ಕೊಳೆ ಹೊದಿಕೆಯೊಳಗೆ

Submitted by ramaswamy on Sat, 07/12/2014 - 22:09
ಬರಹ

ಕೊಳೆ ಹೊದಿಕೆಯೊಳಗೆ

ಹೊಲಸಾಗಿದೆ ಹೊದ್ದ ಹೊದಿಕೆ
ಬಳಸೀ ಬಳಸೀ ಪಿಸಿಯುತ್ತಿದೆ,
ಮೂಲ ಬಣ್ಣದ ಗುರುತೂ ಮರೆತು,
ದಟ್ಟಿ ವಾಸನೆಯ ಮುಸುಕಿನಲ್ಲಿ
ಮತ್ತವೇ ಹರಿದ ಕನಸಗಳು,
ಪೂರ್ತಿಯಾಗದ ಚಿತ್ರಗಳು.

ಹೊದಿಕೆಯೆಸೆದು ನಿರುಮ್ಮಳವಾಗುವುದು
ಕಡು ಕಷ್ಟ. ಛಳಿಗೆ, ಗಾಳಿಗೆ
ಜೊತೆಗೆ ಬತ್ತಲು ಗೊತ್ತಾಗುವ ಭಯಕ್ಕೆ

ಬದಲಿಸಿವುದು ಇನ್ನೂ ಕಷ್ಟ
ಹೊಸತು ತರುವುದಕ್ಕೆ ಸಾಲದ ತಿಳುವಳಿಕೆ
ಜೊತೆಗೇ ಇರುವ ಅನುಭವದ ಕೊರತೆ

ಮಲಿನವಾಗಿದೆಯೆಂದು ಒಗೆಯುವುದಕ್ಕೆ
ಶತಮಾನಗಳ ಕೊಳೆ, ತಲೆಮಾರುಗಳ ಕಿಮಟು
ತೆಗೆಯುವುದಕ್ಕೆ ಬೇಕಾದ ಬುರುಜು ನೊರೆ ಸ್ವಚ್ಛ ನೀರು
ಇರುವ ಜಾಗವ ಅರಿವ ಜಾಗರದ ಪರಿವೆ

ಕಂಬಳಿ, ರಗ್ಗು, ಬುರ್ನಾಸು
ಅಥವ  ಅಂಥದೇ ಯಾವುದೋ ಹಚ್ಚಡ
ಹೊದೆದವರಿಗೆಲ್ಲ ಈ ಇದೇ ಪ್ರಶ್ನೆ

ಸಿಗುತ್ತದೆಯೇ ಕೊಳೆ ತೆಗೆವ ಸಾಬೂನು
ಸ್ವಚ್ಛವಾಗುವ ಸಾಲಲ್ಲಿ ನಾನೂ ನೀನೂ!

(ಕಬೀರನ ಒಂದು ವಚನದಿಂದ ಪ್ರೇರಿತ)