ಕೋಟಿ-ಚೆನ್ನಯ (ನಾಟಕ)

ಕೋಟಿ-ಚೆನ್ನಯ (ನಾಟಕ)

ಪುಸ್ತಕದ ಲೇಖಕ/ಕವಿಯ ಹೆಸರು
ಇ. ಸೂರ್ಯನಾರಾಯಣ ರಾವ್
ಪ್ರಕಾಶಕರು
ಗಾಯತ್ರೀ ಪ್ರಕಾಶನ, ಅನಂತ ಪ್ರಕಾಶ, ಕಿನ್ನಿಗೋಳಿ-೫೭೪೧೫೦
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೧೧

ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರಾಗಿದ್ದ ಇ ಸೂರ್ಯನಾರಾಯಣ ರಾವ್ ಇವರು ತಮ್ಮ ವೃತ್ತಿ ಜೀವನದ ಸಮಯದಲ್ಲೇ ಬರೆದ ಸೊಗಸಾದ ನಾಟಕ ‘ಕೋಟಿ-ಚೆನ್ನಯ'. ಸೂರ್ಯನಾರಾಯಣ ರಾವ್ ಬಗ್ಗೆ ಅವರ ಮಗ ಇ ವಿಜಯರವಿ ಬಹಳ ಸೊಗಸಾಗಿ ಒಂದು ಬೆನ್ನುಡಿ ಬರೆದಿದ್ದಾರೆ. ಅದರಲ್ಲಿ “ನನ್ನ ತಂದೆಯವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಯಾವುದೇ ಅಭಿನಯ ಇರಲಿ, ಆ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ‘ನನಗಿನ್ನು ನೆನೆಯದೆ' ಸಾಮಾಜಿಕ ನಾಟಕವೊಂದರಲ್ಲಿ ಹೆಣ್ಣು ಮಕ್ಕಳ ತಂದೆಯಾಗಿ ಅವರ ಮದುವೆಗಾಗಿ ಪಡುವ ಕಷ್ಟ ಕೊನೆಗೆ ಹುಚ್ಚುಹಿಡಿಯುವ ಸನ್ನಿವೇಶ ನೋಡಿದೆ. ನಾವೆಲ್ಲ ಜೋರಾಗಿ ಅಳುವುದಕ್ಕೇ ಆರಂಭಿಸಿದ್ದೆವು. ಅಲೆಗ್ಸಾಂಡರ್ ನಂತರ ವೀರ ಪುರುಷರ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಅವರು ಆಗಾಗ ನಾಟಕ, ಕತೆ, ಕವಿತೆ ಬರೆಯುತ್ತಿದ್ದರೆಂದು ನನಗೆ ತಿಳಿದಿತ್ತು. ಆದರೆ ಓದುವಿಕೆ, ಕೆಲಸ, ಮದುವೆ, ಸಂಸಾರ ತಾಪತ್ರಯಗಳಲ್ಲಿ ಅದನ್ನು ಓದಲು ಆಗಲೇ ಇಲ್ಲ. ಇತ್ತೀಚಿನ ದಿನಗಳಲ್ಲಿ ನನ್ನ ತಮ್ಮ ಲಕ್ನೋದಿಂದ ಬಂದವನು ಅವರ ಕೃತಿಗಳನ್ನು ಓದಿ ಅಚ್ಚು ಹಾಕಿಸಬೇಕೆಂದು ಯೋಚಿಸಿದ. ನಮಗೂ ಅದು ಸರಿ ಅನ್ನಿಸಿತು. ಅದರ ಫಲವೇ ಈ ಕಿರು ನಾಟಕ ಜೀವ ತಳೆದು ನಿಂತಿದೆ.” ಎಂದು ಬರೆದು ತಮ್ಮ ತಂದೆಯವರನ್ನು ನೆನೆಸಿಕೊಂಡಿದ್ದಾರೆ.

ತುಳುನಾಡಿನ ವೀರ ಪುರುಷರಲ್ಲಿ ಕೋಟಿ-ಚೆನ್ನಯರು ಅಗ್ರಗಣ್ಯರು. ಇವರನ್ನು ದೈವ ಸ್ವರೂಪಿಯೆಂದು ಬಹಳ ಕಡೆ ಪೂಜಿಸುವರು. ಇವರ ಬಗ್ಗೆ ಅನೇಕ ಚಲನ ಚಿತ್ರಗಳು, ಪುಸ್ತಕಗಳು ಬಂದಿವೆ. ನಾಟಕ ರೂಪದಲ್ಲಿ ಕೋಟಿ ಚೆನ್ನಯರ ಕಥೆಯನ್ನು ಹೇಳುವ ಸಾಹಸ ಮಾಡಿದವರು ಸೂರ್ಯನಾರಾಯಣ ರಾವ್ ಇವರು. ಈ ನಾಟಕ ಕೃತಿಗೆ ‘ಮನದಾಳದ ಮಾತ'ನ್ನು ಬರೆದಿದ್ದಾರೆ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಅಬ್ದುಸ್ಸಮದ್ ಪಿ. ಇವರು ೩೫ ದೃಶ್ಯಗಳನ್ನು ಒಳಗೊಂಡಿರುವ 'ಕೋಟಿ ಚೆನ್ನಯ' ಕೃತಿ ಬಹಳ ಸೊಗಸಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಾಟಕದ ಪ್ರಾರಂಭಿಕ ಪುಟಗಳಲ್ಲಿ ಇದರಲ್ಲಿ ಬರುವ ಸುಮಾರು ೬೦ಕ್ಕೂ ಅಧಿಕ ಪಾತ್ರಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಇದರಿಂದ ನಾಟಕವನ್ನು ರಂಗಸ್ಥಳಕ್ಕೆ ತರಲು ಬಹಳ ಸುಲಭವಾಗಿದೆ. ಅನಂತ ಪ್ರಕಾಶನದ ಕೊಡೆತ್ತೂರು ಸಚ್ಚಿದಾನಂದ ಉಡುಪ ಇವರು ಈ ನಾಟಕ ಪುಸ್ತಕವನ್ನು ಪ್ರಕಟಿಸುವ ಸಾಹಸ ಮಾಡಿದ್ದಾರೆ. ಸುಮಾರು ೬೦ ಪುಟಗಳ ಈ ಪುಟ್ಟ ನಾಟಕ ಕೃತಿಯನ್ನು ಬಹಳ ಸೊಗಸಾಗಿ ಓದಿ ಮುಗಿಸಬಹುದು. ತುಳು ನಾಡಿನ ಮಹಾನ್ ವೀರರಿಬ್ಬರ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಇದರಲ್ಲಿ ವರ್ಣಿಸಲಾಗಿದೆ.