ಕೋಲಾರದ ಶ್ರೀ ಗರುಡ ಸ್ವಾಮಿ ದೇವಸ್ಥಾನ

ಕೋಲಾರದ ಶ್ರೀ ಗರುಡ ಸ್ವಾಮಿ ದೇವಸ್ಥಾನ

ಹಿಂದೂ ಪುರಾಣಗಳ ಪ್ರಕಾರ ಮಹಾ ವಿಷ್ಣುವಿನ ವಾಹನ ಗರುಡ ಎಂದು ಬಹುತೇಕರಿಗೆ ತಿಳಿದೇ ಇದೆ. ಆದರೆ ಈ ಗರುಡನಿಗೆ ಒಂದು ದೇವಸ್ಥಾನವಿದೆ ಮತ್ತು ಅಲ್ಲಿ ದೇವರ ರೂಪದಲ್ಲಿ ಅವನಿಗೆ ಪೂಜೆ ಸಲ್ಲಿಕೆಯಾಗುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿಯದೇ ಇರಬಹುದು. ಗರುಡನನ್ನು ಇಲ್ಲಿ ಶ್ರೀ ಗರುಡಸ್ವಾಮಿ ಅಥವಾ ಗರುಡೇಶ್ವರ ಸ್ವಾಮಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಗರುಡನನ್ನೇ ಮುಖ್ಯದೇವರಾಗಿ ಆರಾಧಿಸುವ ಈ ಏಕೈಕ ದೇವಸ್ಥಾನ ಇರುವುದು ನಮ್ಮ ಕರ್ನಾಟಕ ರಾಜ್ಯದಲ್ಲೇ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಎಂಬಲ್ಲಿ ಶ್ರೀ ಗರುಡ ಸ್ವಾಮಿ ದೇವಸ್ಥಾನ ಇದೆ. ಕೊಲದೇವಿ ಎಂಬ ಗ್ರಾಮ ಮುಳಬಾಗಿಲು ತಾಲೂಕಿನಿಂದ ೧೪ ಕಿ.ಮೀ. ದೂರವಿದೆ. ಇದರ ಐತಿಹಾಸಿಕ ಮಹತ್ವವನ್ನು ನಾವೀಗ ತಿಳಿದುಕೊಳ್ಳೋಣ.

ರಾಮ, ಸೀತಾ ಮತ್ತು ಲಕ್ಷ್ಮಣರು ತಮ್ಮ ವನವಾಸದ ಅವಧಿಯಲ್ಲಿ ಕಾಡಿನಲ್ಲಿ ವಾಸ ಮಾಡುತ್ತಿರುವ ಸಮಯದಲ್ಲಿ ರಾವಣನು ಸನ್ಯಾಸಿಯ ವೇಷ ಧರಿಸಿ ಸೀತಾ ಮಾತೆಯನ್ನು ಅಪಹರಿಸುತ್ತಾನೆ. ರಾವಣನು ಆಕಾಶ ಮಾರ್ಗದಲ್ಲಿ ತನ್ನ ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಬಲವಂತವಾಗಿ ಕರೆದುಕೊಂಡು ಹೋಗುವಾಗ ಹಕ್ಕಿಗಳ ರಾಜ ಜಟಾಯು (ಗರುಡ) ಅವನ ಹಾದಿಯನ್ನು ಅಡ್ಡಗಟ್ಟುತ್ತಾನೆ. ರಾವಣನಿಗೂ ಜಟಾಯುವಿಗೂ ಕಾಳಗ ನಡೆಯುತ್ತದೆ. ಮಾಯಾವಿ ರಾವಣನ ಸಾಮರ್ಥ್ಯದ ಎದುರು ಜಟಾಯು ಸೋಲುತ್ತಾನೆ. ರಾವಣ ತನ್ನ ಹರಿತವಾದ ಖಡ್ಗದ ಸಹಾಯದಿಂದ ಜಟಾಯುವಿನ ರೆಕ್ಕೆಯನ್ನು ಕತ್ತರಿಸಿಬಿಡುತ್ತಾನೆ. ಆ ಸಮಯದಲ್ಲಿ ಜಟಾಯು ಭೂಮಿಗೆ ಬಿದ್ದ ಸ್ಥಳವೇ ಕೊಲದೇವಿ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆ ಜಟಾಯು ಅಥವಾ ಗರುಡ ಪಕ್ಷಿಯು ಸೀತಾ ಮಾತೆಯನ್ನು ರಕ್ಷಿಸಲು ತನ್ನ ಪ್ರಾಣವನ್ನು ಕಳೆದುಕೊಂಡಿತು. ಅದರ ಬಲಿದಾನದ ನೆನಪಿಗೆ ಇಲ್ಲಿ ಗರುಡ ಸ್ವಾಮಿಯ ದೇವಸ್ಥಾನವನ್ನು ನಿರ್ಮಿಸಲಾಗಿದೆ. ರಾವಣನು ಜಟಾಯುವನ್ನು ಕೊಂದ (ಕೊಲ್ಲು = ಕೊಲ) ಸ್ಥಳವಾದುದರಿಂದ ಈ ಊರಿಗೆ ಕೊಲದೇವಿ ಎಂದು ಹೆಸರು ಬಂದಿದೆಯಂತೆ. 

ದ್ವಾಪರಾ ಯುಗದ ಸಮಯದಲ್ಲಿ ಅರ್ಜುನನು ಹಲವಾರು ಸರ್ಪ (ಹಾವು)ಗಳನ್ನು ಕೊಲ್ಲಬೇಕಾಗುತ್ತದೆ. ಆ ಕಾರಣದಿಂದ ಸರ್ಪ ಹತ್ಯೆಯ ದೋಷವು ಅವನನ್ನು ಸುತ್ತಿಕೊಳ್ಳುತ್ತದೆ. ಈ ಸರ್ಪ ಹತ್ಯಾ ದೋಷವನ್ನು ಪರಿಹಾರ ಮಾಡಲು ಸರ್ಪಗಳ ವೈರಿ ಗರುಡನನ್ನು ಪ್ರತಿಷ್ಟಾಪಿಸುವಂತೆ ಋಷಿಮುನಿಗಳು ಅವನಿಗೆ ಸಲಹೆ ನೀಡುತ್ತಾರೆ. ಆ ಕಾರಣದಿಂದ ಇಲ್ಲಿ ಗರುಡ ಸ್ವಾಮಿಯ ವಿಗ್ರಹವನ್ನು ಅರ್ಜುನನು ಪ್ರತಿಷ್ಟಾಪಿಸಿ ಸರ್ಪ ಹತ್ಯಾ ದೋಷದಿಂದ ಮುಕ್ತನಾದ ಎಂದು ಪುರಾಣ ಕಥೆಗಳು ಹೇಳುತ್ತವೆ. ಈ ಕಾರಣದಿಂದಲೇ ಈಗಲೂ ಸರ್ಪ ದೋಷ ಇದ್ದವರು ಇಲ್ಲಿಗೆ ಬಂದು ಪೂಜೆ ಮಾಡಿಸಿದರೆ ಎಂಟು ಬಗೆಯ ಸರ್ಪ ದೋಷಗಳೆಲ್ಲವೂ ಪರಿಹಾರವಾಗುತ್ತವೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಬೇರೂರಿದೆ. ದ್ವಾಪರ ಯುಗದ ನಂತರ ಈ ದೇವಸ್ಥಾನವನ್ನು ಸಾವಿರಾರು ವರ್ಷಗಳ ಹಿಂದೆ ಶ್ರೀರಾಮಾನುಜಾಚಾರ್ಯರು ಇಲ್ಲಿ ಇದ್ದ ಗರುಡ ದೇವರ ವಿಗ್ರಹವನ್ನು ಪುನಃ ಪ್ರತಿಷ್ಟಾಪನೆ ಮಾಡಿದರೆಂದು ಹೇಳುತ್ತಾರೆ. ದ್ರಾವಿಡ ಶೈಲಿಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ರಾಮಾಯಣ ಹಾಗೂ ಮಹಾಭಾರತ ಎರಡೂ ಪುರಾಣಗಳ ಸಮಯದ ಉಲ್ಲೇಖವಿರುವ ಅಪರೂಪದ ದೇವಸ್ಥಾನವಿದು.ಮಹಾವಿಷ್ಣುವು ಹನುಮಂತನಿಗೆ ವರ ನೀಡಿ ಇಲ್ಲಿ ಹೋಗಿ ನೆಲೆಸು ಎಂದು ಹೇಳಿದ ಕಾರಣ ಇಲ್ಲಿ ಹನುಮಂತ ದೇವರೂ ನೆಲೆಸಿದ್ದಾರೆ. 

ಈ ದೇವಸ್ಥಾನದಲ್ಲಿ ಗರುಡ ಸ್ವಾಮಿಯು ಮುಖ್ಯ ದೇವರಾಗಿದ್ದಾರೆ. ಗರುಡ ಸ್ವಾಮಿಯ ವಿಗ್ರಹವು ಕಲ್ಲಿನಲ್ಲಿ ಕೆತ್ತಲಾಗಿದ್ದು, ಹಲವಾರು ವಿಶೇಷತೆಗಳನ್ನು ಹೊಂದಿದೆ. ಇಲ್ಲಿರುವ ವಿಗ್ರಹದಲ್ಲಿ ಗರುಡ ಸ್ವಾಮಿಯು ತನ್ನ ಒಂದು ಕೈಯಲ್ಲಿ ಮಹಾ ವಿಷ್ಣುವನ್ನೂ ಮತ್ತೊಂದು ಕೈಯಲ್ಲಿ ಮಹಾಲಕ್ಷ್ಮಿ ದೇವಿಯನ್ನೂ ಹಿಡಿದುಕೊಂಡಿದ್ದಾನೆ. ಈ ಕಾರಣದಿಂದ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳು ಏಕಕಾಲಕ್ಕೆ ಗರುಡ ಸ್ವಾಮಿ, ವಿಷ್ಣು ಹಾಗೂ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ಈ ದೇವಸ್ಥಾನದಲ್ಲಿ ಗಣೇಶ ದೇವರ ವಿಗ್ರಹವೂ ಇದೆ. ಹನುಮಂತ ದೇವರ ದೇಗುಲವೂ ಇಲ್ಲಿದೆ. 

ಗರುಡ ಸ್ವಾಮಿಯ ದೇವಸ್ಥಾನವು ಬೆಂಗಳೂರಿನಿಂದ ೭೫ ಕಿ.ಮೀ. ದೂರವಿದೆ. ರಸ್ತೆ ಮೂಲಕ ಬರುವುದಾದರೆ ಬಸ್ ವ್ಯವಸ್ಥೆ ಇದೆ. ಹಲವಾರು ರೈಲುಗಳೂ ಕೋಲಾರಕ್ಕೆ ಬರುತ್ತದೆ. ಗರುಡ ಸ್ವಾಮಿ ದೇವಸ್ಥಾನವನ್ನು ನೋಡಲು ಶನಿವಾರ, ಭಾನುವಾರಗಳಂದು ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಂದ ಸಹಸ್ರಾರು ಭಕ್ತರು ಬರುತ್ತಾರೆ.  

ಕೇರಳದ ಮಲಪುರಂ ಜಿಲ್ಲೆಯ ತ್ರಿಪ್ರಾಣಗೋಡು ಎಂಬಲ್ಲಿಯೂ ಒಂದು ಗರುಡ ಸ್ವಾಮಿ ದೇವಸ್ಥಾನವಿದೆ. ಆದರೆ ಇಲ್ಲಿ ಗರುಡ ಮುಖ್ಯ ದೇವರು ಅಲ್ಲ. ಭಾರತದ ದೇಶದ ಅಪರೂಪದ ಶ್ರೀ ಗರುಡ ಸ್ವಾಮಿ ದೇವಸ್ಥಾನ ನಮ್ಮ ಕರ್ನಾಟಕ ರಾಜ್ಯದಲ್ಲೇ ಇರುವುದರಿಂದ ನೀವಿನ್ನೂ ನೋಡಿಲ್ಲವಾದರೆ ಅವಶ್ಯವಾಗಿ ಒಮ್ಮೆ ಭೇಟಿ ನೀಡಿ.

ಸೂಚನೆ: ಲಭ್ಯ ಮಾಹಿತಿಗಳ ಪ್ರಕಾರ ಈ ಗರುಡ ಸ್ವಾಮಿ ದೇವಸ್ಥಾನದ ಬಗ್ಗೆ ಲೇಖನ ಬರೆದಿರುವೆ. ದೇಶದ ಇತರೆಡೆಯಲ್ಲೂ ಗರುಡ ಸ್ವಾಮಿಯ ದೇವಸ್ಥಾನಗಳು ಇರಬಹುದೇ? ಓದುಗರಾದ ನಿಮ್ಮಲ್ಲಿ ಮಾಹಿತಿ ಇದ್ದರೆ ದಯವಿಟ್ಟು ಪ್ರತಿಕ್ರಿಯಿಸಿರಿ.  

ಚಿತ್ರಗಳ ವಿವರ: ೧. ಪುಷ್ಪಾಲಂಕೃತ ಶ್ರೀ ಗರುಡ ಸ್ವಾಮಿ

೨. ಶ್ರೀ ಗರುಡ ಸ್ವಾಮಿ ವಿಗ್ರಹ

೩. ಶ್ರೀ ಗರುಡ ಸ್ವಾಮಿ ದೇವಸ್ಥಾನದ ಹೊರ ಭಾಗ

ಚಿತ್ರ ಕೃಪೆ: ವಿವಿಧ ಅಂತರ್ಜಾಲ ತಾಣಗಳಿಂದ ಸಂಗ್ರಹಿತ