ಕೊಳವೆ ಬಾವಿಗೆ ಇನ್ನೆಷ್ಟು ಬಲಿ?

ಕೊಳವೆ ಬಾವಿಗೆ ಇನ್ನೆಷ್ಟು ಬಲಿ?

ಬರಗಾಲದ ಈ ಸಂದರ್ಭದಲ್ಲಿ ಅಂತರ್ಜಲ ಕೊರತೆ, ಕೊಳವೆಬಾವಿ ಕೊರೆಸುವಿಕೆಗಳ ಕುರಿತು ಒಂದೆಡೆ ಚರ್ಚೆಗಳು ಎದ್ದಿರುವಾಗ ಇನ್ನೊಂದೆಡೆ ಜೀವಕೇಂದ್ರಿತವಾಗಿ ಕೊಳವೆ ಬಾವಿ ಸುದ್ದಿಯಾಗಿರುವುದು ವಿಪರ್ಯಾಸ. ವಿಜಯಪುರದ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದ ಜಮೀನಿನಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಕಂದಮ್ಮ ತೆರೆದ ಕೊಳವೆ ಬಾವಿಗೆ ಬಿದ್ದಿರುವುದು ವ್ಯವಸ್ಥೆಯ ನಿರ್ಲಕ್ಷ್ಯವಲ್ಲದೆ ಮತ್ತೇನೂ ಅಲ್ಲ. ಇತ್ತೀಚೆಗೆ ಕೊರೆಸಿದ್ದ ಕೊಳವೆ ಬಾವಿಯಲ್ಲಿ ನೀರು ಸಿಗದ ಕಾರಣದಿಂದ ಅದನ್ನು ಮುಚ್ಚುವುದರ ಬಗ್ಗೆ ತಲೆಕೆಡಿಸಿಕೊಳ್ಳದಿರುವುದೇ ಈ ದುರಂತಕ್ಕೆ ನೇರಕಾರಣ. ವ್ಯವಸ್ಥೆಯ ಪುನರಾವರ್ತಿತ ಪ್ರಮಾದಕ್ಕೆ ಇದು ಮತ್ತೊಂದು ಸೇರ್ಪಡೆಯಾಗಿರುವುದು ತಲೆ ತಗ್ಗಿಸುವಂತಹ ಸಂಗತಿ.

ಈ ಪ್ರಕರಣದ ಬೆನ್ನಲ್ಲೇ ರಕ್ಷಣಾ ಕಾರ್ಯ ಬಿರುಸುಗೊಂಡಿದ್ದು ಘಟನಾ ಸ್ಥಳಕ್ಕೆ ಅಧಿಕಾರಿಗಳ, ಜನಪ್ರತಿನಿಧಿಗಳ ದೌಡಾಯಿಸುವಿಕೆ, ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಪುನರಾದೇಶ... ಮುಂತಾದ ಆರಂಭಶೂರತ್ವದ ದೃಶ್ಯಗಳೂ ಮರುಕಳಿಸುತ್ತವೆ. ೨೦೦೬ರಿಂದ ಇಲ್ಲಿಯವರೆಗೆ ರಾಜ್ಯ ಕಂಡ ಆರೇಳು ಪ್ರಕರಣಗಳ ಬೆನ್ನಲ್ಲಿ ಮೂಡಿದ್ದು ಇದೇ ಚಿತ್ರಗಳೇ. ತೆರೆದ ಕೊಳವೆ ಬಾವಿಗಳ ಕುರಿತ ಬಾಯಿಮಾತಿನ ಕಟ್ಟುನಿಟ್ಟಿನ ಆದೇಶಗಳು ಪಾಲನೆಯಾಗಿದ್ದಿದ್ದರೆ ಇಂದು ಲಚ್ಯಾಣ ಗ್ರಾಮದಲ್ಲಿ ಇಂಥ ಅನಾಹುತ ಸಂಭವಿಸುತ್ತಿರಲಿಲ್ಲ. ಕೊಳವೆ ಬಾವಿಗಳನ್ನು ಕೊರೆಯುವಾಗ ಸ್ಥಳೀಯ ಅಧಿಕಾರಿಗಳು ಎಲ್ಲೋ ಕಣ್ಮುಚ್ಚಿ ಕುಳಿತಿರುತ್ತಾರೆ. ಅದರಲ್ಲಿ ನೀರು ಬಂತೋ, ಇಲ್ಲವೋ ಎನ್ನುವ ಮಾಹಿತಿಯೂ ಅವರನ್ನು ತಲುಪುವುದಿಲ್ಲ. ಅವರಿಗೂ ಅದು ಬೇಕಿಲ್ಲ. ಬೋರ್ ವೆಲ್ ತೋಡಿಸಿದವರೂ ಹಣ ಉಳಿಸುವ ಜಾಣತನ ತೋರಿ, ಅದನ್ನು ಮುಚ್ಚುವ ಉಸಾಬರಿಗೆ ಹೋಗುವುದಿಲ್ಲ. ಜನರ ಜೀವನಷ್ಟ ಯಾತನೆ ಸಂಕಟವು ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಾಗಲೀ ತೀವ್ರವಾಗಿ ತಟ್ಟುವುದೂ ಇಲ್ಲ. ಜನರು ಕೂಡ ಇದರಿಂದ ಬುದ್ಧಿ ಕಲಿಯುವುದಿಲ್ಲ. 

ಕೆಲವು ವರ್ಷಗಳ ಹಿಂದೆ ಕೊಳವೆ ಬಾವಿ ದುರಂತ ತಪ್ಪಿಸುವುದಕ್ಕಾಗಿಯೇ ಎಲ್ಲೆಲ್ಲಿ ಅಪಾಯಕಾರಿ ಕೊಳವೆಬಾವಿಗಳಿವೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಸರಕಾರ ಸೂಚಿಸಿತ್ತು. ತಹಶೀಲ್ದಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪೋಲೀಸ್ ಸಬ್ ಇನ್ಸ್ಪೆಕ್ಟರ್ ಗಳನ್ನು ಒಳಗೊಂಡ ಸಮಿತಿಗಳನ್ನು ಎಲ್ಲಾ ತಾಲೂಕುಗಳಲ್ಲಿ ರಚಿಸಲಾಯಿತು. ಈಗ ಇದು ಎಷ್ಟರ ಮಟ್ಟಿಗೆ ಸಕ್ರಿಯವಿದೆ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಇನ್ನೊಂದು ಆಘಾತಕಾರಿ ಸಂಗತಿಯೆಂದರೆ, ರಾಜ್ಯದಲ್ಲಿ ಖಾಸಗಿಯಾಗಿ ಎಷ್ಟು ಕೊಳವೆ ಬಾವಿಗಳನ್ನು ತೆಗೆಸಲಾಗಿದೆ, ಅವುಗಳಲ್ಲಿ ಎಷ್ಟು ವೈಫಲ್ಯ ಕಂಡಿದೆ, ಅದನ್ನು ಮುಚ್ಚಿದ್ದಾರೋ ಇಲ್ಲವೋ ಈ ಕುರಿತ ಯಾವ ಇಲಾಖೆಗಳಲ್ಲೂ ನಿಖರವಾದ ಮಾಹಿತಿಗಳಿಲ್ಲ. ನಿರ್ಲಕ್ಷ್ಯ ತೋರಿದ ಬೋರ್ ವೆಲ್ ಮಾಲೀಕರ ಬಗ್ಗೆ ಯಾರೂ ಕಠಿಣ ಕ್ರಮ ಕೈಗೊಂಡ ಬಗ್ಗೆ ನಿದರ್ಶನಗಳಿಲ್ಲ. ಮಕ್ಕಳ ರಕ್ಷಣಾ ಸಮಿತಿ, ಹೈಕೋರ್ಟ್, ಸುಪ್ರೀಮ್ ಕೋರ್ಟ್ ಗಳು ಎಷ್ಟೇ ಕೂಗಿ ಹೇಳಿದರೂ ಅದು ಯಾರ ಕಿವಿಗೂ ಬಿದ್ದಂತೆ ತೋರುತ್ತಿಲ್ಲ. ಈ ಮುಗ್ಧ ಜೀವ ನಷ್ಟದ ಹೊಣೆಯನ್ನು ಯಾರು ಹೊತ್ತುಕೊಳ್ಳದೆ, ಪರಸ್ಪರ ನುಣುಚಿಕೊಳ್ಳುವುದರಲ್ಲಿ ಚಾಣಾಕ್ಷತೆ ತೋರುವವರ ಸಂಖ್ಯೆಯೇ ಅಧಿಕವಿದೆ.

ವ್ಯವಸ್ಥೆ ಹೀಗೆ ನಡೆದುಕೊಳ್ಳುವಾಗ ನಾಗರಿಕ ಸಮಾಜಗಳು, ಗ್ರಾಮಸ್ಥರು, ರೈತರು, ವಿದ್ಯಾರ್ಥಿಗಳು, ಎನ್ ಎಸ್ ಎಸ್, ಎನ್ ಸಿ ಸಿಯಂಥ ಸೇವಾ ಸಂಘಟನೆಗಳೇ ಒಂದು ಪರ್ಯಾಯ ಕಾರ್ಯಪಡೆಯಾಗಿ ತೆರೆದ ಕೊಳವೆ ಬಾವಿಗಳನ್ನು ಮುಚ್ಚುವ ಆಂದೋಲನ ಮತ್ತು ಜಾಗೃತಿ ಕೈಗೊಳ್ಳುವುದೇ ಉತ್ತಮ. ಆ ಕೆಲಸ ಮೊದಲು ಆಗಲಿ. ಅಮಾಯಕ ಜೀವಗಳ ಬಲಿ ನಿಲ್ಲಲಿ. (ಖುಷಿಯ ಸಂಗತಿ ಏನೆಂದರೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಬಾಲಕ ಕೊಳವೆ ಬಾಯಿಯಿಂದ ಬದುಕಿ ಹೊರಬಂದಿದ್ದಾನೆ)

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೪-೦೪-೨೦೨೪

ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ ತಾಣ