ಕೋಡಗನ ಕೋಳಿ ನುಂಗಿ

ಕೋಡಗನ ಕೋಳಿ ನುಂಗಿ

ಪುಸ್ತಕದ ಲೇಖಕ/ಕವಿಯ ಹೆಸರು
ಮಹಾದೇವ ಬಸರಕೋಡ
ಪ್ರಕಾಶಕರು
ಬಸರಕೋಡ ಪ್ರಕಾಶನ, ಅಮೀನಗಢ, ಬಾಗಲಕೋಟೆ ಜಿಲ್ಲೆ
ಪುಸ್ತಕದ ಬೆಲೆ
ರೂ. 150.00, ಮುದ್ರಣ: 2022

“ಕೋಡಗನ ಕೋಳಿ ನುಂಗಿ"ಯ ಲೇಖಕ ಮಹಾದೇವ ಬಸರಕೋಡ ಅವರ ಕೃತಿಯ ಲೇಖನಗಳಲ್ಲಿ ಒಂದು ಸ್ಪಷ್ಟ ಚಿಂತನೆಯಿದೆ. ಅವರ ಯೋಚನೆಗಳಲ್ಲಿ ದ್ವಂದ್ವ, ತರ್ಕ ಕಾಣುವುದಿಲ್ಲ. ಲೇಖಕರ ದೃಷ್ಟಿಕೋನವು ಜನರ ಬದುಕಿನ ಯೋಚನೆಗಳ ಕಡೆ ಗಮನ ಹರಿಸದೇ, ಅವರ ಅಂತರಂಗದ ಕಲ್ಮಷಗಳಿಗೆ ಕನ್ನಡಿ ಇಟ್ಟು ಅದರ ಪರಿಶುದ್ಧತೆಯ ಕಡೆಗೆ ಗಮನ ಹರಿಸಿದೆ. ನಮ್ಮಲ್ಲಿನ ಅಂಧತ್ವ, ಮೂಢನಂಬಿಕೆಗಳು, ಆಚರಣೆಗಳು ತೊಲಗಿ ಸಮಾಜಮುಖಿ ಜಾಗೃತಿಯ ಚಿಂತನೆಯಲ್ಲಿ ಮುಳುಗಬೇಕು ಎಂಬ ತಿಳಿಮಾತನ್ನು ಅವರು ಈ ಕೃತಿಯ ಮೂಲಕ ಮನವರಿಕೆ ಮಾಡಿ ಕೊಟ್ಟಿದ್ದಾರೆ" ಎನ್ನುತ್ತಾರೆ ಲೇಖಕ ಶ್ರೀಧರ ಬನವಾಸಿ. ಅವರು ಲೇಖಕ ಮಹಾದೇವ ಬಸರಕೋಡ ಅವರ 'ಕೋಡಗನ ಕೋಳಿ ನುಂಗಿ' ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ ಇಲ್ಲಿ ನೀಡಲಾಗಿದೆ...

“ಇತಿಹಾಸ ಮತ್ತೆ ಮತ್ತೆ ಯಾವ ಸ್ವರೂಪದಿಂದಾದರೂ ಪುನರಾವರ್ತನೆಯಾಗುತ್ತಲೇ ಇರುತ್ತದೆ. ನಾವೆಲ್ಲರೂ ಪಠ್ಯದ ಮೂಲಕ ಈ ಹಿಂದೆ ಓದಿದ ರಕ್ತಕ್ರಾಂತಿಯ ಹೋರಾಟ ಘಟನೆಗಳು, ಯುದ್ಧಕಾಲದ ಮಾರಣ ಹೋಮಗಳು... ಘೋರ ಕಾಯಿಲೆಗಳಿಂದಾದ ವಿದ್ರಾವಕ ಸಾವುಗಳು, ನಡೆದ ಕ್ರೌರ್ಯ, ದುರ್ವಿಧಿಗಳೆಲ್ಲವೂ ಈಗ ಕಣ್ಣಮುಂದೆ ನಡೆಯುತ್ತಿದೆ. ಅನ್ನುವ ಆಹುತಿಯು ಎಲ್ಲೆಲ್ಲೂ.

ಕೋವಿಡ್ ರೋಗಾಣುವಿನ ರಾಕ್ಷಸ ನರ್ತನವು ಜಗತ್ತಿನ ಮೂಲೆಮೂಲೆಯಲ್ಲಿ ನಡೆದಿದೆ. ಅದು ಮನೆ ಮನಗಳಲ್ಲಿ. 'ಸಾವಿಲ್ಲದ ಮನೆಯ ಸಾಸಿವೆಯ ತಾರವ್ವ' ಎಂದು ಬುದ್ಧ ಕಿಸಾಗೋತಮಿಯ ಅಜ್ಞಾನವನ್ನು ದೂರಮಾಡಲು ಹೇಳಿದಂತೆ, ಇಂದು ನಮ್ಮೊಳಗಿನ ಕ್ರೂರ ನರಭಾವದ ಮುಖವಾಡವು ಸಾವಿನ ನೆಪ ಹೇಳಿ ಕಳಚುತ್ತಿದೆ ಎಂಬ ಸೈರಣೆಯ ಪಾಠವು. ಕೊರೊನಾದಿಂದಾದ ಸಾವು ನೋವಿನ ಆಕ್ರಂದನದ ಮುಂದೆ ರಾಜಕೀಯ ಹಾಗೂ ವೈದ್ಯಕೀಯ ವ್ಯವಸ್ಥೆಯು ಶರಣಾಗಿ ನಿಸ್ಸಾಹಯಕನಂತೆ ಕೈಕಟ್ಟಿ ನಿಂತಿರುವುದನ್ನು ಜಗತ್ತು ಕಂಡಿದೆ. ಜೀವಸಂಕುಲವೇ ಇಂದಿಗೂ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಪ್ರಾಣ ಉಳಿಸಿಕೊಳ್ಳಲು ದೇಶ ಖಂಡಗಳು ಸಹಾಯಕ್ಕಾಗಿ ಒಂದಕ್ಕೊಂದು ಕೈ ಚಾಚುತ್ತಿವೆ.ಯಾವ ಕ್ಷಣದಲ್ಲಿ ಮತ್ತೆ ಎಲ್ಲೆಡೆ ಅಂಧಕಾರವು ಮೂಡಲಿದೆ ಎಂಬ ಆತಂಕವಿದೆ. ಜಗತ್ತಿನ ಅಳಿವು ಹೀಗೂ ಆಗುತ್ತಿದೆಯೇ ಎಂಬ ಯಕ್ಷಪ್ರಶ್ನೆಯ ನಡುವೆ ಕೌಟುಂಬಿಕ ಮೌಲ್ಯಗಳು ಹೇಗೆ ಹೋರಾಡುತ್ತಿವೆ. ನೋವಿನಿಂದ ನಲುಗುತ್ತಿವೆ ಎಂಬ ಅರಿವು ಮೂಡಿಸುವ ಸಂದರ್ಭದ ನಡುವೆ ಅಂತಿಮವಾಗಿ ಸದ್ಧರ್ಮ ಮಾನವೀಯತೆಗೆ ಬೆಲೆ ಬಂದಂತಾಗಿದೆ ಎಂಬ ತಿಳಿವಳಿಕೆ ಹೇಳುವ ಕಾಲಘಟ್ಟವೂ ಕೂಡ ಇದಾಗಿದೆ. ಜಗತ್ತಿನ ಸಾವು ನೋವುಗಳಿಗೆ ಯುದ್ಧ, ಅಣ್ವಸ್ತ್ರ, ಪ್ರಕೃತಿ ವಿಕೋಪಗಳೇ ಆಗಬೇಕಿಲ್ಲ. ಕೋವಿಡ್ ಎಂಬ ಒಂದು ರೋಗಾಣು ಸಾಕೆಂಬ ಪರಿಸ್ಥಿತಿಯೇ ಸ್ಪಷ್ಟ ಪುರಾವೆಯಾಗಿದೆ. ಇಂದು ಮಾನವನ ಹೋರಾಟ ಸಾವಿನಂಚಿಗೆ ಬಂದು ನಿಂತಿದೆ. ಕೋವಿಡ್ ಕಾಲಘಟ್ಟದಲ್ಲಿ ಸುತ್ತಮುತ್ತ ಎತ್ತ ನೋಡಿದರೂ ಮರಣ ಮೃದಂಗ... ಕಾಯಿಲೆಯ ಸೊಂಕು ಪ್ರತಿಯೊಬ್ಬರನ್ನು ಕೊಲ್ಲುವ ಛಾಯೆ! ಡಾರ್ವಿನ್ ತಿಳಿಸಿದಂತೆ ಅಳಿವು ಉಳಿವಿಗಾಗಿ ಹೋರಾಟವೆಂಬಂತಾಗಿತ್ತು ಲೋಕದ ಪರಿಸ್ಥಿತಿ!

ಹಿರಿಯ ಆಂಗ್ಲಕವಿ ಪಿ.ಬಿ. ಶೆಲ್ಲಿ ಎರಡು ನೂರು ವರ್ಷಗಳ ಹಿಂದೆಯೇ 'Poets are the unacknowledged legislators of the world' ಎಂಬ ನುಡಿಯನ್ನು ಹೇಳಿದ್ದ. ಸಾಹಿತಿಗಳು/ ಕವಿಗಳು ಎಂದರೆ ಲೋಕದ ಅನಧಿಕೃತ ಶಾಸನಕರ್ತರು. ಪಿ. ಬಿ. ಶೆಲ್ಲಿಯ ಈ ಮಾತಿನಂತೆಯೇ ಆಯಾ ಕಾಲಘಟ್ಟದಲ್ಲಿ ಜಗತ್ತಿನಲ್ಲೆಡೆ ಇದ್ದ ವಿಷಮ ಪರಿಸ್ಥಿತಿಯನ್ನು ಆಯಾ ಲೇಖಕರು ದಾಖಲಿಸುವ ಪ್ರಯತ್ನವನ್ನು ಅಂದಿನಿಂದ ಇಂದಿನವರೆಗೆ ಮಾಡುತ್ತಲೇ ಬಂದಿದ್ದಾರೆ. ಮೊದಲನೇ ಮತ್ತು ಎರಡನೇ ಮಹಾಯುದ್ಧದ ತೀವ್ರಘಟ್ಟದ ಪರಿಸ್ಥಿತಿಯನ್ನು ಜಗತ್ತಿನ ಅನೇಕ ದಾರ್ಶನಿಕರು ತಮ್ಮ ಸಾಹಿತ್ಯಕ ಕೃತಿಗಳ ಮೂಲಕ ಇತಿಹಾಸವನ್ನು ದಾಖಲಿಸಿದ್ದಾರೆ. ಇಂದಿಗೂ ಆ ಲೇಖಕರ ಕೃತಿಗಳೇ ಜಗತ್ತಿನ ಅಂದಿನ ಕರಾಳ ನೆನಪಿಗೆ ಸಾಕ್ಷಿಯಾಗುತ್ತವೆ. ಇಂತಹದ್ದೇ ವಿಷಮ, ಕಠಿಣ ಪರಿಸ್ಥಿತಿಯನ್ನು ಜಗತ್ತು 'ಕೋವಿಡ್' ರೋಗಾಣುವಿನ ಮೂಲಕ ಎದುರಿಸಿತ್ತು.

ಇದು ಮಾನವ ದೇಹವನ್ನು ಪ್ರವೇಶಿಸಿ ಮೂರ್ನಾಲ್ಕು ವರ್ಷಗಳು ಕಳೆದಿದ್ದರೂ, ಇಂದಿಗೂ ಅದರ ತೀವ್ರತೆಯ ಹೋರಾಟ ಕಡಿಮೆಯಾಗಿಲ್ಲ. ಆದರೂ, ಕೋವಿಡ್‌ನಿಂದ ಸಂಕಷ್ಟಕ್ಕೆ ಈಡಾದ ಈ ಲೋಕದ ಪರಿಸ್ಥಿತಿಯನ್ನು ದಾಖಲಿಸುವುದು ಅತ್ಯಗತ್ಯವಾಗಿದೆ. ಇಲ್ಲವಾದರೆ, ಮುಂದಿನ ತಲೆಮಾರು ನಾವು ಮಾಡುವ ತಪ್ಪುಗಳಿಗೆ ಪಾಠ ಕಲಿಯುವುದಾದರೂ ಹೇಗೆ? ಈ ನಿಟ್ಟಿನಲ್ಲಿ ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಲೇಖಕರು, ಸಾತ್ವಿಕ ಚಿಂತಕರು ಆದಂತಹ ಮಹಾದೇವ ಬಸರಕೋಡ ಅವರು 'ಕೋಡಗನ ಕೋಳಿ ನುಂಗಿ' ಎಂಬ ಕೃತಿಯ ಮೂಲಕ ತಾವು ಕಂಡ ಕೋವಿಡ್ ಕರಿನೆರಳಿನ ಅನೇಕ ಮುಖಗಳನ್ನು ಪರಿಚಯಿಸಿದ್ದಾರೆ. ಇದು ಐತಿಹಾಸಿಕವಾಗಿ ದಾಖಲಾಗುವಂತಹ ಕೃತಿಗಳಲ್ಲಿ ಒಂದಾಗಲಿದೆ. ಕೊರೊನಾ ಕಾಯಿಲೆಯನ್ನೊಳಗೊಂಡ ಸಂದಿಗ್ಧ ಕಾಲದ ನೈಜ ಚಿತ್ರಣದ ಸಾಕ್ಷೀಭೂತನಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಹಾದೇವ ಬಸರಕೋಡ ಅವರು ಮಾಡಿದ್ದಾರೆ. ಈ ಕೃತಿಯ ಮೂಲಕ ಜಗತ್ತನ್ನು ಆವರಿಸಿದ್ದ ಕೆಟ್ಟ ಮೌನದ ನಡುವೆ ನಮ್ಮ ಸುತ್ತಮುತ್ತಲೂ ನಡೆದಿರುವ ಸಾವು ನೋವಿನ ತರಹೇವಾರಿ ಕಹಿ ಘಟನೆಗಳನ್ನು ಮುಂದಿನ ತಲೆಮಾರಿಗೆ ತಿಳಿಸುವ, ಐತಿಹಾಸಿಕವಾಗಿ ಅದನ್ನು ದಾಖಲಿಸುವ ನಿಟ್ಟಿನಲ್ಲಿ ಈ ಕೃತಿ ಮಹತ್ವಪೂರ್ಣ ಅಂಶಗಳನ್ನುಒಳಗೊಂಡಿದೆ.

ಲೇಖಕ ಮಹಾದೇವ ಬಸರಕೋಡ ಅವರ ಕೃತಿಯ ಲೇಖನಗಳಲ್ಲಿ ಒಂದು ಸ್ಪಷ್ಟ ಚಿಂತನೆಯಿದೆ. ಅವರ ಯೋಚನೆಗಳಲ್ಲಿ ದ್ವಂದ್ವ, ತರ್ಕ ಕಾಣುವುದಿಲ್ಲ. ಲೇಖಕರ ದೃಷ್ಟಿಕೋನವು ಜನರ ಬದುಕಿನ ಯೋಚನೆಗಳ ಕಡೆ ಗಮನ ಹರಿಸದೇ, ಅವರ ಅಂತರಂಗದ ಕಲ್ಮಷಗಳಿಗೆ ಕನ್ನಡಿ ಇಟ್ಟು ಅದರ ಪರಿಶುದ್ಧತೆಯ ಕಡೆಗೆ ಗಮನ ಹರಿಸಿದೆ. ನಮ್ಮಲ್ಲಿನ ಅಂಧತ್ವ, ಮೂಢನಂಬಿಕೆಗಳು, ಆಚರಣೆಗಳು ತೊಲಗಿ ಸಮಾಜಮುಖಿ ಜಾಗೃತಿಯ ಚಿಂತನೆಯಲ್ಲಿ ಮುಳುಗಬೇಕು ಎಂಬ ತಿಳಿಮಾತನ್ನು ಅವರು ಈ ಕೃತಿಯ ಮೂಲಕ ಮನವರಿಕೆ ಮಾಡಿ ಕೊಟ್ಟಿದ್ದಾರೆ.

ಈ ಕೃತಿಯಲ್ಲಿ, ಲೇಖಕರು ವಿವಿಧ ಮೌಲ್ಯಗಳಿಗೆ ಸಂಬಂಧಿಸಿದಂತೆ ತಮ್ಮ ವಿಚಾರಧಾರೆಗಳನ್ನು ಪ್ರಚುರ ಪಡಿಸಿದ್ದಾರೆ. ಅದರಂತೆ, ಲೋಕ ಕಾಳಜಿಯ ಚಿಂತನೆಗೆ ಪೂರಕ ಬರೆಹಗಳಾದ ಮದ್ಯಪಾನ ನಿಷೇಧ: ಹೊಸ ಎಚ್ಚರದ ನಿಯಂತ್ರಣ ಅಗತ್ಯ' 'ಕೊರೋನಾ ಮತ್ತು ಕನ್ನಡದ ಕಾಳಜಿ' ಸಮಾಜಕ್ಕೆ ಎಚ್ಚರಿಕೆ ಹಾಗೂ ಕವಿಮಾತನ್ನು ತಿಳಿಸುವ ಕೊರೊನಾ ಜತೆ ಸಂಗಡಿಸಿಕೊಳ್ಳಬೇಕಾದ ಬದುಕಿನ ಸುತ್ತಮುತ್ತ', 'ಮಾನವ ಪ್ರೀತಿಯನ್ನು ಅನಾವರಣಗೊಳಿಸಿದ ಕೊರೊನಾ ಕಾಲದ ಕೆಲವು ಬಿಂಬಗಳು', 'ನಿಸರ್ಗ ಪ್ರೀತಿ ನಮ್ಮ ಬದುಕಿನ ಬಹುದೊಡ್ಡ ಮೌಲ್ಯವಾಗಲಿ...' 'ನಮ್ಮಂಗಳದ ಕಿರಿಹೂವ ಮರೆಯದಿರೋಣ..', 'ಕೋಡಗನ ಕೋಳಿ ನುಂಗುವ ಮುನ್ನ...', 'ಬೀಗುವಿಕೆಯಿಂದ ಬಾಗುವಿಕೆಯನ್ನು ಕಲಿಸಿದ ಕೊರೊನಾ... 'ತಮಂಧ ಕಳೆದು ತೇಲಿ ಬರಲಿ ಬೆಳಕಿನ ದೋಣಿ' – ಈ ಲೇಖನಗಳು ಬದುಕಿಗೆ ಬೇಕಾದ ಬೌದ್ಧಿಕತೆಯನ್ನು ತಿಳಿಸುವ ವಿಚಾರಗಳಾಗಿವೆ. ಅದರಂತೆ, ಕೆಟ್ಟ ನಂಬಿಕೆ, ಆಚಾರ ವಿಚಾರಗಳಿಗೆ ಕುರಿತಾದ 'ನಮ್ಮನ್ನು ನಿಯಂತ್ರಿಸುವ ಕುರುಡು ನಂಬಿಕೆಗಳಿಂದ ಬೇಕಿದೆ ಬಿಡುಗಡೆ'. ಕೋವಿಡ್ ಸಂಕಷ್ಟದ ನಡುವೆ ಅತೀವ ಕಷ್ಟ ಪರಿಪಾಟಲು ಅನುಭವಿಸಿದ ಶಿಕ್ಷಕ ವರ್ಗದವರಿಗೆ ಬಳಲಿದ ಶಿಕ್ಷಕರಲ್ಲಿ ಬಲ ತುಂಬುವ ಅನಿವಾರ್ಯತೆ' ಮತ್ತು 'ಕಲಿಕೆಯಲ್ಲಿನ ಕೊರತೆ ನೀಗುವಲ್ಲಿನ ಜವಾಬ್ದಾರಿ ಮತ್ತು ನಾವು...' ಲೇಖನಗಳು ಶಿಕ್ಷಕರ ಮೌಲ್ಯ ಮತ್ತು ಮಾರ್ಗದರ್ಶನವನ್ನು ನೀಡುವ ಕುರಿತಾಗಿವೆ.

ಹೀಗೆ 'ಕೋಡಗನ ಕೋಳಿ ನುಂಗಿ' ಕೃತಿಯು, 18 ವಿವಿಧ ವಸ್ತು ವಿಚಾರಗಳ ಲೇಖನಗಳನ್ನು ಒಳಗೊಂಡಿದೆ. ಅಂತೆಯೇ, ಪ್ರತಿ ಬರೆಹಗಳಲ್ಲಿ ಮಾನವೀಯತೆಯ ಪಾಠವಿದೆ. ಬದುಕಿಗೆ ವಿಜ್ಞಾನ ಮತ್ತು ಅಧ್ಯಾತ್ಮದ ಜ್ಞಾನ ಎರಡೂ ಬೇಕೆಂದು ತಿಳಿಸುವ ಲೇಖಕರು ಅದಕ್ಕಾಗಿ ನಮ್ಮಲ್ಲಿ ಇತಿಹಾಸ ಪ್ರಜ್ಞೆ ಸತ್ಯಸಂಧತೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಒತ್ತಿ ಹೇಳಿದ್ದಾರೆ.

ಅಂತಿಮವಾಗಿ, ಪ್ರಕೃತಿಯ ತಾಳ್ಮೆಯ ನಡುವೆ ಮಾನವನ ಪೈಶಾಚಿಕ ಮನೋವೃತ್ತಿ, ರಾಜಕೀಯ ಕೃತ್ರಿಮತೆ, ಸಾಮಾಜಿಕ ಅಸ್ಥಿರತೆ, ಆರ್ಥಿಕ ಪತನ, ವೈದ್ಯಕೀಯ ಲೋಕಕ್ಕೆ ಸವಾಲೆಸೆದ ಈ ಮಹಾಮಾರಿಯ ರೌದ್ರನರ್ತನದ ನೇರ ನಿರೂಪಣೆಯು ಲೇಖಕರ ಪ್ರತಿ ಬರೆಹಗಳಲ್ಲಿ ವ್ಯಕ್ತವಾಗಿದೆ. ಲೋಕ ಎದುರಿಸಿದ ಹೋರಾಟದ ಕಠಿಣ ಚಿತ್ರಣವು ಭವಿಷ್ಯದ ಬೆಳವಣಿಗೆಯಲ್ಲಿ ನಮ್ಮ ಪ್ರಾಮಾಣಿಕ ಜವಾಬ್ದಾರಿಯನ್ನು ತಿಳಿಸುತ್ತದೆ. ಈ ಕೃತಿಯ ಹೊರತಾಗಿ ನಾನು ಅಧ್ಯಯನ ಮಾಡಿದ ಮಹಾದೇವ ಬಸರಕೋಡ ಅವರ ಬಹುತೇಕ ವಿಚಾರಗಳು ಏಕಾಂತದಿಂದ ಲೋಕಾಂತದೆಡೆಗೆ ಪಯಣಿಸುವ ದಾರಿಗೆ ಬೆಳಕು ಚೆಲ್ಲುತ್ತವೆ. ಅವರು ಕೇವಲ ಒಂದು ಕೊಠಡಿಗೆ ಸೀಮಿತವಾಗಿ ಪಾಠ ಮಾಡುವ ಶಿಕ್ಷಕರಲ್ಲ; ಅವರೊಬ್ಬ ಇಡೀ ಸಮಾಜದ ಸ್ವಾಸ್ಥ್ಯಕ್ಕೆ ಪಠ್ಯವಾಗುವ ಪ್ರಕೃತಿ ಎಂಬುದು ನನ್ನ ಮನದಿಂಗಿತವಾಗಿದೆ.” ಎಂದಿದ್ದಾರೆ.

-ಸಂತೋಷ್ ಕುಮಾರ್, ಸುರತ್ಕಲ್