ಕೋಟಿಲಿಂಗೇಶ್ವರ ದೇವಸ್ಥಾನದ ಮಹಿಮೆ

ಕೋಟಿಲಿಂಗೇಶ್ವರ ದೇವಸ್ಥಾನದ ಮಹಿಮೆ

ಬಂಗಾರಪೇಟೆಯಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನ ಪ್ರಸಿದ್ಧವಾಗಿದೆ. ಈ ದೇವಸ್ಥಾನವು ಕಾಮಸಮುದ್ರ ಗ್ರಾಮದ ಹತ್ತಿರ ಇದೆ. ಕೋಟಿಲಿಂಗೇಶ್ವರ ದೇವಾಲಯ ಇರುವ ಶಿವಲಿಂಗವು ಇಡೀ ವಿಶ್ವದಲ್ಲಿಯೇ ದೊಡ್ಡದು. ಶಿವರಾತ್ರಿ ದಿನದಂದು ಕಡಿಮೆ ಎಂದರೆ 2ಲಕ್ಷ ಭಕ್ತಾದಿಗಳು ಅಲ್ಲಿಗೆ ಪ್ರತಿವರ್ಷ ಆಗಮಿಸುತ್ತಾರೆ. ಕೋಟಿಲಿಂಗೇಶ್ವರ ದೇವಸ್ಥಾನವು ಬಂಗಾರದ ಗಣಿಯಿಂದ 6 ಕಿ.ಮೀ ದೂರ ಇದೆ. ಪ್ರತಿದಿನ ಪೂಜೆ, ಪುರಸ್ಕಾರವು ಮುಂಜಾನೆ 6 ಗಂಟೆ, ಸಂಜೆ 6 ಗಂಟೆಗೆ ನಡೆಯುತ್ತವೆ. ಪ್ರತಿ ದಿನ ಈ ಕಾರ್ಯಕ್ರಮ ನಡೆಸಿಕೊಡುವ ಪೂಜಾರಿಗಳಿದ್ದಾರೆ. ಪೂಜಾ ಸಮಯದಲ್ಲಿ ಡೋಲು, ಡಮರುಗ ಭಾರಿಸುವ ಸಂಪ್ರದಾಯ ಇದೆ. ಮಂತ್ರೋಚ್ಛಾರವೂ ಇದೆ. ತೀರ್ಥವನ್ನು ಶಿವಲಿಂಗದ ಮೇಲೆ ಪ್ರೋಕ್ಷಿಸಲಾಗುತ್ತದೆ. ಭಕ್ತಾದಿಗಳು ಶಿವಲಿಂಗಕ್ಕೆ ತಮ್ಮ ಪೂಜೆಗಳನ್ನು ಸಲ್ಲಿಸುವರು.  

ಇಲ್ಲಿ ತಂಗಲು ಅವಕಾಶ ಇದೆ. ಅತಿಥಿ ಗೃಹಕ್ಕೆ ಮೊದಲೇ ತಿಳಿಸಬೇಕು. ಇಲ್ಲಿ ಉಚಿತವಾಗಿ ಅನ್ನದಾನವನ್ನು ಮಾಡಲಾಗುತ್ತದೆ. ಕಣ್ಣು ಹಾಯಿಸಿದಷ್ಟೂ ಶಿವಲಿಂಗಗಳೇ ಕಾಣಸಿಗುವ ಕೋಟಿ ಲಿಂಗೇಶ್ವರ ಕೆ.ಜಿ.ಎಫ್. ಸಮೀಪದ ಕಮ್ಮಸಂದ್ರ ಗ್ರಾಮದಲ್ಲಿದೆ. ವಿವಿಧ ಬಗೆಯ ಅಸಂಖ್ಯ ಲಿಂಗಗಳಿರುವ ಕೋಟಿಲಿಂಗ ಕ್ಷೇತ್ರದಲ್ಲಿ ಮಂಜುನಾಥ, ಕನ್ಯಕಾಪರಮೇಶ್ವರಿ, ವಿನಾಯಕ, ಶ್ರೀನಿವಾಸ ಮೊದಲಾದ ಹಲವಾರು ದೇಗುಲಗಳಿವೆ. ವಿಶಾಲವಾಗಿ ಹರಡಿರುವ ಕೋಟಿಲಿಂಗ ಕ್ಷೇತ್ರದಲ್ಲಿ 108 ಅಡಿ ಶಿವಲಿಂಗ, ಧಾರ್ಮಿಕ ಚಿತ್ರಪಟ ಪ್ರದರ್ಶನ, ಪುಟ್ಟ ಕೊಳ ಆಕರ್ಷಕವಾಗಿದೆ.

ಕೋಟಿ ಶಿವಲಿಂಗ.. ಇಷ್ಟೆಂದರೆ ಸಾಕು, ಜನರಿಗೆ ತಟ್ಟನೆ ನೆನಪಾಗುವುದು ವಿಶ್ವಪ್ರಸಿದ್ಧಿಯಾಗಿರುವ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಮ್ಮಸಂದ್ರದ ಶ್ರೀಕೋಟಿ ಶಿವಲಿಂಗಗಳ ದೇವಾಲಯ. ಈ ಪುಣ್ಯ ಕ್ಷೇತ್ರದ ಮಹಿಮೆ ಅಪ್ರತಿಮವಾದದು. ಅಲೌಕಿಕರಿಗಾಗಲಿ ಮತ್ತು ಲೌಕಿಕರಿಗಾಗಲಿ ಖುಷಿಯಿಂದ ಬಂದು ಕೋಟಿ ಲಿಂಗಗಳ ದರ್ಶನ ಭಾಗ್ಯ ದೃಶ್ಯವನ್ನು ಕಣ್ಣಾರೆ ನೋಡಬಹುದು. 

ಇದಲ್ಲದೆ 20 ಅಡಿಗಳ ದೊಡ್ಡ ನಂದೀಶ್ವರನನ್ನು ಸಹ ನೋಡುವುದರ ಜೊತೆಗೆ ಶ್ರೀ ಮಂಜುನಾಥಸ್ವಾಮಿ, ಬ್ರಹ್ಮ, ವಿಷ್ಣು, ಮಹೇಶ್ವರ, ನವಗ್ರಹಗಳು, ಶ್ರೀವೆಂಕಟೇಶ್ವರಸ್ವಾಮಿ, ಮಾತಾ ಅನ್ನಪೂರ್ಣೇಶ್ವರಿ, ಸಂತೋಷ ಮಾತಾದೇವಿ ಪಾಂಡುರಂಗಸ್ವಾಮಿ, ಪಂಚಮುಖ ಗಣೇಶ, ರಾಮ, ಲಕ್ಷ್ಮಣ, ಸೀತಾದೇವಿ, ಪ್ರಸನ್ನ ಆಂಜನೇಯಸ್ವಾಮಿ, ಪಂಚಮುಖಿ ಆಂಜನೇಯಸ್ವಾಮಿ, ಶ್ರೀ ಕನ್ನಿಕಾಪರಮೇಶ್ವರಿ, ಕರಿಮಾರಿಯಮ್ಮದೇವಿ ದೇವಾಲಯಗಳು ಪ್ರತ್ಯೇಕವಾಗಿ ನಿರ್ಮಾಣ ಮಾಡಿರುವುದರಿಂದ ಭೂ ಕೈಲಾಸವೇ ಇದ್ದಂತೆ ಭಾಸವಾಗುತ್ತದೆ.  

ತ್ರೇತಾಯುಗದಲ್ಲಿ ಶ್ರೀರಾಮ ತನ್ನ ರಾಜ್ಯದ ಜನತೆಯ ಸುಖಕ್ಕಾಗಿ ಅಶ್ವಮೇಧ ಯಾಗವನ್ನು ಮಾಡಿ ಕುದುರೆಯನ್ನು ಭಕ್ತರ ದರ್ಶನಕ್ಕೆ ಬಿಟ್ಟನಂತೆ. ಅದು ಕೋಲಾರ ಜಿಲ್ಲೆಯ ಈಗಿನ ಪ್ರಸಿದ್ಧ ಕಮ್ಮಸಂದ್ರಕ್ಕೆ ಬಂದು ಇಲ್ಲಿರುವ ಈಗಿನ ಕಲ್ಯಾಣಿಯಲ್ಲಿ ನೀರು ಕುಡಿದು ಮುಳಬಾಗಿಲು ತಾಲೂಕಿನ ಆವಣಿಗೆ ಹೋದಾಗ ಅಲ್ಲಿ ಲವ-ಕುಶ ಈ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿದರಂತೆ. ಆ ಕುದುರೆಯು ತನ್ನ ಆಹಾರಕ್ಕಾಗಿ ದೊಡ್ಡ ಕಲ್ಲು ಬಂಡೆಯನ್ನು ತಿಂದು ಜೀರ್ಣಿಸಿಕೊಂಡ ಪ್ರತೀತಿ ಇದ್ದು, ಇಂದಿಗೂ ಸಹ ಕುದುರೆ ತಿಂದು ಬಿಟ್ಟಿರುವ ಕಲ್ಲನ್ನು ನೋಡಬಹುದಾಗಿದೆ. ಹೀಗೆ ತ್ರೇತಾಯುಗದ ಶ್ರೀರಾಮನ ಕುದುರೆ ಹಾಗೂ ದೇವತೆಗಳ ಪಾದಸ್ಪರ್ಶದಿಂದ ಪುಳಕಿತವಾದ ಸ್ಥಳವೇ ಈಗಿನ ಕೋಟಿಲಿಂಗೇಶ್ವರ ದೇವಾಲಯದ ಕಮ್ಮಸಂದ್ರವಾಗಿದೆ.  

ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕೋಟಿ ಶಿವಲಿಂಗಗಳ ಪ್ರತಿಷ್ಠಾಪನೆಗೆ ಇಲ್ಲಿನ ವಾಲ್ಮೀಕಿ ಆಶ್ರಮದ ಮತ್ತು ಬಲಿಜ ಜನಾಂಗದ ಪೀಠಾಧಿಪತಿಗಳಾಗಿರುವ ಶ್ರೀ ಸಾಂಭವ ಶಿವಮೂರ್ತಿ ಸ್ವಾಮೀಜಿ ಶ್ರಮಿಸಿದ್ದಾರೆ . ಕಮ್ಮಸಂದ್ರದಲ್ಲಿ ವಿಶ್ವವಿಖ್ಯಾತಿಯನ್ನು ಹೊಂದಿರುವ 108 ಅಡಿಗಳ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಭಕ್ತರಿಗೆ ಆಹ್ಲಾದಕರ ವಾತಾವರಣ ಮೂಡಿಸಿ ಭಕ್ತರ ಮನಸ್ಸಿಗೆ ಮನಃಶಾಂತಿ ತರುವ ಕೋಟಿ ಶಿವಲಿಂಗಗಳ ದರ್ಶನದ ಯೋಜನೆ ರೂಪಿಸಿದ್ದಾರೆ. ಇದಲ್ಲದೇ ಕೋಟಿಲಿಂಗೇಶ್ವರ ದೇವಾಲಯದ ಟ್ರಸ್ಟ್‌ನಿಂದ ಪ್ರತಿ ವರ್ಷವು ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು, ಪ್ರತಿ ತಿಂಗಳಿಗೊಮ್ಮೆ ಉಚಿತ ಆರೊಗ್ಯ ತಪಾಸಣಾ ಶಿಬಿರ, ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಶ್ರಮದಾನ ಮತ್ತು ಎನ್ನೆಸ್ಸೆಸ್ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.  

ಬೆಂಗಳೂರಿನಿಂದ 98 ಕಿ.ಮೀ. ಕೋಲಾರದಿಂದ 25 ಕಿ.ಮೀ. ದೂರದಲ್ಲಿರುವ ಕೋಟಿಲಿಂಗ ಪ್ರೇಕ್ಷಣೀಯ ಕ್ಷೇತ್ರ ಇದಾಗಿದೆ.  "ಸಹಸ್ರಾರು ಲಿಂಗಗಳ ಶಿವಾಲಯ, ಭಕ್ತಿ ಒಂದೇ ಶಿವನ ಪಾದಕ್ಕೆ ಎಂಬಂತೆ ದೇವಲೋಕವೇ ಸೃಷ್ಟಿ ಆದಂತೆ ಕಾಣುವ ಈ ಕೋಟಿಲಿಂಗೇಶ್ವರ ಭಕ್ತಿ , ಯುಕ್ತಿ, ಶಕ್ತಿಯ ಕೇಂದ್ರವಾಗಿದೆ .... ಬನ್ನಿ ಒಮ್ಮೆ ಕೋಟಿಲಿಂಗೇಶ್ವರನನ್ನು ನೋಡಲಿಕ್ಕೆ ..  

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು