ಕೋಲಾ ಕರಡಿಗೆ ನೀರು ಎಷ್ಟು ಅವಶ್ಯ?

ಕೋಲಾ ಕರಡಿಗೆ ನೀರು ಎಷ್ಟು ಅವಶ್ಯ?

ಕೋಲಾ (Koala Bear) ಕರಡಿಯನ್ನು ಕ್ವಾಲಾ, ಕೋವಾಲಾ ಎಂದೆಲ್ಲಾ ರೀತಿಯಲ್ಲಿ ಕರೆಯಲಾಗುತ್ತದೆ. ಇದೊಂದು ಅಪರೂಪದ ಪ್ರಾಣಿ. ಫ್ಲಾಸ್ಕೋಲಾರ್ಕ್ಟಿಡೇ (Phascolarctidae) ಕುಟುಂಬಕ್ಕೆ ಸೇರಿರುವ ಏಕೈಕ ಪ್ರಾಣಿ ಪ್ರಭೇಧ ಇದಾಗಿದೆ. ಸಂಪೂರ್ಣ ಸಸ್ಯಾಹಾರಿ ಪ್ರಾಣಿಯಾಗಿದ್ದು, ಆಹಾರಕ್ಕಾಗಿ ನೀಲಗಿರಿ ಮರದ ಎಲೆಗಳನ್ನು ಮತ್ತು ಚಿಗುರುಗಳನ್ನು ಬಳಸಿಕೊಳ್ಳುತ್ತದೆ. ಇದು ಬಹುತೇಕ ಆಸ್ಟ್ರೇಲಿಯಾ ದೇಶದಲ್ಲಿ ಮಾತ್ರ ಕಂಡು ಬರುವ ಮುದ್ದಾದ ಪ್ರಾಣಿ. ಇವು ಕರಡಿ ಮರಿಗಳಂತೆಯೇ ಕಂಡರೂ, ಕರಡಿಯಷ್ಟು ಎತ್ತರಕ್ಕೆ ಬೆಳೆಯುವುದಿಲ್ಲ. ಹೆಚ್ಚಾಗಿ ಮರಗಳಲ್ಲಿ ವಾಸಿಸುತ್ತವೆ. ವಯಸ್ಕ ಕೋಲಾ ಕರಡಿ ೬೦- ೭೫ ಸೆಂ. ಮೀ ಉದ್ದಕ್ಕೆ ಬೆಳೆಯುತ್ತದೆ. 

ಕೋಲಾ ಕರಡಿಯ ಮೈಮೇಲೆ ಮೃದುವಾದ ತುಪ್ಪಳವಿರುತ್ತದೆ. ಕಾಡಿನಲ್ಲಿ ಕೋಲಾ ಕರಡಿಗಳು ಸುಮಾರು ೧೩-೧೮ ವರ್ಷಗಳವರೆಗೆ ಬದುಕುತ್ತವೆ. ಕೋಲಾ ಕರಡಿ ಶುದ್ಧ ಸಸ್ಯಾಹಾರಿಯಾಗಿದ್ದು ಅಧಿಕಾಂಶ ನೀಲಗಿರಿ ಮರಗಳಲ್ಲೇ ತನ್ನ ವಾಸಸ್ಥಾನವನ್ನು ಮಾಡಿಕೊಂಡಿರುತ್ತದೆ. ತಮ್ಮ ಜೀವನದ ಬಹುಭಾಗವನ್ನು ಆಹಾರ ಸೇವನೆ ಮತ್ತು ನಿದ್ರೆಯಲ್ಲೇ ಕಳೆಯುತ್ತವೆ. 

ಕೋಲಾ ಎಂಬ ಹೆಸರು ಹೇಗೆ ಬಂತು? ಇದು ಆಸ್ಟ್ರೇಲಿಯಾದ ಮೂಲ ನಿವಾಸಿ ಅಥವಾ ಆದಿವಾಸಿ ಜನಾಂಗದವರ ಭಾಷೆಯ ಪ್ರಯೋಗವಾಗಿದೆ. ಇದರ ಅರ್ಥ ‘ಕುಡಿಯುವುದು ಬೇಡ' ಎಂಬುವುದು. ಈ ಹೆಸರು ಯಾಕೆ ಬಂತು ಎಂದರೆ ಇವುಗಳು ನೀರನ್ನು ಕುಡಿಯದೆಯೇ ಬದುಕುತ್ತವೆ. ಕೋಲಾ ಕರಡಿಗಳು ನೀರನ್ನು ಕುಡಿಯದೇ ಬರೀ ನೀಲಗಿರಿಯ ಎಲೆಗಳನ್ನೇ ತಿಂದು ಬದುಕುತ್ತವೆ. ನೀಲಗಿರಿಯ ಎಲೆಯಲ್ಲಿರುವ ನೀರಿನ ಅಂಶವನ್ನೇ ತಮ್ಮ ದೇಹದ ಅವಶ್ಯಕತೆಗೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತವೆ. 

ನೀಲಗಿರಿ ಎಲೆಗಳಲ್ಲಿ ಸುಮಾರು ೫೦ - ೫೫ ಶೇಕಡಾ ನೀರಿನ ಅಂಶವಿರುತ್ತದೆ. ನಾರಿನ ಅಂಶ (ಫೈಬರ್) ಜಾಸ್ತಿಯಾಗಿರುತ್ತದೆ. ಪೋಷಕಾಂಶಗಳು ಕಡಿಮೆಯಾಗಿರುತ್ತದೆ. ಈ ನಾರಿನ ಅಂಶಗಳನ್ನು ಜೀರ್ಣಿಸಿಕೊಳ್ಳಲು ಕೋಲಾ ಕರಡಿಗಳು ಅಧಿಕ ಶಕ್ತಿಯನ್ನು ಉಪಯೋಗಿಸಬೇಕಾಗುತ್ತದೆ. ತಮ್ಮ ಪಚನ ಕ್ರಿಯೆಯನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ಇವುಗಳು ದಿನದ ಬಹು ಸಮಯ ನಿದ್ರಿಸುವುದರಲ್ಲೇ ಕಳೆಯುತ್ತವೆ. ಕೋಲಾ ಕರಡಿ ಒಮ್ಮೆ ಮಲಗಿದರೆ ನಿರಂತರ ೨೦ ತಾಸು ಮಲಗುತ್ತವೆ. ಇದರ ಓಡಾಟವು ಕಮ್ಮಿಯಾಗಿರುವುದರಿಂದ ಶಕ್ತಿಯು ವ್ಯಯವಾಗುವುದೂ ಕಮ್ಮಿ. ಇದರಿಂದಾಗಿ ಇದರ ದೇಹದಲ್ಲಿ ನೀರಿನ ಅಂಶವು ಬಹಳ ಕಮ್ಮಿ ಉಪಯೋಗವಾಗುತ್ತದೆ. 

ಇದೇ ವಿಷಯವನ್ನು ಮಾನವನ ದೇಹದ ಜೊತೆ ತುಲನೆ ಮಾಡಿದರೆ ನಮ್ಮ ದೇಹದಲ್ಲಿ ಶೇಕಡಾ ೭೦ ದ್ರವ ಪದಾರ್ಥಗಳಿರುತ್ತವೆ. ನಮ್ಮ ಜೀವಕೋಶಗಳಿಗೆ ಪೋಷಕಾಂಶಗಳನ್ನು ಪೂರೈಸಲು ನೀರಿನ ಅವಶ್ಯಕತೆ ಅಧಿಕವಾಗಿರುತ್ತದೆ. ನಾವು ತಿಂದ ಆಹಾರ ಜೀರ್ಣವಾಗಲೂ ನೀರಿನ ಅವಶ್ಯಕತೆ ಇದೆ. ಆಹಾರವಿಲ್ಲದೇ ಸ್ವಲ್ಪ ದಿನ ಬದುಕಬಲ್ಲ ಮಾನವ ನೀರಿಲ್ಲದೇ ಒಂದು ದಿನವೂ ಬದುಕಲಾರ. ನೀರಿನ ಅಂಶ ನಮ್ಮ ದೇಹದಲ್ಲಿ ಕಮ್ಮಿಯಾದರೆ ವಿಷಕಾರಿ (ಟಾಕ್ಸಿನ್) ಅಂಶಗಳು ನಮ್ಮ ದೇಹದಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ನಮ್ಮ ದೇಹದಲ್ಲಿ ನೀರಿನ ಮಟ್ಟ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ.

ಕೋಲಾ ಕರಡಿಗಳು ವಾಸಿಸುವ ಆಸ್ಟ್ರೇಲಿಯಾ ಖಂಡದಲ್ಲಿ ನೀರಿನ ಪ್ರಮಾಣ ಕಮ್ಮಿ. ಆದರೂ ಇಲ್ಲಿನ ಕಾಡುಗಳಲ್ಲಿ ನೀಲಗಿರಿ ಮರಗಳು ಯಥೇಚ್ಚವಾಗಿ ಬೆಳೆಯುತ್ತವೆ. ಆದರೂ ಈಗೀಗ ಕಾಡಿನಲ್ಲಿ ಮರಗಳ ಕೊರತೆ, ನೀಲಗಿರಿ ಮರದ ಪ್ರಮಾಣ ಕಮ್ಮಿಯಾಗುವಿಕೆ, ಕೋಲಾ ಕರಡಿಗಳ ಬೇಟೆ ಇವುಗಳಿಂದಾಗಿ ಕೋಲಾಗಳ ಸಂಖ್ಯೆ ಕಮ್ಮಿಯಾಗುತ್ತಿವೆ. ಇದರಿಂದ ಎಚ್ಚೆತ್ತ ಅಲ್ಲಿಯ ಸರಕಾರ ಕೋಲಾ ಕರಡಿಗಳ ಸಂಖ್ಯೆಯನ್ನು ವೃದ್ಧಿ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ಇದರ ಆಹಾರದ ಏಕೈಕ ಕೊಂಡಿಯೆಂದರೆ ನೀಲಗಿರಿ ಸಸ್ಯಗಳು. ಆ ಕಾರಣದಿಂದ ಯಾವ ಕಾರಣಕ್ಕೂ ನೀಲಗಿರಿ ಸಸ್ಯಗಳ ಸಂಖ್ಯೆ ಕಮ್ಮಿ ಆಗಬಾರದು. 

ಹಾಗಾದರೆ ಕೋಲಾ ಕರಡಿಗಳು ನೀರನ್ನು ಕುಡಿಯುವುದೇ ಇಲ್ಲವೇ? ಎಂಬ ಪ್ರಶ್ನೆಗೆ ಉತ್ತರವೆಂದರೆ ಅಪರೂಪದ ಸಮಯದಲ್ಲಿ ಅಂದರೆ ಕಾಡಿಗೆ ಬೆಂಕಿ ಬಿದ್ದು ನೀಲಗಿರಿ ಮರಗಳು ಬಹಳ ಸಂಖ್ಯೆಯಲ್ಲಿ ನಾಶವಾದಾಗ ಅಥವಾ ತೀವ್ರ ಬರಗಾಲ ಬಂದಾಗ ಮಾತ್ರ ಕೋಲಾ ಕರಡಿಗಳು ನೀರನ್ನು ಕುಡಿಯುತ್ತವೆ. ಏಕೆಂದರೆ ಆ ಸಮಯದಲ್ಲಿ ಅದರ ಆಹಾರವಾದ ನೀಲಗಿರಿ ಮರದ ಎಲೆಗಳು ಸಿಗದಿರುವುದರಿಂದ ಸಹಜವಾಗಿಯೇ ಅದರ ದೇಹದಲ್ಲಿ ನೀರಿನ ಕೊರತೆಯಾಗುತ್ತದೆ. 

ಇಷ್ಟೊಂದು ಸುಂದರವಾದ ಪ್ರಾಣಿ ಅಳಿದುಹೋದರೆ ಮುಂದೆ ಎಂದೂ ಭವಿಷ್ಯದಲ್ಲಿ ನಮ್ಮ ಮುಂದಿನ ಪೀಳಿಗೆಯವರಿಗೆ ನೋಡಲು ಸಿಗಲಾರದು. ಆ ಕಾರಣದಿಂದಲಾದರೂ ಆಸ್ಟ್ರೇಲಿಯಾ ಸರಕಾರ ಅದರ ಸಂರಕ್ಷಣೆಗೆ ಬೇಕಾದ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಆಶಿಸೋಣ ಅಲ್ಲವೇ? 

ಚಿತ್ರ ಕೃಪೆ: ಅಂತರ್ಜಾಲ ತಾಣ