ಕೋಳಿಯಾದರೇನು ಶಿವ, ಬಾತುಕೋಳಿಯಾದರೇನು ಶಿವ!
ಯಾವ ಗಂಡ-ಹೆಂಡತಿಯರಲ್ಲಿ ವಾದ-ವಿವಾದಗಳೂ, ಜಗಳಗಳೂ ಇರುವುದಿಲ್ಲ? ಅವು ಇಲ್ಲವಾದರೆ ಅವರು ಗಂಡ-ಹೆಂಡತಿಯರೇ ಅಲ್ಲ ಅಲ್ಲವೇ? ಆದರೆ ವಾದದಲ್ಲಿ ಒಂದು ದಿನ ಸೋತರೂ ಬದುಕಿನುದ್ದಕ್ಕೂ ಗೆದ್ದ ಗಂಡ-ಹೆಂಡತಿಯರ ಪ್ರಸಂಗವೊಂದು ಇಲ್ಲಿದೆ.
ಆಗಷ್ಟೇ ಮದುವೆಯಾಗಿದ್ದ ನವದಂಪತಿಗಳು ಒಂದು ದಿನ ವನವಿಹಾರಕ್ಕೆ ಹೋದರು. ಕಾಡಿನಲ್ಲಿ ಆನಂದವಾಗಿ ಸುತ್ತಾಡುತ್ತಿದ್ದರು. ಆಗ 'ಕ್ವಾಕ್-ಕ್ವಾಕ್' ಎಂಬ ಶಬ್ದ ಕೇಳಿ ಬಂತು. ಹೆಂಡತಿ 'ಅದು ಕೋಳಿ ಮಾಡುತ್ತಿರುವ ಶಬ್ದವಲ್ಲವೇ?' ಎಂದಳು. ಗಂಡ ಅಲ್ಲ, ಅದು ಬಾತುಕೋಳಿಯ ಶಬ್ದ' ಎಂದ. ಹೆಂಡತಿ 'ಇಲ್ಲ ಇಲ್ಲ! ಅದು ಕೋಳಿಯೇ!' ಎಂದಳು. ಗಂಡ 'ಕೋಳಿಯು ಕೊಕ್ಕೊಕ್ಕೋ.. ಎನ್ನುತ್ತದೆ. ಆದರೆ ಕ್ವಾಕ್ -ಕ್ವಾಕ್ ಶಬ್ದವನ್ನು ಮಾಡುವುದು ಬಾತುಕೋಳಿ ಮಾತ್ರ' ಎಂದ. ಹೆಂಡತಿ ಮತ್ತೆ 'ಇಲ್ಲ! ಆ ಶಬ್ದ ಮಾಡುತ್ತಿರುವುದು ಕೋಳಿಯೆಂದು ನಾನು ಹೇಳಿದ್ದೇ ಸರಿ' ಎಂದಳು. ಗಂಡ “ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದವನು. ನನಗೆ ಚೆನ್ನಾಗಿ ಗೊತ್ತು. ಕ್ವಾಕ್ -ಕ್ವಾಕ್ ಶಬ್ದ ಮಾಡುತ್ತಿರುವ ಅದು ಬಾತುಕೋಳಿ! ಅರ್ಥವಾಯಿತೇ?' ಎಂದು ಗದರಿಸಿದ.
ಗಂಡನ ಗದರಿಕೆಯಿಂದ ಹೆಂಡತಿಗೆ ಅಳು ಬಂದಿತು. ಆಕೆ ಮುಸಿಮುಸಿ ಅಳುತ್ತಾ 'ಅದು ಕೋಳಿಯೇ ಹೌದು! ಬೇಕಿದ್ದರೆ ನೋಡಿಕೊಂಡು ಬನ್ನಿ' ಎಂದಳು. ಆಕೆ ಮತ್ತೆ ಮತ್ತೆ ಮಾಡುತ್ತಿರುವ ವಾದವನ್ನು ಕೇಳಿ ಗಂಡನ ಮುಖ ಸಿಟ್ಟಿನಿಂದ ಕೆಂಪಾಯಿತು.ಆತ ಕಾಡಿನೊಳಕ್ಕೆ ಹೋದ.
ಕೊಂಚ ಹೊತ್ತಿನಲ್ಲೇ ಹಿಂತಿರುಗಿ ಬಂದಾಗ ಅವರ ಮುಖದ ಮೇಲೆ ಕೋಪದ ಸುಳಿವು ಕೊಂಚವೂ ಇರಲಿಲ್ಲ. ಆತ ನಗುನಗುತ್ತ ಹೆಂಡತಿಯನ್ನುದ್ದೇಶಿಸಿ 'ಹೌದು, ಅಲ್ಲಿ ಕ್ವಾಕ್ -ಕ್ವಾಕ್ ಎಂದು ಕೂಗುತ್ತಿದ್ದುದು ಕೋಳಿಯೇ! ಬಹುಶಃ ಅದರ ಗಂಟಲು ಕೆಟ್ಟಿರಬೇಕು. ಅದು ಕೊಕ್ಕೊಕ್ಕೋ ಎನ್ನುವುದರ ಬದಲು ಕ್ವಾಕ್ -ಕ್ವಾಕ್ ಎನ್ನುತ್ತಿದೆ! ನಿನ್ನ ಮಾತೇ ಸರಿ' ಎಂದ.
ಗಂಡನ ಮಾತುಗಳಿಂದ ಹೆಂಡತಿಯ ಮುಖ ಸಂತೋಷದಿಂದ ಅರಳಿತು. ಅವರಿಬ್ಬರೂ ವನವಿಹಾರವನ್ನು ಮುಗಿಸಿ, ಆನಂದದಿಂದ ಹಿಂತಿರುಗಿದರು.
ಇದಾದ ನಂತರ ಅವರು ಸುಮಾರು ಐವತ್ತು ವರ್ಷಗಳ ಕಾಲ ಸುಖವಾಗಿ ಬಾಳಿ ಬದುಕಿದರು. ಅವರಿಗೂ ವಯಸ್ಸಾಯಿತು. ವಯಸ್ಸಾದವರಿಗೆ ಬರುವಂತಹ ಕಾಯಿಲೆಗಳು ಬಂದವು. ಆದರೆ ಹೆಂಡತಿಯ ಅನಾರೋಗ್ಯ ತೀವ್ರವಾಯಿತು.
ಈಗಲೋ-ಆಗಲೋ ಎನ್ನುವ ಸ್ಥಿತಿಯಲ್ಲಿದ್ದ ಆಕೆ ತನ್ನ ಪಕ್ಕದಲ್ಲೇ ನಿಂತಿದ್ದ ಗಂಡನಿಗೆ “ಸುಮಾರು ಐವತ್ತು ವರ್ಷಗಳ ಕಾಲ ನಾವು ಸುಖವಾಗಿ ಬದುಕನ್ನು ಸಾಗಿಸಿದ್ದೇವೆ. ಆದರೆ ನನ್ನಲ್ಲೊಂದು ಪ್ರಶ್ನೆ ಉಳಿದುಹೋಗಿದೆ. ನಾವು ಮದುವೆಯಾದ ಹೊಸದರಲ್ಲಿ ವನವಿಹಾರ ಹೋಗಿದ್ದಾಗ ಅಲ್ಲಿ ಕ್ವಾಕ್ -ಕ್ವಾಕ್ ಎನ್ನುತ್ತಿದ್ದ ಪಕ್ಷಿಯು ಕೋಳಿಯೆಂದು ನಾನು ವಾದಿಸಿದೆ. ಅದು ಬಾತುಕೋಳಿಯೆಂದು ನೀವು ವಾದಿಸಿದಿರಿ. ವಾಗ್ವಾದದ ನಂತರ, ನೀವು ಪಕ್ಷಿ ಯಾವುದೆಂದು ನೋಡಿಕೊಂಡು ಬರಲು ಕಾಡಿನೊಳಕ್ಕೆ ಹೋದಿರಿ. ಬಂದು ಆ ಪಕ್ಷಿಯು ಕೋಳಿಯೆಂದು ಒಪ್ಪಿಕೊಂಡಿರಿ. ಆದರೆ ನನ್ನ ಮಾತು ತಪ್ಪೆಂದು ನಿಮ್ಮ ಮಾತು ಸರಿಯೆಂದು ನನಗೆ ಆಗಲೇ ಗೊತ್ತಾಗಿತ್ತು. ಆದರೂ ನೀವು ಸೋತು, ನನ್ನನ್ನೇಕೆ ಗೆಲ್ಲಿಸಿದಿರಿ?' ಎಂದು ಕೇಳಿದಳು.
ಆತ ನಸುನಕ್ಕು 'ಅದು ಕೋಳಿಯೋ ಬಾತುಕೋಳಿಯೋ ಎಂಬ ವಾದದಲ್ಲಿ ನಾನು ಗೆಲ್ಲಬಹುದಿತ್ತು. ಆದರೆ ಆ ಗೆಲುವು ಒಂದು ದಿನದ್ದು ಮಾತ್ರ ಆಗುತ್ತಿತ್ತು. ಆದರೆ ಅಂದು ನಾನು ಬೇಕೆಂತಲೇ ಸೋತೆ! ಆದರೆ ಇಡೀ ಬದುಕಿನುದ್ದಕ್ಕೂ ಶಾಂತಿಯನ್ನು ಗೆದ್ದೆ, ನಿನ್ನ ಪ್ರೀತಿಯನ್ನು ಗೆದ್ದೆ ಎಂದ.!
ಗಂಡನ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಆಕೆ ನಿಧಾನವಾಗಿ ಕೊನೆಯುಸಿರೆಳೆದಳು. ಆದರೆ ಆಕೆಯ ಮುಖದಲ್ಲಿನ ಮಂದಹಾಸ ಹಾಗೆಯೇ ಉಳಿದಿತ್ತು. ಅವರಿಗೆ ಬದುಕಿನುದ್ದಕ್ಕೂ ಶಾಂತಿಯಿತ್ತು. ಬದುಕಿನ ನಂತರವೂ ಶಾಂತಿಯಿತ್ತು!
ನಾವು ಅವರ ಸ್ಥಾನದಲ್ಲಿ ಇದ್ದಿದ್ದರೆ, ನಾವು ಗೆಲ್ಲಲು ಪ್ರಯತ್ನಿಸುತ್ತಿದ್ದೆವಾ ಅಥವಾ ಸೋಲನ್ನೊಪ್ಪಿಕೊಳ್ಳುತ್ತಿದ್ದೆವಾ?
ಕೃಪೆ: ಪುಣ್ಯದಿಂದ ಹಣವೋ? ಹಣದಿಂದ ಪುಣ್ಯವೋ? (ಕ್ಷಣ ಹೊತ್ತು ಆಣಿ ಮುತ್ತು)
ಸಂಗ್ರಹ: A G ಮಹಾಲಿಂಗಪುರ