ಕೋಡಗನ ಕೋಳಿ ನುಂಗಿತ್ತಾ… ಮರ್ಮವ ತಿಳಿಯೋಣ

ಕೋಡಗನ ಕೋಳಿ ನುಂಗಿತ್ತಾ… ಮರ್ಮವ ತಿಳಿಯೋಣ

ಕೋಡಗನ ಕೋಳಿ ನುಂಗಿತ್ತಾ

ನೋಡವ್ವ ತಂಗಿ……..

ಕೋಡಗನ ಕೋಳಿ ನುಂಗಿತ್ತ

ಇದು ಶಿಶುನಾಳ ಶರೀಫರ ರಚನೆಯೊಂದರ ಮೊದಲ ಸಾಲುಗಳು. ಕರ್ನಾಟಕ ಮಾತ್ರವಲ್ಲ, ವಿಶ್ವದಾದ್ಯಂತ ರಸಾಸ್ವಾದಿಸುವ ವಿವಿಧ ಭಾಷಿಕರೂ ಆಲಿಸಿ ಆನಂದಿಸುವ ಹಾಡಿದು. ಅಶ್ವತ್ಥರ ಧ್ವನಿಯಲ್ಲಂತೂ ಕಿವಿಗೆ ರಸಾಯನ, ಮನಸ್ಸಿಗೆ ಸೀಕರಣೆ. ಈ ಹಾಡನ್ನು ಮೇಲ್ನೋಟದಿಂದ ಸಂಗೀತವಾಗಿ ರಮಿಸಿ ಆನಂದಿಸಬಹುದು. ಹಾಡಿನೊಳಗೆ ಇಳಿದವನಿಗೆ ಹೊಸದೊಂದು ಲೋಕವು ತೆರೆದಂತೆ ಭಾಸವಾಗುತ್ತದೆ. ಈ ಹಾಡಿನ ಬಗ್ಗೆ ಅನೇಕರು ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಅವರ ವ್ಯಾಖ್ಯಾನಗಳು ಬಹಳ ವಿಸ್ತಾರದ ಮೈದಾನ. ಆ ಮೈದಾನದಿಂದ ಕೆಲವಂಶಗಳನ್ನು ಭಟ್ಟಿಯಿಳಿಸಿ ಮಕ್ಕಳಿಗೆ ನೀಡೋಣವೆನಿಸಿತು. ಮೊದಲ ಸಾಲುಗಳನ್ನು ಇಲ್ಲಿ ವಿವರಿಸಿದ್ದೇನೆ. ಉಳಿದವುಗಳನ್ನು ಮುಂದಿನ ವಾರಗಳಲ್ಲಿ ಓದುವಿರಂತೆ. 

ಕೋಡಗನೆಂದರೆ ಸಾಮಾನ್ಯ‌ ಪರಿ ಭಾಷೆಯಲ್ಲಿ ಹೇಳುವುದಾದರೆ ಮಂಗ ಅಥವಾ ಕಪಿ. ಆಧ್ಯಾತ್ಮಿಕ ಭಾಷೆಯಲ್ಲಿ ಮುಖ್ಯಪ್ರಾಣ ಅಥವಾ ಶ್ರೀರಾಮ ಭಕ್ತ ವೀರ ಹನುಮಾನ್. ಶಿಶುನಾಳರು ಕೋಡಗನನ್ನು ಸಾಮಾನ್ಯ ವಾನರನಾಗಿಯೇ ಈ ಸಾಲುಗಳಲ್ಲಿ ಉಲ್ಲೇಖಿಸಿದ್ದಾರೆ. ಮರದಿಂದ ಮರಕ್ಕೆ ಹಾರುವ, ನಿಂತಲ್ಲ್ಲೇ ನಿಲ್ಲಲಾರದ, ಕುಳಿತಲ್ಲೇ ಕುಳಿತಿರಲಾರದ ಚಂಚಲ ಗುಣದ ಮಂಗನೇ ಈ “ಕೋಡಗ”. ಕ್ಷಣ ಮಾತ್ರವೂ ಏಕಾಗ್ರತೆಯಿಂದ ಇರಲಾಗದ ಮಂಗನಿಂದ ಸಾಧಿಸ ಬಹುದಾದ ಸ್ಥಿರವಾದ ಅಥವ ಮಹತ್ತರವಾದ ಕೆಲಸ ನಾಕಾಣೆ. ಕೋಡಗನೊಂದಿಗೆ ಶಿಶುನಾಳರು ಕೋಳಿಯೊಂದನ್ನು ಜೋಡಿಸಿಕೊಂಡಿದ್ದಾರೆ. ಮಂಗನಿಗೆ ಹೋಲಿಸಿದರೆ ಕೋಳಿ ಚಂಚಲವಲ್ಲ. ಸ್ಥಾಯಿತ್ವ ಮತ್ತು ದಾಯಿತ್ವ ಎರಡೂ ಕೋಳಿಗಿದೆ. ಅದು ಬೆಳಗಾದುದನ್ನು ತಿಳಿಸುವ ಗಡಿಯಾರ. ಬೆಳಗಾಗುವುದೆಂದರೆ ನಿದ್ದೆಯಿಂದ ಹೊರ ಬಂದು ಪ್ರಪಂಚದ ಚಟುವಟಿಕೆಗಳ ಅರಿವನ್ನು ಹೊಂದುವುದರ ಮತ್ತು ಹೊಸತನದೊಂದಿಗೆ ದೈನಂದಿನ ಕೆಲಸಗಳಲ್ಲಿ ತೊಡಗುವುದರ ಸುಸಂದರ್ಭ. ಅದರಿಂದಾಗಿಯೇ ಬೆಳಕನ್ನು ಜ್ಞಾನ ಅಥವಾ ತಿಳುವಳಿಕೆ ಎನ್ನುವರು. ಕತ್ತಲಿನಿಂದ ಬೆಳಕಿನತ್ತ ನಮ್ಮನ್ನು ಕೋಳಿಯು ಕರೆತರುತ್ತದೆ ಎಂದರೆ ಕೋಳಿಯನ್ನು ಶಿಶುನಾಳರು ಜ್ಞಾನದ ಸಂಕೇತವಾಗಿ ನಿರೂಪಿಸಿದ್ದಾರೆ.

ಕೋಡಗ ಅಸ್ಥಿರತೆ ಅಥವಾ ಚಂಚಲತೆಯಾದರೆ ಕೋಳಿಯು ಸ್ಥಿರತೆ, ಬೆಳಕು ಮತ್ತು ಜ್ಞಾನದ ಪ್ರತಿ. ಕೋಡಗನ ಕೋಳಿ ನುಂಗಿತು ಎಂದರೆ ನಮ್ಮ ಮರ್ಕಟತನವನ್ನು ಜ್ಞಾನವು ಇಲ್ಲಗೊಳಿಸುತ್ತದೆ ಎಂದರ್ಥ. ಮನುಷ್ಯನ ಬೌದ್ಧಿಕ ಮತ್ತು ವೈಚಾರಿಕ ಅಭಿವ್ಯಕ್ತಿ ಜ್ಞಾನದಂದ ಸಮರ್ಪಕವಾಗುತ್ತದೆ. ಹಿರಿಯರು ಹೇಳಿರುವ ಜ್ಞಾನ ಹೀನನು ಪಶು ಎಂಬ ಮಾತು ಜ್ಞಾನದ ಮಹತ್ವವನ್ನು ಸಮರ್ಥಿಸುತ್ತದೆ. ನಮ್ಮ ಜ್ಞಾನದ ಆಳ ಹರವುಗಳು ಅಗಾಧವಾದಂತೆ ಪ್ರಬುದ್ಧತೆಯೂ ಬಲಿಯುತ್ತದೆ. ಮರ್ಕಟತನ ಲವಲೇಷವೂ ಗೋಚರಿಸದು. ಮರ್ಕಟ ಮನಕ್ಕೆ ಜ್ಞಾನಾಂಕುಶ ಅತ್ಯಗತ್ಯ. ಮಾನವನ ಎಲ್ಲ ಅಪಸವ್ಯಗಳಿಗೆ, ಅಪವ್ಯಸನಗಳಿಗೆ ಮರ್ಕಟಮನವೂ ಕಾರಣ ಎಂಬುದನ್ನು ಮರೆಯುವಂತಿಲ್ಲ. ಆದುದರಿಂದ ಜ್ಞಾನಿಗಳಾಗೋಣ, ಸುಜ್ಞಾನಿಗಳಾಗೋಣ……

…… ಮುಂದೆಯೂ ಇದೆ

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ