ಕೋಳಿಮರಿಗಳು ಮತ್ತು ಕುತಂತ್ರಿ ನರಿ

ಕೋಳಿಮರಿಗಳು ಮತ್ತು ಕುತಂತ್ರಿ ನರಿ

ತೋಟದ ಕೋಳಿಗೂಡಿನಲ್ಲಿ ತಾಯಿಕೋಳಿ ಮತ್ತು ಕೋಳಿಮರಿಗಳು ವಾಸ ಮಾಡುತ್ತಿದ್ದವು. ತಾಯಿಕೋಳಿ ಅಥವಾ ತಾವೇ ಹುಡುಕಿದ ಆಹಾರವನ್ನು ಪಾಲು ಮಾಡಿಕೊಂಡು ತಿನ್ನುತ್ತಿದ್ದವು. ಅವು ಒಂದರೊಡನೆ ಇನ್ನೊಂದು ಅನ್ಯೋನ್ಯವಾಗಿದ್ದವು.

ಅಲ್ಲೇ ಹತ್ತಿರದ ಮರದ ಕೆಳಗಿದ್ದ ಗುಹೆಯಲ್ಲೊಂದು ಮೋಸಗಾರ ನರಿ ವಾಸ ಮಾಡುತ್ತಿತ್ತು. ಈ ಕೋಳಿಮರಿಗಳನ್ನು ಕಂಡಾಗಲೆಲ್ಲ ನರಿಗೆ ಇದೊಂದೇ ಯೋಚನೆ: ‘ಓ, ಇವು ನನ್ನ ಊಟಕ್ಕೆ ಸಿಗುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಎಳೆ ತಾಯಿಕೋಳಿಯ ಮಾಂಸ ಒಳ್ಳೆಯ ಭೋಜನವಂತೆ.”

ಅದೊಂದು ದಿನ ಬೆಳಗ್ಗೆ ಕೋಳಿಮರಿಗಳಿಗೆ ಎಚ್ಚರವಾದಾಗ ಕೋಳಿಗೂಡಿನಲ್ಲಿ ತಾಯಿಕೋಳಿ ಕಾಣಿಸಲಿಲ್ಲ. ಆಹಾರ ಹುಡುಕಲಿಕ್ಕಾಗಿ ತಾಯಿಕೋಳಿ ಹೊರಗೆ ಹೋಗಿರಬಹುದೆಂದು ಕೋಳಿಮರಿಗಳು ಯೋಚಿಸಿದವು. ಆದರೆ ಸ್ವಲ್ಪ ಸಮಯದ ನಂತರ ಅವುಗಳಿಗೆ ಚಿಂತೆಯಾಯಿತು. ಅವು ಕೋಳಿಗೂಡಿನಿಂದ ಹೊರಗೆ ಓಡಿ ಬಂದು, “ಅಮ್ಮಾ, ಅಮ್ಮಾ, ನೀನೆಲ್ಲಿದ್ದಿ” ಎಂದು ಕೂಗಿದವು. ಆದರೆ ತಾಯಿಕೋಳಿ ಎಲ್ಲಿಯೂ ಕಾಣಿಸದಿದ್ದಾಗ ಕೋಳಿಮರುಗಳು ಅಳುತ್ತಾ ಕುಳಿತವು.

ಕೋಳಿಮರಿಗಳ ಕೂಗಾಟದಿಂದ ಅಲ್ಲೇ ಹತ್ತಿರ ಮರದಲ್ಲಿ ಎಲೆಗಳೆಡೆಯಲ್ಲಿ ನಿದ್ದೆ ಮಾಡುತ್ತಿದ್ದ ಬಾವಲಿಗೆ ಎಚ್ಚರವಾಯಿತು. ಅದು ಕೆಳಕ್ಕೆ ನೋಡುತ್ತಾ ಕಿರುಗುಟ್ಟಿ ಹೇಳಿತು, “ನೀವು ಮಲಗಿದ್ದಾಗ ನಿಮ್ಮ ತಾಯಿಯನ್ನು ನರಿ ಕದ್ದು ಒಯ್ದಿರಬಹುದು. ನಿನ್ನೆ ಆ ನರಿ ಇಲ್ಲೇ ತೋಟದಲ್ಲಿ ಸುತ್ತಾಡೋದನ್ನು ನೋಡಿದ್ದೆ.”

ಈಗ ಕೋಳಿಮರಿಗಳು ತಮ್ಮ ತಾಯಿಯನ್ನು ರಕ್ಷಿಸಲು ತಯಾರಾದವು. ದೊಡ್ಡ ಕೋಳಿಮರಿ ತನ್ನ ಸೋದರ - ಸೋದರಿಯರಿಗೆ ಹೇಳಿತು, "ನೀವೀಗ ಅಳುವುದನ್ನು ನಿಲ್ಲಿಸಿ, ಹೊರಡಲು ಸಿದ್ಧರಾಗಿ. ಪ್ರತಿಯೊಬ್ಬರೂ ಒಂದು ಕೋಲು ತಗೊಳ್ಳಿ. ಅಮ್ಮನನ್ನು ರಕ್ಷಿಸಲು ನರಿಯ ಗುಹೆಗೆ ಹೋಗೋಣ."

ಕೋಳಿಮರಿಗಳು ನರಿಯ ಗುಹೆಗೆ ಧಾವಿಸುತ್ತಿದ್ದಾಗ, ದೊಡ್ಡ ಕಣಜ ಹುಳವೊಂದು ಎದುರಾಗಿ ಕೇಳಿತು, “ನೀವೆಲ್ಲ ಕೋಲು ಹಿಡಿದುಕೊಂಡು ಎಲ್ಲಿಗೆ ಹೋಗುತ್ತಿದ್ದೀರಿ?”

ಅದಕ್ಕೆ ಕೋಳಿಮರಿಗಳ ಉತ್ತರ, "ನರಿಯೊಂದಿಗೆ ಹೋರಾಟ ಮಾಡಿ, ಅಮ್ಮನನ್ನು ರಕ್ಷಿಸಲು ಹೊರಟಿದ್ದೇವೆ.” “ಹಾಗಾದರೆ ನಾನೂ ನಿಮ್ಮೊಂದಿಗೆ ಬರುತ್ತೇನೆ” ಎಂದು ದೊಡ್ಡ ಕಣಜ ಹುಳ ಅವರನ್ನು ಸೇರಿಕೊಂಡಿತು. ಅನಂತರ, ಕೋಳಿಮರಿಗಳು ತಮ್ಮ ತಾಯಿಯನ್ನು ಕಾಪಾಡಲು ಹೋಗುತ್ತಿವೆ ಎಂದು ತಿಳಿದ ನೀರುಹಾವು ಕೂಡ ಅವರನ್ನು ಸೇರಿಕೊಂಡಿತು.

ಅವೆಲ್ಲವೂ ನರಿಯ ಗುಹೆಗೆ ಬಂದಾಗ, ನರಿ ಅಲ್ಲಿರಲಿಲ್ಲ. ಗುಹೆಯೊಳಗೆಲ್ಲ ಹುಡುಕಾಡಿದರೂ ತಾಯಿಕೋಳಿ ಸಿಗಲಿಲ್ಲ. ಆಗ ದೊಡ್ಡ ಕೋಳಿಮರಿ ಹೇಳಿತು, “ನಾವೀಗ ಅಮ್ಮನನ್ನು ಹುಡುಕುತ್ತಾ ಕೂರುವಂತಿಲ್ಲ. ಯಾಕೆಂದರೆ, ಆ ನರಿ ಯಾವುದೇ ಕ್ಷಣದಲ್ಲಿ ಇಲ್ಲಿಗೆ ಬರಬಹುದು. ಅಣ್ಣ ನೀರುಹಾವೇ, ಬಾಗಿಲಿನ ಹಿಂದೆ ನೀವಿರಬೇಕು. ತಂಗಿ ದೊಡ್ಡ ಕಣಜವೇ, ನೀನಲ್ಲಿ ಮೂಲೆಯಲ್ಲಿ ಇರಬೇಕು. ಉಳಿದ ನಾವೆಲ್ಲ ಅಡಗಿ ಕೂತಿರೋಣ. ಆ ನರಿ ಗುಹೆಯೊಳಗೆ ಬಂದ ಕೂಡಲೇ ಒಟ್ಟಾಗಿ ಧಾಳಿ ಮಾಡೋಣ.”

ಅದಾಗಿ ಸ್ವಲ್ಪ ಹೊತ್ತಿನಲ್ಲೇ ಮಸಾಲೆಯೊಂದಿಗೆ ನರಿ ಗುಹೆಯೆದುರು ಬಂತು. ಊಟಕ್ಕಾಗಿ ತಾಯಿಕೋಳಿಯನ್ನು ತಿನ್ನುವ ಯೋಚನೆಯಿಂದ ಅದರ ಬಾಯಿಯಲ್ಲಿ ನೀರೂರಿತು. ಗುಹೆಯ ಬಾಗಿಲು ತೆಗೆದು ನರಿ ಒಳಕ್ಕೆ ಬಂತು. ಅಲ್ಲಿದ್ದ ನೀರುಹಾವಿನ ಮೇಲೆ ಕಾಲಿಡುತ್ತಲೇ ನರಿ ಜಾರಿ ನೆಲಕ್ಕೆ ಬಿತ್ತು. ನರಿ ಎದ್ದೇಳುವ ಮುನ್ನ, ದೊಡ್ದ ಕಣಜ ಮೂಲೆಯಿಂದ ಹಾರಿ ಬಂದು ನರಿಗೆ ಮತ್ತೆಮತ್ತೆ ಚುಚ್ಚಿತು. ಆಗ ಕೋಳಿಮರಿಗಳೆಲ್ಲ ನರಿಯನ್ನು ಸುತ್ತುಗಟ್ಟಿ ಕೋಲುಗಳಿಂದ ಜೋರಾಗಿ ಥಳಿಸಿದವು.

ನರಿಗೆ ಭರ್ಜರಿ ಏಟುಗಳು ಬಿದ್ದವು. ಅದಕ್ಕೆ ಅಲುಗಾಡಲಿಕ್ಕೂ ಆಗಲಿಲ್ಲ. ನರಿ ಬೇಡಿಕೊಂಡಿತು, "ದಯವಿಟ್ಟು ನನ್ನನ್ನು ಕೊಲ್ಲಬೇಡಿ. ನಿಮ್ಮ ತಾಯಿ ಅಲ್ಲಿ ಗೂಡಿನಲ್ಲಿ ಸುರಕ್ಷಿತವಾಗಿದ್ದಾಳೆ. ನಾನು ಪುನಃ ಹೀಗೆ ಮಾಡೋದಿಲ್ಲ. ಹಾಗಾಗಿ ಕೃಪೆಯಿಟ್ಟು ನನ್ನನ್ನು ಬಿಟ್ಟು ಬಿಡಿ.” ಈಗ ಕೋಳಿಮರಿಗಳು ಉತ್ತರಿಸಿದವು, “ನೀವು ನರಿಗಳು ಕ್ರೂರಿ ಸುಳ್ಳುಗಾರರು. ನಿಮ್ಮನ್ನು ಯಾರೂ ಯಾವತ್ತೂ ನಂಬೋದಿಲ್ಲ. ನಿನ್ನಂತಹ ಕ್ರೂರಿ ಪ್ರಾಣಿಯ ಮೇಲೆ ನಮಗೆ ಕಿಂಚಿತ್ತೂ ಕರುಣೆ ಇಲ್ಲ.”

ನರಿಯನ್ನು ಬಡಿದು ಬಡಿದು ಕೊಂದ ನಂತರ, ಕೋಳಿಮರಿಗಳು ಗೂಡಿಗೆ ಹೋಗಿ ತಾಯಿಕೋಳಿಯನ್ನು ಬಿಡುಗಡೆ ಮಾಡಿದವು. ತನ್ನ ಧೀರ ಮಕ್ಕಳ ಸಾಹಸ ನೋಡಿ ತಾಯಿಕೋಳಿ ಹೆಮ್ಮೆ ಮತ್ತು ಸಂತೋಷದಿಂದ ಬೀಗಿತು.

ನೀರುಹಾವು ಮತ್ತು ದೊಡ್ಡ ಕಣಜ ಮಾಡಿದ ಸಹಾಯಕ್ಕೆ ತಾಯಿಕೋಳಿ ಮತ್ತು ಕೋಳಿಮರಿಗಳು ವಂದನೆ ಸಲ್ಲಿಸಿದವು. ಅನಂತರ ಅವೆಲ್ಲವೂ ತಮ್ಮತಮ್ಮ ಮನೆಗೆ ಹಿಂತಿರುಗಿ ಸಂತೋಷದಿಂದ ಬಾಳಿದವು.

ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ “ರೀಡ್ ಮಿ ಎ ಸ್ಟೋರಿ”
ಚಿತ್ರಕಾರ: ಗುಯೆನ್ ಕ್ಸುಆನ್ ಥಾಂಗ್