ಕೋಟೆ ಕೊತ್ತಲಗಳೆಂದರೆ ನನಗಿಷ್ಟ!

ಕೋಟೆ ಕೊತ್ತಲಗಳೆಂದರೆ ನನಗಿಷ್ಟ!

ಕವನ

ಕೋಟೆ ಕೊತ್ತಲಗಳೆಂದರೆ ನನಗಿಷ್ಟ!

ಮನಸು ತುಂಬಿಬರುವುದು;

ಮನಸನೆಳವುದು;

ಭಾವ ಉಕ್ಕುವುದು;

ಏಕೋ ಗೊತ್ತಿಲ್ಲ ನಾ ಕಾಣೆ?

ಹೋರಾಟಗಳ ಸಂಕೇತವೆಂದೋ?

ಸಾವು-ನೋವುಗಳ, ನೆತ್ತರು ಹರಿದ ಜಾಗವೆಂದೋ?

ನಮ್ಮವರು ಪ್ರಾಣ ಆಹುತಿಯಾದ ಸ್ಥಳವೆಂದೋ?

ಕೋಟೆ-ಕೊತ್ತಲಗಳೆಂದರೆ

ಮನಸು ತುಂಬಿಬರುವುದು;

ಭಾವ ಉಕ್ಕುವುದು;

ಗತಕಾಲದ ನೆನಪೊಂದು

ಮನದ ಮುಂದೆ ಬಾರಲಾರದೆ

ಪ್ರೀತಿಯ ಭಾವವಾಗಿ ಹೊರಹೊಮ್ಮುತಿಹುದೋ ನಾ ಕಾಣೆ?

ಯಾವ ಯುದ್ಧದಲ್ಲೋ

ನನ್ನ ಭೂಮಿ,ನನ್ನ ಕೋಟೆ,

ನನ್ನವರಿಗಾಗಿ ಹೋರಾಡುತ್ತಾ ಮಡಿದನೇನೋ?

ಈ ಕೋಟೆ-ಕೊತ್ತಲಿನಲ್ಲಿ ನೆನಪು ಬಾರದು

ಭಾವ ಉಕ್ಕುವುದು;

ಕೋಟೆ,ರಾಜ್ಯ ಕೈತಪ್ಪಿಹೋಯಿತೋ?

ವೈರಿ ಪಡೆಯ ನಾಮಾವಶೇಷವಾಗಿ ಗೆಲುವು ನಮಗಾಯಿತೋ?

ಒಂದೂ ನೆನಪಿಲ್ಲ;

ತುಪಾಕಿ-ಪಿರಂಗಿಗಳ ಶಬ್ದ;

ಸಾವು-ನೋವುಗಳ ಚೀರಾಟ;

ರಣಕಹಳೆ ದುಂದುಬಿಯ ಮೊಳಗಾಟ;

ಮನದಲ್ಲಿ ಇನ್ನೂ ಹಸಿರಾಗಿದೆ

ಪೌರುಷವನೆ ತುಂಬುತಿಹುದು;

ಕಣ್ಣ ಮುಂದೆ ಯಾವಚಿತ್ರವೂ ಬಾರದೆ

ಮನದ ಪರದೆಯ ಹಿಂದೆ ಯಾವುದೋ ಶಕ್ತಿ ನರಳುವಂತೆ ಮಾಡುತ್ತಿದೆ

ಕೋಟೆ ಎಂದರೆ ಭಾವ ಉಕ್ಕುವುದು;

ಏನನ್ನೂ ಮಾತನಾಡದೆ ಸುಮ್ಮನೆ ನಿಂತಿರುವ ಕೋಟೆಯ ಗೋಡೆ,

ಮುರಿದು ಬಿದ್ದ ಪಿರಂಗಿ,ಬಾಗಿಲುಗಳೇ ಹೇಳಿ ನಾನಾರೆಂದು?

ಗುಂಡು,ಪಿರಂಗಿಗಳಿಗೆ ಎದೆಯ್ಯೊಡ್ಡಿದರೂ

ಅಚಲರಾಗಿ ಅಜೇಯರಾಗಿದ್ದೀರಿ;

ಗುಂಡೇಟುಗಳಿಂದ ಘಾಸಿಯಾದ ಜಾಗಗಳು;

ಪಿರಂಗಿಗಳ ಹೊಡೆತದಿಂದ ಮುರಿದು ಬಿದ್ದ

ಗೋಡೆ-ಚಾವಣಿಗಳು

ಎಲ್ಲವೂ ನೆನಪಿದೆ

ಆದರೆ ನಾನಾರೆಂದು ಮಾತ್ರ ಮರೆತಿದೆ;

ಕೋಟೆ ಎಂದರೆ ಭಾವ ಉಕ್ಕುವುದು;

 

Comments