ಕೋಳಿ ಮೂಗಿಗೆ ಪುಕ್ಕದ ಮೂಗುತಿ

ಕೋಳಿ ಮೂಗಿಗೆ ಪುಕ್ಕದ ಮೂಗುತಿ

ಬರಹ

“ಇದ್ಯಾವ ಸೀಮೆ ಯಾಟೆನೋ ... ಮೊನ್ನೆ ಎಲ್ಲಾ ಗುಡ್ಡಿಗೆ ಬಂದಿತ್ತು... ತಿರ್ಗಾ ಇವಾಗ ಹುಂಜನ ಜೊತೇಲಿ ಆಡಿ ಮತ್ತೆ ಗುಡ್ಡಿಕ್ತಾಯ್ತೆ... ಅಗ್ಲಾಗ್ಲ ಹಿಂಗೆ ಗುಡ್ಡಿಕ್ಕಿ ಕಾವಿಗೆ ಕೂಕಂಡ್ರೆ ಕೋಳೀನು ಬೆಳೆಯಲ್ಲ್ಲ, ಮರಿಗಳ್ನು ಸಾಕಲ್ಲ“ ಮಿಡಿಗೇಶಿಯ ಹಿರಿಯಜ್ಜಿ ತಿಮ್ಮಕ್ಕ ಮೊಮ್ಮಕ್ಕಳಿಗೆ ಹೇಳುತ್ತಿದ್ದರು. ಅಜ್ಜಿಯ ಮಾತಿಗೆ ಉತ್ತರ ನೀಡಿದ ಮೊಮ್ಮಗ “ಊನಜ್ಜಿ ಇದುನ್ನ ಹಿಂಗೆ ಬಿಟ್ರೆ ತಿರಗ ಕಾವಿಗೆ ಬೀಳ್ತೈತೆ, ಹಿಡ್ಕಂಡು ಅದರ ಮೂಗಿಗೆ ಪುಕ್ಕ ಕುಚ್ತಿನಿ” ಎಂದು ಹೇಳಿ ಮೂಲೆಯಲ್ಲಿ ಕೂತಿದ್ದ ಕೋಳಿಯನ್ನು ಹಿಡಿದ.

ಇದೇನಿದು ಕೋಳಿ ಕಾವಿಗೆ ಬರುವುದಕ್ಕೂ, ಅದರ ಮೂಗಿಗೆ ಪುಕ್ಕ ಚುಚ್ಚುವುದಕ್ಕೂ ಏನು ಸಂಬಂಧ ಎನ್ನುವಿರಾ? ಕೋಳಿಯು ಅಪ್ರಾಪ್ತ ವಯಸ್ಸಿನಲ್ಲಿ ಮೊಟ್ಟೆ ಇಡುವುದನ್ನು ತಪ್ಪಿಸಲು, ಪದೇ-ಪದೇ ಗರ್ಭ ಧರಿಸುವುದನ್ನು ತಡೆಯಲು, ಹಾಗೂ ಮೊಟ್ಟೆ ಇಟ್ಟು ಬಲಹೀನವಾದ ಕೋಳಿಯು ದಷ್ಟ-ಪುಷ್ಟವಾಗಿ ಬೆಳೆಯಲು ಬಳಸುವ ದೇಸೀ ಜ್ಞಾನ. ಮನೆಯಲ್ಲಿ ಈಗಾಗಲೇ ಒಂದೆರಡು ಕೋಳಿಗಳು ಕಾವಿನಲ್ಲಿ ಕುಳಿತಿದ್ದರೆ ಉಳಿದ ಕೋಳಿಗಳನ್ನು ಸ್ವಲ್ಪ ತಡವಾಗಿ ಕಾವಿಗೆ ಬರುವಂತೆ (ಮರಿ ಮಾಡಲು ಸಿದ್ಧವಿರುವ) ಮಾಡಲೂ ಸಹ ಈ ತಂತ್ರ ಬಳಸುತ್ತಾರೆ. ಎಲ್ಲಾ ಕೋಳಿಗಳೂ ಒಂದೇ ಸಲ ಕಾವಿಗೆ ಕುಳಿತರೆ ಮನೆಯಲ್ಲಿ ಸ್ಥಳದ ಅಭಾವ. ಜೊತೆಗೆ ಕಾವಿಗೆ ಕುಳಿತ ಕೋಳಿಗಳಿಗೆ ಹೇನಿನ ಕಾಟ ಹೆಚ್ಚಾಗಿರುವುದರಿಂದ ಅದನ್ನು ನಿವಾರಿಸುವ ಸಲುವಾಗಿಯೂ ಹೀಗೆ ಮಾಡುತ್ತಾರೆ. ಬಯಲು ಸೀಮೆಯ ಬಹುತೇಕ ಹಳ್ಳಿಗಳಲ್ಲಿ ಈ ಪದ್ಧತಿ ಹಿಂದಿನಿಂದಲೂ ಬೆಳೆದುಬಂದಿರುವುದಲ್ಲದೆ ಇಂದಿಗೂ ಸಹ ಅಲ್ಲಲ್ಲಿ ಕಂಡುಬರುತ್ತದೆ.

ಬಯಲು ಸೀಮೆಗಳಾದ ತುಮಕೂರು, ಚಿತ್ರದುರ್ಗ, ಕೋಲಾರ ಮುಂತಾದ ಜಿಲ್ಲೆಗಳಲ್ಲಿ ನಾಟಿ ಕೋಳಿ ಸಾಕುವುದು ಸರ್ವೇ ಸಾಮಾನ್ಯ. ಇದು ಮನೆ ಬಳಕೆಗೆ ಮತ್ತು ಕುಟುಂಬದ ಉಪ ಆದಾಯವಾಗಿ ಕೂಡ ನಾಟಿ ಕೋಳಿಗಳನ್ನು ಸಾಕುತ್ತಾರೆ. ಮಾರುಕಟ್ಟೆಯಲ್ಲೂ ಸಹ ನಾಟಿ ಕೋಳಿಗಳಿಗೆ ಹೆಚ್ಚು ಬೇಡಿಕೆಯಿದ್ದು ಬೆಲೆಯೂ ಸಹ ಜಾಸ್ತಿ. ಈ ಪ್ರದೇಶದಲ್ಲೆಲ್ಲಾ ಮೂಗಿಗೆ ಪುಕ್ಕ ಚುಚ್ಚುವ ಪದ್ಧತಿ ಬಳಕೆಯಲ್ಲಿದೆ.
ಏನಿದು ಪುಕ್ಕ ಚುಚ್ಚುವುದು?
ಸಾಮಾನ್ಯವಾಗಿ ನಾಟಿ ಕೋಳಿಗಳನ್ನು ಬಯಲಿನಲ್ಲಿ ಮೇಯಿಸುವುದು ವಾಡಿಕೆ. ಗಂಡು-ಹೆಣ್ಣು ಕೋಳಿಗಳೆರಡೂ ವಯಸ್ಸಿನ ತಾರತಮ್ಯವಿಲ್ಲದೆ ಒಂದೇ ಗುಂಪಿನಲ್ಲಿ ಮೇಯುತ್ತಿರುತ್ತವೆ. ಹಾಗಾಗಿ ಕೆಲವೊಮ್ಮೆ

ಎಳೆಯ ಹೆಣ್ಣು ಕೋಳಿಗಳು (ಯಾಟೆ) ಹುಂಜಗಳ ಜೊತೆಗೂಡಿ ಅಪ್ರಾಪ್ತ ವಯ್ತಸ್ಸಿನಲ್ಲಿಯೇ ಮೊಟ್ಟೆ ಇಡುವುದು ಕಂಡುಬರುತ್ತದೆ. ಈ ರೀತಿ ಅಪ್ರಾಪ್ತ ವಯಸ್ಸಿನಲ್ಲಿ ಮೊಟ್ಟೆ ಇಡುವ ಯಾಟೆಗಳು ಸರಿಯಾಗಿ ದಿನಕ್ಕೊಂದು ಮೊಟ್ಟೆ ಇಡುವುದಿಲ್ಲ ಹಾಗೂ ಇಂತಹ ಕೋಳಿಗಳು ತೊಗಲು ಮೊಟ್ಟೆ, ಚಿಕ್ಕ್ಕ ಗಾತ್ರದ ಮೊಟ್ಟೆ ಇಡುತ್ತವಲ್ಲದೆ, ಇವು ಇಡುವ ಮೊಟ್ಟೆಗಳ ಗುಣಮಟ್ಟವೂ ಸಹ ಕಡಿಮೆ ಇರುತ್ತದೆ. ಅಲ್ಲದೆ ಈ ರೀತಿ ಮಾಡುವುದರಿಂದ ಕೋಳಿಯೂ ಸಹ ಬಲಹೀನವಾಗುತ್ತದೆ. ಅಲ್ಲದೆ ಅವುಗಳಿಗೆ ಮರಿ ಮಾಡುವ ಸಾಮರ್ಥ್ಯವೂ ಕಡಿಮೆ ಇದ್ದು ಮರಿಗಳನ್ನು ಶತ್ರುಗಳಾದ ಹದ್ದು, ಗಿಡುಗಗಳಿಂದ ರಕ್ಷಿಸಿಕೊಳ್ಳುವ ಶಕ್ತಿಯೂ ಇರುವುದಿಲ್ಲ.
ಕೋಳಿಗಳನ್ನು ಇದರಿಂದ ಪಾರುಮಾಡಲು ರೈತರೇ ತಮ್ಮ ಅನುಭವದಿಂದ ಕಂಡುಕೊಂಡ ದೇಸೀ ಜ್ಞಾನ ಮೂಗಿಗೆ ಪುಕ್ಕ ಚುಚ್ಚುವುದು. ಪುಕ್ಕ ಚುಚ್ಚಿದಾಗ ಕೋಳಿಯ ಮೂಗಿಗೆ ಮೂಗುತಿ ಹಾಕಿದಂತೆ ಕಾಣುತ್ತದೆ.

ಕಾವಿಗೆ ಬಿದ್ದ ಕೋಳಿಯನ್ನು ಗುರುತಿಸುವ ಬಗೆ
ಕೋಳಿಯು ಕಾವಿಗೆ ಬರುವ ಸೂಚನೆಯಾಗಿ ಮುಖವು ಕೆಂಪಾಗಿರುತ್ತದೆ, ಕಾವಿಗೆ ಬಂದ ನಂತರ ಯಾರೇ ಸನಿಹಕ್ಕೆ ಬಂದರೂ ಕೊರ್ರ್ ಎಂಬ ಶಬ್ದ ಮಾಡಿ ತನ್ನೆಲ್ಲಾ ಪುಕ್ಕಗಳನ್ನೂ ಉಬ್ಬಿಸಿಕೊಳ್ಳುತ್ತದೆ. ಅದರಿಂದಾಗಿ ಕೋಳಿಯ ಆಕಾರ ಭಯಂಕರವಾಗಿ ಕಾಣುತ್ತದೆ. ಯಾವುದೇ ಕೋಳಿಯ ಜೊತೆ ಸೇರದೇ ತೆಪ್ಪಗೆ ಎಲ್ಲಾದರೂ ಮೂಲೆಯಲ್ಲಿ ಕುಳಿತಿರುತ್ತದೆ. ಮೊಟ್ಟೆಗಳಿಗೆ ಕಾವು ಕೊಡಲು ಸನ್ನದ್ಧವಾದ ಸಮಯ ಇದು.

ಕೋಳಿಯ ಹಿಂಭಾಗದ ಪುಕ್ಕವೊಂದನ್ನು ಕಿತ್ತು ಅದರ ಕೊಕ್ಕಿನ ಮೇಲ್ಭಾಗದ ನಾಸಿಕ ರಂಧ್ರಗಳಿಗೆ ನಾಜೂಕಾಗಿ ಪುಕ್ಕವನ್ನು ಸೇರಿಸುತ್ತಾರೆ. ಇದನ್ನು ಸ್ಥಳೀಯವಾಗಿ ಕುಚ್ಚುವುದು ಎನ್ನುತ್ತಾರೆ. ಇದರಿಂದಾಗಿ ಕೊಕ್ಕಿನ ಮೇಲ್ಬಾಗದಲ್ಲಿ ನೂತನ ಅಂಗವೊಂದು ಬೆಳೆದಂತೆ ಭಾಸವಾದ ಕೋಳಿ ಗಾಬರಿಯಾಗಿ ಮತ್ತೆ ಮೇವಾಡಲು ಶುರು ಮಾಡುತದೆ. ‘ಪುಕ್ಕದ ಪೂಜೆ’ ಮಾಡಿಸಿಕೊಂಡ ಕೋಳಿಯ ಬಳಿ ಹುಂಜಗಳೂ ಸಹ ಬರಲು ಹೆದರುತ್ತವೆ. ಹಾಗಾಗಿ ಕೋಳಿ ಒಂಟಿಯಾಗಿ ಮೇವಾಡಿ ಸಬಲವಾಗುತ್ತದೆ. ಕ್ರಮೇಣ ಕಾವು ಆರಿದ ನಂತರ ಪುಕ್ಕವನ್ನು ಮೂಗಿನಿಂದ ಕಿತ್ತು ಹಾಕುತ್ತಾರೆ. ಸಾಮಾನ್ಯವಾಗಿ ಈ ಅವಧಿ ಒಂದು ವಾರದಿಂದ ಹತ್ತು ದಿವಸಗಳು. ಆಗ ಕೋಳಿಯು ಶಕ್ತಿ ಪಡೆದುಕೊಂದು ಹುಂಜನ ಜೊತೆಗೂಡಿ ಗುಣಮಟ್ಟದ ಮೊಟ್ಟೆ ಕೊಟ್ಟು ಮರಿಮಾಡುವ ತಾಕತ್ತು ಪಡೆಯುತ್ತದೆ.

ಪುಕ್ಕ ಚುಚ್ಚುವುದರಿಂದಾಗಿ ಕೋಳಿ ಕಾವಿಗೆ ಬಿದ್ದಿದ್ದರೂ ಮೊಟ್ಟೆಗಳ ಅಮೇಲೆ ಕೂರಲಾರದು. ಸಾಮಾನ್ಯವಾಗಿ ಕೋಳಿ ತನ್ನ ಮೊಟ್ಟೆಗಳನ್ನು ಹೊಟ್ಟೆಯ ಕೆಳಗೆ ಇಟ್ಟುಕೊಂಡು ಕಾವು ಕೊಡುತ್ತದೆ. ಈ ರೀತಿ ಕಾವು ಕೊಡುವಾಗ ಪ್ರತಿ ಸರಿಯೂ ಕೊಕ್ಕಿನಿಂದ ಮೊಟ್ಟೆಗಳನ್ನು ಸಮ ಪ್ರಮಾಣದಲ್ಲಿ ತಿರುಗುಸುತ್ತಾ ಮೊಟ್ಟೆಯ ಎಲ್ಲಾಭಾಗಗಳಿಗೂ ಕಾವು ಕೊಡುತ್ತದೆ. ಪುಕ್ಕ ಕುಚ್ಚುವುದರಿಂದಾಗಿ ಕೊಕ್ಕಿನಲ್ಲಿ ಮೊಟ್ಟೆ ತಿರುಗಿಸಲು ಜಾಗ ಸಾಲದೇ ಚರ್ ಚರ್ ಎಂಬ ಶಬ್ದ ಬಂದು ಕೋಳಿ ಕಾವಿನಿಂದ ಎದ್ದು ಹೊರ ಬರುತ್ತದೆ. ಎರಡು ಮೂರು ಬಾರಿ ಈ ಪ್ರಯತ್ನ

ಮಾಡಿ ವಿಫಲವಾದ ಕೋಳಿ ಕಾವಿಗೆ ಬಿದ್ದ ಎರಡು ಅಥವಾ ಮೂರನೇ ದಿವಸವೇ ಕಾವಿನಿಂದ ದೂರವಾಗುತ್ತದೆ. ಈ ತಂತ್ರಗಾರಿಕೆ ಕೋಳಿಯನ್ನು ಮರಿ ಮಾಡುವುದರಿಂದ ತಪ್ಪಿಸಿ ಸೂಲನ್ನು ಮುಂದೂಡುವಂತೆ ಮಾಡುತ್ತದೆ.

ಕೆಲವು ಭಾಗಗಳಲ್ಲಿ ಈ ಪದ್ಧತಿಯ ಜೊತೆಗೆ ಮತ್ತೊಂದು ವಿಧಾನವೂ ಬಳಕೆಯಲ್ಲಿದೆ. ಅದೆಂದರೆ ಕಾವಿಗೆ ಬಿದ್ದ ಕೋಳಿಯನ್ನು ತಣ್ಣೀರಿನಲ್ಲಿ ಮುಳುಗಿಸಿ ಹಾರಿಬಿಡುವುದು. ಇದು ಕೋಳಿಯ ಶರೀರದ ಶಾಖವನ್ನು ಕಡಿಮೆ ಮಾಡುತ್ತದೆ. ಈ ರೀತಿ ದಿನಕ್ಕೊಂದು ಸಲದಂತೆ ಎರಡು-ಮೂರು ದಿನ ಪುನರಾವರ್ತಿಸುತ್ತಾರೆ.
ಕೋಳಿಯು ಪದೇ-ಪದೇ ಸೂಲಿಗೆ ಬಂದು ಬಲಹೀನವಾಗುವುದನ್ನು ತಪ್ಪಿಸಲು ಹಳ್ಳಿಗರು ಕಂಡುಕೊಂಡ ಈ ತಂತ್ರದ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ.