ಕೋತಿ ಮತ್ತು ಗೋಧಿ ಹುಗ್ಗಿ

ಕೋತಿ ಮತ್ತು ಗೋಧಿ ಹುಗ್ಗಿ

ಪುಸ್ತಕದ ಲೇಖಕ/ಕವಿಯ ಹೆಸರು
ರಾಜಾ ಎಂ.ಬಿ.
ಪ್ರಕಾಶಕರು
ವಿಶ್ವಖುಷಿ ಪ್ರಕಾಶನ, ನವನಗರ, ಬಾಗಲಕೋಟೆ-೫೮೭೧೦೩
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ: ೨೦೨೨

ಯುವ ಕವಿ ರಾಜಾ ಎಂ ಬಿ ಇವರು ಮಕ್ಕಳಿಗಾಗಿ ಶಿಶು ಗೀತೆಗಳ ಸಂಕಲನ “ಕೋತಿ ಮತ್ತು ಗೋಧಿ ಹುಗ್ಗಿ" ಯನ್ನು ಹೊರತಂದಿದ್ದಾರೆ. ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಕವಿತೆಗಳನ್ನು ಬರೆಯುವುದು ಒಂದು ಸವಾಲಿನ ಕೆಲಸ. ಏಕೆಂದರೆ ಅವರಿಗೆ ಅರ್ಥವಾಗುವ ಪದಗಳನ್ನೇ ಬಳಸಿ ಕವಿತೆಯನ್ನು ಹೆಣೆಯುವುದು ಬಹಳ ಕಷ್ಟ. ಆದರೆ ರಾಜಾ ಎಂ ಬಿ ಇವರು ಬರೆದ ಕವಿತೆಗಳು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತಿದೆ. ಈ ಕವಿತಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ಎಚ್ ಎಸ್ ಸತ್ಯನಾರಾಯಣ. ಇವರು ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

“ಹಾವೇರಿಯ ಯುವ ಕವಿ ರಾಜಾ ಎಂ.ಬಿ.ಯವರು ಶಿಶು ಸಾಹಿತ್ಯ ರಚನೆಗೆ ಮನಸ್ಸು ಮಾಡಿರುವುದು ಅತ್ಯಂತ ಸಂತೋಷದ ಸಂಗತಿ. ಸಾಮಾನ್ಯವಾಗಿ ವಯಸ್ಸಾದ ಮೇಲೆ ಮಕ್ಕಳಿಗಾಗಿ ಬರೆದವರು ಹೆಚ್ಚು. ರಾಜಾ ಅವರು ಮಾತ್ರ ಕವಿತಾ ರಚನೆಯ ಆರಂಭದ ಹೊಸ್ತಿಲಲ್ಲೇ ಮಕ್ಕಳಿಗಾಗಿ 'ಕೋತಿ ಮತ್ತು ಗೋಧಿ ಹುಗ್ಗಿ' ರಚಿಸಿಕೊಟ್ಟು ತಮ್ಮ ವಿಶೇಷ ಆಸಕ್ತಿಯನ್ನು ಮೆರೆದಿರುವುದು ಅಭಿನಂದನೀಯ. ನಾವು ಬರೆಯುವುದನ್ನು ಓದುವವರು ಚಿಕ್ಕಮಕ್ಕಳು ಎಂದು ಯೋಚಿಸಿದಾಗ ಸ್ವಲ್ಪ ಹೆದರಿಕೆ, ಹಿಂಜರಿಕೆ ಮೂಡುವುದು ಸಹಜ. ಶಿಶು ಸಾಹಿತ್ಯ ರಚನೆ ಮಾಡುವವರಿಗೆ ವಿಶೇಷ ಶ್ರದ್ಧೆ, ತಾಳ್ಮೆ ಮತ್ತು ಪ್ರತಿಭೆಗಳು ಬೇಕು. ಇವೆಲ್ಲವೂ ರಾಜಾ ಅವರ ವ್ಯಕ್ತಿತ್ವದಲ್ಲಿ ತುಂಬ ಸಹಜವಾಗಿ ಬೆರೆತು ಹೋಗಿವೆಯಾದ್ದರಿಂದ ಅವರು ನಮ್ಮ ನಾಡಿನ ಮಕ್ಕಳು ಸರಾಗವಾಗಿ ಓದಬಲ್ಲ ರಚನೆಗಳನ್ನು ಈ ಸಂಕಲನದಲ್ಲಿ ಕೊಟ್ಟಿದ್ದಾರೆ. ರಂಜನೆ, ಚಿಂತನೆಗಳೆರಡನ್ನೂ ಹದವಾಗಿ ಬೆರೆಸಿ, ಅವಕ್ಕೆ ತಕ್ಕ ಭಾಷೆ, ಪ್ರಾಸ, ಲಯಗಳನ್ನು ಹೊಂದಿಸಿ ಬರೆದಿರುವ ಈ ಗೀತೆಗಳು ನಮ್ಮ ಮಕ್ಕಳ ಭಾವಕೋಶವನ್ನೂ ಬುದ್ಧಿಕೋಶವನ್ನೂ ಸಮರ್ಪಕವಾಗಿ ಪೊರೆಯಬಲ್ಲವು.‌

ಕಥನವನ್ನು ಆಕರ ಬಳಸಿಕೊಳ್ಳುವ ಈ ಕವಿ ಜಾಣ್ಮೆ ಓದುಗರ ಗಮನ ಸೆಳೆಯುವಂತದ್ದು. ಸಂಕಲನದ ಶೀರ್ಷಿಕೆ ಹೊಂದಿರುವ 'ಕೋತಿ ಮತ್ತು ಗೋಧಿ ಹುಗ್ಗಿ' ಎಂಬ ರಚನೆಯು ತಮಾಷೆಯ ಕಥೆಯಾಗಿದ್ದು, ಚಿಕ್ಕ ಮಕ್ಕಳಿಗೆ ರಂಜನೆ ಒದಗಿಸುವುದರ ಜೊತೆಗೆ ಅವರ ಮನಸ್ಸನ್ನು ಉಲ್ಲಾಸಗೊಳಿಸಬಲ್ಲವು. ಹಸಿದ ಹುಲಿಯ ಸಿಟ್ಟಿಗೆ ಹೆದರಿ ಓಡುವ ಮಂಗನನ್ನು ಕಲ್ಪಿಸಿಕೊಂಡು ಮಕ್ಕಳು ನಗದೆ ಇರರು. ಮಕ್ಕಳ ಮುಖದಲ್ಲಿ ನಗುವನ್ನು ಮೂಡಿಸಿದಾಕ್ಷಣ ಕವಿತೆಯ ರಚನೆಯು ಸಾರ್ಥಕ್ಯ ಹೊಂದಬಲ್ಲದು.ಇಂತಹ ಅನೇಕ ರಚನೆಗಳು ಈ ಸಂಕಲನದಲ್ಲಿವೆ. 'ಕೆಂಬಣ್ಣದ ನಾಯಿ' ಕೂಡ ನೆನಪಿನಲ್ಲುಳಿಯುವ ರಚನೆ. ತಂದೆ ತಂದ ಕೆಂಬಣ್ಣದ ನಾಯಿ ನಿಧಾನವಾಗಿ ಮನೆಯವರೆಲ್ಲರ ಪ್ರೀತಿ ಗೆಲ್ಲುವುದರ ಜೊತೆಗೆ ಮನೆಯ ಮುಖ್ಯ ಸದಸ್ಯನೇ ಆಗಿಬಿಡುತ್ತದೆ. ಮಾಸ್ಕ್ ಹಾಕಿಕೊಳ್ಳದಿದ್ದರೆ ನಮಗೇ ರಿಸ್ಕು ಎಂಬ ಸಕಾಲಿಕ ಸಂದೇಶವನ್ನು ಕೆಂಬಣ್ಣದ ನಾಯಿಯ ಮೂಲಕ ಕೊಡುವ ಕವಿಯು ಯುದ್ಧ ಬೇಡ, ಹಿಂಸೆ ಬೇಡ ಎಂಬ ಮಾತಿನ ಮೂಲಕ ಯುದ್ಧವು ಜೀವ ವಿರೋಧಿ ಎಂಬ ನಿಲುವನ್ನು ತೋರಲು ಮರೆತಿಲ್ಲ. ಗುಟಕಾ ಮುಂತಾದ ವ್ಯಸನಗಳಿಂದ ನಮ್ಮ ಮಕ್ಕಳು ಮುಕ್ತರಾಗಬೇಕೆನ್ನುವ ಧೋರಣೆ ಕೂಡ ಮರೆಯಾಗಿಲ್ಲ. ನೀತಿ ಪಾಠ ಹೇಳುವ ಮನೆಯ ನಾಯಿಯ ಮೂಲಕವೇ ಮಕ್ಕಳ ಮನಕ್ಕೆ ವಿಚಾರಗಳನ್ನು ತುಂಬಲು ಕವಿ ಪ್ರಯತ್ನಿಸಿರುವುದನ್ನು ಮೆಚ್ಚದಿರಲಾಗದು. ಹಾಗೆ ನೋಡಿದರೆ ಮಕ್ಕಳಿಗೆ ಸಾಕು ಪ್ರಾಣಿಗಳಲ್ಲಿ ತುಂಬ ಪ್ರಿಯವಾದುದೆಂದರೆ ನಾಯಿ ಮರಿಗಳೆ. ಆದ್ದರಿಂದ ಈ ಸಂಕಲನದಲ್ಲಿ ನಾಯಿಮರಿ ಕೇಂದ್ರವಾಗುಳ್ಳ ರಚನೆಗಳು ಹೆಚ್ಚಿವೆಯೆನಿಸುತ್ತದೆ. ಒಂದೊಂದರ ವಸ್ತುವೂ ವೈವಿಧ್ಯತೆಯಿಂದ ಕೂಡಿವೆಯಾದ್ದರಿಂದ ಎಲ್ಲ ನಾಯಿ ಪದ್ಯಗಳೂ ಹಳೆಯ ರಚನೆಯಾದ "ನಾಯಿ ನಾಯಿ ಮರಿ ತಿಂಡಿ ಬೇಕೆ?" ಎಂಬುದರ ಹೊಸ ರೂಪಗಳಂತಿವೆ.

"ಅಪ್ಪ ನಾನು ಹಾರಬಲ್ಲೆ" ಎಂಬ ಕವಿತೆಯಂತೂ ಚಿಕ್ಕಮಕ್ಕಳಲ್ಲಿ ಏನಾದರೂ ಸಾಧಿಸಬೇಕು, ಸಾಧಿಸಬಲ್ಲೆವೆಂಬ ಆತ್ಮಸ್ಥೈರ್ಯ ಮೂಡಿಸುವಂತಿದೆ. ಬಾನ ಬಯಲಾಟದ ಸುಖವನ್ನು ಅನುಸರಿಸಬೇಕಾದರೆ ಎದುರಾಗುವ ಎಲ್ಲ ಎಡರು ತೊಡರುಗಳನ್ನು ದಾಟಿ ಹಾರುವ ಛಲಬೇಕೆಂಬುದನ್ನು ಅಪ್ಪ ಮಗುವಿಗೆ ಹೇಳವ ಮಾತುಗಳಲ್ಲಿ ಕಾಣಿಸಿರುವುದು ಸೊಗಸಾಗಿದೆ. ಮಕ್ಕಳಿಗೂ ಭವಿಷ್ಯದ ಹಾದಿ ಹೂವಿನ ಹಾಸಿಗೆಯಲ್ಲ, ಮುಳ್ಳುಕಲ್ಲುಗಳ ರೂಪದಲ್ಲಿ ಬೆಟ್ಟದಷ್ಟು ಕಷ್ಟಗಳು ನುಸುಳಬಹುದು. ಧೈರ್ಯದಿಂದ ಅವನ್ನೆಲ್ಲ ಎದುರಿಸುತ್ತಲೇ ಬದುಕನ್ನು ಕಟ್ಟಿ ಕೊಳ್ಳಬೇಕೆಂಬ ಕಿವಿಮಾತನ್ನು ಕವಿಯು ಹೇಳಿರುವುದು ಗಮನಾರ್ಹ.

ಈ ಸಂಕಲನದಲ್ಲಿ ವೈವಿಧ್ಯಮಯವಾದ ರಚನೆಗಳಿವೆಯೆಂಬುದಕ್ಕೆ "ನಮ್ಮ ಮನೆಯ ಪುಟ್ಟ ರಾಜ" ಎಂಬ ರಚನೆಯನ್ನು ಪರಿಶೀಲಿಸಬಹುದು. ಇಲ್ಲಿ ಬರುವ ಪುಟ್ಟರಾಜ ಬೇಗ ಎದ್ದು ಸ್ನಾನ ಮಾಡಿ ಗುಡಿಗೆ ಹೊರಡುತ್ತಾನೆ. ಹಾದಿಯಲ್ಲಿ ಹಾರುವ ಹಕ್ಕಿಯನ್ನು, ಈಜುವ ಮೀನುಗಳನ್ನು ನಗಿಸುತ್ತಾನೆ. ಬೀಸೋ ಗಾಳಿಯಲ್ಲಿ ತೇಲುತ್ತಾನೆ, ಹರಿಯುವ ಹಳ್ಳವನ್ನು ಹಾರಿ ಜಿಗಿಯುತ್ತಾನೆ. ದೇವರನ್ನು ನೋಡಲು ಹೋಗುವ ದಾರಿಯಲ್ಲಿ ಪ್ರಕೃತಿಯೊಂದಿಗಿನ ರಾಜನ ಒಡನಾಟ ತುಂಬ ಮುಖ್ಯವಾದುದು. ನಿಸರ್ಗದ ಮಡಿಲಲ್ಲಿ ಸಹಜವಾಗಿ ಅರಳುವ ಮಗುವು ನಿಸರ್ಗದಿಂದ ದೂರಾದಷ್ಟೂ ಕೃತಕವಾಗಿ ಬೆಳೆಯುತ್ತದೆಂಬುದು ಕವಿಗೆ ಗೊತ್ತಿದೆ. ಅಲ್ಲದೆ, ಅಕ್ಷರದ ಸಂಪರ್ಕ ಮಕ್ಕಳಿಗೆಷ್ಟು ಅಗತ್ಯವೆಂಬುದನ್ನೂ ಇಲ್ಲಿ ವಿವರಿಸುತ್ತಾ ಪ್ರತ್ಯಕ್ಷವಾದ ಶಿವಶಕ್ತಿ ಕೂಡ ಪುಟ್ಟರಾಜನಿಗೆ ಅಕ್ಷರ ಸಂಕಲ್ಪವನ್ನೇ ಮನದಲ್ಲಿ ತುಂಬುವಂತೆ ಕಲ್ಪಿಸಿರುವಲ್ಲಿ ರಾಜಾ ಎಂ.ಬಿ.ಯವರ ಹೆಚ್ಚುಗಾರಿಕೆಯಿದೆ. ಪ್ರಕೃತಿಯ ಒಡನಾಟ ಮತ್ತು ಅಕ್ಷರಗಳೆರಡೂ ಮಕ್ಕಳನ್ನು ದೈವಿಕತೆಯತ್ತ ಒಯ್ಯುವ ಸಾಧನಗಳೆಂಬುದನ್ನು ಮನದಟ್ಟು ಮಾಡುವ ಕವಿತೆಯಿದು. ಇಂತಹ ರಚನೆಗಳು ತಾನೆ ಈಗಿನ ಮಕ್ಕಳಿಗೆ ಬೇಕಿರುವುದು? ಇವತ್ತಿನ ತಂದೆ ತಾಯಿಗಳು ಮಕ್ಕಳನ್ನು ಪ್ರಕೃತಿಯ ಮಡಿಲಲ್ಲಿ ಆಡಲು ಬಿಡುತ್ತಿಲ್ಲ, ಒಂದು ಮರ ಹತ್ತಲೂ ಬಿಡುತ್ತಿಲ್ಲ, ಒಡನಾಡಿಗಳೊಡನೆ ಆಡಲು ಬಿಡುತ್ತಿಲ್ಲ ಇಂತಹ ಅನೇಕ ಅಪಸವ್ಯಗಳ ನಡುವೆ ನಮ್ಮ ಮಕ್ಕಳು ಬಾಲ್ಯವನ್ನು ದಾಟಬೇಕಾಗಿದೆ. ಇಂತಹ ಹೊತ್ತಿನಲ್ಲಿ ರಾಜಾ ಅವರ ರಚನೆಗಳು ಮತ್ತೆ ನಿಸರ್ಗದ ಮಡಿಲಿಗೆ ಮಕ್ಕಳನ್ನು ಹಾಕಲು ಉತ್ಸುಕವಾಗಿರುವುದು ಮಹತ್ವದ ಸಂಗತಿ.

ತಾನು ಅಕ್ಷರದಿಂದ ವಂಚಿತನಾದರೂ ತನ್ನೂರಿನ ಮಕ್ಕಳಿಗೆ ಅಂತಹ ಸ್ಥಿತಿಯೊದಗದಿರಲೆಂದು ಶಾಲೆ ಕಟ್ಟಿಸಲು ಹೆಣಗಿದ, ಕಿತ್ತಲೆಹಣ್ಣು ಮಾರಿ ಶಾಲೆ ನಿರ್ಮಿಸಿ ಪದ್ಮಶ್ರೀ ನಾಗರೀಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮಾದರಿ ವ್ಯಕ್ತಿ "ನಮ್ಮ ಪ್ರೀತಿಯ ಹಾಜಬ್ಬ" ಮಕ್ಕಳಿಗೆ ಮಾದರಿಯಾಗಬಲ್ಲ ತಾತ. ಸರಳ ಪದಗಳಲ್ಲಿ ಅವರ ಸಾಧನೆಯನ್ನು ಪರಿಚಯಿಸುವಲ್ಲಿ ಕವಿ ವಹಿಸಿರುವ ಎಚ್ಚರ ಕೂಡ ಗಮನಾರ್ಹವಾಗಿದೆ. ಇಬ್ಬರ ಜಗಳದಲ್ಲಿ ಬೆಕ್ಕುಗಳ ಕಣ್ಣುತಪ್ಪಿಸಿ ಮಂಗ ಬೆಣ್ಣೆಯನ್ನು ಮಂಗಮಾಯ ಮಾಡುವುದು, ನೀರಿಗಾಗಿ ಕಾಗಿ ಬಿಂದಿಗೆಯಲ್ಲಿ ಕಲ್ಲು ತುಂಬಿಸುವುದು, ಇಲಿಯು ಸಿಂಹವನ್ನು ಬಲೆಯಿಂದ ಪಾರು ಮಾಡುವುದು, ನೀರಿನಲ್ಲಿ ತನ್ನದೇ ಪ್ರತಿಬಿಂಬ ಕಂಡು ಬೊಗಳಿದ ನಾಯಿಯು ರೊಟ್ಟಿತುಂಡನ್ನು ಕಳೆದುಕೊಳ್ಳುವುದು, ಬಂಗಾರದ ಮೊಟ್ಟೆಗಳಿಗಾಗಿ ಕೋಳಿಯನ್ನು ಕೊಯ್ದು ಪಶ್ಚಾತ್ತಾಪ ಪಡುವುದಯ ಮುಂತಾದ ಕಥೆಗಳನ್ನು ನಾವು ಬಲ್ಲೆವಾದರೂ ಇಂದಿನ ಮಕ್ಕಳಿಗೆ ಅರ್ಥಮಾಡಿಸಲು ಅವನ್ನು ಮತ್ತೆ ಸರಳವಾಗಿ ನಿರೂಪಿಸುವ ಪ್ರಯತ್ನವನ್ನು ರಾಜಾ ಅವರು ಮಾಡಿದ್ದಾರೆ. ಒಳ್ಳೆಯ ಕಥೆಗಳನ್ನು ಮತ್ತೆ ಮತ್ತೆ ಹೇಳಬೇಕೆಂಬುದರ ಅನಿವಾರ್ಯತೆಯನ್ನವರು ಬಲ್ಲವರಾಗಿದ್ದಾರೆ.

ಇವುಗಳ ಜೊತೆಗೆ ನೆನೆಯಬೇಕಾದ ಮತ್ತೆ ಕೆಲವು ಕವಿತೆಗಳಿವೆ. ಒಂದು ದಿನ ನಾನು ಕಾಡಿಗೆ ಹೋದೆನು, ಹಬ್ಬದ ಸಂಭ್ರಮ, ಕಪ್ಪೆಗಳ ಮದುವೆ ಮುಂತಾದವು ಆ ರೀತಿಯವು. ಇದರಲ್ಲಿ ಮೊದಲ ಕವಿತೆ ನಶಿಸಿ ಹೋಗಿರುವ ಕಾಡಿನ ಬಗ್ಗೆ ಮಕ್ಕಳ ಕುತೂಹಲವನ್ನು ಕೆರಳಿಸುವಂತಿದೆ. ಕಾಡಿನ ಜೇನು, ಆನೆ, ನವಿಲು, ಕರಡಿ, ಆಮೆ, ಗಿಳಿಮರಿ, ಕೋಗಿಲೆ ಮುಂತಾದವೆಲ್ಲ ಕಾಡೆಂದರೆ ಭಯಂಕರವಲ್ಲವೆಂಬ ಸಕಾರಾತ್ಮಕ ಭಾವನೆ ತುಂಬುವುದರ ಜೊತೆಗೆ, ಕಾಡನ್ನು ಕಣ್ಣಲ್ಲಿ ಕಾಣಲಾರದ ನಗರಕೇಂದ್ರಿತ ವಲಯದ ಮಕ್ಕಳಿಗೆ ಕವಿತೆಯಲ್ಲೇ ಕಾಡಿನ ದರ್ಶನ ಮಾಡಿಸಿದ್ದಾರೆ. ಕಪ್ಪೆಗಳ ಮದುವೆ ಕವಿತೆಯು ಮಳೆಗಾಗಿ ಆಚರಿಸುವ ಮೌಢ್ಯಾಚರಣೆಯ ಬಗ್ಗೆ ಗಮನ ಸೆಳೆದು, ಮಳೆಗಾಗಿ ಕಾಡನ್ನು ಬೆಳೆಸುವುದು ಮನುಷ್ಯರ ಆದ್ಯ ಕರ್ತವ್ಯವಾಗಬೇಕೇ ಹೊರತು ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವುದಲ್ಲ ಎಂಬ ವಿವೇಕವನ್ನು ಹೇಳುವುದು ಸಣ್ಣ ಸಂಗತಿಯಲ್ಲ. ಮೌಢ್ಯವನ್ನು ನಂಬದೆ, ಪ್ರಗತಿಪರವಾದ ಆಲೋಚನೆ ಬೆಳೆಸುವ ಹೊಣೆ ಕವಿಯದೆಂಬುದನ್ನು ರಾಜಾ ಅವರು ಅರಿತಿರುವುದು ಸಂತೋಷ ತರುವ ಸಂಗತಿ.

ಹಾಗೆ ನೋಡಿದರೆ ದೊಡ್ಡವರೇ ಇಂತಹ ಪುಸ್ತಕಗಳನ್ನು ಮೊದಲು ಓದಬೇಕು. ಅವರು ಓದಿದರೆ ತಾನೆ ಮಕ್ಕಳಿಗೆ ಇಂತಹ ಪುಸ್ತಕವನ್ನು ಈ ಕಾರಣಕ್ಕೆ ಓದು ಎಂದು ತಮ್ಮ ಮಕ್ಕಳಿಗೆ ಹೇಳುವುದು! ದೊಡ್ಡವರು ಓದದಿದ್ದರೆ ಮಕ್ಕಳು ಖಂಡಿತಾ ಓದುವುದಿಲ್ಲ. ನಾವು ಓದದೆ ಮಕ್ಕಳು ಓದರೆಂದು ದೂರುವುದು ಎಷ್ಟು ಸರಿ? ರಾಜಾ ಅವರ ಈ ಕೃತಿಯನ್ನು ದೊಡ್ಡವರು-ಚಿಕ್ಕವರು ಎಲ್ಲರೂ ಓದಲಿ. ಈ ಕೃತಿಗೆ ನಮ್ಮ ನಾಡ ಮಕ್ಕಳ ಮನದಲ್ಲಿ ಜಾಗ ಪಡೆಯುವ ಶಕ್ತಿ ಖಂಡಿತ ಇದೆ. ಇಂಥ ಇನ್ನಷ್ಟು ಕೃತಿಗಳನ್ನು ರಾಜಾ ಅವರು ನೀಡುವ ಮೂಲಕ ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕಿರುವ ಬಹುದೊಡ್ಡ ಪರಂಪರೆಯನ್ನು ಮುಂದುವರೆಸುವ ಶಕ್ತಿ ರಾಜಾ ಅವರಂತಹ ಹೊಸ ತಲೆಮಾರಿನ ಲೇಖಕರಿಗೆ ಪ್ರಾಪ್ತವಾಗಲಿ.”