ಕೋಲಾದ ಪ್ರತಿಸ್ಫರ್ಧಿ ಯಾವುದು?
"ಏನು ಮಾತನಾಡುತ್ತಿದ್ದೀರಿ ನೀವೆಲ್ಲ?" ಎಂಬ ಪ್ರಶ್ನೆ ಆ ಸಭೆಯಲ್ಲಿ ಇದ್ದವರನ್ನೆಲ್ಲ ಬೆಚ್ಚಿ ಬೀಳಿಸಿತು. ಯಾಕೆಂದರೆ ಪ್ರಶ್ನೆ ಕೇಳಿದವನು ಬಹುರಾಷ್ಟ್ರೀಯ ಕಪ್ಪುಕೋಲಾ ಕಂಪೆನಿಯನ್ನು ವಾರದ ಮುಂಚೆ ಸೇರಿದ್ದ ಯುವಕ. ವಯಸ್ಸಿನಲ್ಲಿ ಅಲ್ಲಿದ್ದ ಎಲ್ಲರಿಗಿಂತ ಕಿರಿಯ.
ಕಳೆದ ಒಂದು ತಾಸಿನಿಂದ ಆ ಸಭೆಯಲ್ಲಿ ಬಿರುಸಿನ ಚರ್ಚೆ. ಎದುರಾಳಿ ಕಂಪೆನಿಯ ಕೆಂಪುಕೋಲಾಕ್ಕಿಂತ ಕಪ್ಪುಕೋಲಾವನ್ನು ಜಾಸ್ತಿ ಮಾರಾಟ ಮಾಡುವುದು ಹೇಗೆ? ಎಂಬ ಬಗ್ಗೆ. ಹಲವು ಐಡಿಯಾಗಳ, ಸಲಹೆಗಳ ಪರಿಶೀಲನೆ. ಮಾರಾಟಗಾರರಿಗೆ ಹೆಚ್ಚು ಕಮಿಷನ್ ಪಾವತಿ ಮತ್ತು ಹೆಚ್ಚು ಕೋಲಾ ಕುಡಿಯುವವರಿಗೆ ಲಾಟರಿ ಎತ್ತಿ ಬಹುಮಾನ ಇತ್ಯಾದಿ ಪ್ರಸ್ತಾಪಗಳು. ಇದನ್ನೆಲ್ಲ ಕೇಳಿಕೇಳಿ ಬೇಸತ್ತ ಯುವಕ ಎದ್ದು ನಿಂತು, ಏರಿದ ಸ್ವರದಲ್ಲಿ ಆ ಪ್ರಶ್ನೆ ಕೇಳಿದ್ದ.
"ಮಾರಾಟದಲ್ಲಿ ನಮ್ಮ ಪ್ರತಿಸ್ಫರ್ಧಿ ಕೆಂಪುಕೋಲಾ ಎಂದು ಭಾವಿಸಿ ನೀವೆಲ್ಲ ಚರ್ಚೆ ಮಾಡುತ್ತಿದ್ದೀರಿ, ಹಾಗಂತ ಹೇಳಿದವರು ಯಾರು?" ಎನ್ನುತ್ತಾ ಯುವಕ ಅಲ್ಲಿದ್ದ ಹಳೆಯ ತಲೆಗಳತ್ತ ಒಮ್ಮೆ ಕಣ್ಣು ಹಾಯಿಸಿದ. ಅಲ್ಲಿ ಅಚ್ಚರಿಯ ಮೌನ ನೆಲೆಸಿತ್ತು. "ನಮ್ಮ ಕಪ್ಪುಕೋಲಾದ ಪ್ರತಿಸ್ಫರ್ಧಿ ಕೆಂಪುಕೋಲಾ ಅಲ್ಲ" ಎಂದು ದೃಢವಾದ ಸ್ವರದಲ್ಲಿ ಹೇಳಿದ ಯುವಕ ಒಮ್ಮೆ ತನ್ನ ಮಾತು ನಿಲ್ಲಿಸಿದ.
"ನಿನ್ನ ಪ್ರಕಾರ ನಮ್ಮ ಪ್ರತಿಸ್ಫರ್ಧಿ ಯಾರು?" ಎಂದು ತಲೆ ನರೆತ ಒಬ್ಬರು ತಡೆಯಲಾಗದೆ ಕೇಳಿಯೇ ಬಿಟ್ಟರು. ಆ ಯುವಕ ಒಮ್ಮೆ ಜೋರಾಗಿ ಉಸಿರೆಳೆದುಕೊಂಡು ಹೇಳಿದ, "ನಮ್ಮ ಪ್ರತಿಸ್ಫರ್ಧಿ ನೀರು." ಅಲ್ಲಿದ್ದ ಎಲ್ಲರೂ ಇನ್ನೊಮ್ಮೆ ಬೆಚ್ಚಿ ಬಿದ್ದರು.
ಆ ಯುವಕ ತನ್ನ ಮಾತು ಮುಂದುವರಿಸಿದ. "ಹೌದು, ನಮ್ಮ ಪ್ರತಿಸ್ಫರ್ಧಿ ನೀರು. ಜನರು ನೀರಿನ ಬದಲಾಗಿ ನಮ್ಮ ಕಪ್ಪುಕೋಲಾ ಕುಡಿಯುವಂತೆ ಮಾಡೋದು ಹೇಗೆ? ಎಂದು ನಾವು ಯೋಚನೆ ಮಾಡಬೇಕೇ ವಿನಃ ಕೆಂಪುಕೋಲಾದ ಮಾರಾಟದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ."
ವ್ಯಾಪಾರಿ ಮನಸ್ಸು ಹೇಗೆ ಯೋಚನೆ ಮಾಡುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಇದರ ಸತ್ಯಾಸತ್ಯತೆ ಏನೇ ಇರಲಿ. ಈ ರೀತಿಯ ಮಾರಾಟತಂತ್ರಗಳು ಬಳಕೆಗೆ ಬರುತ್ತಿವೆಯೇ? ಎಂಬುದರ ಬಗ್ಗೆ ನಾವು ಎಚ್ಚರದಿಂದಿರಬೇಕಾಗಿದೆ.
"ಒಂದು ಪಿಜ್ಜಾ ಖರೀದಿಸಿದರೆ ಒಂದು ಕೋಲಾ ಉಚಿತ", "ಈ ಪಿಜ್ಜಾ ಜೊತೆ ಈ ಕೋಲಾ ರುಚಿಕರ" ಎಂಬ ಜಾಹೀರಾತುಗಳನ್ನು ನೀವೆಲ್ಲ ಗಮನಿಸಿರಬೇಕು. ಅದರ ಹಿಂದಿರುವ ಮಾರಾಟತಂತ್ರದ ಬಗ್ಗೆ ಯೋಚಿಸಿರಿ.
ಕೆಲವು ಹೋಟೆಲುಗಳಿಗೆ ಹೋಗಿ ಕುಳಿತರೆ, ಮುಂಚಿನಂತೆ ನಿಮ್ಮೆದುರು ನೀರು ತುಂಬಿದ ಗ್ಲಾಸ್ಗಳನ್ನಿಟ್ಟು "ಏನು ಬೇಕು?" ಎಂದು ಸರ್ವರ್ ಕೇಳೋದಿಲ್ಲ. ಬದಲಾಗಿ, "ಕೋಲಾ ಬೇಕೇ? ಬಿಸ್ಲೇರಿ ಬೇಕೇ?" ಎಂದು ಕೇಳುತ್ತಾನೆ. ಗಮನಿಸಿದ್ದೀರಾ?
ಮನೆಗೆ ಬಂದವರಿಗೆ ಮೊದಲಾಗಿ ಕುಡಿಯಲು ನೀರು ಕೊಡುವುದು ನಮ್ಮ ಸಂಸ್ಕೃತಿಯ ದ್ಯೋತಕ. ಇವತ್ತಿಗೂ ದಾರಿಹೋಕರಿಗೆ ಧರ್ಮಾರ್ಥವಾಗಿ ಕುಡಿಯುವ ನೀರು ಕೊಡುವ ಅರವಟ್ಟಿಗೆಗಳು ಹಲವಾರು ಊರುಗಳಲ್ಲಿವೆ. ನಮ್ಮ ಪೂರ್ವಿಕರು ಜನಸಾಮಾನ್ಯರ ಬಳಕೆಗಾಗಿ ಬಾವಿ ತೋಡಿಸುವುದು, ಕೆರೆ ಕಟ್ಟಿಸುವುದು ಪುಣ್ಯದ ಕೆಲಸವೆಂದು ಭಾವಿಸಿದ್ದರು. ಅಂತಹ ಸಂಸ್ಕೃತಿಯನ್ನು ಮುಂದುವರಿಸುವುದು ನಮ್ಮ ಕರ್ತವ್ಯ.
ನೀರಿಗೆ ಪ್ರತಿಸ್ಫರ್ಧಿಗಳನ್ನು ಹುಟ್ಟು ಹಾಕಿ ಲಾಭದ ಕೊಳ್ಳೆ ಹೊಡೆಯುವ ಹುನ್ನಾರಗಳನ್ನು ಹೂತು ಹಾಕೋಣ. ಮನೆಗೆ ಬಂದವರಿಗೆ ನೀರು ಕೊಡುವ ನಮ್ಮ ತಲೆತಲಾಂತರದ ಸಜ್ಜನಿಕೆ ಮುಂದುವರಿಸೋಣ.