ಕೊಳ್ಳುಬಾಕ ಸಂಸ್ಕೃತಿಗೆ ಕಡಿವಾಣ ಅಗತ್ಯ !

ಕೊಳ್ಳುಬಾಕ ಸಂಸ್ಕೃತಿಗೆ ಕಡಿವಾಣ ಅಗತ್ಯ !

ತರುಣ್ ಒಬ್ಬ ಐಟಿ ಕಂಪೆನಿಯ ಉದ್ಯೋಗಿ. ತಿಂಗಳಿಗೆ ಲಕ್ಷಕ್ಕೂ ಮಿಕ್ಕಿದ ಸಂಬಳವಿದೆ. ಆದರೂ ತಿಂಗಳ ಕೊನೆಗೆ ಹಣಕ್ಕಾಗಿ ತಿಣುಕಾಡುತ್ತಾನೆ. ಶ್ರಾವಣಿಗೆ ಖಾಸಗಿ ಕಂಪೆನಿಯೊಂದರಲ್ಲಿ ಉತ್ತಮ ಸಂಬಳದ ಕೆಲಸವಿದೆ. ಆದರೂ ಅವಳ ಕೈಯಲ್ಲಿ ಹಣ ನಿಲ್ಲುತ್ತಿಲ್ಲ. ತಿಂಗಳ ಕೊನೆಗೆ ಅವಳ ಎಲ್ಲಾ ಖರ್ಚು ನೋಡಿಕೊಳ್ಳಬೇಕಾಗುವುದು ಅವಳ ಗಂಡ. ಏಕೆ ಹೀಗಾಗುತ್ತಿದೆ? ಉತ್ತಮ ಸಂಬಳವಿದ್ದೂ ಇವರೆಲ್ಲಾ ಯಾಕೆ ಉಳಿತಾಯ ಮಾಡಲು ಆಗುತ್ತಿಲ್ಲ ಎಂಬ ಬಗ್ಗೆ ಯೋಚನೆ ಮಾಡಿರುವಿರಾ?

ನಾವೆಲ್ಲಾ ಸಣ್ಣವರಿರುವಾಗ ಅಂದರೆ ಸುಮಾರು ೩೦-೪೦ವರ್ಷಗಳ ಹಿಂದೆ ನಮ್ಮ ಹೆತ್ತವರಿಗೆ ಇದ್ದ ಸಂಬಳ ಅತ್ಯಂತ ಕಡಿಮೆ. ಆದರೂ ಅವರು ೩-೪ ಮಕ್ಕಳನ್ನು, ಅವರ ಅಪ್ಪ ಅಮ್ಮಂದಿರನ್ನು ಎಲ್ಲರನ್ನೂ ಸಾಕುತ್ತಿದ್ದರು. ಕಷ್ಟಪಟ್ಟಾದರೂ, ಸಣ್ಣದಾದರೂ ಮನೆಯನ್ನು ಕಟ್ಟುತ್ತಿದ್ದರು. ಕಷ್ಟಕಾಲದಲ್ಲಿ ಅವರ ಬಳಿ ಕೂಡಿಟ್ಟ ಅಲ್ಪ ಸ್ವಲ್ಪ ಹಣವೂ ಇರುತ್ತಿತ್ತು. ಆದರೆ ಆಗ ಅವರಿಗೆ ಸಿಗುತ್ತಿದ್ದ ಸಂಬಳದ ಹತ್ತು ಪಟ್ಟು ಅಧಿಕ ಸಂಬಳ ಈಗ ದೊರೆಯುತ್ತಿದ್ದರೂ ಒಂದು ಮಗು ಇರುವ ಸಂಸಾರವನ್ನೂ ಸಾಕಲು ಹರ ಸಾಹಸ ಪಡುತ್ತಿರುವವರ ದಂಪತಿಗಳನ್ನು ನೋಡಿದ್ದೇವೆ. ಇದಕ್ಕೇನು ಕಾರಣ? 

ನಮ್ಮಲ್ಲಿ ಹಣ ಉಳಿಯದೇ ಇರಲು ಪ್ರಮುಖ ಕಾರಣವೆಂದರೆ ನಾವು ಮಾಡುವ ದುಂದು ವೆಚ್ಚ. ಪ್ರತೀ ತಿಂಗಳು ಸಂಬಳ ಬಂದ ಕೂಡಲೇ ಹಿಂದೆ ಮುಂದೆ ನೋಡದೇ ಖರ್ಚು ಮಾಡಿ ಬಿಡುತ್ತೇವೆ. ಮೆಟ್ರೋ ಸಿಟಿಗಳಲ್ಲಿ ಹಾಗೂ ದೊಡ್ದ ದೊಡ್ಡ ನಗರಗಳಲ್ಲಿ ನಿರ್ಮಾಣವಾಗಿರುವ ಮಾಲ್ (Mall)  ಎಂಬ ಐಷಾರಾಮಿ ಕಟ್ಟಡದ ಮೋಹಕ್ಕೆ ಸಿಲುಕಿರುವ ನಾವು ನಮ್ಮ ಹಣವನ್ನು ಅವಶ್ಯಕತೆಗಿಂತ ಅಧಿಕ ವೆಚ್ಚ ಮಾಡುತ್ತಿದ್ದೇವೆ. ನಮ್ಮಲ್ಲಿರುವ ಹಣವನ್ನು ಖರ್ಚು ಮಾಡಲು ನಮಗೆ ಈಗ ಬೇಕಾದಷ್ಟು ದಾರಿಗಳಿವೆ. ದೊಡ್ದ ನಗರದಲ್ಲಿರುವ ಮಾಲ್ ಸಂಸ್ಕೃತಿಗೆ ಬಲಿಯಾಗುತ್ತಿರುವ ಯುವ ಜನತೆ ತಮ್ಮ ಆದಾಯಕ್ಕಿಂತ ಅಧಿಕ ಖರ್ಚು ಮಾಡುತ್ತಿದ್ದಾರೆ. ಕಣ್ಣಿಗೆ ಕಂಡದ್ದನ್ನು ಹಿಂದೆ ಮುಂದೆ ನೋಡದೇ ಖರೀದಿ ಮಾಡುತ್ತಿದ್ದಾರೆ. ಡಿಸ್ಕೌಂಟ್ ಹಾಗೂ ಒಂದಕ್ಕೊಂದು ಉಚಿತಗಳ ಯೋಜನೆಯ ಮೂಲಕ ನಮ್ಮನ್ನು ಮರುಳು ಮಾಡುತ್ತಿದ್ದಾರೆ. ಖರೀದಿಸುವ ಮೊದಲು ನಾವು ಯಾವ ಸಂಗತಿಗಳನ್ನೂ ಯೋಚಿಸುವುದೇ ಇಲ್ಲ. ನಿಜಕ್ಕೂ ಆ ವಸ್ತುವಿಗೆ ಎಷ್ಟು ಬೆಲೆ ಇರಬಹುದು. ದರ ಕಡಿತ ನೈಜವಾಗಿದೆಯೇ? ಬೇರೆ ಕಡೆಗಳಲ್ಲಿ ಅದೇ ರೀತಿಯ ವಸ್ತುವಿಗೆ ಕಮ್ಮಿ ಬೆಲೆ ಇರಬಹುದೋ? ನಾವು ಯಾವುದನ್ನೂ ಯೋಚನೆ ಮಾಡದೇ ಖರೀದಿ ಮಾಡುತ್ತೇವೆ. ಮನೆಗೆ ಬಂದು ಯೋಚನೆ ಮಾಡುತ್ತೇವೆ. ಕಳೆದ ತಿಂಗಳಷ್ಟೇ ನಾನು ಶರ್ಟ್ ಖರೀದಿಸಿದ್ದೆ. ಮತ್ತೆ ತೆಗೆದುಕೊಂಡೆನಲ್ಲಾ. ಇನ್ನೂ ಹಾಕದ ಹಲವಾರು ಶರ್ಟ್ ಗಳು ನನ್ನ ಕಪಾಟಿನಲ್ಲಿ ಬಾವಲಿಗಳಂತೆ ನೇತಾಡುತ್ತಿವೆಯಲ್ಲಾ, ಸುಮ್ಮನೆ ಹಣ ವ್ಯರ್ಥ ಮಾಡಿದೆ ಎಂದು ಚಿಂತಿಸುತ್ತೇವೆ. ಈ ಬಗ್ಗೆ ನಾವು ಅಲ್ಲಿ ಖರೀದಿಸುವ ಸಂದರ್ಭದಲ್ಲಿ ಯೋಚನೆ ಮಾಡುವುದೇ ಇಲ್ಲ. ಅದೇ ದೊಡ್ದ ಸಮಸ್ಯೆ.

ದರ ಕಡಿತದ ಬಗ್ಗೆ ಒಂದು ಉದಾಹರಣೆ ನೀಡುವೆ. ನಾನು ಮಾಲ್ ನಲ್ಲಿರುವ ಆ ದೊಡ್ಡ ಬಟ್ಟೆಯ ಅಂಗಡಿಗೆ ನಿಯಮಿತವಾಗಿ ಹೋಗುತ್ತಿದ್ದೆ. ಬಟ್ಟೆ ಖರೀದಿ ಮಾಡಿದ್ದು ಕಮ್ಮಿಯಾದರೂ ಏನು ಹೊಸತು ಬಂದಿದೆ ಎಂದು ತಿಳಿಯಲು ಅನುಕೂಲವಾಗುತ್ತದೆ ಎಂದು ಆಗಾಗ ಹೋಗುತ್ತಿದ್ದೆ. ಅಲ್ಲಿ ಒಮ್ಮೆ ಭಾರೀ ದರ ಕಡಿತದ ಮಾರಾಟ ಎಂಬ ಸೂಚನಾ ಫಲಕ ನೋಡಿದೆ. ಅದರಲ್ಲಿ ‘ಒಂದು ಕೊಂಡರೆ ಎರಡು ಉಚಿತ’ ‘ಶೇಕಡಾ ೮೦ರವರೆಗೆ ರಿಯಾಯಿತಿ' ಎಂಬ ಮಾಹಿತಿ ಇತ್ತು. ಬಹಳ ಕುತೂಹಲದಿಂದ ಒಳಗೆ ಹೋಗಿ ನೋಡಿದರೆ, ಮೊದಲು ಯಾವ ವಸ್ತುವನ್ನು ರೂ ೩೦೦ ರಿಂದ ೫೦೦ ರೂಪಾಯಿಯಲ್ಲಿ ಮಾರುತ್ತಿದ್ದರೋ ಅದೇ ವಸ್ತುವಿನ ಬೆಲೆ ೧೦೦೦ ದಿಂದ ೧೫೦೦ ರೂ ತನಕ ಹೆಚ್ಚು ಮಾಡಿದ್ದಾರೆ. ನೀವು ಮೊದಲು ಯಾವ ಬಟ್ಟೆಗೆ ೫೦೦ ರೂ. ಕೊಟ್ಟು ಖರೀದಿಸುತ್ತಿದ್ದಿರೋ ಅದೇ ವಸ್ತ್ರಕ್ಕೆ ೧೫೦೦ ಕೊಡಬೇಕು. ಆಗ ನಿಮಗೆ ಒಂದು ಕೊಂಡರೆ ಎರಡು ಉಚಿತ ಸಿಗುತ್ತದೆ. ಅಂದರೆ ಎರಡೂ ಸಂಗತಿ ಒಂದೇ ಆಯಿತಲ್ವಾ? ಮೊದಲು ೫೦೦ ರೂ ಕೊಟ್ಟು ಒಂದು ವಸ್ತ್ರ ತೆಗೆದುಕೊಳ್ಳುತ್ತಿದ್ದವರು, ಈಗ ೧೫೦೦ ಕೊಟ್ಟು ಮೂರು ತೆಗೆದುಕೊಂಡು ಬರುತ್ತೀರಿ. ನಿಮಗೆ ಒಮ್ಮೆಲೇ ಮೂರು ಬಟ್ಟೆಯ ಅಗತ್ಯತೆ ಇದೆಯೋ ಇಲ್ಲವೋ, ನೀವು ದರಕಡಿತದ ಜಾಹೀರಾತಿಗೆ ಮರುಳಾಗಿ ಹಣವನ್ನು  ಖರ್ಚು ಮಾಡುತ್ತೀರಿ. ಆ ಅಂಗಡಿಯವರಿಗೆ ಒಮ್ಮೆಲೇ ಮೂರು ಬಟ್ಟೆ ಮಾರಾಟವಾದ ಲಾಭ ದೊರೆಯುತ್ತದೆ. ಹೆಚ್ಚಾಗಿ ಎಲ್ಲಾ ದರ ಕಡಿತದ ಮಾರಾಟ ಇದೇ ರೀತಿ ಇರುತ್ತದೆ. ಆದರೆ ಕೆಲವು ಕಡೆ ವಾರ್ಷಿಕ ತೀರುವಳಿಯ (Stock Clearing Sale) ಮಾರಾಟ ನಡೆಯುತ್ತದೆ. ಇದು ನೈಜವಾಗಿ ನಡೆಯುತ್ತದೆ. ನಾವು ಖರೀದಿಸುವ ಮೊದಲು ಸರಿಯಾಗಿ ಗಮನಿಸಬೇಕು. 

ನಮ್ಮ ಹಣವನ್ನು ಮನೆಯಲ್ಲಿ ಕುಳಿತೇ ಖಾಲಿ ಮಾಡಲು ಆನ್ ಲೈನ್ ಶಾಪಿಂಗ್ ಎಂಬ ಹೊಸ ಯೋಜನೆ ಈಗ ಹೆಚ್ಚು ಪ್ರಚಲಿತದಲ್ಲಿದೆ. ನವರಾತ್ರಿ, ದೀಪಾವಳಿ, ಹೊಸ ವರ್ಷ, ಯುಗಾದಿ, ಸ್ವಾತಂತ್ರ್ಯ ದಿನಾಚರಣೆ, ವಾರ್ಷಿಕ ಮಾರಾಟ ಎಂಬೆಲ್ಲಾ ಮುಖವಾಡ ಹೊತ್ತು ಹಲವಾರು ಆನ್ ಲೈನ್ ಮಾರಾಟ ಸಂಸ್ಥೆಗಳು ನಮ್ಮ ಮನಸ್ಸಿನಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಬೆಳೆಸುತ್ತಿದೆ. ಮೊಬೈಲ್ ಆಪ್ ಅಥವಾ ಲಾಪ್ ಟಾಪ್ ಮೂಲಕ ಬುಕ್ ಮಾಡಿದರಾಯಿತು. ಒಂದೆರಡು ದಿನದಲ್ಲಿ ಆ ವಸ್ತು ನಿಮ್ಮ ಮನೆ ಬಾಗಿಲಿಗೇ ಬಂದು ತಲುಪುತ್ತದೆ. ಹೊರಗಡೆ ಹೋಗುವ ತಲೆಬಿಸಿಯೂ ಇಲ್ಲ, ಮೊದಲೇ ಹಣ ಪಾವತಿ ಮಾಡಬೇಕೆಂದೂ ಇಲ್ಲ. ವಸ್ತು ಮನೆ ಬಾಗಿಲಿಗೆ ಬಂದ ಬಳಿಕವೇ ಹಣ ಪಾವತಿ ಮಾಡಿದರಾಯಿತು. ಇದರಲ್ಲೂ ಕೆಲವೊಮ್ಮೆ ಗೋಲ್ ಮಾಲ್ ಆಗುವುದಿದೆ. ಮೊಬೈಲ್ ಬುಕ್ ಮಾಡಿದರೆ ಸಾಬೂನು ಬರುವುದು, ಯಾವುದೋ ಬಣ್ಣದ ಬಟ್ಟೆಯ ಬದಲು ಇನ್ಯಾವುದೋ ಬಣ್ಣದ ಬಟ್ಟೆ ಬರುವುದು. ಕಳಪೆ ದರ್ಜೆಯ ವಸ್ತುಗಳನ್ನು ಬಟವಾಡೆ ಮಾಡುವುದು ಹೀಗೆ ಹತ್ತಾರು ತೊಂದರೆಗಳಿವೆ. ಇವೆಲ್ಲವನ್ನೂ ನಾವು ಗಮನಿಸಲೇ ಬೇಕು. ಕೆಲವು ಸಂಸ್ಥೆಗಳು ಒಮ್ಮೆ ಬಟವಾಡೆ ಮಾಡಿದ ವಸ್ತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಈ ಬಗ್ಗೆ ಗ್ರಾಹಕ ಎಚ್ಚರವಿರಬೇಕು. 

ಒಬ್ಬರೇ ಮನೆಯಲ್ಲಿರುವವರಿಗೆ, ಹೊರ ಊರುಗಳಲ್ಲಿ ರೂಂ ಮಾಡಿಕೊಂಡು ಇರುವವರಿಗೆ ಆಹಾರ ಸರಬರಾಜು ಮಾಡುವ ಸಂಸ್ಥೆಗಳೂ ಈಗ ಹೆಚ್ಚಾಗಿವೆ. ನಿಮಗೆ ಬೇಕಾದ ಹೋಟೇಲುಗಳಿಂದ ಆಹಾರ ಆಯ್ಕೆ ಮಾಡಿ ಹಣ ಪಾವತಿಸಿದರಾಯಿತು. ಆಹಾರ ನಿಮ್ಮ ಮನೆ ಬಾಗಿಲಿಗೆ. ಇದೆಲ್ಲದರ ಕಾರಣದಿಂದ ನಮ್ಮ ಮನಸ್ಸು ತುಂಬಾನೇ ದುಂದು ವೆಚ್ಚ ಮಾಡಲು ಹಾತೊರೆಯುತ್ತಿದೆ. ಮೊದಲು ಮನೆಗೆ ನೆಂಟರು ಅಥವಾ ಗೆಳೆಯರು ಬರುತ್ತಾರೆಂದರೆ, ಅವರಿಗೆ ಇಷ್ಟದ ತಿಂಡಿ ಅಥವಾ ಪದಾರ್ಥಗಳನ್ನು ಮನೆಯಲ್ಲೇ ತಯಾರಿಸುತ್ತಿದ್ದೆವು. ಈಗ ಹೋಟೇಲ್ ಗಳಿಗೆ ಆರ್ಡರ್ ನೀಡುತ್ತೇವೆ. ಸುಮ್ಮನೇ ಹಣವನ್ನು ಖರ್ಚು ಮಾಡುತ್ತೇವೆ. 

ನಾವು ದುಡಿದ ಹಣ ಖಾಲಿಯಾಗಲು ಮೇಲೆ ಹೇಳಿದ್ದು ಕೆಲವೇ ಕೆಲವು ಕಾರಣಗಳು. ಇನ್ನೂ ನೂರಾರು ಕಾರಣಗಳು ಇವೆ. ವೀಕೆಂಡ್ ಪಾರ್ಟಿ ನೆಪದಲ್ಲಿ ರಿಸಾರ್ಟ್ ಹೋಗುವುದು, ವಿಪರೀತ ಮದ್ಯಪಾನದ ಚಟ, ಅಗತ್ಯವಿಲ್ಲದೇ ಹೋದರೂ ಎರಡೆರಡು ಕಾರ್ ಗಳು, ಕ್ರೆಡಿಟ್ ಕಾರ್ಡ್ ಗಳ ಮುಖಾಂತರ ಖರೀದಿ, ಫೈನಾನ್ಸ್ ಮೂಲಕ ಖರೀದಿ,  ಬೈಕ್ ಗಳು, ದುಬಾರಿ ಮೊಬೈಲ್ ಗಳು, ಮನೆಗೆ ಅತೀ ಅಗತ್ಯವಿಲ್ಲದಿದ್ದರೂ ಖರೀದಿಸುವ ಸಾಮಾಗ್ರಿಗಳು ಹೀಗೆ ದುಂದು ವೆಚ್ಚದ ಪಟ್ಟಿ ಮುಂದುವರೆಯುತ್ತದೆ. ದಿನಗಳು ಒಂದೇ ರೀತಿಯಾಗಿರುವುದಿಲ್ಲ. ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗ ಬಂದ ಬಳಿಕ ಬಹುತೇಕರಿಗೆ ಇದರ ಅನುಭವವಾಗಿರಬಹುದು. ಹಲವಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ, ಅರ್ಧ ಸಂಬಳ ಪಡೆದುಕೊಂಡಿದ್ದಾರೆ. ನೀವು ದುಡಿಯುವ ಹಣದಲ್ಲಿ ಸ್ವಲ್ಪ ಹಣವನ್ನು ದಯವಿಟ್ಟು ಉತ್ತಮ ನ್ಯಾಯಯುತ ಯೋಜನೆಗಳಲ್ಲಿ, ಅಂಚೆ, ಬ್ಯಾಂಕ್ ನ ಉಳಿತಾಯ ಯೋಜನೆಗಳಲ್ಲಿ, ಆರೋಗ್ಯ ವಿಮೆಗಳಲ್ಲಿ ಹೂಡಿಕೆ ಮಾಡಿ. ನಿಮ್ಮ ಹಾಗೂ ನಿಮ್ಮ ಮಕ್ಕಳ ಭವಿಷ್ಯಕ್ಕೆ ಇದು ದಾರಿದೀಪವಾಗಲಿದೆ.

ಚಿತ್ರ ಕೃಪೆ: ಅಂತರ್ಜಾಲ ತಾಣ