಸ್ ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದುದನ್ನು ಕಾಣುತ್ತಾನೆ. ಅವಳನ್ನು ಆಸ್ಪತ್ರೆಗೆ ಸೇರಿಸಿ, ಹೆರಿಗೆ ಮಾಡಿಸುತ್ತಾನೆ. ಆದರೆ, ಅವಳು ಬದುಕಿ ಉಳಿಯುವುದಿಲ್ಲ. ಅವಳ ಹೆಣ್ಣು ಶಿಶುವನ್ನು ತಾನೇ ಸಾಕುತ್ತೇನೆಂದು ಮನೆಗೆ ತಂದು, “ಸರೋಜ” ಎಂದು ಹೆಸರಿಡುತ್ತಾನೆ.  

ಕೊನೆಯ ಕತೆ “ಅಪ್ಪ”. ವೃದ್ಧ ಮೇಲೇ ಗೌಡರಿಗೆ ತನ್ನ ಮಗ, ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗಪ್ರಕಾಶನ ಭ್ರಷ್ಟಾಚಾರ ಕಂಡು ಜುಗುಪ್ಸೆ ಬಂದಿತ್ತು. ಅದೊಂದು ದಿನ ಆ ಮಗ ತನ್ನ ತಂದೆಗೆ ಬಾಯಿಗೆ ಬಂದಂತೆ ಬಯ್ದು ಅವಮಾನ ಮಾಡಿದ: “ಇಲ್ಲಿ ನೋಡಪ್ಪ! ತೀಟೆ ಇದ್ರೆ ಇಲ್ಲಿರು; ಇಲ್ದೆ ಹೋದ್ರೆ ನೀನು ಕೊಟ್ಟಿರೋ ಸಾಲದ ಪತ್ರ ಎಲ್ಲಾನೂ ತಕ್ಕೊಂಡು ಮನೆಯಿಂದ ಆಚೆಗೆ ಹೋಗು! ಇವತ್ತಿಗೆ ಮುಗಿದು ಹೋಗ್ಲಿ, ಅಪ್ಪ-ಮಗನ ಸಂಬಂಧ…” ಇದನ್ನು ಸಹಿಸಲಾಗದೆ, ತನ್ನ ಹಳ್ಳಿಗೆ ಬಂದು, ಆ ಸಾಲ ಪತ್ರಗಳನ್ನೆಲ್ಲ ತಂದೆ ಸುಟ್ಟು ಹಾಕುತ್ತಾರೆ. ಆಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗುತ್ತದೆ.

ಈ ಸಂಕಲನದ ಎಲ್ಲ ಕತೆಗಳೂ ನಮ್ಮ ಅಂತಃಕರಣವನ್ನು ಕಲಕುತ್ತವೆ. ಜೊತೆಗೆ, 1950 - 1960ರ ದಶಕಗಳಲ್ಲಿಯೇ ನಮ್ಮ ಸಮಾಜದ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂಬುದನ್ನು ಸಶಕ್ತವಾಗಿ ಸೂಚಿಸುತ್ತವೆ.